ಹಾಸನ ಜಿಲ್ಲೆಯ ರೈತ ಚಳವಳಿಯಲ್ಲಿ ಸ್ತ್ರೀಶಕ್ತಿಯ ಹೆಜ್ಜೆಗುರುತುಗಳು

ಹಾಸನ ಜಿಲ್ಲೆಯ ರೈತ ಚಳವಳಿಯು ಕೇವಲ ಪುರುಷರ ಪೌರುಷದ ಕಥೆಯಲ್ಲ; ಅದು ಹೆಣ್ಣಿನ ತಾಳ್ಮೆ, ತ್ಯಾಗ ಮತ್ತು ಅಪ್ರತಿಮ ಧೈರ್ಯದ ಸಂಗಮ. ಸರಳಾ ಜಗದೀಶ್ ಅವರ ವೈಚಾರಿಕ ನಾಯಕತ್ವ ಮತ್ತು ದೇವಿರಮ್ಮನವರ ಭಾವನಾತ್ಮಕ ಹೋರಾಟದ ಕಿಚ್ಚು ಈ ಮಣ್ಣಿನ ಹೆಮ್ಮೆಯ ಪರಂಪರೆ. ಚರಿತ್ರೆಯ ಪುಟಗಳಲ್ಲಿ ಈ ಹೆಸರುಗಳು ಮರೆಯಾಗಿದ್ದರೂ, ಇಂದಿಗೂ ಹಾಸನದ ರೈತ ಭೂಮಿಯಲ್ಲಿ ಬೀಳುವ ಪ್ರತಿ ಹನಿ ಬೆವರಿನಲ್ಲೂ ಇವರ ಹೋರಾಟದ ಸುಗಂಧವಿದೆ – ಮಮತಾ ಶಿವು.

ಬಾ ತಂಗಿ ಬಾರವ್ವ ಬಾರೆ, ರೈತನ ಮಗಳೆ
ಹುಟ್ಟುಟ್ಟೋರಿಗ್ಹಂಜಿ ಹುಸಿ ಹೊಡೆದ ಹೊಂಬಾಳೆ
ತಾಯೆ ಬಾ ತಂಗ್ಯಮ್ಮ ಬಿಸಿಲಲ್ಲಿ ಬೆಂದವಳೆ
ತಂಗಿ ಬಾ ತಾಯಮ್ಮ ಮಾಯೆ ಹೆಸರಲಿ ನೊಂದವಳೆ

ಮಣ್ಣಲ್ಲಿ ಮಿಡಿದವಳೆ ಗಂಜಲದಲ್ಲಿ ಮಿಂದವಳೆ
ತಲೆ ಮೇಲೆ ಕಸ ಹೊತ್ತು ಹೊಸ ಕನಸ ಕಂಡವಳೆ

ಹುಟ್ಟುತಾ ಮನೆಗಂಜಿ ಬೆಳೆಯುತಾ ಜನಕಂಜಿ
ಸೇರಿದ ಮನೆಯಲ್ಲಿ ಎದೆ ಹಿಡಿದು

ಬೈದರೆ ಬಗೆನೊಂದೆ ಹೊಗಳಿದರೆ ಕರಗಿದೆ
ಗಂಡಸರ ಹೊಡೆತಕ್ಕೆ ಮೊಂಡಾದೆ, ಬೆಂಡಾದೆ

ಗಂಡ ಅಂತ ಕೂಡಿ ಕುಂಡಿಗೆ ಸೀರೆ ಕಾಣ್ದೆ
ಸುಖ ನೀಡಿ ಸೊರಗೀದೆ ಬೆಣ್ಣಾಗಿ ಕರಗೀದೆ

ಹೊಲದಲ್ಲಿ ಕಳೆಕಿತ್ತು ಒಳಮಲ್ಲಿ ಅಟ್ಟಿಕ್ಕಿ
ಗಂಡಿನ ಅಬ್ಬರಕೆ ಮಂಡಿಯ ಒಳಗೆ ಅತ್ತವಳೆ

ಏನುಂಟು ಏ ತಂಗಿ ಯಾವ ಸಾಧನೆಯಾಯ್ತು
ಸಾವಿರ ಕೂಸ್ಹೆತ್ತು ಸಾಸಿವೆಗೆ ಕಡೆಯಾದೆ

ಹತ್ತಿಯ ಬಿಡಿಸಿದರು ಹೊಸ ಬಟ್ಟೆ ಕನಸಾಯ್ತು
ರೇಶ್ಮೆಯ ಸಾಕಿದರು ಕುಪ್ಪುಸಕೆ ಕಷ್ಟಾಯ್ತು

ಎಷ್ಟೊತ್ತು ಗೇದರು ಕಷ್ಟವು ಹರಿಯದೆ
ಹುಟ್ಟಿದವು ಹುಲ್ಲಾದೊ ತಲೆ ಇಲ್ದೆ ಕಲ್ಲಾದೊ

ನಿನ್ನ ಮಕ್ಕಳು ರೈತರು ಕಿವಿಗ್ಹೇಳೆ ಕೂರಿಸಿ
ಹುಟ್ಟಿಗೆ ಸರಿಯಾಗಿ ಬದುಕಲು ಹೇಳವ್ವ

ನೀನು ಇದ್ದರೆ ಜೀವ, ನೀ ಬಂದು ಸೇರವ್ವ
ಸಂಘಕ್ಕೆ ತಾಯಾಗಿ ಭೂಮ್ಯಾಗಿ ಕಾಯವ್ವ.

