ಬೆಂಗಳೂರು, ಅ.8 : ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಸಂಬಂಧ ನಡೆದ ತನಿಖೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ)ಯಿಂದ ಮಂಗಳವಾರ ಬಂಧನಕ್ಕೆ ಒಳಗಾಗಿದ್ದ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಹಾಗೂ ಮಾಜಿ ಸದಸ್ಯೆ ಬಿ.ವಿ.ಗೀತಾ ಅವರನ್ನು ಅಕ್ಟೋಬರ್ 19ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ.
ಶಿವಶಂಕರಪ್ಪ ಸಾಹುಕಾರ ಮತ್ತು ಬಿ.ವಿ. ಗೀತಾ ಅವರ ನಿವಾಸದ ಮೇಲೆ ಪ್ರತ್ಯೇಕವಾಗಿ ದಾಳಿ ನಡೆಸಿದ್ದ ಇಡಿ ಅಧಿಕಾರಿbv ಗಳು ಅವರನ್ನು ಮಂಗಳವಾರ ಸಂಜೆ ಬಂಧನಕ್ಕೆ ಒಳಪಡಿಸಿದ್ದರು. ಇಂದು ಇಬ್ಬರೂ ಆರೋಪಿಗಳನ್ನು ಅಧಿಕಾರಿಗಳು ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ, ಇಬ್ಬರನ್ನೂ ಅಕ್ಟೋಬರ್ 19ರವರೆಗೆ ಇ.ಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿತು.
ಶಿವಶಂಕರಪ್ಪ ಅವರ ಸಂಬಂಧಿ ಸುಗುರೇಶ್ ಜಾಕಾ ತಪ್ಪೊಪ್ಪಿಗೆ ಮತ್ತು ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಹೇಳಿಕೆ ಆಧರಿಸಿ ಮಂಗಳವಾರ ಕಾರ್ಯಾಚರಣೆ ನಡೆಸಿದ್ದ ಇ.ಡಿ ಅಧಿಕಾರಿಗಳು ಇಬ್ಬರನ್ನೂ ಬಂಧನ ಮಾಡಲಾಗಿತ್ತು.
ಇ.ಡಿ ಪರವಾಗಿ ಹಾಜರಾದ ವಿಶೇಷ ಸಾರ್ವಜನಿಕ ಅಭಿಯೋಜಕ ಮಧು ಎನ್.ರಾವ್, ತನಿಖೆಯ ವೇಳೆ ಕೆಲ ಅಕ್ರಮಗಳು ಬಯಲಿಗೆ ಬಂದಿವೆ. ಹಲವು ಅಭ್ಯರ್ಥಿಗಳಿಗೆ 40 ಲಕ್ಷ, 60 ಲಕ್ಷ ಹಾಗೂ 70 ಲಕ್ಷ ರೂಪಾಯಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡಲಾಗಿದೆ. ಕೊನೆಯ ಕ್ಷಣದಲ್ಲಿ ಕೇವಲ 5 ಲಕ್ಷ ರೂಪಾಯಿಗೂ ಪ್ರಶ್ನೆಪತ್ರಿಕೆ ಡೀಲ್ ನಡೆದಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಪಡೆದಿದ್ದ ಬ್ಲಾಂಕ್ ಚೆಕ್‌ಗಳು, ಪ್ರಾಮಿಸರಿ ನೋಟ್‌ಗಳು ಹಾಗೂ ಸಹಿ ಮಾಡಲಾದ ದಾಖಲೆಗಳನ್ನ ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ವಿನುತಾ ಎಂಬ ಅಭ್ಯರ್ಥಿಯ ತಂದೆ ಮಲ್ಲಪ್ಪ ಅವರ ಮೂಲಕ ಶಿವಶಂಕರಪ್ಪ ಡೀಲ್ ಮಾಡಿದ್ದರು. ಆರಂಭದಲ್ಲಿ 50 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟು, ಅಂತಿಮವಾಗಿ 20 ಲಕ್ಷ ರೂಪಾಯಿಗೆ ಡೀಲ್ ಮುಗಿಸಲಾಗಿತ್ತು ಹಾಗೂ 10 ಲಕ್ಷ ರೂಪಾಯಿ ಮುಂಗಡ ಹಣ ಪಡೆಯಲಾಗಿದೆ ಎಂಬ ಸತ್ಯವನ್ನು ವಿನುತಾ ಅವರ ತಂದೆ ಮಲ್ಲಪ್ಪ ಅವರು ಹೇಳಿಕೆಯಲ್ಲಿ ದಾಖಲಿಸಿದ್ದಾರೆ ಎಂದರು.
ಅಂತಿಮವಾಗಿ ಇಬ್ಬರನ್ನೂ ಇ.ಡಿ ಕಸ್ಟಡಿಗೆ ನೀಡಿ ಆದೇಶಿಸಿದ ನ್ಯಾಯಾಲಯ, ತನಿಖೆಗೆ ಸರಿಯಾಗಿ ಸಹಕರಿಸಬೇಕು, ಸುಮ್ಮನೆ ವೈದ್ಯಕೀಯ ವರದಿಗಳನ್ನು ನೆಪವಾಗಿ ತರಬಾರದು ಎಂದು ಆರೋಪಿಗಳಿಗೆ ಸೂಚನೆ ನೀಡಿದೆ.

