ದೃಶ್ಯ ಮಾಧ್ಯಮಗಳಲ್ಲಿ ಮಹಿಳೆ ಎಂಬ ಮಾರಾಟದ ಸರಕು!

ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ದೃಶ್ಯಮಾಧ್ಯಮಗಳ ದುಷ್ಟತನವನ್ನು ವಿರೋಧಿಸಲೇ ಬೇಕಿದೆ. ಈಗಾಗಲೇ ಪ್ರಸಾರವಾಗುತ್ತಿರುವ ಡಬಲ್ ಮೀನಿಂಗ್ ಹಾಡುಗಳನ್ನು ನಿರ್ಬಂಧಿಸಬೇಕಿದೆ. ಐಟಂ ಸಾಂಗ್ ಸಂಸ್ಕೃತಿಯನ್ನು ಬಹಿಷ್ಕರಿಸಬೇಕಿದೆ. ಮಹಿಳೆಯರನ್ನು ಮಾರಾಟದ ಸರಕನ್ನಾಗಿ ಪ್ರದರ್ಶಿಸುವ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಪ್ರಜ್ಞಾವಂತರು ವಿರೋಧಿಸಲೇಬೇಕಿದೆ ಶಶಿಕಾಂತ ಯಡಹಳ್ಳಿ, ಸಿನೆಮಾ ವಿಶ್ಲೇಷಕರು.

ಹೌದು! ಬಹುತೇಕ ದೃಶ್ಯ ಮಾಧ್ಯಮಗಳಲ್ಲಿ ಮಹಿಳೆಯರನ್ನು ತೋರಿಸುವ ರೀತಿಯೇ ಪ್ರಚೋದನಾತ್ಮಕವಾಗಿದೆ. ಹೆಣ್ಣನ್ನು ಜೀವ ಭಾವ ಇರುವ ಮನುಷ್ಯಳನ್ನಾಗಿ ಪರಿಗಣಿಸುವ ಬದಲು ಬರೀ ದೇಹವಾಗಿ ನೋಡುವ, ಅಂಗಾಂಗಗಳನ್ನು ಸಾಧ್ಯವಾದಷ್ಟೂ ಎಕ್ಸಪೋಸ್ ಮಾಡುವ ಮೂಲಕ ಕಾಮಪ್ರಚೋದಕ ವಸ್ತುವಾಗಿ ಪ್ರದರ್ಶನ ಮಾಡಲಾಗುತ್ತಿದೆ.

ಸಿನೆಮಾ ಎನ್ನುವುದು ಜನರನ್ನು ವೇಗವಾಗಿ ತಲುಪುವ, ಮನವನ್ನು ಮುಟ್ಟುವ ಪ್ರಭಾವಶಾಲಿ ಮಾಧ್ಯಮ. ಅದು ಜನಪರವಾಗಿ, ಜೀವಪರವಾಗಿ ಇರಬೇಕೆಂಬುದು ಆಶಯ. ಆ ಆಶಯದ ಕೆಲವಾರು ಸಿನೆಮಾಗಳೂ ಬಂದಿವೆ, ಸ್ತ್ರೀ ಕೇಂದ್ರಿತ ಚಲನಚಿತ್ರಗಳೂ ನಿರ್ಮಾಣಗೊಂಡಿವೆ. ಮಹಿಳಾ ಶೋಷಣೆಯ ವಿರುದ್ಧ ಧ್ವನಿ ಎತ್ತುವಂತಹ ಸಿನೆಮಾಗಳೂ ಹಲವಾರಿವೆ.

ಆದರೆ.. ಕಮರ್ಶಿಯಲ್ ಸಿನೆಮಾ ಟ್ರೆಂಡ್ ಅರಂಭವಾದ ಮೇಲೆ, ಮನರಂಜನೆ ಹೆಸರಲ್ಲಿ ಹಣ ಮಾಡುವುದೇ ಆದ್ಯತೆಯಾದಾಗ, ಹಿಂಸೆ ಮತ್ತು ಸೆಕ್ಸ್ ಎನ್ನುವುದು ಮಾರಾಟದ ಸರಕಾಗಿ ಮುಂಚೂಣಿಯಲ್ಲಿದೆ. ಅಗತ್ಯ ಇರಲಿ ಬಿಡಲಿ ಐಟಂ ಸಾಂಗ್ ನೆಪದಲ್ಲಿ ಮಹಿಳೆಯರನ್ನು ಅರೆಬೆತ್ತಲೆ ಕುಣಿಸುವುದು ಹಾಗೂ ಅದಕ್ಕೆ ತಕ್ಕಂತೆ ದ್ವಂದ್ವಾರ್ಥದ ಹಾಡುಗಳನ್ನು ರಚಿಸುವುದು ಸಿನೆಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ತಂತ್ರವಾಗಿದೆ.

