ಕಾಲದ ಮೂಸೆಯಲ್ಲಿ ರೂಪುದಾಳಿದ ಸುಂದರ ಸ್ಥಿರ ಬದುಕಿನ ಕನಸುಗಳು ಛಿದ್ರಗೊಂಡಾಗ ಮಧ್ಯಮ ವರ್ಗದ ಕುಟುಂಬದ ಭಿನ್ನ ಗುಣಸ್ವಭಾವಗಳ ವ್ಯಕ್ತಿಗಳು ಆ ದುರಂತವನ್ನು ಎದುರಾಗುವ ಪ್ರಕ್ರಿಯೆಯೇ ಪ್ರಸ್ತುತ ನಾಟಕದ ಕಥಾವಸ್ತು – ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು.
ಗಂಡುಹೆಣ್ಣಿನ ಸಂಬಂಧ, ಅನುಮಾನ, ಗತದ ಗುಟ್ಟುಗಳ ಅನಾವರಣ, ಬೆಳೆಯುತ್ತಾ ಹೋಗುವ ಕುತೂಹಲಗಳಿಂದಾಗಿ ಸಸ್ಪೆನ್ಸ್ ಥ್ರಿಲ್ಲರ್ ಗಳ ಹಾಗೆ ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುವ ನಾಟಕವಿದು. ಆದರೆ ಹಾಗೇ ಓದಿಕೊಂಡು ಬಿಟ್ಟರೆ, ನಾಟಕದ ಮಹತ್ತರವಾದ ಆಶಯಗಳನ್ನ ಕಳೆದುಕೊಳ್ಳುವ ಅಪಾಯವಿದೆ. ಕನ್ನಡ ಅನುವಾದವಂತೂ ಮನೋಜ್ಞವಾಗಿದೆ. ಎಲ್ಲೂ ನಾಟಕದ ಒಂದೇ ಒಂದು ಸಂವೇದನೆಯೂ ಜೀವಂತಿಕೆಯನ್ನು ಕಳೆದುಕೊಂಡಿಲ್ಲ. ಎರವಲೆಂದು ಎಲ್ಲೂ ಅನಿಸುವುದಿಲ್ಲ. ಹಿಂದಿಯಲ್ಲಿ ಮೋಹನ ರಾಕೇಶರ ಆಕರ ಕೃತಿಯನ್ನು ಓದಿರದವರಿಗಂತೂ, ಧಾರವಾಡದ ಪ್ರಾದೇಶಿಕ ಭಾಷೆಯ ಪ್ರಯೋಗದ ಪರಿಣಾಮವಾಗಿ ಇಲ್ಲಿಯ ಸುತ್ತಮುತ್ತಲಿನ ಜನರ ಬದುಕು ಬಡಿದಾಟ ಆಶೋತ್ತರಗಳ ಕಥನವಾಗಿ ಮೈದಾಳಿ ನಿಲ್ಲುತ್ತದೆ. ಒಳ ಹೂರಣ ವಿಶ್ವಾತ್ಮಕವಾದದ್ದೇ.
ಸಾಮಾಜಿಕ ಶೈಕ್ಷಣಿಕ ಆರ್ಥಿಕ ಅಭಿವೃದ್ಧಿಯ ಆಕಾಂಕ್ಷೆಗಳ ಸಾಕಾರಕ್ಕಾಗಿ ಸರ್ಕಾರ ಅದಮ್ಯ ಉತ್ಸಾಹ ತೋರಿದ ಮತ್ತು ಜನ ಅತಿಯಾದ ನಿರೀಕ್ಷೆಗಳನ್ನು ಹೊಂದಿದ್ದ ಸ್ವಾತಂತ್ರ್ಯೋತ್ತರದ ತಕ್ಷಣದ ಕಾಲಘಟ್ಟವದು. ಆದರೆ, ಎರಡೂವರೆ ದಶಕಗಳಲ್ಲಿ ಭಾರತ ಭ್ರಮನಿರಸನಕ್ಕೊಳಗಾಯಿತು. ಕನಸುಗಳ ಭಾರದಲ್ಲಿ ನಲುಗಿದ ಬೃಹತ್ ನಗರಗಳು ನಿರುದ್ಯೋಗ ಹತಾಶೆಗಳ ಗೂಡುಗಳಾದವು. ಸ್ವಾತಂತ್ರ್ಯದ ಬಳಿಕ ಕಾನೂನಾಗಿ ಬಂದ ಲಿಂಗಸಮಾನತೆ ಮತ್ತು ವರ್ಗಭೇದವಿರದ ಆರ್ಥಿಕ ಚಲನೆ ದೂರದ ಬೆಟ್ಟಗಳಾದವು. ಅರವತ್ತರ ದಶಕದ ಕೊನೆಯಲ್ಲಿ (1969) ಪ್ರಕಟವಾದ ಈ ನಾಟಕ ತನ್ನ ಕಾಲದ ಸಾಮಾಜಿಕ ಆರ್ಥಿಕ ಚಲನೆಗಳ ಪ್ರಕ್ರಿಯೆಯನ್ನ, ಶಿಕ್ಷಣ ಹಾಗೂ ಕಾನೂನಿನ ಫಲವಾಗಿ ಮಧ್ಯಮ ವರ್ಗದ ಕೌಟುಂಬಿಕ ಮೌಲ್ಯ ವ್ಯವಸ್ಥೆಗಳಲ್ಲಿ ಉಂಟಾದ ಪಲ್ಲಟಗಳನ್ನ ಪ್ರತಿಬಿಂಬಿಸುತ್ತದೆ. ಕಾಲದ ಮೂಸೆಯಲ್ಲಿ ರೂಪುದಾಳಿದ ಸುಂದರ ಸ್ಥಿರ ಬದುಕಿನ ಕನಸುಗಳು ಛಿದ್ರಗೊಂಡಾಗ ಮಧ್ಯಮ ವರ್ಗದ ಕುಟುಂಬದ ಭಿನ್ನ ಗುಣಸ್ವಭಾವಗಳ ವ್ಯಕ್ತಿಗಳು