ಇದು ನಾಡಿನ ರೈತಚಳವಳಿಯ ಅಂತಃಸ್ಸತ್ವ ಸಾರುವ, ಚಳವಳಿಯನ್ನು ಭಾವನಾತ್ಮಕವಾಗಿ ಹಿಡಿದಿಟ್ಟ ಹೋರಾಟದ ಪ್ರಮುಖ ಗೀತೆ. ಇದು ಕೆ.ಯುವರಾಜ್ ಅವರ ಕಂಠಸಿರಿಯಲ್ಲಿ ಅಂದು ಎಲ್ಲರ ಮನೆ-ಮನದಲ್ಲಿ ಅಚ್ಚಳಿಯದೇ ಇತ್ತು. ರೈತ ಚಳವಳಿಯ ಮುಂಚೂಣಿ ಗಂಡಸರದೇ. ಆದರೆ ಆ ಚಳವಳಿಯ ಸರ್ವಸತ್ವವಾಗಿ ಗುಪ್ತಗಾಮಿನಿಯಂತೆ ಶಕ್ತಿಯಾಗಿದ್ದವರು ಮಹಿಳೆಯರು. ಇದನ್ನು ಚರಿತ್ರೆ ದಾಖಲಿಸಲಿಲ್ಲ. ಆದರೆ ಚಳವಳಿಯ ಒಡನಾಡಿಯಾಗಿ ಅದನ್ನು ಸೂಕ್ಷ್ಮವಾಗಿ ಗಮನಿಸಿ ಹೀಗೆ ದಾಖಲಿಸಿದವರು ನಾಡಿನ ಹಿರಿಯ ಜಾನಪದ ವಿದ್ವಾಂಸ ಪ್ರೊಫೆಸರ್‌ ಹಿ.ಶಿ.ರಾಮಚಂದ್ರೇಗೌಡರು.

     ತಲೆಯ ಮೇಲೆ ಕಸದ ಬುಟ್ಟಿ ಹೊತ್ತು, ಮುಖದ ಮೇಲೆ ಸುರಿಯುವ ಗಂಜಲವನ್ನೂ ಲೆಕ್ಕಿಸದೆ ದುಡಿಯುವ ಹೆಣ್ಣುಮಗಳು ಈ ನೆಲದ ನಿಜವಾದ ಸಂಸ್ಕೃತಿಯ ವಾಹಕಿ. ಮನೆಯಲ್ಲಿ ಹಂಗು, ಹೊಲದಲ್ಲಿ ಬಿಸಿಲು, ಗಂಡನ ಅಬ್ಬರಕ್ಕೆ ಮಂಡಿಯೊಳಗೆ ಮುಖವನಿಟ್ಟು ಅಳುವ ಆಕೆಯ ಮೌನವೇ ಒಂದು ದಿನ ಮಹಾನ್ ಚಳವಳಿಯ ಪ್ರೇರಣೆಯಾಯಿತು. ಹತ್ತಿ ಬಿಡಿಸಿದರೂ ಹೊಸ ಬಟ್ಟೆಯ ಕನಸು ಕಾಣದ, ರೇಶ್ಮೆ ಸಾಕಿದರೂ ಒಂದು ಕುಪ್ಪಸಕ್ಕೆ ಪರದಾಡುವ ಈ ‘ಮಣ್ಣಿನ ಮಗಳು’ ಕೇವಲ ಸಹಾಯಕಿ ಮಾತ್ರವಲ್ಲ; ಅವಳೇ ಈ ಸಮಾಜದ ಜೀವಸೆಲೆ. ಸಂಘಟನೆಯೇ ಶಕ್ತಿಯೆಂದು ರೈತ ಮಹಿಳೆಯ ವಿಶಿಷ್ಟ ಸಂಕಟಗಳಿಗೆ ದನಿಯಾಗಲು- ರೈತನ ಮಗಳಿಗೆ ಎಂಬ ‘ಬಾ ತಂಗಿ ಬಾರವ್ವ…’ ಎಂಬ ಗೀತೆ ಜನ್ಮತಾಳಿತು. ಈ ಹಾಡಿನ ಒಡಲ ಸಾರದ ಪ್ರೇರಣೆಯ ಸಿಂಹಪಾಲು ಹಾಸನ ಮಣ್ಣಿನ ಹೆಣ್ಣು ದನಿಗಳು…!

                                       ***

ದೇವಿರಮ್ಮ

    ಹಾಸನ ಜಿಲ್ಲೆಯ ಚಳವಳಿಗಳ ಇತಿಹಾಸದ ಪುಟಗಳನ್ನು ತಿರುವಿದಾಗ ಅಲ್ಲಿ ಹೋರಾಟದ ರಣಕಹಳೆ ಸ್ಪಷ್ಟವಾಗಿ ಕೇಳಿಸುತ್ತದೆ. ಆದರೆ, ಆ ದನಿಗೆ ಗುಪ್ತಗಾಮಿನಿಯಂತೆ ಶಕ್ತಿಯಾಗಿದ್ದವರು, ಹೋರಾಟದ ಕಿಚ್ಚಿಗೆ ಆವೇಶದ ಇಂಧನ ಒದಗಿಸಿದವರು ಜಿಲ್ಲೆಯ ರೈತ ಮಹಿಳೆಯರು. ಇತಿಹಾಸದ ದಾಖಲೆಗಳು ವೇದಿಕೆಯ ಮೇಲಿನ ಭೋರ್ಗರೆತದ ಭಾಷಣಗಳನ್ನು, ಪುರುಷ ನಾಯಕರ ಘೋಷಣೆಗಳನ್ನು ನೆನಪಿಟ್ಟುಕೊಂಡಿವೆಯೇ ಹೊರತು, ಆ ಹೋರಾಟದ ರಥಕ್ಕೆ ಅಚ್ಚುಗಟ್ಟಾದ ಬೆನ್ನೆಲುಬಾಗಿ ನಿಂತ ಮಹಿಳೆಯರ ಹೆಜ್ಜೆಗುರುತುಗಳನ್ನು ದಾಖಲಿಸಲು ಮರೆತುಬಿಟ್ಟಿವೆ. ಪ್ರಚಾರದ ಬೆಳಕಿಗೆ ಬಾರದಿದ್ದರೂ, ಚಳವಳಿಯ ಅಂತರಾಳದಲ್ಲಿ ಪ್ರವಾಹದಂತೆ ಕೆಲಸ ಮಾಡಿದ ಅಸಂಖ್ಯಾತ ನಾಯಕಿಯರ ಕಥೆಗಳು ಈ ಮಣ್ಣಿನ ಕಣಕಣದಲ್ಲೂ ಅಡಗಿವೆ. ಅಂತಹ ಅದೃಶ್ಯ ಶಕ್ತಿಯ ಸಾಕಾರ ರೂಪಗಳಂತೆ ಕಂಗೊಳಿಸುವ ಎರಡು ಧೀಮಂತ ಹೆಸರುಗಳೆಂದರೆ ಸರಳಾ ಜಗದೀಶ್ ಮತ್ತು ದೇವಿರಮ್ಮ.