ಐಟಂ ಎಂದರೆ ವಸ್ತು ಎಂದರ್ಥ. ಹೆಣ್ಣಿನ ದೇಹವನ್ನು ಐಟಂ ಎಂದು ಪರಿಗಣಿಸಿ ಹೆಣ್ಣು ದೇಹದ ವಿವಿಧ ಭಾಗಗಳನ್ನು ಕಾಮ ಪ್ರಚೋದಕವಾಗಿ ಎಕ್ಸ್‌ಪೋಸ್ ಮಾಡುವ ಮೂಲಕ ಪುರುಷ ಪ್ರೇಕ್ಷಕರನ್ನು ಥಿಯೇಟರಿನತ್ತ ಸೆಳೆಯಲಾಗುತ್ತದೆ. ಐಟಂ ಸಾಂಗ್, ಐಟಂ ಡಾನ್ಸ್ ಎನ್ನುವುದು ಕಮರ್ಶಿಯಲ್ ಮಾಸ್ ಸಿನೆಮಾಗಳ ಭಾಗವಾಗಿವೆ.

ಈ ಹಿಂದೆಯೂ ಸಿನೆಮಾಗಳಲ್ಲಿ ಐಟಂ ಡಾನ್ಸ್ ಗಳು ಇರುತ್ತಿದ್ದವು. ಅವುಗಳಿಗೆ ಕ್ಲಬ್ ಡಾನ್ಸ್, ಕ್ಯಾಬರೆ ಡಾನ್ಸ್ ಎಂದು ಕರೆಯಲಾಗುತ್ತಿತ್ತು. ಅಂದರೆ ಕುಡಿತದ ಅಡ್ಡೆಗಳಲ್ಲಿ ಬಾರ್ ಗರ್ಲ್ಸ್ ಗಳ ಕಾಮ ಪ್ರಚೋದಕ ಅರೆನಗ್ನ ನೃತ್ಯಗಳನ್ನು ತೋರಿಸಲಾಗುತ್ತಿತ್ತು. ಆ ಹಾಡುಗಳಲ್ಲೂ ಸಹ ರಸಿಕತೆಗೆ ಹೆಚ್ಚು ಒತ್ತು ಕೊಡಲಾಗುತ್ತಿತ್ತು. “ನಾನು ಬಳ್ಳಿಯ ಮಿಂಚು.. ಅದೇನದು ಅದೇನದು ಐಸಾ ಹುಡುಗಿಗಿಂತಾ ನೈಸಾ..” ಎನ್ನುವಂತಹ ಲಿರಿಕ್ಸ್ ಗಳು ರಸಿಕತೆಯನ್ನು ಸಾರುತ್ತಿದ್ದವು. ಈ ರೀತಿಯ ಕ್ಯಾಬರೆ ಕುಣಿತಕ್ಕೆ ಪ್ರತ್ಯೇಕವಾಗಿ ಸಿಲ್ಕ್‌ ಸ್ಮಿತಾ, ಜಯಮಾಲಿನಿ, ಹೆಲೆನ್ ನಂತಹ ಡಾನ್ಸರ್ ಗಳಿರುತ್ತಿದ್ದರು. ಕ್ಲಬ್ ಬಾರ್ ಸೆಟ್ ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಇಂತಹ ಹಾಡುಗಳಲ್ಲಿ ದ್ವಂದ್ವಾರ್ಥಗಳಿರುತ್ತಿದ್ದವೇ ಹೊರತು ಅಶ್ಲೀಲತೆ ಅತಿಯಾಗಿರುತ್ತಿರಲಿಲ್ಲ.

ಆದರೆ 1990 ರ ನಂತರ ಐಟಂ ಸಾಂಗ್ ಮತ್ತು ಐಟಂ ಡಾನ್ಸ್ ಯುಗ ಆರಂಭವಾಯ್ತು. ಪ್ರತ್ಯೇಕ ಡಾನ್ಸರ್ಸ್ ಬದಲಾಗಿ ಸಿನಿಮಾ ನಾಯಕಿಯರನ್ನೇ ಐಟಂ ಡಾನ್ಸ್ ಗಳಲ್ಲಿ ಅರೆಬೆತ್ತಲಾಗಿ ಕುಣಿಸಲಾಯ್ತು.  1993 ರಲ್ಲಿ ಖಳನಾಯಕ ಸಿನೆಮಾದಲ್ಲಿ ‘ಚೋಲಿಕೆ ಪೀಚೆ ಕ್ಯಾ ಹೈ’ ಎನ್ನುವ ಕಾಮಪ್ರಚೋದಕ ಹಾಡು ಹಾಗೂ ಅರೆಬೆತ್ತಲೆ ಕುಣಿತ ಕಮರ್ಶಿಯಲ್ ಸಿನೆಮೋದ್ಯಮದ ವ್ಯಾಕರಣವನ್ನೇ ಬದಲಾಯಿಸಿ  ಐಟಂ ಟ್ರೆಂಡ್ ಹುಟ್ಟುಹಾಕಿತು. 1998 ರಲ್ಲಿ ಬಂದ ‘ಶೂಲ್’ ಸಿನೆಮಾದಲ್ಲಿ ” ಮೈ ಆಯೀ ಹೂಂ ಯುಪಿ ಬಿಹಾರ ಲೂಟ್‌ ನೇ ” ಎನ್ನುವ ಶಿಲ್ಪಾಶೆಟ್ಟಿ ಕುಣಿತದ ಹಾಡು ಐಟಂ ಡಾನ್ಸ್  ಟ್ರೆಂಡನ್ನು ಸಿನೆಮಾ ಯಶಸ್ಸಿನ ಮಾದರಿಯಾಗಿಸಿತು. 2006 ರ ಓಂಕಾರ ಸಿನೆಮಾದ “ಬೇಡಿ ಜಲೈಲೇ ಜಿಗರ್ ಸೇ ಪೀಯಾ..”, 2010 ರ ದಬಾಂಗ್ ಸಿನೆಮಾದ ‘ಮುನ್ನಿಬಾಯಿ ಬದನಾಮ್ ಹುಯಿ..’, ತೀಸ್ ಮಾರ್ ಸಿನೆಮಾದ ‘ಶೀಲಾಕಿ ಜವಾನಿ..”, 2012 ರ ಅಗ್ನಿಪಥ್ ಸಿನೆಮಾದ “ಚಿಕ್ನಿ ಚಮೇಲಿ” ಮುಂತಾದ ಹಿಂದಿ ಸಿನೆಮಾದ ಐಟಂ ಹಾಡು ಹಾಗೂ ಕುಣಿತಗಳು ಮನರಂಜನಾತ್ಮಕ ಮಾಸ್ ಸಿನೆಮಾಗಳ ದಿಕ್ಕನ್ನೇ ಬದಲಾಯಿಸಿದವು.

ಈ ಐಟಂ ಸಾಂಗ್ ಎನ್ನುವ ಕಾಮಪ್ರಚೋದಕ ಖಾಯಿಲೆ ದಕ್ಷಿಣ ಭಾರತಕ್ಕೂ ವ್ಯಾಪಿಸಿತು. ಕ್ಯಾಬರೆ ಡಾನ್ಸ್ ಗಳು ಐಟಂ ಡಾನ್ಸ್ ಗಳಾಗಿ ಬದಲಾದವು. ತಮಿಳು ತೆಲುಗು ಭಾಷೆಯ ಮಾಸ್ ಸಿನೆಮಾಗಳಲ್ಲಿ ಐಟಂ ಸಾಂಗ್ ಕಲ್ಚರ್ ಕಡ್ಡಾಯ ಎನ್ನುವಂತಾಯಿತು. 2021 ರಲ್ಲಿ ತೆಲುಗಿನಲ್ಲಿ ಬಂದ ಪುಷ್ಪಾ ಸಿನೆಮಾದ ‘ಉ ಅಂಟಾವಾ ಮಾವಾ.. ಊಹುಂ ಅಂಟಾವಾ ‘ ಎನ್ನುವ ಐಟಂ ಡಾನ್ಸ್ ಉತ್ತಮ ಉದಾಹರಣೆಯಾಗಿದೆ. ಈ ಹಾಡಿಗೆ ಅರೆನಗ್ನ ನೃತ್ಯ ಮಾಡಲು ಕೋಟಿಗಳನ್ನು ಕೊಟ್ಟು ಸಮಂತಾ ಎನ್ನುವ ಸುಪ್ರಸಿದ್ಧ ನಾಯಕಿಯನ್ನೇ ಕರೆತರಲಾಗಿತ್ತು. ಸಿನೆಮಾದ ಹೀರೋಯಿನ್ ಸಂಭಾವನೆಗಿಂತಲೂ ಒಂದು ಐಟಂ ಡಾನ್ಸ್ ಮಾಡಿದವರಿಗೆ ಹೆಚ್ಚು ಹಣ ಕೊಡಲಾಯ್ತು. ಇದರಿಂದಾಗಿ ದೊಡ್ಡ ಹೆಸರು ಮಾಡಿದ ನಾಯಕಿಯರೂ ಗೆಸ್ಟ್ ಅಪೀಯರನ್ಸ್ ಆಗಿ ಬಂದು ಐಟಂ ಡಾನ್ಸ್ ಮಾಡಲು ಒಪ್ಪಿಕೊಂಡರು. ಹೀಗಾಗಿ ಐಟಂ ಟ್ರೆಂಡ್ ಇನ್ನೂ ಹೆಚ್ಚು ಪ್ರಭಾವಶಾಲಿಯಾಯ್ತು.

