ಅದೊಂದು ದೊಡ್ಡ ಕಥೆ – ಆತ್ಮಕಥನ ಸರಣಿ -16 |ಶಂಕ್ರಾಣದಲ್ಲಿ ಕೊನೆಯ ದಿನಗಳು

ಅದು 1977ರ ದಿನಗಳು. ದೇಶದಲ್ಲಿ ತುರ್ತುಪರಿಸ್ಥಿತಿ ಹಿಂದೆಗೆಯಲ್ಪಟ್ಟು ಸಾರ್ವತ್ರಿಕ ಚುನಾವಣೆಯ ಘೋಷಣೆಯಾಯಿತು. ರಾಜಕೀಯ ಎಂದರೆ ಏನೆಂದು ಪೂರ್ತಿಯಾಗಿ ಅರಿಯದ ನಮ್ಮಂತಹ ಕಿರಿಯರಲ್ಲಿಯೂ ಒಂದು ರೀತಿಯ ರೋಮಾಂಚನ. ಜನಸಂಘದ ನಂದಾದೀಪ ಹೋಗಿ ಜನತಾಪಕ್ಷದ ನೇಗಿಲು ಹೊತ್ತ ರೈತ ಚಿಹ್ನೆ ಬಂತು (ಕಾಂಗ್ರೆಸ್‌ ವಿರೋಧಿ ಪಕ್ಷಗಳು ಒಂದಾಗಿ ಜನತಾಪಕ್ಷ ಸ್ಥಾಪಿಸಿಕೊಂಡಿದ್ದರು?). ಕಾಂಗ್ರೆಸ್‌ ನ ʼದನಕರುʼ ಚಿಹ್ನೆ ಹೋಗಿ ʼಕೈʼ ಬಂತು. ́ನೇಗಿಲು ಹೊತ್ತ ರೈತ ಕೂಳಿಲ್ಲದೆ ಸಾಯ್ತʼ ಎಂದು ಕಾಂಗ್ರೆಸ್‌ ನವರು ಜನತಾಪಕ್ಷವನ್ನು ಮೂದಲಿಸುತ್ತಿದ್ದರು. ́ಭಾರತ್‌ ಮಾತಾಕಿ ಇಂದಿರಾಗಾಂಧೀನ್‌ ನೇತಾಕಿ ಎಂಬುದು ಕಾಂಗ್ರೆಸ್‌ ವಿರೋಧಿಗಳ ಘೋಷಣೆಯಾಗಿತ್ತು. ಮಂಗಳೂರಿನಿಂದ ಲೋಬೋ ಎಂಬವರು ಚುನಾವಣೆ ಸ್ಪರ್ಧಿಸಿದ್ದರು. ತನಗೆ ಓಟು ಕೊಡುವಂತೆ ವಿನಂತಿಸಿ ಅವರು ಮನೆ ಮನೆಗೆ ಪತ್ರ ಬರೆಯುತ್ತಿದ್ದರು. ನಾವೆಲ್ಲರೂ ಉತ್ಸಾಹದಿಂದ ಜನತಾಪಕ್ಷಕ್ಕೆ ಕೆಲಸ ಮಾಡಿದೆವು. ಚುನಾವಣೆಯಲ್ಲಿ ಜನತಾಪಕ್ಷ ಸೋತಿತು. ಉಡುಪಿ ಲೋಕಸಭಾ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ನ ಟಿ ಎ ಪೈ ಗೆದ್ದರು. ಆದರೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತು ಅಧಿಕಾರ ಕಳೆದುಕೊಂಡಿತು. ಜನತಾಪಕ್ಷದ ಆಳ್ವಿಕೆಯ ಯುಗ ಆರಂಭವಾಯಿತು.