ಚಳವಳಿಯ ಉದಯ ಮತ್ತು ಮಹಿಳೆಯರ ‘ಅಗೋಚರ’ ಶಕ್ತಿ:

 1980ರ ದಶಕದಲ್ಲಿ ಕರ್ನಾಟಕದ ರೈತ ಚಳವಳಿ ದೇಶದ ಗಡಿದಾಟಿ ಜಾಗತಿಕ ಗಮನ ಸೆಳೆದಿತ್ತು. ಕೃಷಿ ಭೂಮಿಯಲ್ಲಿ ಬೆವರು ಸುರಿಸುವವಳು ಮಹಿಳೆಯೇ ಆಗಿದ್ದರೂ, ಚಳವಳಿಯ ಮುಂಚೂಣಿಯಲ್ಲಿ ಅವಳ ಅಸ್ತಿತ್ವ ಮಾತ್ರ ‘ಸಹಾಯಕ’ ಸ್ಥಾನಕ್ಕಷ್ಟೇ ಸೀಮಿತವಾಗಿತ್ತು. ಹೋರಾಟಗಾರರಿಗೆ ಊಟ ಬಡಿಸುವುದು, ಮನೆಯ ಗಂಡಸರು ಜೈಲಿಗೆ ಹೋದಾಗ ಕೃಷಿ ಮತ್ತು ಸಂಸಾರದ ನೊಗವನ್ನು ಏಕಾಂಗಿಯಾಗಿ ಹೊರುವುದು ಮಹಿಳೆಯ ಪಾಲಿನ ಅಲಿಖಿತ ಕರ್ತವ್ಯವಾಗಿತ್ತು. ಈ ಅಲಿಖಿತ ಶ್ರಮದ ನಡುವೆಯೇ, ಅರಳಾಳುಸಂದ್ರದ ಅನುಸೂಯಮ್ಮ, ಮಂಡ್ಯದ ಸುನಂದಾ ಜಯರಾಮ್ ಮತ್ತು ನಂದಿನಿ ಜಯರಾಮ್ ಅವರಂತಹ ಧೀಮಂತೆಯರು ಅಸಮಾನತೆಯ ಬೇಲಿ ಸರಿಸಿ ಹೋರಾಟದ ಹಾದಿ ಹಿಡಿದರು.

   ಕರ್ನಾಟಕ ರಾಜ್ಯ ರೈತ ಸಂಘವು [ಕೆಆರ್‍ಆರ್‍ಎಸ್] ಅಸ್ತಿತ್ವಕ್ಕೆ ಬಂದು ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ ನಾಯಕತ್ವದಲ್ಲಿ ಕಿಚ್ಚು ಹಚ್ಚಿದಾಗ, ಹಾಸನ ಜಿಲ್ಲೆ ಈ ಕ್ರಾಂತಿಯ ಅಕ್ಷಯಪಾತ್ರೆಯಾಯಿತು. ಅರಕಲಗೂಡಿನ ತಂಬಾಕು ಬೆಳೆಗಾರರಿಂದ ಹಿಡಿದು ಮಲೆನಾಡಿನ ಕಾಫಿ ಬೆಳೆಗಾರರವರೆಗೆ ಎಲ್ಲರೂ ಸರ್ಕಾರದ ಅವೈಜ್ಞಾನಿಕ ನೀತಿಗಳ ವಿರುದ್ಧ ಒಂದಾದರು. 1978ರಲ್ಲಿ ರೂಪುಗೊಂಡ ‘ದಕ್ಷಿಣ ಭಾರತ ಸಣ್ಣ ಬೆಳೆಗಾರರ ಒಕ್ಕೂಟ’ ಈ ಜಾಗೃತಿಗೆ ಭದ್ರ ಬುನಾದಿ ಹಾಕಿತು.