ತಮಿಳು ತೆಲುಗು ಸಿನೆಮಾರಂಗಕ್ಕೆ ಅಪ್ಪಳಿಸಿದ ಐಟಂ ಟ್ರೆಂಡ್ ಕನ್ನಡ ಚಲನಚಿತ್ರೋದ್ಯಮಕ್ಕೆ ಬಾರದಿರುತ್ತದೆಯೇ?. ಕನ್ನಡದಲ್ಲೂ ಐಟಂ ರೋಗ ಶುರುವಾಯಿತು. ಹೇಳುತ್ತಾ ಹೋದರೆ ಐಟಂ ಹಾಡುಗಳ ದೊಡ್ಡ ಪಟ್ಟಿಯೇ ಇದೆ. ಹಂಸಲೇಖರಂತವರೇ ಈ ಮಾಲು, ಆ ಬಾಲು.. ಎನ್ನುವಂತಹ ದ್ವಂದ್ವಾರ್ಥದ ಲಿರಿಕ್ಸ್ ಬರೆದಿದ್ದಾರೆ. ಯೋಗರಾಜ್ ಭಟ್ ರಂತವರೇ ಐಟಂ ಸಾಂಗ್ ಗಳನ್ನು ಬರೆದಿದ್ದಾರೆ. ರಮ್ಯ ರಕ್ಷಿತಾ ರಂತಹ ನಾಯಕಿಯರೂ ಇಂತಹ ಐಟಂ ನೃತ್ಯ ಮಾಡಿದ್ದಾರೆ.

ಈಗ ಜೋಗಿ ಪ್ರೇಮ್ ಎನ್ನುವ ನಿರ್ದೇಶಕ ಬರೆದು ಚಿತ್ರೀಕರಿಸಿದ ಕೆಡಿ ಸಿನೆಮಾದ ‘ಸರ್ಸು ಸೆರಗು ಸರ್ಸು’ ಎನ್ನುವ ಐಟಂ ಸಾಂಗು ರಸಿಕತೆಯ ಎಲ್ಲ ಸರಹದ್ದನ್ನೂ ಮೀರಿ ಅಶ್ಲೀಲತೆಯ ಉತ್ತುಂಗವನ್ನು ಪ್ರದರ್ಶಿಸಿದೆ. ಡಬಲ್ ಮೀನಿಂಗ್ ಎಲ್ಲೆ ಮೀರಿ ಸಿಂಗಲ್ ಮೀನಿಂಗ್ ಸೆಕ್ಸ್ ಸಾಂಗ್ ಆಗಿದೆ. ಲೈಂಗಿಕ ಪ್ರಚೋದನೆಯ ಗಡಿ ದಾಟಿ ಲೈಂಗಿಕ ಕ್ರಿಯೆಯನ್ನೇ ವಿವರಿಸುವಂತಿದೆ. ಭಾರೀ ವಿವಾದ ಹುಟ್ಟು ಹಾಕಿದ ಈ ಹಾಡಿನ ಕುರಿತು ದೇಶದ ಸಂಸತ್ತಿನಲ್ಲೇ ಚರ್ಚೆಯಾಗುವಂತಾಗಿದೆ. ಕೇಂದ್ರ ಮತ್ತು ಮಹಿಳಾ ಹಕ್ಕು ಆಯೋಗಗಳು ನೋಟೀಸ್ ಜಾರಿ ಮಾಡಿವೆ. ಐದು ಭಾಷೆಗಳಲ್ಲಿ ಬಂದ ಸರ್ಸೆ ಹಾಡನ್ನು ನಿಷೇಧಿಸಲಾಗಿದೆ. ಯುಟ್ಯೂಬ್ ನಿಂದ ತೆಗೆದುಹಾಕಲಾಗಿದೆ. ಬಾಟಲ್ಲು ಉಪ್ಪಿನಕಾಯಿ ಎಂದೆಲ್ಲಾ ಸಮರ್ಥನೆ ಕೊಡಲು ಪ್ರೇಮ್ ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ವಿರೋಧ ಹೆಚ್ಚಾದಂತೆಲ್ಲಾ ಈ ಹಾಡು ಬರೆದ ನಿರ್ದೇಶಕ ಪ್ರೇಮ್ ಕ್ಷಮೆಯಾಚಿಸಿ ಹಾಡಿನ ಸಾಲುಗಳನ್ನು ಬದಲಾಯಿಸುವುದಾಗಿ ಹೇಳಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರ ಕೆಡಿ ಸಿನೆಮಾಕ್ಕೆ ದೇಶಾದ್ಯಂತ ನಕಾರಾತ್ಮಕ ಪ್ರಚಾರದ  ಮೂಲಕ ಸಾಕಷ್ಟು ಪ್ರಚಾರವನ್ನು ಗಿಟ್ಟಿಸಿಕೊಂಡಿದ್ದಾರೆ.

