ಅನಂತರಾಜು ಗೌಡ ಪುತ್ತೂರು, ಬೆಳ್ತಂಗಡಿಯ ಲೋಕೇಶ್ವರಿ ವಿನಯಚಂದ್ರ ಮತ್ತು ಮಡಿಕೇರಿಯ ಕಟ್ರತನ ಲಲಿತ ಅಯ್ಯಣ್ಣ ಅವರಿಗೆ ಪ್ರಶಸ್ತಿ ಪ್ರದಾನ
ಅಕಾಡೆಮಿ ಪ್ರಕಟಿಸಿದ 12 ಪುಸ್ತಕಗಳ ಬಿಡುಗಡೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲಾವಿದರಿಗೆ ಅಕಾಡೆಮಿ ವತಿಯ ವಾದ್ಯ ಪರಿಕರಗಳ ವಿತರಣೆ
ಮಂಗಳೂರು, ಮಾರ್ಚ್ 14 : ಅರೆಭಾಷೆ ಒಂದು ಸೀಮಿತ ಪ್ರದೇಶಕ್ಕೆ ಸೀಮಿತವಾದ ಭಾಷೆಯಾದರೂ ಈ ಭಾಷೆಯನ್ನು ಬೇರೆ ಸಮುದಾಯದವರೂ ಮಾತಾಡುತ್ತಾರೆ. ಹಾಗಾಗಿ ಅರೆಭಾಷೆ ಒಂದು ಜಾತಿಗೆ ಸೀಮಿತವಾದ ಭಾಷೆ ಅಲ್ಲ. ಭಾಷೆ ಸಂಸ್ಕೃತಿ ನಶಿಸದಂತೆ ನೋಡಿಕೊಳ್ಳಬೇಕಾದುದು ಸರಕಾರದ ಜವಾಬ್ದಾರಿ. ಚಿಕ್ಕ ಚಿಕ್ಕ ಭಾಷೆಗಳಿಗೆ ಜೀವ ತುಂಬಬೇಕು. ಆ ಭಾಷೆಗಳ ಸಾಹಿತ್ಯ ಸಂಸ್ಕೃತಿಗಳು ಹಿನ್ನಡೆ ಅನುಭವಿಸದಂತೆ ನೋಡಿಕೊಳ್ಳುವುದಕ್ಕಾಗಿಯೇ ಸರಕಾರ ಭಾಷಾ ಅಕಾಡೆಮಿಗಳನ್ನು ಮಾಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇಂದು ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ 2025 ನೇ ಸಾಲಿನ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತಾಡುತ್ತಿದ್ದರು.
ಮುಂದುವರಿದು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಗೌರವ ಮಾನ್ಯತೆ ಇರಬೇಕು. ಐಕ್ಯತೆ ಅಂದರೆ ಒಂದೇ ಜಾತಿ, ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಂದೇ ನಡೆ ನುಡಿ ಇರಬೇಕು ಎಂದಿಲ್ಲ. ಎಲ್ಲ ಭಾಷೆ, ಸಂಸ್ಕೃತಿಗೆ ಈ ದೇಶದಲ್ಲಿ ಮಾನ್ಯತೆ ಇದೆ. ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ಪ್ರತ್ಯೇಕತೆಯನ್ನು ಎತ್ತಿ ಹಿಡಿದು ವಿಭಜನೆಯತ್ತ ಹೋಗಬಾರದು ಎಂದು ಅವರು ಅಭಿಪ್ರಾಯ ಪಟ್ಟರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಅಕಾಡೆಮಿಯು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಬಹು ದೊಡ್ಡ ಕೊಡುಗೆಗಳನ್ನು ನೀಡಿದೆ. ಸಾಹಿತ್ಯ ಮತ್ತು ಸಂಶೋಧನೆಗೆ ಹೆಚ್ಚು ಗಮನ ಹರಿಸಲಾಗಿದೆ ಎಂದರು.

ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಿಂದ ಅನಂತರಾಜು ಗೌಡ ಪುತ್ತೂರು, ಅರೆಭಾಷಿಕ ಸಂಘಟನಾ ಕ್ಷೇತ್ರದಿಂದ ಬೆಳ್ತಂಗಡಿಯ ಲೋಕೇಶ್ವರಿ ವಿನಯಚಂದ್ರ, ಮತ್ತು ಅರೆಭಾಷೆ ಸಾಹಿತ್ಯ ಕ್ಷೇತ್ರದಿಂದ ಮಡಿಕೇರಿಯ ಕಟ್ರತನ ಲಲಿತ ಅಯ್ಯಣ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಕಾಡೆಮಿ ಪ್ರಕಟಿಸಿದ 12 ಪುಸ್ತಕಗಳನ್ನು ಸಚಿವರು ಇದೇ ಸಂದರ್ಭದಲ್ಲಿ ಬಿಡುಗಡೆ ಗೊಳಿಸಿದರು.
ಲಯನ್ಸ್ ಮಾಜಿ ಗವರ್ನರ್ ಎಂ ಬಿ ಸದಾಶಿವ ಅಭಿನಂದನಾ ಭಾಷಣ ಮಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲಾವಿದರಿಗೆ ಅಕಾಡೆಮಿ ವತಿಯ ವಾದ್ಯ ಪರಿಕರಗಳನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವಿತರಿಸಿದರು.

ಕರ್ನಾಟಕ ರಾಜ್ಯ ಕನಿಷ್ಠ ವೇತನಾ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ ಎ ಗಫೂರ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಶಾಲೆಟ್ ಲವೀನಾ ಪಿಂಟೋ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ, ದ.ಕ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ, ಕೊಡಗು ಗೌಡ ಸಮಾಜದ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಅರೆಭಾಷೆ ಅಕಾಡೆಮಿಯ ಮಾಜಿ ಸದಸ್ಯ ಲೋಕಯ್ಯ ಗೌಡ, ಮಂಗಳೂರು ತಾಲೂಕು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಯುವ ಘಟಕದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದ.ಕ ಜಿಲ್ಲೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ಅತಿಥಿಗಳಾಗಿದ್ದರು.
ಅಕಾಡೆಮಿ ಸದಸ್ಯರಾದ ತೇಜಕುಮಾರ್ ಕುಡೆಕಲ್ಲು, ಚಂದ್ರಾವತಿ ಬಡ್ಡಡ್ಕ, ಲತಾ ಪ್ರಸಾದ್ ಕುದ್ಪಾಜೆ, ಪಿ.ಎಸ್ ಕಾರ್ಯಪ್ಪ, ಡಾ. ಜ್ಞಾನೇಶ್, ಸೂದನ ಎಸ್ ಈರಪ್ಪ, ಪಿ ಎಂ ಸಂದೀಪ್, ವಿನೋದ್ ಮೂಡಗದ್ದೆ, ಮೋಹನ್ ಪೊನ್ನಚ್ಚನ, ಗೋಪಾಲಕೃಷ್ಣ ಕೆ ಸಿ, ಕೆ ಪ್ರಕಾಶ್ ಉಪಸ್ಥಿತರಿದ್ದರು.
ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಕಾಡೆಮಿ ಸದಸ್ಯ ಲೋಕೇಶ್ ಊರುಬೈಲು ನಿರ್ವಹಿಸಿದರು.
ಅಕಾಡೆಮಿಯ ಸದಸ್ಯ ಚಂದ್ರಶೇಖರ ಪೇರಾಲು ಸ್ವಾಗತಿಸಿದರು. ರಿಜಿಸ್ಟ್ರಾರ್ ಚಿನ್ನಸ್ವಾಮಿ ವಂದಿಸಿದರು. ಜಯಪ್ರಕಾಶ್ ಆಶಯಗೀತೆ ಹಾಡಿದರು. ಪುರುಷೋತ್ತಮ ಕರಂಗಲ್ಲು ಮತ್ತು ಸುಶ್ಮಿತಾ ಕಡಪಳ ನಿರೂಪಿಸಿದರು.