ದುದ್ದ ಫೈರಿಂಗ್(1981): ಒಂದು ಕ್ರಾಂತಿಕಾರಿ ತಿರುವು:

  ಹಾಸನ ಜಿಲ್ಲೆಯ ರೈತ ಹೋರಾಟದ ಇತಿಹಾಸದಲ್ಲಿ 1981ರ ‘ದುದ್ದ ಫೈರಿಂಗ್’ ಘಟನೆಯು ಅತ್ಯಂತ ನೋವಿನ ಹಾಗೂ ಕ್ರಾಂತಿಕಾರಿ ಅಧ್ಯಾಯ. ಬೆಂಬಲ ಬೆಲೆಗಾಗಿ ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಅಂದಿನ ಗುಂಡೂರಾವ್ ಸರ್ಕಾರ ಬಲ ಪ್ರಯೋಗದ ಮೂಲಕ ಹತ್ತಿಕ್ಕಲು ಯತ್ನಿಸಿತು. ಪರಿಣಾಮವಾಗಿ ದುದ್ದದಲ್ಲಿ ನಡೆದ ಪೊಲೀಸ್ ಗುಂಡಿನ ದಾಳಿ ರೈತರ ಕಿಚ್ಚನ್ನು ಹೆಚ್ಚಿಸಿತು. ಈ ಘಟನೆಯು ಕೇವಲ ಪುರುಷರನ್ನಲ್ಲದೆ, ಮನೆಯೊಳಗಿದ್ದ ಮಹಿಳೆಯರನ್ನೂ ಹೊಸ್ತಿಲು ದಾಟಿಸಿತು. ತಮ್ಮವರು ಅನುಭವಿಸಿದ ದೌರ್ಜನ್ಯ ಕಂಡು ಕೆರಳಿದ ಮಹಿಳೆಯರು ಸಂಘಟಿತ ಶಕ್ತಿಯಾಗಿ ಪುಟಿದೆದ್ದರು. ಈ ಸ್ಫೋಟಕ ಸನ್ನಿವೇಶವೇ ಸರಳಾ ಜಗದೀಶ್ ಮತ್ತು ದೇವಿರಮ್ಮನವರಂತಹ ಅದ್ವಿತೀಯ ನಾಯಕಿಯರನ್ನು ಹೋರಾಟದ ಕಣಕ್ಕೆ ಅರ್ಪಿಸಿತು.

ಸರಳಾ ಜಗದೀಶ್: ಸಂಪ್ರದಾಯದ ಕೋಟೆ ಒಡೆದ ಸ್ಫೂರ್ತಿ:

    ಸಕಲೇಶಪುರದ ಹಚ್ಚಹಸಿರ ಕಾನನಗಳ ನಡುವೆ ರೈತ ಚಳವಳಿಯ ದೀಪವನ್ನು ಹಚ್ಚಿದವರು ಸರಳಾ ಜಗದೀಶ್. ಶುಕ್ರವಾರಸಂತೆಯ ಬೆಳ್ಳೂರಿನ ಮೂಲದ ಇವರು ಸುಶಿಕ್ಷಿತ, ಸಾಂಪ್ರದಾಯಿಕ ಕುಟುಂಬದಿಂದ ಬಂದವರು. ಕಲೆ, ಸಾಹಿತ್ಯ ಮತ್ತು ಭರತನಾಟ್ಯದಂತಹ ಲಲಿತಕಲೆಗಳಲ್ಲಿ ಆಸಕ್ತಿ ಹೊಂದಿದ್ದ ಸರಳಾ ಅವರಿಗೆ ಹೋರಾಟದ ಬದುಕು ಆರಂಭದಲ್ಲಿ ಅಪರಿಚಿತವಾಗಿತ್ತು. ಅಂದಿನ ಕಾಲದ ಕಟ್ಟುನಿಟ್ಟಿನ ಕೌಟುಂಬಿಕ ಚೌಕಟ್ಟಿನಲ್ಲಿ- “ಹೆಣ್ಣುಮಕ್ಕಳು ಗೌರವಯುತವಾಗಿ ಮನೆಯೊಳಗಿರಬೇಕು” ಎಂಬ ಅಲಿಖಿತ ನಿಯಮವಿತ್ತು. ಆದರೆ, ಇವರ ಪತಿ ಜಗದೀಶ್ ಅವರು ರೈತ ಸಂಘದ ಸಕ್ರಿಯ ಹೋರಾಟಗಾರರಾಗಿದ್ದರಿಂದ, ಇವರ ಮನೆಯೇ ಚಳವಳಿಯ ಚರ್ಚಾ ವೇದಿಕೆಯಾಗಿ ಮಾರ್ಪಟ್ಟಿತ್ತು.

    ಮನೆಯಲ್ಲಿ ನಡೆಯುತ್ತಿದ್ದ ಬಿಸಿಬಿಸಿ ಚರ್ಚೆಗಳು ಸರಳಾ ಅವರಲ್ಲಿದ್ದ ಸುಪ್ತ ಹೋರಾಟಗಾರ್ತಿಯನ್ನು ಬಡಿದೆಬ್ಬಿಸಿದವು. ರೈತರಿಂದ ಕಂದಾಯ ಮತ್ತು ವಿದ್ಯುತ್ ಇಲಾಖೆಯ ಅಧಿಕಾರಿಗಳು ಬಹಿರಂಗವಾಗಿಯೇ ಲಂಚ ವಸೂಲಿ ಮಾಡುತ್ತಿದ್ದನ್ನು ಕಂಡು ಅವರ ರಕ್ತ ಕುದಿಯುತ್ತಿತ್ತು. ಆರಂಭದಲ್ಲಿ ಮನೆಯ ಹಿರಿಯರಿಂದ ವಿರೋಧ ವ್ಯಕ್ತವಾದರೂ, ಸರಳಾ ಅವರ ತರ್ಕಬದ್ಧ ಮಾತುಗಳು ಮತ್ತು ನ್ಯಾಯದ ಪರವಾದ ನಿಲುವನ್ನು ಕಂಡು ಪತಿ ಜಗದೀಶ್ ಅವರೇ ಇವರ ಬೆನ್ನೆಲುಬಾಗಿ ನಿಂತರು. ಸರಳಾ ಅವರ ಹೋರಾಟದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ‘ನಮ್ಮ ನಡಿಗೆ ರಾಜಧಾನಿಯ ಕಡೆಗೆ’ ಎಂಬ ಪಾದಯಾತ್ರೆಯಲ್ಲಿ ಮಳೆ-ಬಿಸಿಲೆನ್ನದೆ ಹಸಿರು ಶಾಲು ಹೊದ್ದು ಅವರು ಹಾಕಿದ ಹೆಜ್ಜೆಗಳು ಜಿಲ್ಲೆಯ ನೂರಾರು ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿದವು. ಕೇವಲ ಗುಂಪಿನ ಒಬ್ಬರಾಗಿ ಉಳಿಯದೆ, ಮಹಿಳೆಯರನ್ನು ಸಂಘಟಿಸುವ ಮತ್ತು ಚಳವಳಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಕ್ರೋಢೀಕರಿಸುವಲ್ಲಿ ಅವರಂದು ಅಪ್ರತಿಮ ನಾಯಕತ್ವ ಪ್ರದರ್ಶಿಸಿದರು.

“ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ”ವು ಜನಪರ, ಮಹಿಳಾಪರ ಸಂಘಟನೆಗಳ ಜಾಲವಾಗಿದ್ದು ಕಳೆದ ಹದಿಮೂರು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಾಥಾ, ಸಮಾವೇಶ, ಜಾಗೃತಿ ಕಾರ್ಯಕ್ರಮ ನಡೆಸುವುದರೊಂದಿಗೆ ಜನಪರ ಹೋರಾಟಗಳಲ್ಲಿ ಸಹಭಾಗಿತ್ವ ನೀಡುತ್ತಾ ಬಂದಿದೆ. ‌ತನ್ನ 14 ನೆಯ ಸಮಾವೇಶವನ್ನು ಹಾಸನದಲ್ಲಿ ನಡೆಸಲಿದ್ದು ಈ ಹಿನ್ನೆಲೆಯಲ್ಲಿ “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಎಂಬ ಪುಸ್ತಕವನ್ನು ಹೊರತರುತ್ತಿದೆ. ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೇ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಅವರ ಕುರಿತು ಒಂದು ಪುಟ್ಟ ದಾಖಲೀಕರಣ ಮಾಡುವ ಪ್ರಯತ್ನ ಇದಾಗಿದೆ.

ಸಮಾನತೆಯ ಹಂಬಲ:

 ಸರಳಾ ಅವರದೊಂದು ವಿಶಿಷ್ಟ ನಿಲುವಿತ್ತು. ಅವರು ರೈತ ಸಂಘದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ‘ಮಹಿಳಾ ಘಟಕ’ ರಚಿಸುವುದನ್ನು ಕಟುವಾಗಿ ವಿರೋಧಿಸಿದ್ದರು. ‘ಸಮಸ್ಯೆಗಳು ರೈತರಿಬ್ಬರಿಗೂ ಒಂದೇ ಆಗಿರುವಾಗ, ಹೋರಾಟದ ವೇದಿಕೆಯಲ್ಲಿ ಮಹಿಳೆಗೆ ಪ್ರತ್ಯೇಕ ಸ್ಥಾನವೇಕೆ? ಮುಖ್ಯವಾಹಿನಿಯಲ್ಲೇ ನಮಗೆ ಸಮಾನ ಗೌರವ ಮತ್ತು ಜವಾಬ್ದಾರಿ ಬೇಕು’ ಎಂಬುದು ಅವರ ವಾದವಾಗಿತ್ತು. ಈ ವೈಚಾರಿಕ ಸ್ಪಷ್ಟತೆಯೇ ಅವರನ್ನು ಇತರರಿಗಿಂತ ಭಿನ್ನವಾಗಿಸಿತು.

‘ಮರುಜಪ್ತಿ’ಯ ಸಾಹಸ:

ಬ್ಯಾಂಕುಗಳು ಸಾಲದ ನೆಪದಲ್ಲಿ ಬಡ ರೈತರ ಹಸುಗಳನ್ನು, ಪಾತ್ರೆ-ಪಗಡಿಗಳನ್ನು ಜಪ್ತಿ ಮಾಡಿ ಒಯ್ಯುತ್ತಿದ್ದ ಕಾಲವದು. ಅಂತಹ ಸಂದರ್ಭದಲ್ಲಿ ಸರಳಾ ಜಗದೀಶ್ ಅವರ ನೇತೃತ್ವದ ಮಹಿಳಾ ಪಡೆ ಅಧಿಕಾರಿಗಳ ಎದುರೇ ನಿಂತು, ಜಪ್ತಿ ಮಾಡಿದ ವಸ್ತುಗಳನ್ನು ಮರಳಿ ತಂದು ರೈತರ ಮನೆಗೆ ತಲುಪಿಸುವ ‘ಮರುಜಪ್ತಿ’ ಚಳವಳಿಯನ್ನು ಯಶಸ್ವಿಗೊಳಿಸಿದರು. ಇದು ಕೇವಲ ಒಂದು ಪ್ರತಿಭಟನೆಯಾಗಿರಲಿಲ್ಲ, ಅದು ರೈತರ ಸ್ವಾಭಿಮಾನದ ಮರುಸ್ಥಾಪನೆಯಾಗಿತ್ತು. ಇಂದು ಎಂಭತ್ತರ ಹರೆಯದಲ್ಲೂ ಆ ಹಳೆಯ ದಿನಗಳನ್ನು ಸ್ಮರಿಸುವ ಸರಳಾ ಅವರ ಕಣ್ಣುಗಳಲ್ಲಿ ಅಂದಿನ ಆವೇಶದ ಮಿಂಚು ಮಾಸಿಲ್ಲ.