ಮಹಿಳೆಯರ ಕುರಿತು ಉನ್ಮಾದದ ಹಾಡು ಬಳಸುವ ಮೂಲಕ ತಮ್ಮ ಸಿನೆಮಾವನ್ನು ಯಶಸ್ಸು ಮಾಡುವುದು ಜೋಗಿ ಪ್ರೇಮ್ ರವರ ಮಹಿಳಾವಿರೋಧಿ ತಂತ್ರಗಾರಿಕೆಯಾಗಿದೆ. ಅವರ ಮೊದಲ ಸಿನೆಮಾ ಕರಿಯಾದಿಂದಲೇ ಇದು ಆರಂಭವಾಗಿದೆ. ‘ಕೆಂಚಾಲು ಮಂಚಾಲು ಹೆಂಗವ್ರೇ ನಿನ್ನ ಡೌಗಳು’ ಎನ್ನುವ ಹಾಡಿನಲ್ಲಿ ಮಹಿಳೆಯರಿಗೆ ಡೌ ಎನ್ನುವ ರೂಪಕತೆ ಕೊಡಲಾಗಿತ್ತು. ಜೋಗಿ ಸಿನೆಮಾದಲ್ಲೂ ” ಗರತಿಯಂಗೆ ಸೆರಗಾಕ್ಕೊಂಡು ಲಾರಿಯೊಳಗೆ ಕೂತ್ಕೊಂಡಿದ್ರೆ ಯಾರು ನಿನ್ನ ಮೂಸುತಾರೆ ನಿಂಗಮ್ಮೋ’ ಎನ್ನುವ ಐಟಂ ಸಾಂಗ್‌ ನಲ್ಲೂ ಮಹಿಳೆಯರನ್ನು ಕೆಟ್ಟದಾಗಿ ತೋರಿಸಲಾಗಿತ್ತು. ಪ್ರೇಮ್ ಅಡ್ಡಾ ಎನ್ನುವ ಸಿನೆಮಾದಲ್ಲಿ ಹೆಣ್ಣಿನ ಮೈಯನ್ನೇ ಮೈದಾನಕ್ಕೆ ಹೋಲಿಸಿ ಆಡ್ಕೊಳ್ಳಿ ಎಂದಿದ್ದಾಗಿತ್ತು. ಇದೇ ಕೆಡಿ ಸಿನೆಮಾದಲ್ಲಿ ‘ರಂಡೇರ ಕಣ್ಣು ಮುಂಡೇರ್ ಕಣ್ಣು’ ಎಂದು ಮಹಿಳೆಯರನ್ನು ಅವಮಾನಿಸಲಾಗಿತ್ತು. ಸರ್ಸು ಹಾಡಲ್ಲಿ ಹೆಣ್ಣಿನ ಸೆರಗಿಗೇ ಕೈಹಾಕಿ ಮಂಗಳಾರತಿ ಮಾಡಿಸಿಕೊಂಡಾಯ್ತು.