ಆ ದುರಂತವನ್ನು ಎದುರಾಗುವ ಪ್ರಕ್ರಿಯೆಯೇ ಪ್ರಸ್ತುತ ನಾಟಕದ ಕಥಾವಸ್ತು. ಈ ಪ್ರಕ್ರಿಯೆಯ ಫಲವಾಗಿ ಬರುವ ಹತಾಶೆ ನೋವು ಬೇಸರ ಬೇಗುದಿಗಳು ಹತ್ತಿರವಿದ್ದವರನ್ನೂ ಅಪರಿಚಿತರಾಗಿಸುವ ಪರಿಸ್ಥಿತಿಯನ್ನು ತರುತ್ತವೆ. ಕುಟುಂಬದ ಸದಸ್ಯರು ಒಬ್ಬರಿಗೊಬ್ಬರು ಸಂಬಂಧಗಳನ್ನೇ ಕಳೆದುಕೊಂಡವರಂತೆ ಅನಾಥಪ್ರಜ್ಞೆಗೆ ಈಡಾಗುತ್ತಾರೆ. ಬದುಕು ಉದ್ದೇಶರಹಿತವೆನಿಸುತ್ತದೆ. ಛಿದ್ರತೆ ಮತ್ತು ಅಪೂರ್ಣತೆ ಎಲ್ಲರನ್ನೂ ಆವರಿಸಿಕೊಂಡಿದೆ. ನಾಟಕದುದ್ದಕ್ಕೂ ಹರಿದಿರುವ ಅಸಂಗತತೆಯ ಗಾಢವಾದ ಛಾಯೆಯನ್ನು ಈ ಹಿನ್ನಲೆಯಲ್ಲಿ ಅರ್ಥೈಸಿಕೊಳ್ಳಬಹುದು.

ಆರಂಭದಲ್ಲಿ ಸೂತ್ರಧಾರನ ಮಾತುಗಳು ತುಂಬಾ ಸರಳ. ಅಷ್ಟೇ ತಾತ್ವಿಕ. ಅವನ ಮಾತು ಮುಗಿಯುವಷ್ಟರಲ್ಲೇ ಅಸಂಗತ ನಾಟಕಗಳಿಗೆ ಹೆಸರಾದ ಪಾಶ್ಚಿಮಾತ್ಯ ಲೇಖಕರಾದ ಸ್ಯಾಮ್ಯುಲ್ ಬೆಕೆಟ್ ಮತ್ತು ಅಯನಸ್ಕೊ ನೆನಪಾಗುತ್ತಾರೆ. ಆದರೆ ಇಲ್ಲಿರುವುದು ಅವರ ಸರಳ ಪ್ರಭಾವದ ಪ್ರೇರಣೆ ಅಲ್ಲ. ಭಾರತೀಯ ಸಮಾಜದ ನಗರೀಕೃತ ಬದುಕಿನಲ್ಲಿ ಉಂಟಾದಂತಹ ಒಂದು ನಿರ್ದಿಷ್ಟ ಬಗೆಯ ತಲ್ಲಣಗಳ ಪರಿಣಾಮವಾಗಿ ಹುಟ್ಟಿದ ಅಸಂಗತತೆಯಿದು. ಒಂದು ನಿಶ್ಚಿತ ಚೌಕಟ್ಟಿನಲ್ಲೇ ಬದುಕಿನ ಅರ್ಥವನ್ನು ಪರಿಭಾವಿಸಿರುವ ಕಥಾನಾಯಕ ಮಹೇಂದ್ರನಾಥ ಆ ಅರ್ಥ ಹುಸಿಯಾದಾಗ ಅಧೀರನಾಗುತ್ತಾನೆ. ವ್ಯವಹಾರದಲ್ಲಿ ನಷ್ಟಕ್ಕೊಳಗಾದವನು ತನ್ನ ಮೇಲಿನ ನಂಬಿಕೆಯನ್ನೇ ಕಳೆದುಕೊಂಡು ಬದುಕಿನ ಬಗೆಗೆ ನಿರಾಶನಾಗುತ್ತಾನೆ. ಆತ್ಮವಿಶ್ವಾಸವಿರದ ಪರಾವಲಂಬಿ ಬೇರೆ. ಆದರೆ ಹೆಂಡತಿ ಸಾವಿತ್ರಿ ಬದುಕಿನ ಅಸಂಗತತೆಯನ್ನು ಒಪ್ಪುತ್ತಲೇ, ತನ್ನ ನಿಶ್ಚಿತ ಕ್ರಿಯೆ ನಿರ್ಧಾರಗಳ ಮೂಲಕ ಅದನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾಳೆ. ನಿರ್ಧಾರಗಳು ತಪ್ಪಾದಾಗ ಸರಿಪಡಿಸಿಕೊಂಡು ಮುನ್ನಡೆಯುತ್ತಾಳೆ. ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವುದಿಲ್ಲ. ಅಸ್ತಿತ್ವದ ಬಿಕ್ಕಟ್ಟನ್ನು ಸವಾಲಾಗಿ ಸ್ವೀಕರಿಸಿ ಸಂಸಾರವನ್ನು ಹೇಗೋ ಸಲಹುತ್ತಾಳೆ. ಹೆಂಡತಿಯಿಂದಲೇ ಸಂಸಾರ ನಡೆಯುವಂತಾಗುತ್ತದೆ; ಹೀಗೆಯೇ ನಡೆದರೆ ತಾನು ಸಣ್ಣವನಾಗುವೆನೆಂಬ ಸಂದಿಗ್ಧತೆ ಗಂಡನದು. ಇವನ ನಿಶ್ಚಿತ ಚೌಕಟ್ಟಿನ ಸಂಹಿತೆಗಳಲ್ಲಿ ಪುರುಷಪ್ರಧಾನ ವ್ಯವಸ್ಥೆಯ ಮೌಲ್ಯಗಳೂ ಸೇರಿರುವುದು ಇಡೀ ಕೌಟುಂಬಿಕ ದುರಂತಕ್ಕೆ ಕಾರಣ. ಕುಟುಂಬಕ್ಕೆ ಅನಿವಾರ್ಯವಾಗಿರುವ ಹೆಂಡತಿಯ ದುಡಿಮೆ ಇವನಲ್ಲಿ ಕೀಳರಿಮೆಯಾಗಿ ಬೆಳೆಯುತ್ತದೆ. ಜಿಗುಪ್ಸೆ ಖಿನ್ನತೆಯಲ್ಲಿ ಕುಗ್ಗಿ ಹೋಗುತ್ತಾನೆ. ಹೀಗೆ ಬೆಳೆಯುವ ಇವನ ಮನೋಸಂಕೀರ್ಣತೆ ಹೆಂಡತಿಯ ಮೇಲಿನ ದೈಹಿಕ ಮತ್ತು ಮಾನಸಿಕ ಹಲ್ಲೆಗೆ ಕೊಂಡೊಯ್ಯುತ್ತದೆ. ಆ ಮಾನಸಿಕ ಹಿಂಸೆಗೆ ತಾನೂ ಬಲಿಪಶುವಾಗುತ್ತಾನೆ. ಅನಾರೋಗ್ಯಕ್ಕೊಳಗಾಗುತ್ತಾನೆ. ಈ ಕೃತಿಯನ್ನು ಒಂದು ಸೈಕೋಡ್ರಾಮಾ ಎಂದೂ ವಿಶ್ಲೇಷಿಸಬಹುದು. ಎಲ್ಲ ಕಾಲಕ್ಕೂ ಪ್ರಸ್ತುತವಾಗುವ ಮುಕ್ತತೆ ಮತ್ತು ಕಲಾತ್ಮಕತೆ ಕಥಾವಸ್ತುವಿನ ನಿರೂಪಣೆಯಲ್ಲಿದೆ. ಅದು ಕೃತಿಯ ಹೆಚ್ಚುಗಾರಿಕೆ. ಆದರೆ, ಈ ನಾಟಕದಲ್ಲಿ ಹುಟ್ಟಿರುವ ಅನಾಥಪ್ರಜ್ಞೆ ಮತ್ತು ಛಿದ್ರತೆಯನ್ನು ಕಾಲ ದೇಶಗಳ ನೆಲೆಗಳಿಂದ ಬೇರ್ಪಡಿಸಿ ನೋಡುವುದು ಈಗ ಅಷ್ಟೊಂದು ಸಮಂಜಸವಲ್ಲ. ವಿಶೇಷವಾಗಿ ಕಾರ್ಪೊರೇಟ್ ಸಂಸ್ಕೃತಿಯ ಮೌಲ್ಯಗಳನ್ನು ಸಹಜವೆಂಬಂತೆ ಒಪ್ಪಿಸಲಾಗುತ್ತಿರುವ ತೀವ್ರ ಆರ್ಥಿಕ ಅಸಮಾನತೆಯ ಈ ಕಾಲಘಟ್ಟದಲ್ಲಿ ಅಂಥ ಓದು ಅನಪೇಕ್ಷಣೀಯ.
ಕೆಳಮಧ್ಯಮ ವರ್ಗಗಳ ಯಾರದಾದರೂ ಆಗಿರಬಹುದಾದ ಕಥೆಯಿದು. ಸ್ವಂತ ನಿಲುವು ನಿರ್ಧಾರಗಳಿಲ್ಲದೆ ವ್ಯವಹಾರಕ್ಕೆ ಕೈಹಾಕಿ ಅಪಾರ ನಷ್ಟಕ್ಕೊಳಗಾಗಿ ಬೇರೆ ಉದ್ಯೋಗಗಳನ್ನೂ ಮಾಡದೇ ಕುಳಿತ ಗಂಡ. ಅನಿವಾರ್ಯವಾಗಿ ಕಂಪನಿಯೊಂದರಲ್ಲಿ ಸಣ್ಣ ನೌಕರಿ ಮಾಡಿ ಸಂಸಾರ ಸಲಹುವ ಮಹತ್ವಾಕಾಂಕ್ಷಿ ಹೆಂಡತಿ . ದುಡಿಯದ ಮಗ ; ಗಂಡಾಳ್ವಿಕೆಯ ಕುಡಿ. ಓಡಿ ಹೋಗಿ ಮದುವೆಯಾದ ಮಗಳು. ಯಾವ ಕಷ್ಟವೂ ಅರ್ಥವಾಗದ ಇನ್ನೊಂದು ಚಿಕ್ಕ ಮಗಳು. ಇಪ್ಪತ್ತೆರಡು ವರ್ಷಗಳಿಂದ ಪರಿಸ್ಥಿತಿ ಬದಲಾಗಬಹುದೆಂಬ ನಂಬಿಕೆಯಲ್ಲಿ ಅವಡುಗಚ್ಚಿ ಬಡಿದಾಡುತ್ತಿರುವ, ಬದಲಾಯಿಸಲು ಲಭ್ಯವಿರುವ ಸಾಮಾಜಿಕ ಸಂಪರ್ಕಗಳನ್ನೆಲ್ಲ ಹಿಂಜರಿಕೆಯಿಲ್ಲದೆ ಬಳಸಿಕೊಳ್ಳಲು ಪ್ರಯತ್ನಿಸಿ ವಿಫಲವಾಗುವ, ಗಂಡ ಮಗನಿಂದ ಹಿಡಿದು ಹೊರಗಿನ ಗಂಡಸರಿಂದಲೂ ಕೂಡ ಅನಾದರಕ್ಕೊಳಗಾಗುವ, ಕುಟುಂಬವನ್ನು ದಂಡಿಗೆ ಹಚ್ಚಲು ಕೆಳಮಧ್ಯಮ ವರ್ಗದ ಮಧ್ಯವಯಸ್ಕ ಗೃಹಿಣಿ ಸಾವಿತ್ರಿ ನಡೆಸುವ ಹೋರಾಟದ ಕಥೆಯಿದು. ಈಕೆ ಸತಿ ಸಾವಿತ್ರಿಯಲ್ಲ. ಸಂಗಾತಿ ಸಾವಿತ್ರಿ. ಆಧುನಿಕ ಭಾರತದ ನಗರೀಕೃತ ಸಮಾಜದ ಮಧ್ಯಮವರ್ಗದ ದುರಂತಗಳಿಗೆ ಎದೆಕೊಟ್ಟು ಬಡಿದಾಡುವ ಸಂಗಾತಿ ಸಾವಿತ್ರಿಯ ಕಥೆಯಿದು.