ದೇವಿರಮ್ಮ: ನೋವಿನ ಕಡಲಿನಿಂದ ಎದ್ದ ಜ್ವಾಲೆ:

 ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಪುರದ ದೇವಿರಮ್ಮ ಅವರ ಕಥೆ ಅತೀವ ನೋವು ಮತ್ತು ಅದರಿಂದ ಹುಟ್ಟಿದ ಅಸಾಧಾರಣ ಧೈರ್ಯದ್ದು. 1981ರ ‘ದುದ್ದ ಫೈರಿಂಗ್’ ಇಡೀ ರಾಜ್ಯವನ್ನೇ ನಡುಗಿಸಿದ ಘಟನೆ. ಈ ಪೊಲೀಸ್ ಗುಂಡಿನ ದಾಳಿಯಲ್ಲಿ ದೇವಿರಮ್ಮ ತಮ್ಮ ಮಗನನ್ನು ಕಳೆದುಕೊಂಡರು. ಹಡೆದ ಮಗನನ್ನು ಕಳೆದುಕೊಂಡ ತಾಯಿ ಹತಾಶಳಾಗಿ ಮೂಲೆಯಲ್ಲಿ ಕುಳಿತು ಕಣ್ಣೀರು ಹಾಕಲಿಲ್ಲ. ಮಗನ ಸಾವಿನ ನೋವನ್ನೇ ಅಸ್ತ್ರವಾಗಿಸಿಕೊಂಡು ಅವರು ಹೋರಾಟದ ಕಣಕ್ಕೆ ಧುಮುಕಿದರು. ದೇವಿರಮ್ಮ ಅವರಿಗೆ ಯಾವುದೇ ಸೈದ್ಧಾಂತಿಕ ತರಬೇತಿಯಿರಲಿಲ್ಲ ಅಥವಾ ಓದು-ಬರಹದ ಪಾಂಡಿತ್ಯವಿರಲಿಲ್ಲ. ಆದರೆ ಅನ್ಯಾಯದ ವಿರುದ್ಧ ಸಿಡಿದೆದ್ದ ಅವರ ಮಣ್ಣಿನ ದನಿ ಯಾವುದೇ ವಿದ್ವತ್‍ಪೂರ್ಣ ಭಾಷಣಕ್ಕಿಂತಲೂ ಶಕ್ತಿಯುತವಾಗಿತ್ತು. ಅವರ ಮನೆಯೇ ಚಳವಳಿಯ ಪಾಠಶಾಲೆಯಾಯಿತು. ನೂರಾರು ಕಿಲೋಮೀಟರ್ ದೂರದಿಂದ ಬರುವ ಹೋರಾಟಗಾರರಿಗೆ ಪ್ರೀತಿಯಿಂದ ಊಟ ಬಡಿಸುವುದು, ಅವರಲ್ಲಿ ಧೈರ್ಯ ತುಂಬುವುದು ಮತ್ತು ರಾತ್ರೋರಾತ್ರಿ ಮಹಿಳೆಯರನ್ನು ಸಂಘಟಿಸಿ ಸಭೆಗಳನ್ನು ನಡೆಸುವುದು ಅವರ ದಿನಚರಿಯಾಯಿತು.

“ಮಗನನ್ನು ಕೊಟ್ಟವಳಿಗೆ ಈ ಜೀವಕೊಡಲು ಭಯವಿಲ್ಲ”:

   ರಸ್ತೆ ತಡೆ ಅಥವಾ ರೈಲು ತಡೆಯಂತಹ ಸಂದರ್ಭಗಳಲ್ಲಿ ಪೊಲೀಸರ ಲಾಠಿ, ಬಂದೂಕುಗಳಿಗೆ ಎದೆಯೊಡ್ಡಿ ರಸ್ತೆಯ ಮಧ್ಯೆ ಕುಳಿತು ಅಚಲವಾಗಿ ಘೋಷಣೆ ಕೂಗುತ್ತಿದ್ದ ದೇವಿರಮ್ಮನವರ ಚಿತ್ರಣ ಇಂದಿಗೂ ಹಳೆಯ ಹೋರಾಟಗಾರರ ಕಣ್ಣ ಮುಂದೆ ಕಟ್ಟಿದಂತಿದೆ. ‘ಮಗನನ್ನು ಕೊಟ್ಟವಳಿಗೆ ಈ ಜೀವಕೊಡಲು ಭಯವಿಲ್ಲ’ ಎನ್ನುವ ಅವರ ಮಾತು ಪೊಲೀಸರನ್ನೂ ಬೆಚ್ಚಿಬೀಳಿಸುತ್ತಿತ್ತು. ಕೃಷಿ ಕಾಯ್ದೆಗಳು, ಭೂಮಿ ಹಕ್ಕು ಮತ್ತು ಬೆಳೆ ಸಾಲದಂತಹ ತಾಂತ್ರಿಕ ವಿಷಯಗಳನ್ನು ಅವರು ಸುಲಭವಾಗಿ ಗ್ರಾಮೀಣ ಮಹಿಳೆಯರಿಗೆ ಅರ್ಥವಾಗುವಂತೆ ವಿವರಿಸುತ್ತಿದ್ದರು. ‘ಮಹಿಳೆಯರು ಮನೆಯಿಂದ ಹೊರಬಂದು ಹೋರಾಟಕ್ಕೆ ಇಳಿದಾಗ ಮಾತ್ರ ಮನೆಯೂ ಉಳಿಯುತ್ತದೆ, ಮಣ್ಣೂ ಉಳಿಯುತ್ತದೆ’ ಎಂಬುದು ಅವರ ಜೀವನದ ಮಂತ್ರವಾಗಿತ್ತು.