ಸಾಂದರ್ಭಿಕ ಚಿತ್ರ

ಹೆಣ್ಣನ್ನು ಕೆಟ್ಟದಾಗಿ ಚಿತ್ರಿಸುವ, ಹೆಣ್ಣಿನ ಅಂಗಾಂಗಳನ್ನು ಪ್ರಚೋದನಕಾರಿಯಾಗಿ ತೋರಿಸುವ ಈ ಐಟಂ ಟ್ರೆಂಡ್ ಬಹಳ ಅಪಾಯಕಾರಿಯಾಗಿದೆ. ರಸಿಕತೆ ನೆಪದಲ್ಲಿ ಅಶ್ಲೀಲತೆಯನ್ನು ಪ್ರಚಾರ ಮಾಡುವ ಪುರುಷ ವಿಕೃತಿ ಸಮಾಜದ ಸ್ವಾಸ್ಥ್ಯದ ಮೇಲೆ ದುಷ್ಪರಿಣಾಮ ಬೀರದೇ ಇರದು. ಐಟಂ ಹಾಡುಗಳಲ್ಲಿ ಮಹಿಳೆಯರ ದೇಹದ ಅಂಗಾಂಗಗಳನ್ನು ಪ್ರಚೋದನಾತ್ಮಕವಾಗಿ ಹೇಳುವ ಹಾಗೂ ತೋರಿಸುವ ಪ್ರಯತ್ನ ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹುದಾಗಿದೆ. ಕುಟುಂಬ ಪರಿವಾರ ಸಮೇತ ಸಿನೆಮಾ ನೋಡುವವರಿಗೆ ಮುಜುಗರ ತರುವ ಸಂಗತಿಯಾಗಿದೆ. ಈ ಐಟಂ ಎನ್ನುವ ಚೀಪ್ ಗಿಮಿಕ್ ಗಳಿಂದಾಗಿ ಸಿನೆಮಾ ಸೋಲುತ್ತೋ ಗೆಲ್ಲುತ್ತೋ ಎನ್ನುವುದು ಬೇರೆ ಪ್ರಶ್ನೆ. ಆದರೆ ಇಂತಹ ಸಿನೆಮಾಗಳ ಪ್ರದರ್ಶನ ಥಿಯೇಟರ್ ಗಳಲ್ಲಿ ನಿಂತಾದ ಮೇಲೂ ಸೆಕ್ಸಿ ಡಬಲ್ ಮೀನಿಂಗ್ ಹಾಡುಗಳ ಭರಾಟೆ ನಿಲ್ಲುವುದಿಲ್ಲ. ಪ್ರಭಾವ ತಗ್ಗುವುದಿಲ್ಲ.

ಈ ಡಬಲ್ ಮೀನಿಂಗ್ ಹಾಡುಗಳು ಓಟಿಟಿ ಪ್ಲಾಟ್‌ಫಾರಂಗಳು, ಯುಟ್ಯೂಬ್ ನಂತಹ ಸೋಷಿಯಲ್ ಮೀಡಿಯಾಗಳು, ಎಫ್ಎಂ ನಂತಹ ರೇಡಿಯೋ ಚಾನೆಲ್‌ಗಳು ಹಾಗೂ ಟಿವಿ ಮಾಧ್ಯಮಗಳ ಮೂಲಕ ಜನರನ್ನು ತಲುಪುತ್ತಲೇ ಇರುತ್ತವೆ. ಗಣೇಶೋತ್ಸವ, ಅಣ್ಣಮ್ಮ ದೇವಿ ಉತ್ಸವಗಳಂತಹ ಧಾರ್ಮಿಕ ಆಚರಣೆಗಳಲ್ಲೂ ಐಟಂ ಸಾಂಗ್‌ಗಳು ದಾಂಗುಡಿ ಇಡುತ್ತವೆ. ಮದುವೆ, ಬರ್ತ್‌ಡೇಯಂತಹ ಖಾಸಗಿ ಸಮಾರಂಭಗಳಲ್ಲೂ ಮಾರ್ದನಿಸುತ್ತವೆ. ಇಂತಹ ದ್ವಂದ್ವಾರ್ಥದ ಹಾಡುಗಳು ವಿದ್ಯಾರ್ಥಿ ಯುವಕರಲ್ಲಿ ಹೆಣ್ಣಿನ ಬಗ್ಗೆ ಉನ್ಮಾದವನ್ನುಂಟು ಮಾಡುತ್ತವೆ. ಹುಡುಗಿಯರನ್ನು ಮನುಷ್ಯರನ್ನಾಗಿ ನೋಡದೇ ದೇಹವನ್ನಾಗಿ, ಭೋಗದ ವಸ್ತುವನ್ನಾಗಿ, ಸುಖದ ಸರಕನ್ನಾಗಿ ಪರಿಗಣಿಸುವಂತೆ ಪ್ರಚೋದಿಸುತ್ತವೆ.

ದ್ವಂದ್ವಾರ್ಥ ಹಾಗೂ ಅಶ್ಲೀಲ ಹಾಡು ನೃತ್ಯಗಳಿಂದಾಗುವ ದುಷ್ಪರಿಣಾಮಗಳು

* ಉದ್ರೇಕಕಾರಿ ಐಟಂ ಹಾಡು ಮತ್ತು ಅರೆನಗ್ನ ನೃತ್ಯಗಳು ಮಹಿಳೆಯರ ಮೇಲೆ ಲೈಂಗಿಕ ಹಿಂಸೆಯನ್ನು ಪ್ರಚೋದಿಸುತ್ತವೆ.

* ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಶೋಷಣೆ ಅತಿಯಾಗಿ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತವೆ.