ನಾನು ಪಿಯುಸಿ ಸೇರಿದೆ. ವಿಜ್ಞಾನದ ವಿಷಯ ಆಯ್ದುಕೊಂಡೆ. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಜೀವ ಶಾಸ್ತ್ರ. ಯಾಕೆ ತೆಗೆದುಕೊಂಡೆ ಗೊತ್ತಿಲ್ಲ. ʼಇದನ್ನೇ ತೆಗೆದುಕೋʼ ಎಂದು ಹಿರಿಯ ಅಣ್ಣ ಹೇಳಿರಬಹುದು. ಆದರೆ ಅಪ್ಪನಿಗೆ ಅದೆಲ್ಲ ಗೊತ್ತಿರಲಿಲ್ಲ. ಅಪ್ಪನಿಗೆ ಮಗ ಯಾವ ತರಗತಿಯಲ್ಲಿ ಓದುತ್ತಿದ್ದಾನೆ ಎಂಬುದೂ ಗೊತ್ತಿರಲಿಲ್ಲ. ಶಾಲೆಯಲ್ಲಿ ಅಧ್ಯಾಪಕರು ನಮ್ಮ ಅಂಕ ಪಟ್ಟಿ ನೋಡಿ ʼನೀನು ಇಂತಹ ವಿಷಯ ಆಯ್ದುಕೋʼ ಎಂದು ಹೇಳುವುದೂ ಇತ್ತು. ಆ ಕಾರಣವೂ ಇರಬಹುದು, ನಾನು ವಿಜ್ಞಾನ ವಿಭಾಗ ಸೇರಿದೆ. ಸಂಸ್ಕೃತಕ್ಕೆ ಅಧ್ಯಾಪಕರು ಇರದುದರಿಂದ ಹಿಂದಿ ತೆಗೆದುಕೊಳ್ಳಬೇಕಾಯಿತು. ಇದುವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ಬಂದವರಿಗೆ ಒಮ್ಮೆಲೇ ಇಂಗ್ಲಿಷ್‌ ಮಾಧ್ಯಮಕ್ಕೆ ಹೊಂದಿಕೊಳ್ಳುವುದು ಆರಂಭದಲ್ಲಿ ತೀರಾ ಕಷ್ಟವಾಯಿತು. ಆದರೆ ಹಳ್ಳಿಯ ಶಾಲೆ, ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು, ಹಾಗಾಗಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಣ ಸಂವಹನ ತುಲನಾತ್ಮಕವಾಗಿ ಸುಲಭ, ಅಲ್ಲದೆ ಬದ್ಧತೆಯಿಂದ ಕೆಲಸ ಮಾಡುವ ಒಳ್ಳೆಯ ಶಿಕ್ಷಕರು, ಇಂಗ್ಲಿಷ್‌ ಜೊತೆಗೆ ಕನ್ನಡದಲ್ಲಿಯೂ ವಿವರಣೆ, ಈ ಎಲ್ಲ ಕಾರಣದಿಂದ ಅಧ್ಯಯನ ಸುಲಭವಾಗತೊಡಗಿತು. ವರ್ಷ ಕಳೆದುದು ಹೇಗೆ ಎಂದೇ ತಿಳಿಯಲಿಲ್ಲ. 1978 ನೇ ಇಸವಿ ಬಂತು, ಪಿಯುಸಿ ಮೊದಲ ವರ್ಷದ ಕೊನೆಯ ದಿನಗಳಿಗೆ ಬಂದೂ ಆಯಿತು. ಕುಂದಾಪುರದ ಭಂಡಾರ್ಕಾರ್ಸ್‌ ಕಾಲೇಜಿನಲ್ಲಿ ಪಬ್ಲಿಕ್‌ ಪರೀಕ್ಷೆ. ಪಿಯುಸಿ ಪರೀಕ್ಷೆಯ ಕಾಲದಲ್ಲಿ ನಿತ್ಯವೂ ಪರೀಕ್ಷೆ ಇರುತ್ತಿರಲಿಲ್ಲ. ನಡುವೆ ಅಂತರ ಇರುತ್ತಿತ್ತು. ಹಾಗಾಗಿ ಕುಂದಾಪುರದಲ್ಲಿ ರೂಮು ಮಾಡುವ ಅಗತ್ಯ ಇರಲಿಲ್ಲ. ನಿತ್ಯವೂ ಬೆಳಗ್ಗೆ ಬಸ್‌ ನಲ್ಲಿ18 ಕಿಲೋಮೀಟರ್‌ ಪಯಣಿಸಿ ಪರೀಕ್ಷೆ ಬರೆದು ಮರಳುತ್ತಿದ್ದೆ. ಒಬ್ಬನೇ ಕುಂದಾಪುರಕ್ಕೆ ಹೋಗಿ ಬರುವಷ್ಟು ಸ್ವಾವಲಂಬಿಯೂ ಆದೆ. ಪರೀಕ್ಷೆ ಮುಗಿಯಿತು, ಇನ್ನು ಫಲಿತಾಂಶಕ್ಕೆ ಕಾಯಬೇಕು.