ಅರಕಲಗೂಡು-ಆಲೂರು ರೈತ ಚಳವಳಿ: ಜೈಲು ಮೆಟ್ಟಲೇರಿದ ಧೀಮಂತ ಮಹಿಳೆಯರು

  ಹಾಸನದ ರೈತ ಹೋರಾಟ ಕೇವಲ ಈ ಇಬ್ಬರು ನಾಯಕಿಯರಿಗಷ್ಟೇ ಸೀಮಿತವಾಗಿರಲಿಲ್ಲ. ಅರಕಲಗೂಡಿನ ಸಾಲಗೇರಿಯ ತಿಮ್ಮಾಜಮ್ಮ ಅವರ ಸಾಹಸಗಾಥೆ ಇಂದಿಗೂ ರೋಮಾಂಚನಕಾರಿ. ರೈತ ಚಳವಳಿಯ ಇತಿಹಾಸದಲ್ಲಿ 1982ರ ಕಾಲಘಟ್ಟ ಅತ್ಯಂತ ಸ್ಫೋಟಕವಾದುದು. ಪ್ರೊ ಎಂ.ಡಿ.ನಂಜುಂಡಸ್ವಾಮಿ ಮತ್ತು ಎನ್.ಡಿ.ಸುಂದರೇಶ್ ಅವರಂತಹ ದಿಗ್ಗಜ ನಾಯಕರ ಸಾರಥ್ಯದಲ್ಲಿ ನಡೆದ ಈ ಹೋರಾಟಗಳಲ್ಲಿ ಹಾಸನದ ಮಹಿಳೆಯರು ವಹಿಸಿದ ಪಾತ್ರ ಅಪ್ರತಿಮ. 1982ರಲ್ಲಿ ಅರಕಲಗೂಡಿನಲ್ಲಿ ನಡೆದ ಬೃಹತ್ ರೈತ ಸಭೆಯು ಇತಿಹಾಸದ ಹಾದಿಯನ್ನೇ ಬದಲಿಸಿತು.

   ಪ್ರೊ ಎಂ.ಡಿ.ಎನ್ ಅವರು ತಮ್ಮ ಬೆಂಕಿಯ ಚೆಂಡಿನಂತಹ ಭಾಷಣದಿಂದ ಪೊಲೀಸರ ಬೆವರಿಳಿಸುತ್ತಿದ್ದರೆ, ಹೊಳೆನರಸೀಪುರದ ಇನ್ಸ್‌ಪೆಕ್ಟರ್ ಒಬ್ಬರು ಪೊಲೀಸರನ್ನು ರೈತರ ಮೇಲೆ ಛೂ ಬಿಟ್ಟರು. ಪರಿಣಾಮವಾಗಿ ಭೋರ್ಗರೆದದ್ದು ಲಾಠಿ ಪ್ರಹಾರ. ಮರುದಿನ ಈ ಲಾಠಿ ಪ್ರಹಾರವನ್ನು ಖಂಡಿಸಿ ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ಹೊ.ತಿ.ಹುಚ್ಚಪ್ಪ ಅವರೊಂದಿಗೆ ಸಾಲಗೇರಿಯ ತಿಮ್ಮಾಜಮ್ಮ ಸತ್ಯಾಗ್ರಹ ಆರಂಭಿಸಿದರು. ಇವರನ್ನು ಬಂಧಿಸಿ ಮೈಸೂರು ಜೈಲಿಗೆ ಕಳುಹಿಸಲಾಯಿತು. ಒಬ್ಬ ಸಾಮಾನ್ಯ ರೈತ ಮಹಿಳೆಯ ಈ ಸಾಹಸ ಕಂಡು ಇಡೀ ಜಿಲ್ಲೆಯೇ ಬೆರಗಾಗಿತ್ತು. ಅವರ ಬಂಧನ ಜಿಲ್ಲೆಯಾದ್ಯಂತ ರೈತ ಕಿಚ್ಚನ್ನು ಹರಡಿತು. ಹಿರಿಯ ವಿದ್ವಾಂಸ ಹಿ.ಶಿ.ರಾಮಚಂದ್ರೇಗೌಡರು ತಮ್ಮ ಹಾಡುಗಳಲ್ಲಿ ಈ ತಿಮ್ಮಾಜಮ್ಮಜ್ಜಿಯನ್ನು ಅಮರ ಗೊಳಿಸಿದ್ದಾರೆ.