* ಪಬ್ಲಿಸಿಟಿಗಾಗಿ ಮಾಡಲಾಗುವ ಸೆಕ್ಸ್ ಓರಿಯೆಂಟೆಡ್ ಚೀಪ್ ಗಿಮಿಕ್ ಗಳಿಂದಾಗಿ ಸಮಾಜದಲ್ಲಿ ಸಾಂಸ್ಕೃತಿಕ ಅಧ:ಪತನಕ್ಕೆ ದಾರಿಯಾಗುತ್ತದೆ.

* ಐಟಂ ಸಾಂಗ್ ಎನ್ನುವ ಲೈಂಗಿಕ ವಿಕೃತಿಯ ಪ್ರದರ್ಶನದಿಂದಾಗಿ ಮಹಿಳೆಯರ ಬದುಕುವ ಹಕ್ಕಿಗೆ ಧಕ್ಕೆಯಾಗುತ್ತದೆ. ಅವರ ಗೌರವಕ್ಕೆ ಚ್ಯುತಿ ಬರುತ್ತದೆ.

* ಸಿನೆಮಾಗಳಲ್ಲಿ ಬಳಸುವ ಅಶ್ಲೀಲ ಸಾಹಿತ್ಯ ಮತ್ತು ತುಂಡುಡುಗೆ ನೃತ್ಯಗಳ ಪ್ರಚೋದನೆಯಿಂದಾಗಿ ಮಹಿಳೆಯರ ಮೇಲೆ ಅತ್ಯಾಚಾರಗಳು, ಲೈಂಗಿಕ ಕಿರುಕುಳಗಳು ಅವ್ಯಾಹತವಾಗುತ್ತವೆ.

* ಯುವಜನಾಂಗದ ಮನಸ್ಸಿನಲ್ಲಿ ಹೆಣ್ಣಿನ ಬಗ್ಗೆ ವಿಕೃತ ಮನೋಭಾವ ಮೂಡುತ್ತದೆ.

* ಅಪ್ರಾಪ್ತರಲ್ಲಿ ಲೈಂಗಿಕ ಕಾಮನೆಗಳು ಉತ್ತೇಜನೆಗೊಂಡು ಅನಾಹುತಗಳಿಗೆ ದಾರಿಯಾಗುತ್ತದೆ.

* ಚಲನಚಿತ್ರಗಳ ಅಶ್ಲೀಲ ಹಾಡು ಕುಣಿತಗಳು ನೈತಿಕ ಪ್ರಜ್ಞೆಯನ್ನು ಹಾಳುಮಾಡಿ ಅನೈತಿಕ ಚಟುವಟಿಕೆಗಳಿಗೆ ಪ್ರೇರಣೆಯನ್ನು ಒದಗಿಸುತ್ತವೆ.

* ಅಶ್ಲೀಲ ಹಾಡು ನೃತ್ಯಗಳಿಂದಾಗಿ ಕೌಟುಂಬಿಕ ಪ್ರೇಕ್ಷಕರು ಸಿನೆಮಾ ಥಿಯೇಟರಿನಿಂದ ದೂರವಾಗುವುದರಿಂದ ಚಲನಚಿತ್ರೋದ್ಯಮಕ್ಕೆ ನಷ್ಟವಾಗುತ್ತದೆ.

* ಯುಟ್ಯೂಬಿನಲ್ಲಿ ಅತೀ ಹೆಚ್ಚು ವ್ಯೂವ್ಸ್ ಗಳಿರುವುದೇ ಈ ಐಟಂ ಸಾಂಗ್ ವಿಡಿಯೋಗಳಿಗೆ ಎಂಬುದು ಚರ್ಚಿಸಬೇಕಾದ ಸಂಗತಿಯಾಗಿದೆ.

ಹೀಗೆ.. ಪ್ರಚಾರಕ್ಕಾಗಿ, ಪ್ರಮೋಶನ್ನಿಗಾಗಿ, ಪ್ರೇಕ್ಷಕರನ್ನು ಆಕರ್ಷಿಸುವುದಕ್ಕಾಗಿ, ವ್ಯಾವಹಾರಿಕ ಲಾಭಕ್ಕಾಗಿ ಹೆಣ್ಣಿನ ದೇಹವನ್ನು ಪ್ರಚೋದನಾತ್ಮಕ ಪ್ರದರ್ಶನದ ಸರಕನ್ನಾಗಿ ಬಳಸಿಕೊಳ್ಳುವ ದೃಶ್ಯಮಾಧ್ಯಮಗಳನ್ನು ನಿಯಂತ್ರಿಸಲೇ ಬೇಕಿದೆ. ರಸಿಕತೆಯ ಗಡಿ ಮೀರಿ ಅಶ್ಲೀಲತೆಯನ್ನು ತೋರಿಸುವ ಸಿನೆಮಾಗಳನ್ನು ನೋಡುವುದನ್ನು ನಿಷೇಧಿಸುವ ಮೂಲಕ ಪ್ರೇಕ್ಷಕರೇ ಈ ಉನ್ಮಾದೋತ್ಪಾದಕರಿಗೆ ಪಾಠ ಕಲಿಸಬೇಕಾಗಿದೆ. ಮಹಿಳೆಯರಿಗೆ ಅಪಮಾನಕಾರಿಯಾಗಿರುವ ಈ ಐಟಂ ಕಲ್ಚರನ್ನು ಸಿನೆಮಾ ಕ್ಷೇತ್ರದಿಂದಲೇ ನಿಷೇಧಿಸಬೇಕಿದೆ.