ಆರ್ಥಿಕ ಮತ್ತು ಸಾಮಾಜಿಕ ದುಸ್ಥಿತಿಗಳ ಪರಿಣಾಮವಾದ ಪ್ರೇಮರಹಿತ ದಾಂಪತ್ಯ ತನ್ನನ್ನು ಅರ್ಥೈಸಿಕೊಳ್ಳುವ ಸಂಬಂಧವೊಂದಕ್ಕಾಗಿ ಕೆಲವೊಮ್ಮೆ ಎದುರು ನೋಡುವಂತೆ ಮಾಡುತ್ತದೆ. ಆದರೆ, ಸ್ನೇಹ ಸಂಬಂಧಗಳಲ್ಲಿ ಬರುವ ಗಂಡಸರೂ ಅವಳನ್ನು ಪೂರ್ಣ ಮನುಷ್ಯಳನ್ನಾಗಿ ನೋಡುವುದಿಲ್ಲ. ಹೀಗೆ ಅವಳ ಸ್ನೇಹಕ್ಕೆ ಬಂದ ಎಲ್ಲಾ ಗಂಡಸರೂ ‘ಒಂದೇ ಥರಾ. ಬ್ಯಾರೆ ಬ್ಯಾರೆ ಮುಖವಾಡಗಳು. ಮುಖ ಮಾತ್ರ ಒಂದೇ..’(ಪು.124). ಪುರುಷರ ಸ್ನೇಹ ಸಂಬಂಧಗಳಲ್ಲಿ ಅವಳು ಬಂದು ತಲುಪಿರುವ ಸ್ಥಿತಿಗೆ ಪ್ರತಿಭಾ ನಂದಕುಮಾರರ ಕವಿತೆಯೊಂದರ ಈ ಮುಂದಿನ ಸಾಲುಗಳು ಸರಿಯಾಗಿ ಕನ್ನಡಿ ಹಿಡಿದಂತಿವೆ, ‘ಅದೂ ನನ್ನ ಮನೆಯಲ್ಲ. ಇದೂ ನನ್ನದಲ್ಲ. ನನ್ನದೊಂದು ಮನೆಯೇ ಇಲ್ಲ. ಆದರೂ ಇದನ್ನು ಬಿಟ್ಟು ಹೋದರೆ ಮನೆಯ ಮಾನ ಕಳೆಯುವ ಹೆದರಿಕೆ. ಹಾಗಾಗಿ ಇದ್ದಲ್ಲೇ ಇರುತ್ತೇನೆ. ಕೆಸರೊಳಗೆ ಮುಳುಗುತ್ತಾ ಕೊನೆಗೊಮ್ಮೆ ಇಲ್ಲವಾಗುತ್ತೇನೆ’ . ಹೆಣ್ಣನ್ನು ಯಾವ ಕಾರಣಕ್ಕೂ ತನ್ನ ಸಮಾನ ಎಂದು ಸ್ವೀಕರಿಸದ ಕೊಳೆತು ನಾರುವ ಪುರುಷ ಪ್ರಧಾನ ವ್ಯವಸ್ಥೆಯ ಕೌಟುಂಬಿಕ ಸಾಮಾಜಿಕ ಔದ್ಯೋಗಿಕ ಅವತರಣಿಕೆಗಳ ಚಿತ್ರಣ ಈ ನಾಟಕದಲ್ಲಿ ಮೂಡಿದೆ. ಮನೆಯನ್ನು ಹೊಂದಿಸಿಕೊಳ್ಳುವ, ಪೋಷಿಸುವ, ಆರ್ಥಿಕತೆಯನ್ನು ಹಳಿಗೆ ಹಚ್ಚುವ ಕ್ರಿಯೆಗಳಲ್ಲಿ ನಿರತರಾಗಿರುವ ಮಹಿಳೆಯರು ಒಂದೆಡೆ; ನಿಷ್ಕ್ರಿಯರಾಗಿದ್ದುಕೊಂಡೇ ಕ್ರಿಯಾಶೀಲ ಮಹಿಳೆಯರನ್ನು ನಿಯಂತ್ರಿಸುವ ಕಥನಗಾರಿಕೆಯಲ್ಲಿ ಸದಾ ತೊಡಗಿರುವ ಪುರುಷರ ಗುಂಪು ಇನ್ನೊಂದೆಡೆ. ಇದೊಂದು ಚಿತ್ರ ಹೇಳಬೇಕಾದದ್ದನ್ನೆಲ್ಲಾ ಹೇಳುತ್ತದೆ. ಎಲ್ಲದೂ ನಡೆಯುತ್ತಿರುವುದು ಗಂಡಸರ ಇಚ್ಛೆಯಂತೆಯೇ. ಸಂಕಥನ ವಿಶ್ಲೇಷಣೆ ಮಾದರಿಯ ಮೂಲಕ ಪಠ್ಯವನ್ನು ಒರೆಗೆ ಹಚ್ಚಿದಲ್ಲಿ ನಾಟಕದಲ್ಲಿರುವ ಬಹುತೇಕ ಬೇಗುದಿಗಳ ಗಂಡಾಳ್ವಿಕೆಯ ನೆಲೆಯನ್ನ ಸರಿಯಾಗಿ ಅರ್ಥೈಸಬಹುದು. ಸೂತ್ರದಾರನನ್ನೂ ಸೇರಿದಂತೆ ಐದೂ ಗಂಡಸರ ಪಾತ್ರಗಳನ್ನು ಒಬ್ಬನೇ ನಟ ನಿರ್ವಹಿಸಬೇಕೆಂದು ನಾಟಕಕಾರ ನೀಡಿರುವ ತಾಂತ್ರಿಕ ಸೂಚನೆಯಲ್ಲೇ, ಕೃತಿಯ ಈ ತಾತ್ವಿಕ ರಾಜಕಾರಣದ ಸುಳಿವೂ ಸ್ಪಷ್ಟವಾಗಿದೆ. ಈ ಹಿನ್ನಲೆಯಲ್ಲಿ ನೋಡಿದಾಗ, ಅನುವಾದಿತ ಕೃತಿಯಲ್ಲಿ ನಿರ್ದೇಶಕ ಚಿದಂಬರರಾವ್ ಜಂಬೆ ಅವರ ಸುಸಂಗತ ನಿಲುವಿನ ಅಪೇಕ್ಷೆಯ ಮೇರೆಗೆ ಬರೆದದ್ದೆಂದು ಹೇಳಲಾದ, ಸಾವಿತ್ರಿ ಮತ್ತು ಜುನೇಜರ ನಡುವಿನ ಸಂವಾದದ ಹೆಚ್ಚುವರಿ ಭಾಗ ( ಆಸಕ್ತ ನಿರ್ದೇಶಕರು ಬಳಸಿಕೊಳ್ಳಬಹುದೆಂದು ಆರಂಭದಲ್ಲಿ ಪ್ರತ್ಯೇಕವಾಗಿ ನೀಡಲಾಗಿದೆ) ಬೇಕಿರಲಿಲ್ಲವೆನಿಸುತ್ತದೆ. ಆಕರ ಕೃತಿಯ ತಾತ್ವಿಕ ಆಶಯಗಳ ಮರುನಿರೂಪಣೆಯು ಭಾಷಾಂತರಗಳಲ್ಲಿ ಆಗಬಾರದೆಂದಿಲ್ಲ. ಆದರೆ, ಆಕರ ಕೃತಿ ತನ್ನ ಮುಕ್ತ ಹೆಣಿಗೆಯಲ್ಲಿ ಮಹಿಳೆಯ ಪರವಾಗಿ ಬಿಟ್ಟಿರುವ ಸ್ಥಳಾವಕಾಶಗಳನ್ನು ಹೊಸದಾಗಿ ಸೇರ್ಪಡೆಗೊಳ್ಳುವ ಜುನೈಜಾನ ಮಾತುಗಳು ತಡವಿದಂತಿವೆ. ಅವಳಿಗೆ ವಿರುದ್ಧವಾಗುವ ಮತ್ತು ಸಾಂಪ್ರದಾಯಿಕ ನಿಲವುಗಳಿಗೆ ವಾಲುವ ವಾತಾವರಣಕ್ಕೆ ಈ ಮಾತುಗಳು ಎಡೆ ಮಾಡಿಕೊಡಬಹುದಾಗಿದೆ. ತುಂಬಾ ಸೂಕ್ಷ್ಮವಾಗಿ ಕಟ್ಟಿರುವ ಮಹಿಳಾಪರವಾದ ಧ್ವನಿಯನ್ನು ತೆಳುಗೊಳಿಸಿದಂತಾಗಬಹುದು ಎನ್ನುವ ಆತಂಕ ಹುಟ್ಟುತ್ತದೆ.
