ಟೆಹ್ರಾನ್ : ಇರಾನ್, ಕೊಲ್ಲಿಯಲ್ಲಿ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ದಾಳಿ ಮಾಡಿದ ಪ್ರತಿಕಾರಕ್ಕೆ ಗುರುವಾರ ಇರಾನ್ ಮೇಲೆ ಅಮೆರಿಕ ಹೊಸ ದಾಳಿಗಳನ್ನು ನಡೆಸಿದ್ದು, ಸೇತುವೆಗಳು, ರೈಲು ನಿಲ್ದಾಣ ಮತ್ತು ಸಾರಿಗೆ ಮೂಲಸೌಕರ್ಯಗಳನ್ನು ನಾಶಪಡಿಸಿದೆ.
ಅಮೆರಿಕವು ಸತತ ಆರನೇ ರಾತ್ರಿ, ಇರಾನ್ ಮೇಲೆ ಪ್ರಮುಖ ದಾಳಿಗಳನ್ನು ನಡೆಸುತ್ತಿದ್ದು, ಇದರಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಇರಾನ್ನ ಬಂದರ್ ಅಬ್ಬಾಸ್ನಲ್ಲಿರುವ ಅಧಿಕಾರಿಗಳು, ವಿದ್ಯುತ್ ಸೌಲಭ್ಯಗಳು ಮತ್ತು ರೈಲು ನಿಲ್ದಾಣ ಸೇರಿದಂತೆ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆದಿದೆ ಎಂದು ವರದಿ ಮಾಡಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಯುದ್ಧವು ಮತ್ತೆ ಉಲ್ಬಣಗೊಂಡಿರುವ ನಡುವೆಯೇ, ಓಮನ್ ಕೊಲ್ಲಿಯಲ್ಲಿರುವ ಇರಾನ್ನ ಚಬಹಾರ್ ಬಂದರಿನಲ್ಲಿನ ಕಣ್ಗಾವಲು ಗೋಪುರವೊಂದು ಅಮೆರಿಕದ ಇತ್ತೀಚಿನ ದಾಳಿಯಲ್ಲಿ ಕುಸಿದುಬಿದ್ದಿದೆ ಎಂದು ವರದಿಯಾಗಿದೆ. ಚಬಹಾರ್ ಬಂದರು ಅಫ್ಘಾನಿಸ್ತಾನಕ್ಕೆ ಪ್ರಮುಖ ವ್ಯಾಪಾರ ಮಾರ್ಗವಾಗಿದ್ದು, ಇದನ್ನು ಇರಾನ್ ಭಾರತದ ಸಹಯೋಗದೊಂದಿಗೆ ನಿರ್ವಹಿಸುತ್ತಿತ್ತು.
ಹಾರ್ಮುಜ್ ಜಲಸಂಧಿಯ ಮೇಲಿನ ತನ್ನ ಹಿಡಿತವನ್ನು ಸಡಿಲಿಸುವಂತೆ ಟೆಹ್ರಾನ್ ಮೇಲೆ ಒತ್ತಡ ಹೇರಲು ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಎಚ್ಚರಿಕೆಯ ಭಾಗವಾಗಿ, ಶುಕ್ರವಾರ ಮುಂಜಾನೆ ಅಮೆರಿಕವು ಇರಾನ್ ವಿರುದ್ಧದ ತನ್ನ ವೈಮಾನಿಕ ದಾಳಿಯ ವ್ಯಾಪ್ತಿಯನ್ನು ವಿಸ್ತರಿಸಿದೆ ಮತ್ತು ಸೇತುವೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.
ಯುದ್ಧದಲ್ಲಿ ಪ್ರಮುಖ ಮಧ್ಯವರ್ತಿಯಾಗಿರುವ ಕತಾರ್ ಸೇರಿದಂತೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿತ್ರ ರಾಷ್ಟ್ರಗಳ ವಿರುದ್ಧ ಇರಾನ್ ಹೊಸ ಕ್ಷಿಪಣಿ ದಾಳಿಗಳನ್ನು ನಡೆಸಿದೆ.
ಕಳೆದ ತಿಂಗಳು ಒಪ್ಪಿಕೊಳ್ಳಲಾಗಿದ್ದ ತಾತ್ಕಾಲಿಕ ಕದನ ವಿರಾಮವು ಮುರಿದುಬಿದ್ದಿದೆ. ಜಲಸಂಧಿಯ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಸಂಘರ್ಷದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಕಳೆದ ಕೆಲವು ದಿನಗಳಿಂದ ಪರಸ್ಪರ ದಾಳಿಗಳು ಮುಂದುವರಿದಿವೆ. ಅಮೆರಿಕದ ದಾಳಿಗಳಲ್ಲಿ 35ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದು, ಶುಕ್ರವಾರದ ದಾಳಿಗಳಲ್ಲಿಯೂ ಹೊಸ ಸಾವು-ನೋವುಗಳು ವರದಿಯಾಗಿವೆ.
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದಾಗ, ಟೆಹ್ರಾನ್ ಆ ಜಲಸಂಧಿಯನ್ನು ನೌಕಾಯಾನಕ್ಕೆ ವಾಸ್ತವಿಕವಾಗಿ ಬಂದ್ ಮಾಡಿತು. ಈ ಕ್ರಮವು ತೈಲ ಬೆಲೆಯನ್ನು ಗಗನಕ್ಕೇರಿಸಿತು ಮತ್ತು ಮಾತುಕತೆಗಳಲ್ಲಿ ಇರಾನ್ಗೆ ಪ್ರಬಲವಾದ ಮೇಲುಗೈಯನ್ನು ನೀಡಿತು.
ಅಮೆರಿಕದ ಜನರನ್ನು ಉದ್ದೇಶಿಸಿ ಪ್ರೈಮ್ಟೈಮ್ನಲ್ಲಿ ಮಾತನಾಡಿದ ಟ್ರಂಪ್, ಯುದ್ಧವು ಉತ್ತಮವಾಗಿ ಸಾಗುತ್ತಿದೆ ಎಂದು ಪ್ರತಿಪಾದಿಸಿದರು. “ನಾವು ಇರಾನ್ ವಿರುದ್ಧದ ಹೋರಾಟದಲ್ಲಿಯೂ ದೊಡ್ಡ ಮಟ್ಟದ ಜಯವನ್ನು ಸಾಧಿಸುತ್ತಿದ್ದೇವೆ ಮತ್ತು ಆ ಪ್ರಯತ್ನದ ಫಲಿತಾಂಶಗಳನ್ನು ನೀವು ಬಹಳ ಶೀಘ್ರದಲ್ಲೇ ಕಾಣಲಿದ್ದೀರಿ,” ಎಂದು ಟ್ರಂಪ್ ಹೇಳಿದರು.