ಚಲನಚಿತ್ರಗಳಲ್ಲಿ ಮಹಿಳೆಯರ ಘನತೆಗೆ ದಕ್ಕೆ ತರುವಂತಹ, ಸಾಮಾಜದ ಮೇಲೆ ದುಷ್ಪರಿಣಾಮ ಬೀರುವಂತಹ ದೃಶ್ಯಗಳನ್ನು ತೆಗೆದುಹಾಕುವಂತಹ ಕಂಟ್ರೊಲಿಂಗ್ ಕೆಲಸಕ್ಕೇ ಕೇಂದ್ರ ಹಾಗೂ ರಾಜ್ಯಗಳ ಸೆನ್ಸಾರ್ ಮಂಡಳಿಗಳಿವೆ. ಕೇಂದ್ರ ಸರಕಾರದ ಅಧಿಕಾರಿಯ ಜೊತೆ ಆಯ್ದ ಸದಸ್ಯರುಗಳೂ ಇದ್ದು ಪ್ರತಿ ಸಿನೆಮಾ ನೋಡಿ ಸೆನ್ಸಾರ್ ಮಾನದಂಡಗಳ ಪ್ರಕಾರವೇ ಪ್ರದರ್ಶನದ ಪ್ರಮಾಣಪತ್ರ ಕೊಡಲಾಗುತ್ತದೆ. ಆದರೆ ಅಶ್ಲೀಲ ಕಂಟೆಂಟ್ ಇರುವ ಹಾಡು, ಡ್ಯಾನ್ಸ್ ಗಳೂ ಸಹ ಕಮರ್ಶಿಯಲ್ ಸಿನೆಮಾದ ಭಾಗವಾಗಿರುವುದನ್ನು ನೋಡಿದರೆ ಸೆನ್ಸಾರ್ ಬೋರ್ಡಿನವರು ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಕಾಡುತ್ತದೆ. ಇಲ್ಲಿಯೂ ಕೂಡಾ ಪ್ರಭಾವ ಶಿಫಾರಸ್ಸುಗಳಿಗೆ ಮಾನ್ಯತೆ ಕೊಡಲಾಗುತ್ತದೆ, ಲಂಚ ರುಶುವತ್ತುಗಳೂ ಬೇಕಾದಷ್ಟಿವೆ ಎಂಬುದು ಗೊತ್ತಿರುವ ಸಂಗತಿ.

ದ್ವಂದ್ವಾರ್ಥದ ಹಾಡು ಬರೆಯುವುದು, ಅಶ್ಲೀಲ ಕುಣಿತ ಚಿತ್ರೀಕರಿಸುವವರಿಗಿಂತಲೂ ಅಂತಹುದಕ್ಕೆ ಅನುಮತಿ ಕೊಡುವ ಸೆನ್ಸಾರಿನವರು ಹೆಚ್ಚು ತಪ್ಪಿತಸ್ಥರು. ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ದೃಶ್ಯಮಾಧ್ಯಮಗಳ ದುಷ್ಟತನವನ್ನು ವಿರೋಧಿಸಲೇ ಬೇಕಿದೆ. ಈಗಾಗಲೇ ಪ್ರಸಾರವಾಗುತ್ತಿರುವ ಡಬಲ್ ಮೀನಿಂಗ್ ಹಾಡುಗಳನ್ನು ನಿರ್ಬಂಧಿಸಬೇಕಿದೆ. ಐಟಂ ಸಾಂಗ್ ಸಂಸ್ಕೃತಿಯನ್ನು ಬಹಿಷ್ಕರಿಸಬೇಕಿದೆ. ಮಹಿಳೆಯರನ್ನು ಮಾರಾಟದ ಸರಕನ್ನಾಗಿ ಪ್ರದರ್ಶಿಸುವ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಪ್ರಜ್ಞಾವಂತರು ವಿರೋಧಿಸಲೇಬೇಕಿದೆ.

ಶಶಿಕಾಂತ ಯಡಹಳ್ಳಿ

ಸಿನೆಮಾ ವಿಶ್ಲೇಷಕರು

More articles

Latest article

Most read