ಲೇಖಕಿ ಮಮತಾ ಶಿವು ಅವರೊಂದಿಗೆ ದೇವಿರಮ್ಮ

   ಚಳವಳಿ ಕೇವಲ ರಸ್ತೆಯ ಮೇಲೆ ನಡೆಯುತ್ತಿರಲಿಲ್ಲ, ಅದು ರೈತ ಮಹಿಳೆಯರ ಅಡುಗೆಮನೆಯಲ್ಲೂ ನಡೆಯುತ್ತಿತ್ತು. ಆಲೂರು ತಾಲೂಕಿನ ಮರಸುಗ್ರಾಮದ ಮಂಜುನಾಥ್ ಅವರ ಮನೆಯ ಮಹಿಳೆಯರ ಶ್ರಮವನ್ನು ಹೇಗೆ ತಾನೇ ಮರೆಯಲು ಸಾಧ್ಯ? ಚಳವಳಿಯ ಸಭೆಗಳು ಮುಗಿದು ಮಧ್ಯರಾತ್ರಿಯಾದರೂ, ಬಂದ ಇಪ್ಪತ್ತು-ಮೂವತ್ತು ಜನರಿಗೆ ಕಿಂಚಿತ್ತೂ ಬೇಸರವಿಲ್ಲದೆ ರೊಟ್ಟಿ ಸುಟ್ಟು ಊಟ ಹಾಕುತ್ತಿದ್ದ ಆ ಮಹಿಳೆಯರ ಕೈಗಳು ಚಳವಳಿಯ ನಿಜವಾದ ಶಕ್ತಿಯಾಗಿದ್ದವು. ಜಮೀನು ಒತ್ತುವರಿ ತಡೆಯಲು ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸರಳಾ ಜಗದೀಶ್ ಅವರಿಗೆ ಬೆನ್ನೆಲುಬಾಗಿ ನಿಂತ ಅತ್ತಿಹಳ್ಳಿ ಗೀತಾ, ಜಯಂತಿ, ಅಂಬಿಕಾ, ಮಾಲಿನಿ, ಹಿರಿಯಹಳ್ಳಿ ಪುಟ್ಟಮ್ಮ, ಹಾಲುವಾಗಿಲು ರಂಗಮ್ಮ ಮುಂತಾದವರ ತ್ಯಾಗ ಮರೆಯಲಾಗದು. ಜೈಲು ಭರೋ ಸಂದರ್ಭದಲ್ಲಿ ಜೈಲಿನ ಗೇಟನ್ನೇ ಮುರಿದು ಒಳನುಗ್ಗಿದ ಗಿಡ್ಡಮ್ಮ, ಜಯಮ್ಮ, ಲತಾ ಮತ್ತು ಭಾಗ್ಯಮ್ಮ ಅವರ ಆವೇಶ ಅಂದಿನ ಸರ್ವಾಧಿಕಾರಿ ಧೋರಣೆಯ ಸರ್ಕಾರಕ್ಕೆ ನೀಡಿದ ಎಚ್ಚರಿಕೆಯಾಗಿತ್ತು.

ಇದನ್ನೂ ಓದಿ- ಮಾತಿಗೊಂದು ಗಾದೆ ಹೊಸೆಯುವ-ಪುಟ್ಟತಾಯಕ್ಕ

   ಇಂದು ಕೃಷಿ ಕ್ಷೇತ್ರ ಹತ್ತು ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ರೈತರ ಆತ್ಮಹತ್ಯೆಗಳು, ಬೆಲೆ ಕುಸಿತ ಮತ್ತು ಕಾರ್ಪೋರೇಟ್ ಹಾವಳಿಯ ನಡುವೆ ರೈತ ಚಳವಳಿ ತನ್ನ ಹಳೆಯ ತೀಕ್ಷ್ಣತೆಯನ್ನು ಕಳೆದುಕೊಂಡಂತೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಸರಳಾ ಜಗದೀಶ್ ಮತ್ತು ದೇವಿರಮ್ಮನವರಂತಹ ನಾಯಕಿಯರ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ. ‘ಪ್ರತಿ ಮನೆಯಿಂದ ಒಬ್ಬ ಮಹಿಳೆ ರಸ್ತೆಗಿಳಿದಾಗ ಮಾತ್ರ ವ್ಯವಸ್ಥೆ ಬದಲಾಗಲು ಸಾಧ್ಯ’ ಎಂಬ ಸರಳಾ ಅವರ ಮಾತು ಇಂದಿನ ತಲೆಮಾರಿಗೆ ದಾರಿದೀಪವಾಗಬೇಕಿದೆ.

   ಹಾಸನ ಜಿಲ್ಲೆಯ ರೈತ ಚಳವಳಿಯು ಕೇವಲ ಪುರುಷರ ಪೌರುಷದ ಕಥೆಯಲ್ಲ; ಅದು ಹೆಣ್ಣಿನ ತಾಳ್ಮೆ, ತ್ಯಾಗ ಮತ್ತು ಅಪ್ರತಿಮ ಧೈರ್ಯದ ಸಂಗಮ. ಸರಳಾ ಜಗದೀಶ್ ಅವರ ವೈಚಾರಿಕ ನಾಯಕತ್ವ ಮತ್ತು ದೇವಿರಮ್ಮನವರ ಭಾವನಾತ್ಮಕ ಹೋರಾಟದ ಕಿಚ್ಚು ಈ ಮಣ್ಣಿನ ಹೆಮ್ಮೆಯ ಪರಂಪರೆ. ಚರಿತ್ರೆಯ ಪುಟಗಳಲ್ಲಿ ಈ ಹೆಸರುಗಳು ಮರೆಯಾಗಿದ್ದರೂ, ಇಂದಿಗೂ ಹಾಸನದ ರೈತ ಭೂಮಿಯಲ್ಲಿ ಬೀಳುವ ಪ್ರತಿ ಹನಿ ಬೆವರಿನಲ್ಲೂ ಇವರ ಹೋರಾಟದ ಸುಗಂಧವಿದೆ. ಈ ಮೌನ ನಾಯಕಿಯರ ಹೆಜ್ಜೆಗುರುತುಗಳನ್ನು ಗುರುತಿಸಿ, ಗೌರವಿಸುವುದು ಇಂದಿನ ಸಮಾಜದ ಕರ್ತವ್ಯವಾಗಿದೆ. ಆ ಹೋರಾಟದ ಧೀರ ಹಿರಿಯ ಹೆಣ್ಣು ದನಿಗಳಿಗೆ ಮನದಂಬಿ ನಮನಗಳು.

ಮಮತಾ ಶಿವು

ಇದನ್ನೂ ಓದಿ- ಸಂಪಾದನೆ, ಸಂಶೋಧನೆ, ಜಾನಪದ ಕ್ಷೇತ್ರದ ಸಾಧಕಿ- ಡಾ. ವೈ.ಸಿ.ಭಾನುಮತಿ

More articles

Latest article

Most read