ಬೆಂಗಳೂರು: ಕಳೆದ 35 ವರ್ಷಗಳಿಂದ ಒಳಮೀಸಲಾತಿ ಜಾರಿ ಮಾಡಲು ಆಗ್ರಹಿಸಿ ನಿರಂತರವಾಗಿ ಹಲವು ರೀತಿಯ ಹೋರಾಟಗಳನ್ನು ಮಾಡುತ್ತಿದ್ದು, ನಮ್ಮ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಒಳಮೀಸಲಾತಿ ಪರವಾಗಿ ತೀರ್ಪು ನೀಡಿತ್ತು. ತೀರ್ಪು ಬಂದು ಎರಡು ವರ್ಷಗಳಾದರೂ ಸಮಗ್ರವಾಗಿ ಒಳಮಿಸಲಾತಿ ಜಾರಿಮಾಡುವಲ್ಲಿ ಸರ್ಕಾರ ವಿಫಲವಾಗಿದೆ.
ಅಲ್ಲದೇ 56,432 ಹುದ್ದೆಗಳನ್ನು ಒಳಮೀಸಲಾತಿ ಇಲ್ಲದೆಯೇ ಭರ್ತಿ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಮಾರ್ಚ್ 12 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.
ಒಳಮೀಸಲಾತಿ ಜಾರಿ ಮಾಡುವ ಪ್ರಕ್ರಿಯೆಯು ಕೊನೆಯ ಹಂತಕ್ಕೆ ತಲುಪಿದ್ದು, ಇದನ್ನು ಸುಲಲಿತವಾಗಿ ಬಗೆಹರಿಸಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಆಗ್ರಹಿಸಿ ಒಳಮೀಸಲಾತಿ ಹೋರಾಟಗಾರರು ಪತ್ರಿಕಾಗೋಷ್ಠಿ ನಡೆಸಿದರು.
ಒಳಮೀಸಲಾತಿ ಹೋರಾಟದ ಮುಖಂಡ ಮಾರಸಂದ್ರ ಮುನಿಯಪ್ಪ ಮಾತನಾಡಿ, ಹೋರಾಟದ ನಿಯೋಗವನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ಒಂದು ಹುದ್ದೆಯನ್ನು ಒಳಮೀಸಲಾತಿ ಇಲ್ಲದೆಯೇ ಭರ್ತಿ ಮಾಡುವುದಿಲ್ಲ ಎಂದು ಆಶ್ವಾಸನೆ ನೀಡಿದ್ದರು. ಮಾ. 13ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯರನ್ನು ಭೇಟಿ ಮಾಡಿದ ಹೋರಾಟಗಾರರ ನಿಯೋಗ ಡಿಪಿಆರ್ ಸುತ್ತೋಲೆ , ರಾಜ್ಯಪಾಲರಿಂದ ಸಹಿಯಾದ ಕಾಯ್ದೆಯ ರಾಜ್ಯಪತ್ರ ಹೊರಡಿಸಲು ನಿಧಾನಗತಿ ಧೋರಣೆ ಅನುಸರಿಸುತ್ತಿರುವ ಕುರಿತು ಚರ್ಚಿಸಿದಾಗ, ಕೂಡಲೇ ರಾಜ್ಯಪತ್ರವನ್ನು ಹೊರಡಿಸುವುದಾಗಿ ನಿಯೋಗಕ್ಕೆ ತಿಳಿಸಿದರು ಎಂದು ವಿವರಿಸಿದರು.
ಮಾರ್ಚ್ 27ರಂದು ನಡೆಯುವ ವಿಶೇಷ ಸಚಿವ ಸಂಪುಟವು ಒಳಮೀಸಲಾತಿ ಪರವಾದ ತೀರ್ಮಾನವನ್ನು ತೆಗೆದುಕೊಳ್ಳಲು ಎಲ್ಲಾ ಸಮುದಾಯಗಳು ಸಹಕರಿಸಬೇಕು ಎಂದು ಮನವಿ ಮಾಡಿದರು. ಒಳಮೀಸಲಾತಿ ಅಲ್ಲದೆಯೇ ಅಸ್ಪೃಷ್ಯ ಸಮುದಾಯಗಳ ಜ್ವಲಂತ ಸಮಸ್ಯೆಗಳಾದ ಭೂಮಿ ಹಕ್ಕು, ದೌರ್ಜನ್ಯ ತಡೆ, ಎಸ್ಸಿಎಸ್ಪಿ- ಟಿಎಸ್ಪಿ ಅನುದಾನದಲ್ಲಿ ಅನ್ಯಾಯದ ವಿರುದ್ದ ಸಂಘಟಿರಾಗಿ ಹೋರಾಟ ನಡೆಸುವ ಅನಿವಾರ್ಯ ಇದೆ. ಹಾಗಾಗಿ ರೋಸ್ಟರ್ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ಕೂತು ಬಗೆಹರಿಸಿಕೊಂಡು ಒಳಮೀಸಲಾತಿಯನ್ನು ಜಾರಿಮಾಡಿಕೊಳ್ಳೋಣ. ಒಳಮೀಸಲಾತಿ ಹೋರಾಟ ಸಾಮಾಜಿಕ ನ್ಯಾಯದ ಹೋರಾಟವಾದ್ದರಿಂದ ಇದು ಯಾವುದೇ ಸಮುದಾಯದ ವಿರುದ್ಧದ ಹೋರಾಟ ಎಂದು ಯಾರೂ ಭಾವಿಸಬಾರದು ಎಂದೂ ಮನವಿ ಮಾಡಿದರು.
ಹಿರಿಯ ಒಳಮೀಸಲಾತಿ ಹೋರಾಟಗಾರರಾದ ಅಂಬಣ್ಣ ಅರೋಲಿಕರ್, ಒಳಮೀಸಲಾತಿಯನ್ನು ಎಲ್ಲಾ ಹಂತಗಳಲ್ಲೂ ಅನ್ವಯಿಸಿ ಆದೇಶ ಹೊರಡಿಸದಿದ್ದರೆ ನಮ್ಮ ಹೋರಾಟ ಇನ್ನಷ್ಟು ತೀವ್ರವಾಗುತ್ತದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಳಮೀಸಲಾತಿ ಹೋರಾಟಗಾರರು ಸರ್ಕಾರಕ್ಕೆ ಎಲ್ಲಾ ರೀತಿಯಲ್ಲೂ ಎದುರುಗೊಳ್ಳುತ್ತೇವೆ. ಸಮುದಾಯದ ಭಾವನೆಗೆ ಬೆಲೆ ಕೊಟ್ಟು ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ ಎಂದು ಆಗ್ರಹಿಸಿದರು.
ಮತ್ತೊಬ್ಬ ಹಿರಿಯ ಒಳಮೀಸಲಾತಿ ಹೋರಾಟಗಾರರಾದ ಬಿ. ನರಸಪ್ಪ ಮಾತನಾಡಿ, ಒಳಮೀಸಲಾತಿ ಹೋರಾಟವನ್ನು ಸರ್ಕಾರ ಕಡೆಗಣಿಸಿದ ಪಕ್ಷದಲ್ಲಿ ಸರ್ಕಾರ ತನ್ನ ಅಂತ್ಯವನ್ನು ಕಾಣಲಿದೆ ಎಂದು ಎಚ್ಚರಿಸಿದರು.