ಸಾವಿತ್ರಿ ಗಂಡು, ಹೆಣ್ಣೆಂಬ ಭೇದವಿಲ್ಲದೆ ಎಲ್ಲಾ ಜವಾಬ್ದಾರಿಗಳನ್ನೂ ನಿಭಾಯಿಸುತ್ತಿದ್ದಾಳೆ. ಆದರೆ ಧೂರ್ತತೆ ಅಧಿಕಾರ ವಿಲಾಸಿತನದಲ್ಲೇ ಮೈ ಮರೆತಿರುವ ಇತರೆ ಗಂಡಸರಲ್ಲಿ ಯಾವೊಬ್ಬನೂ ತಾನು ಹೆಣ್ಣಾಗಿ ಯೋಚಿಸುತ್ತಿಲ್ಲ. ಕೆಲವರು ಅವಳ ಮೇಲೆಯೇ ಅಪೂರ್ಣತೆಯ ಆಪಾದನೆಯನ್ನು ಬೇರೆ ಹೊರಿಸುತ್ತಾರೆ. ಆಧೇ ಅಧೂರೆ ಎಂದರೆನೇ ಅಪೂರ್ಣರು. ಅಪೂರ್ಣತೆ ಮನುಷ್ಯರಿಗೆ ಸಹಜವೇ. ಮುರಿದುಬಿದ್ದ ಸಂಸಾರದ ಇಡೀ ಭಾರವನ್ನು ಏಕಾಂಗಿಯಾಗಿ ಹೊತ್ತಿರುವ ಹೆಣ್ಣು ತನ್ನ ಅಪೂರ್ಣತೆಯ ಆತಂಕದಲ್ಲಿ ಭಾವನಾತ್ಮಕ ಮತ್ತು ಸಾಮಾಜಿಕ ಭದ್ರತೆಯನ್ನು ನೀಡುವ ಸಂಬಂಧವನ್ನು ಎದುರು ನೋಡುತ್ತಾಳೆ. ಸಂಗಾತಿಯಾದವನು ಅಷ್ಟನ್ನೂ ಪೂರೈಸುತ್ತಿಲ್ಲ. ಆ ಮೂಲಕ ತನ್ನ ಅಪೂರ್ಣತೆಯ ರೋಗವನ್ನು ನೀಗಿಕೊಳ್ಳುವ ಅವಕಾಶವನ್ನೂ ಅವನು ಕಳೆದುಕೊಳ್ಳುತ್ತಾನೆ. ವೈವಾಹಿಕ ಸಂಬಂಧದಲ್ಲಿ ಸಂಗಾತಿಗಳು ಒಬ್ಬರನ್ನೊಬ್ಬರು ಭಾವನಾತ್ಮಕವಾಗಿ ಪೂರ್ಣಗೊಳಿಸಿಕೊಳ್ಳಬೇಕು. ಆದರೆ, ಪುರುಷಾಧಿಪತ್ಯ ಹುಟ್ಟುಹಾಕಿದ ಪೂರ್ಣತೆಯ ಭ್ರಮೆ ಇಲ್ಲಿರುವ ಗಂಡಸರಿಗೆ ಅದನ್ನೂ ಅರಿಯದಂತಿರಿಸಿದೆ. ಅದು ಹೇರಿರುವ ಮಾನಸಿಕ ಸಂಕೋಲೆಗಳಿಂದ ಬಿಡಿಸಿಕೊಳ್ಳಲಾಗದೆ ಮಹೇಂದ್ರನಾಥ ಒದ್ದಾಡುತ್ತಾನೆ. ಹೆಂಡತಿ ಸಾಮಾಜಿಕವಾಗಿ ಮತ್ತು ಕೌಟುಂಬಿಕವಾಗಿ ಶಕ್ತಳಾದಷ್ಟು ಜರ್ಜರಿತನಾಗುತ್ತಾನೆ. ಅಪೂರ್ಣತೆಯಲ್ಲೇ ಬಾಳಬೇಕಾದ ಶಾಪವಿದು. ಈ ನಾಟಕದ ಸ್ತ್ರೀವಾದಿ ಓದಿನಲ್ಲಿ ಇಲ್ಲಿರುವ ಗಂಡಸರೆಲ್ಲರೂ ಅಪೂರ್ಣರೇ. ಮಧ್ಯಮವರ್ಗದ ಕುಟುಂಬಗಳು ಆರ್ಥಿಕ ಬಿಕ್ಕಟ್ಟಿನಲ್ಲಿ ಕೆಳಮುಖವಾಗಿ ಜಾರಿದಾಗ, ಸಂಪ್ರದಾಯಶೀಲ ಸಮಾಜ ವಿಧಿಸಿದ ಲಿಂಗಪ್ರಬೇಧದ ಪಾತ್ರಗಳಲ್ಲಿ ಪಲ್ಲಟಗಳಾಗುತ್ತವೆ. ಈ ಪಲ್ಲಟ ಅನಿರೀಕ್ಷಿತವಾಗಿ ತಂದುಬಿಡುವ ಲಿಂಗ ಸಮಾನತೆಗೆ ಸಮಾಜ ವಿಲಕ್ಷಣವಾಗಿ ಹೆದರುವುದನ್ನು ಇಲ್ಲಿ ಗಮನಿಸಬೇಕು. ತೀವ್ರ ಆರ್ಥಿಕ ಅಸಮಾನತೆಗೆ ತುತ್ತಾಗುತ್ತಿರುವ ಇಂದಿನ ನಗರೀಕೃತ ಸಮಾಜಕ್ಕೆ ಇದು ತುಂಬಾ ಪ್ರಸ್ತುತ.

