ಹಾವೇರಿ: ಇರಾನ್ ಮೇಲೆ ಇಸ್ರೇಲ್ ಅಮೆರಿಕಾ ಯುದ್ಧದ ಕಾವು ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೂ ತಟ್ಟಿದೆ. ಗಲ್ಫ್ ರಾಷ್ಟ್ರಗಳಿಗೆ ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ರಪ್ತು ಆಗುತ್ತಿತ್ತು. ಆದರೆ ತನ್ನ ಮೇಲೆ ಅಮೆರಿಕಾ ಇಸ್ರೇಲ್ ದಾಳಿಯಿಂದ ಕಂಗೆಟ್ಟ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮಾಡುತ್ತಿರುವುದರಿಂದಾಗಿ ಗಲ್ಪ್ ರಾಷ್ಟ್ರಗಳಲ್ಲಿ ಆತಂಕದ ವಾತಾವರಣವಿದ್ದು, ರಪ್ತು ಆಮದು ಎಲ್ಲವೂ ಬಂದ್ ಆಗಿದೆ
ಹೌದು, ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಕಾರ್ಮೋಡ ಹಾವೇರಿ ಜಿಲ್ಲೆಯ ವಿಶ್ವವಿಖ್ಯಾತ ಬ್ಯಾಡಗಿ ಮೆಣಸಿನ ಕಾಯಿ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರಿದೆ.
ರಪ್ತುಮಾಡುವ ಕಂಟೇನರ್ಗಳ ಬೆಲೆಯಲ್ಲೂ ದಿಢೀರ್ ಏರಿಕೆ ಗಲ್ಫ್ ರಾಷ್ಟ್ರಕ್ಕೆ ಹೋಗಬೇಕಾಗಿದ್ದ ಮೆಣಸಿನಕಾಯಿ ಹಾಗೆಯೇ ಮಾರುಕಟ್ಟೆಗಳಲ್ಲಿ ಸಿಲುಕುವಂತಾಗಿದೆ. ಗಲ್ಫ್ ಬದಲು ಬೇರೆ ದೇಶಗಳಿಗೆ ರಪ್ತು ಮಾಡೋಣ ಅಂದರೆ ರಪ್ತು ಮಾಡುವ ಸುಂಕ ಬಾಡಿಗೆಯೂ ಕೂಡಾ ಹೆಚ್ಚಳವಾಗಿದೆ. ಈ ಬ್ಯಾಡಗಿ ಮೆಣಸಿನಕಾಯಿ ಮಸಾಲೆ ಪದಾರ್ಥಗಳ ತಯಾರಿಕೆ, ಖಾರದ ಪುಡಿ ತಯಾರಿಕೆ ಅಷ್ಟೇ ಅಲ್ಲಸೌಂದರ್ಯ ವರ್ಧಕ ಲಿಪ್ಸ್ಟಿಕ್, ನೇಲ್ಪಾಲಿಷ್ ತಯಾರಿಕೆಯಲ್ಲೂ ಬಳಕೆಯಾಗುತ್ತದೆ.

ಯುದ್ಧ ಆರಂಭವಾಗುವ ಮೊದಲು ಒಂದು 40 ಅಡಿ ಕಂಟೇನರ್ ಸಾಗಾಣಿಕೆಗೆ ಸುಮಾರು 1,800 ರಿಂದ 2,000 ಯುಎಸ್ ಡಾಲರ್ ಇದ್ದ ದರ, ಈಗ 3,500 ರಿಂದ 4,000 ಯುಎಸ್ ಡಾಲರ್ ದಾಟಿದೆ. ಅಂದರೆ ಬಾಡಿಗೆ ದರದಲ್ಲಿ ಸುಮಾರು ಶೇ. 50 ರಿಂದ ಶೇ. 100 ರಷ್ಟು ಏರಿಕೆಯಾಗಿದೆ.
ಹಣ ಪಾವತಿಯಲ್ಲಿ ವಿಳಂಬ: ಇರಾನ್ ಮತ್ತು ಇತರ ಕೊಲ್ಲಿ ರಾಷ್ಟ್ರಗಳಿಗೆ ಮೆಣಸಿನಕಾಯಿ ಕಳುಹಿಸಿದ್ದ ವ್ಯಾಪಾರಿಗಳಿಗೆ ಬರಬೇಕಿದ್ದ ಸುಮಾರು 10 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಯುದ್ಧದ ಬಿಕ್ಕಟ್ಟಿನಿಂದಾಗಿ ಬಾಕಿಯಾಗಿದೆ ಎಂದು ವರದಿಯಾಗಿದೆ.
ದರ ಕುಸಿತದ ಆತಂಕ: ರಫ್ತು ನಿಂತುಹೋದರೆ ದೇಶೀಯ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದಾಸ್ತಾನು ಹೆಚ್ಚಾಗಿ, ದರ ಪಾತಾಳಕ್ಕೆ ಕುಸಿಯಬಹುದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಇಂದು ಮಾರುಕಟ್ಟೆಗೆ ಬರೋಬ್ಬರಿ 1.5 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲ ಸೇರಿದೆ. ಸದ್ಯಕ್ಕೆ ಬೆಲೆಯಲ್ಲಿ ಭಾರಿ ಕುಸಿತ ಕಂಡಿಲ್ಲದಿದ್ದರೂ, ವ್ಯಾಪಾರಿಗಳು ಮತ್ತು ರಫ್ತುದಾರರು ಹೊಸದಾಗಿ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಯುದ್ಧದ ತೀವ್ರತೆ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಬೆಲೆ ಗಣನೀಯವಾಗಿ ಇಳಿಕೆಯಾಗುವ ಮುನ್ಸೂಚನೆ ಸಿಕ್ಕಿದೆ.
ರೈತರ ಆಗ್ರಹ: “ನಾವು ಕಷ್ಟಪಟ್ಟು ಬೆಳೆದ ಬೆಳೆಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಮತ್ತು ರಫ್ತುದಾರರಿಗೆ ಉಂಟಾಗಿರುವ ಕಂಟೇನರ್ ಬಾಡಿಗೆ ಸಮಸ್ಯೆಯನ್ನು ಕೇಂದ್ರ ಸರ್ಕಾರ ಶೀಘ್ರವಾಗಿ ಬಗೆಹರಿಸಬೇಕು,” ಎಂದು ಬ್ಯಾಡಗಿ ಭಾಗದ ಬೆಳೆಗಾರರು ಒತ್ತಾಯಿಸಿದ್ದಾರೆ.

