ಅಜೆರ್ಬೈಜಾನ್‌ನ ಎಕ್ಸ್‌ಕ್ಲೇವ್ ಪ್ರದೇಶವಾದ ನಖ್ಚಿವನ್ ಮೇಲೆ ಇರಾನ್ ಗುರುವಾರ ಡ್ರೋನ್ ದಾಳಿ ನಡೆಸಿದೆ ಅನ್ನುವ ವಿಷಯಕ್ಕೆ ಸಂಭಂದಿಸಿದಂತೆ ಇರಾನ್‌ನ ವಿದೇಶಾಂಗ ಉಪ ಸಚಿವ ಕಾಜೆಮ್ ಘರಿಬಾಬಾದಿ ಅವರು ಈ ದಾಳಿಯ ಕುರಿತಾಗಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಉಪ ಸಚಿವ ಕಾಜೆಮ್ ಘರಿಬಾಬಾದಿ ಅವರು, ಇರಾನ್ ತನ್ನ ನೆರೆಹೊರೆಯ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುತ್ತದೆ ಮತ್ತು ಅವುಗಳ ಮೇಲೆ ಎಂದಿಗೂ ಉದ್ದೇಶಪೂರ್ವಕವಾಗಿ ದಾಳಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ನಮ್ಮ ಗುರಿ ಕೇವಲ ಇರಾನ್ ಮೇಲೆ ದಾಳಿ ಮಾಡಲು ಬಳಸಲಾಗುತ್ತಿರುವ ಅಮೆರಿಕ ಮತ್ತು ಇಸ್ರೇಲ್‌ನ ಮಿಲಿಟರಿ ನೆಲೆಗಳು ಮಾತ್ರ ಎಂದು ಅವರು ಪ್ರತಿಪಾದಿಸಿದ್ದಾರೆ. ಒಂದು ವೇಳೆ ನೆರೆಹೊರೆಯ ರಾಷ್ಟ್ರಗಳ ಭೂಪ್ರದೇಶದಲ್ಲಿ ಡ್ರೋನ್ ಬಿದ್ದಿದ್ದರೆ ಅದು ತಾಂತ್ರಿಕ ದೋಷ ಅಥವಾ ಅಚಾತುರ್ಯವಿರಬಹುದು ಎಂಬ ಸೂಚನೆಯನ್ನು ನೀಡುತ್ತಾ, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವ ಭರವಸೆಯನ್ನೂ ಅವರು ನೀಡಿದ್ದಾರೆ.