ನಾಟಕದ ಕೊನೆಯ ದೃಶ್ಯ. ಸಾವಿತ್ರಿಯ ಮಾನಸಿಕ ಕಿರುಕುಳದಿಂದಲೇ ಆತ್ಮಬಲವನ್ನು ಕಳೆದುಕೊಂಡ ಮಹೇಂದ್ರನಾಥ ರೋಗಕ್ಕೆ ತುತ್ತಾಗಿದ್ದಾನೆ ಎಂಬುದು ಸ್ನೇಹಿತ ಜುನೇಜಾನ ಆರೋಪ. ಅವನಲ್ಲಿರುವ ಶಕ್ತಿಯನ್ನ ಮನವರಿಕೆ ಮಾಡಿಕೊಟ್ಟು ಮಹೇಂದ್ರನನ್ನು ಸ್ವತಂತ್ರನಾಗಿ ಮಾಡುತ್ತೇನೆ ಎಂದು ಸಾವಿತ್ರಿಗೆ ಜುನೇಜಾ ಸವಾಲು ಹಾಕುತ್ತಾನೆ . ಅವನೆಂದೂ ಈ ಮನೆಗೆ ಇನ್ನು ಬರಲಾರ ಮತ್ತು ಸಾವಿತ್ರಿಯ ಹಂಗಿನಲ್ಲಿ ಇರಲಾರ ಎಂಬುದು ಜುನೇಜಾನ ಸವಾಲು. ಅವನನ್ನು ಆತ್ಮಸ್ಥೈರ್ಯ ಉಳ್ಳ ಮನುಷ್ಯನನ್ನಾಗಿ ಮಾಡುವುದು ತಮಗೂ ಕೂಡ ದೊಡ್ಡ ಉಪಕಾರ, ಅವನು ಮನೆಗೆ ಬರದಿದ್ದರೂ ಸರಿ ಎನ್ನುವ ಸಾವಿತ್ರಿಯ ಮಾತು ಮುಗಿಯುವ ಮುನ್ನವೇ ನಿತ್ರಾಣಗೊಂಡ ಸ್ಥಿತಿಯಲ್ಲಿ ಮಹೇಂದ್ರನಾಥ ಮಗನ ನೆರವಿನೊಂದಿಗೆ ಮನೆಯೊಳಗೆ ಪ್ರವೇಶಿಸುತ್ತಾನೆ. ಮನೆ ಶಾಂತವಾಗುತ್ತದೆ. ನೆಟ್ಟ ದೃಷ್ಟಿಯಲ್ಲಿ ಹಾಗೆಯೇ ಕುಳಿತಿದ್ದಾಳೆ ಸಾವಿತ್ರಿ. ಈ ದೃಶ್ಯ ಇನ್ನೊಂದು ರೂಪಕವಾಗಿದೆ. ಆಡಿದ ಅರೆಗಳಿಗೆಯೂ ತಾಳಿಕೆ ಬರದಂತಾಗುತ್ತವೆ ಜುನೇಜಾನ ಮಾತುಗಳು. ಯಾವುದೂ ಬದಲಾಗದ ನರಕದಂತಾಗುತ್ತದೆ. ಪ್ರಸ್ತುತ ನಾಟಕದ ಕೊನೆ ವೇಟಿಂಗ್ ಫಾರ್ ಗೋಡೊ ನಾಟಕದಲ್ಲಿ ಗುರುತಿರದವನೊಬ್ಬನಿಗೆ ಕಾದು ಕಾದು ಸುಸ್ತಾದ ಇಬ್ಬರು ಬೇವರ್ಸಿಗಳ ಈ ಮುಂದಿನ ಮಾತುಗಳನ್ನು ನೆನಪಿಸುತ್ತದೆ- ‘ಏನೂ ಆಗುವುದಿಲ್ಲ. ಯಾರೂ ಬರುವುದಿಲ್ಲ. ಹೋಗುವುದಿಲ್ಲ. ಇದು (ಕಾಯುವಿಕೆ) ಭಯಂಕರ’. ಏನೂ ಘಟಿಸದೆಂದು ತಿಳಿದರೂ ಏನೋ ಒಂದಕ್ಕೆ ಅನಿವಾರ್ಯವಾಗಿ ಕಾಯಬೇಕಾದ ಕೆಳಮಧ್ಯಮ ವರ್ಗದ ಕುಟುಂಬಗಳ ಬದುಕಿನ ವಿಲಕ್ಷಣತೆಯ ಚಿತ್ರಣವಾಗಿ ನಾಟಕ ಕಣ್ಣಲ್ಲಿ ಉಳಿಯುತ್ತದೆ. ಮಹಾಭಾರತದ ಕಥೆಯ ದೊಡ್ಡ ದೊಡ್ಡ ಪಾತ್ರಗಳಾದ ಸಾವಿತ್ರಿ ಮತ್ತು ಇಂದ್ರ (ಮಹೇಂದ್ರ) ವಿಡಂಬನೆಗೊಂಡು ಇಲ್ಲಿ ಭಾರತದ ಸುಡುವಾಸ್ತವದ ಬೇಗೆಯಲ್ಲಿ ನೊಂದು ಬೆಂದಿದ್ದಾರೆ. ಇದು ಭಾರತದ ನಗರೀಕೃತ ಕೆಳಮಧ್ಯಮ ವರ್ಗದ ಸಾಮಾನ್ಯ ಕುಟುಂಬಗಳ ದಿನನಿತ್ಯದ ನೋವು ಬಿಕ್ಕಟ್ಟು ಬೇಸರ ಬೇಗುದಿಗಳನ್ನು ಚಿತ್ರಿಸುವ ಆಧುನಿಕ ಮಹಾಕಾವ್ಯದಂತೆ ಕಾಣುತ್ತದೆ.
