ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಬಳಿ ಬಂಧಿಸಿದ್ದಾರೆ. ಸ್ನೇಹಮಯಿ ಕೃಷ್ಣ ಇತ್ತೀಚೆಗೆ ಮುಡಾದ ಮಾಜಿ ಆಯುಕ್ತ ಡಿ.ಬಿ.ನಟೇಶ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು.
ತಮ್ಮ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಡಿ.ಬಿ.ನಟೇಶ್, ಸ್ನೇಹಮಯಿ ಕೃಷ್ಣ ವಿರುದ್ಧ ಸಿಸಿಬಿಗೆ ದೂರು ನೀಡಿದ್ದರು. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಐಟಿ ಕಾಯಿದೆಯ ಸೆಕ್ಷನ್ 66ಎ , ಬಿಎನ್‌ಎಸ್ ಸೆಕ್ಷನ್ 337, 336 ಹಾಗೂ 340 ರಡಿ ಕೇಸ್ ದಾಖಲಾಗಿದ್ದು, ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗಲು ನೋಟೀಸ್ ಜಾರಿ ಮಾಡಿದ್ದರು.
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಗೆ ಕೇಸ್ ವೊಂದರ ವಿಚಾರಣೆಗೆ ಬಂದ ವೇಳೆ ಸ್ನೇಹಮಯಿ ಕೃಷ್ಣರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿಸಿಬಿ ಕಚೇರಿಗೆ ಕರೆದೊಯ್ದಿದ್ದಾರೆ. ಅತ್ತ ಮೈಸೂರಿನಲ್ಲಿರುವ ಎರಡು ಮನೆಗಳನ್ನು ಸರ್ಚ್ ವಾರಂಟ್ ಪಡೆದು ಶೋಧ ನಡೆಸಲಾಗುತ್ತಿದೆ. ಜೊತೆಗೆ ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ಸ್ನೇಹಮಯಿ ಕೃಷ್ಣರನ್ನು ವಿಚಾರಣೆ ಮಾಡಲಾಗುತ್ತಿದೆ. ಡಿ.ಬಿ.ನಟೇಶ್ , ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಗೆ ಲಂಚ ನೀಡಿರುವ ಆರೋಪ ಮಾಡಿರುವ ಬಗ್ಗೆ ವಿಚಾರಣೆ ಮಾಡುತ್ತಿದ್ದಾರೆ.


