ನವದೆಹಲಿ : ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದಲ್ಲಿ ರೈಲು ಮಾರ್ಗ ಅಭಿವೃದ್ಧಿಗೆ ದಾಖಲೆ ಪ್ರಮಾಣದ ಹಣವನ್ನು ನೀಡಲಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಭಾರತೀಯ ರೈಲ್ವೇಯ ಪ್ರಮುಖ ಸಾಧನೆಗಳು ಹಾಗೂ ಭವಿಷ್ಯದ ಯೋಜನೆಗಳನ್ನು ವಿವರಿಸಿ ಮಾತನಾಡಿದರು. ನಮ್ಮ ಸರ್ಕಾರದಲ್ಲಿ ಹಿಂದಿನ ಯುಪಿಎ ಕಾಲಕ್ಕಿಂತ ಹೆಚ್ಚು ಹಣ ನೀಡಲಾಗಿದೆ. ಕರ್ನಾಟಕದಲ್ಲಿ ಏಳು ಬುಲೆಟ್ ರೈಲು ಮಾರ್ಗಗಳು ಹಾದು ಹೋಗಲಿವೆ. ಹೈದರಾಬಾದ್ ಹಾಗೂ ಬೆಂಗಳೂರು ನಡುವಿನ ಬುಲೆಟ್ ರೈಲು ಮಾರ್ಗ ಪ್ರಯಾಣ ಸಮಯವನ್ನು ಕೇವಲ 2.5 ಗಂಟೆಗಳಿಗಷ್ಟೇ ಇಳಿಸಲಿದೆ. ಬೆಂಗಳೂರು–ಚೆನ್ನೈ ನಡುವಿನ ಬುಲೆಟ್ ರೈಲು ಮಾರ್ಗ ಕೇವಲ 73 ನಿಮಿಷಗಳಿಗೆ ಇಳಿಸಲಿದೆ ಎಂದರು.
ರೈಲ್ವೇ ಬಜೆಟ್ ಅನ್ನು ಸಾಮಾನ್ಯ ಬಜೆಟ್ ಜೊತೆಗೆ ವಿಲೀನಗೊಳಿಸಿರುವುದರಿಂದ ನಿರಂತರ ಹಾಗೂ ಸಮರ್ಪಕ ನಿಧಿ ಲಭ್ಯವಾಗಿದೆ. 2026–27ರಲ್ಲಿ 78,000 ಕೋಟಿ ರೂ. ದಾಖಲೆಯ ಹಂಚಿಕೆ ಮಾಡಲಾಗಿದೆ. ಇದರಿಂದ ವರ್ಷಪೂರ್ತಿ ಯೋಜನೆಗಳಿಗೆ ಅನುಮೋದನೆ ಹಾಗೂ ಐಟಿ ಆಧಾರಿತ ಮೇಲ್ವಿಚಾರಣೆಯಿಂದ ಪಾರದರ್ಶಕತೆ ಹೆಚ್ಚಾಗಿದೆ ಎಂದರು.
ಸೂಕ್ಷ್ಮ ಯೋಜನೆ ಮತ್ತು ತಂತ್ರಜ್ಞಾನ ಬಳಕೆಯಿಂದ ರೈಲು ಅಪಘಾತಗಳಲ್ಲಿ ಅಂದಾಜು ಶೇ. 90ರಷ್ಟು ಇಳಿಕೆಯಾಗಿವೆ.ಈ ತಂತ್ರಜ್ಞಾನವನ್ನು ಇಡೀ ರಾಷ್ಟ್ರಕ್ಕೆ ವೇಗವಾಗಿ ವಿಸ್ತರಿಸಲಾಗುತ್ತಿದೆ. ಈಗಾಗಲೇ 20,000 ಕಿಮೀ ಮಾರ್ಗ ಹಾಗೂ 8,000 ಎಂಜಿನ್‌ಗಳಲ್ಲಿ ಕಾರ್ಯ ನಡೆಯುತ್ತಿದೆ. ಕಳೆದ ದಶಕದಲ್ಲಿ 35,000 ಕಿಮೀ ರೈಲು ಹಳಿಗಳು ನಿರ್ಮಾಣಗೊಂಡಿದ್ದು, 47,000 ಕಿಮೀ ವಿದ್ಯುತೀಕರಣ ಮಾಡಲಾಗಿದೆ. ಇದರಿಂದ ರೈಲ್ವೆ ಜಾಲ ಶೇ. 99ರಷ್ಟ ಕ್ಕಿಂತ ಹೆಚ್ಚು ವಿದ್ಯುತೀಕರಣಗೊಂಡಿದೆ. ಜೊತೆಗೆ 14,000 ಮೇಲು ಸೇತುವೆಗಳು ಹಾಗೂ ಸುರಂಗ ಮಾರ್ಗ ನಿರ್ಮಾಣಗೊಂಡಿವೆ ಎಂದರು.
ಕಡಿಮೆ ಆದಾಯದ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾದ ಅಮೃತ ಭಾರತ ರೈಲುಗಳು ಈಗಾಗಲೇ ಸಂಚರಿಸುತ್ತಿವೆ. ಇನ್ನೂ 133 ರೈಲುಗಳು ನಿರ್ಮಾಣ ಹಂತದಲ್ಲಿವೆ. ಸುಮಾರು 1,000 ಕಿಮೀ ಪ್ರಯಾಣಕ್ಕೆ 450 ರೂ. ದರದಲ್ಲಿ ಆಧುನಿಕ ಸೌಲಭ್ಯಗಳನ್ನು ಒದಗಿಸುತ್ತವೆ. ವಂದೇ ಭಾರತ ರೈಲುಗಳು 162 ಚೇರ್ ಕಾರ್ ಸೇವೆಗಳು ಕಾರ್ಯನಿರ್ವಹಿಸುತ್ತಿದ್ದು, ವಂದೇ ಭಾರತ ಸ್ಲೀಪರ್ ರೈಲುಗಳ ಸೇವೆಯೂ ಪ್ರಾರಂಭವಾಗಿದೆ. ಇನ್ನೂ 50 ರೈಲುಗಳು ನಿರ್ಮಾಣ ಹಂತದಲ್ಲಿವೆ.ದೀಪಾವಳಿ, ಛಠ್ ಮತ್ತು ಹೊಳಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ಬೇಡಿಕೆಯನ್ನು ನಿರ್ವಹಿಸಲು ಇತ್ತೀಚೆಗೆ 7,100 ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಸಂಚರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