ಹಿಂದಿಯಲ್ಲಿ ಆಕರ ಕೃತಿಯನ್ನು ನಾನು ಓದಿಲ್ಲ. ಕಾರಣ ಆ ಭಾಷೆಯಲ್ಲಿ ಸಾಹಿತ್ಯಕ ಕೃತಿಗಳನ್ನು ಓದಲು ಬೇಕಾದ ಪ್ರೊಫೆಶಿಯನ್ಸಿಯ ಕೊರತೆ. ಹಾಗಾಗಿ ಹಿಂದಿಯಿಂದ ಕನ್ನಡ ಭಾಷೆಗೆ ನಡೆದಿರಬಹುದಾದ ಭಾಷಾಂತರದ ಪ್ರಕ್ರಿಯೆ ಕೊಡುಕೊಳ್ಳುವಿಕೆಗಳ ಬಗ್ಗೆ ಏನೂ ಹೇಳಲಾರೆ. ಬಿಂದು ಬಾತ್ರ ಅನುವಾದಿಸಿದ ಇಂಗ್ಲಿಷ್ ಕೃತಿ ನೋಡಿದ್ದೇನೆ. ಕನ್ನಡದಲ್ಲಿ ಪ್ರಾದೇಶಿಕ ಭಾಷೆಯ ನುಡಿಗಟ್ಟನ್ನು ಅನುವಾದಕರು ಈ ನಾಟಕದ ಸಂಭಾಷಣೆಗಳಲ್ಲಿ ದುಡಿಸಿಕೊಂಡಿರುವ ರೀತಿಯಂತೂ ಅನನ್ಯ. ತಾನೇ ಒಂದು ಆಕರ ಕೃತಿಯೆಂಬಷ್ಟು ಕನ್ನಡತನ ಆವಾಹಿಸಿಕೊಂಡಿದೆ. ಆಕರ ಭಾಷೆಯಿಂದ ಲಕ್ಷ್ಯ ಭಾಷೆಗೆ ಕೃತಿಯೊಂದು ಭಾಷಾಂತರವಾದಾಗ ಕೃತಿಯ ಆಂತರ್ಯದಲ್ಲಿ ಜರುಗುವ ಸಾಂಸ್ಕೃತಿಕ ಮರುಪಠ್ಯಗಳನ್ನೂ ಗಮನಿಸಬೇಕಾಗುತ್ತದೆ. ಹೆಚ್ಚಿನ ಸಲ, ಲಕ್ಷ ಭಾಷೆಯ ಸಾಂಸ್ಕೃತಿಕ ತುರ್ತು ತುಯ್ತುಗಳ ಹಿನ್ನೆಲೆಯಲ್ಲಿ ಪಠ್ಯ ಮರುಹುಟ್ಟು ಮತ್ತು ಮರುರೂಪವನ್ನು ಪಡೆಯುತ್ತಿರುತ್ತದೆ. ಕನ್ನಡದಲ್ಲಿ ಸ್ತ್ರೀವಾದಿ ಸಾಹಿತ್ಯ ತುಂಬಾ ಎಚ್ಚರದಿಂದ ತನ್ನನ್ನು ಕಟ್ಟಿಕೊಳ್ಳುತ್ತಿದ್ದಂತಹ ಕಾಲಘಟ್ಟದಲ್ಲಿ(1976) ಈ ಕೃತಿ ಕನ್ನಡಕ್ಕೆ ಅನುವಾದಗೊಂಡಿದೆ. ಈ ಅನುವಾದ ಕನ್ನಡ ಸಾಂಸ್ಕೃತಿಕ ಲೋಕ ತನ್ನ ಕಾಲಕ್ಕೆ ಅಗತ್ಯವಾಗಿದ್ದಂತ ಸಾಮಾಜಿಕ ರಾಜಕೀಯ ನಿಲುವುಗಳ ಒತ್ತಡವನ್ನು ಸೃಷ್ಟಿಸಿದ್ದರ ದ್ಯೋತಕವೂ ಆಗಿರಬಹುದು. ಅನುವಾದಕರಿಗಿದ್ದ ಕನ್ನಡದ ಆ ಸಾಂಸ್ಕೃತಿಕ ಕಾಲಘಟ್ಟದ ಮುಂಚಲನೆಗಳ ಮಹತ್ವದ ಕುರಿತಾದ ದರ್ಶನವೂ ಇಲ್ಲಿ ನಮಗಾಗುತ್ತದೆ. ನವ್ಯ ಸಾಹಿತ್ಯದ ಮೂಲಕ ಅಸ್ತಿತ್ವವಾದಿ ಬಿಕ್ಕಟ್ಟುಗಳು, ಪರಕೀಯ ಪ್ರಜ್ಞೆ, ಅಸಂಗತತೆಯ ವಿಷಯಗಳಿಗೆ ಕನ್ನಡದ ಸಾಂಸ್ಕೃತಿಕ ಪ್ರಜ್ಞೆ ಸಂಕೀರ್ಣವಾದ ರೀತಿಯಲ್ಲಿ ಆಗಲೇ ಪ್ರತಿಕ್ರಿಯಿಸಿತ್ತು. ನವ್ಯದ ಕಾಳಜಿಗಳ ಅನುಸಂಧಾನದಲ್ಲಿ ಪರ್ಯಾಯ ದೃಷ್ಟಿಕೋನಗಳ ಹುಡುಕಾಟವೂ ನಡೆದಿತ್ತು. ಈ ಮಧ್ಯೆ ಅನುವಾದಿಸಲ್ಪಡುವ ಈ ಕೃತಿ ನವ್ಯ ಸಾಹಿತ್ಯದ ಮುಖ್ಯ ಕಾಳಜಿಗಳನ್ನು ಇನ್ನಷ್ಟು ಅರ್ಥಪೂರ್ಣವಾಗಿ ಮರುನಿರೂಪಿಸುವ ಪ್ರಯತ್ನದಂತೆಯೂ ಕಾಣುತ್ತದೆ. ಈ ನಾಟಕದ ಅನುವಾದ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶಕ್ತಿಯುತಗೊಳಿಸಿದೆ.

ಡಾ. ಸಿ.ಬಿ.ಐನಳ್ಳಿ
ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾಮಹಾವಿದ್ಯಾಲಯ, ಧಾರವಾಡ.
ಇದನ್ನೂ ಓದಿ – http://ನಾಟಕ ವಿಮರ್ಶೆ | ಸಾವಿನಾಚೆ ನಿಂತು ಬದುಕಿನ ಅವಲೋಕನ ಮಾಡುವ ‘ಅನೂಹ್ಯ’ https://kannadaplanet.com/drama-review-anuhya-a-play-that-looks-beyond-death-and-observes-life/