ಶ್ರೀನಿವಾಸ ಕಾರ್ಕಳ

ʼಈ ವರ್ಷ ವರ್ಗ ಉಂಟಂತೆʼ

ನಾವು ಶಂಕ್ರಾಣಕ್ಕೆ ಬಂದ ಮೇಲೆ ವರ್ಷವೂ ಮನೆಯಲ್ಲಿ ನಡೆಯುತ್ತಿದ್ದ ಮಾತುಕತೆಗಳ ಒಂದು ಮುಖ್ಯ ವಿಷಯವೆಂದರೆ, ʼಈ ವರ್ಷ ವರ್ಗ ಉಂಟಂತೆʼ ಎಂಬುದು. ಯಾಕೆಂದರೆ, ಸರಕಾರಿ ನೌಕರನ ಬದುಕಿನಲ್ಲಿ ಊರಿಂದೂರಿಗೆ ವರ್ಗ ತೀರಾ ಸಾಮಾನ್ಯ. ಅಲ್ಲದೆ, ಬಾಡಿಗೆ ಮನೆಗಳೇ ಸಿಗದ ಆ ಕಾಲದಲ್ಲಿ ಸಂಸಾರವನ್ನು ಊರಿಂದೂರಿಗೆ ಒಯ್ಯುವ ಅಪ್ಪನ ಕಷ್ಟ ಗೊತ್ತಿಲ್ಲದ ನಮಗೋ ಈ ವರ್ಗಾವಣೆಯೆಂದರೆ ಒಂದು ರೀತಿಯ ಥ್ರಿಲ್.‌ ಹೊಸ ಊರು, ಹೊಸ ಶಾಲೆ, ಹೊಸ ಜನ ಎಂದೆಲ್ಲ. ಆದರೆ ಹೀಗೆ ʼಈ ವರ್ಷ ವರ್ಗ ಉಂಟಂತೆʼ ಎಂದು ಹೇಳುತ್ತ ಹೇಳುತ್ತ ಹನ್ನೊಂದು ವರ್ಷಗಳೇ ಕಳೆದುಹೋಗಿದ್ದವು!

ಹಿರಿಯ ಅಣ್ಣ ಸುಬ್ರಹ್ಮಣ್ಯ ಕುಂದಾಪುರದ ಭಂಡಾರ್ಕಾರ್ಸ್‌ ಮತ್ತು ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಬಿಎ ಪದವಿ ಮುಗಿಸಿ, ಅಮಾಸೆಬೈಲಿನ ತೊಂಬಟ್ಟುವಿನ ಹತ್ತಿರ, ಅರಣ್ಯ ಇಲಾಖೆಯ ಅರಣ್ಯ ಸರ್ವೇ ಇತ್ಯಾದಿ ಕೆಲಸಗಳಲ್ಲಿ ತೊಡಗಿಕೊಂಡಿದ್ದ (ತಾತ್ಕಾಲಿಕವಾಗಿ), ಅಪರೂಪಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದ. ಕಿರಿಯ ಅಣ್ಣ ಉಮೇಶ ಕಟಪಾಡಿಯಲ್ಲಿ ಡ್ರಾಯಿಂಗ್‌ ಮಾಸ್ಟರ್ಸ್‌ ಕೋರ್ಸ್‌ ಮುಗಿಸಿದ್ದ. ತಮ್ಮ ತಂಗಿಯರು ಬೇರೆ ಬೇರೆ ತರಗತಿಗಳಲ್ಲಿ ಓದುತ್ತಿದ್ದರು.

ಈ ನಡುವೆ ಕಾಂಗ್ರೆಸ್‌ ನಾಯಕ ಸಂಜಯ ಗಾಂಧಿಯವರಿಗೆ ನಾವೊಂದು ಧನ್ಯವಾದ ಹೇಳಲೇಬೇಕು. ಇಂದಿರಾಗಾಂಧಿ ಹೇರಿದ ತುರ್ತುಪರಿಸ್ಥಿತಿಯಿಂದ ದೇಶದ ಅನೇಕರಿಗೆ ನಾನಾ ತೊಂದರೆ ಆಗಿರಬಹುದು. ಆದರೆ ನಮ್ಮ ಪಾಲಿಗೆ ಒಂದು ಲಾಭವೂ ಆಯಿತು. ಕಾರ್ಕಳದಿಂದ ಶಂಕ್ರಾಣಕ್ಕೆ ಬರುವ ಹೊತ್ತಿಗೆ ನಾವು ಮಕ್ಕಳು ನಾಲ್ಕು ಜನ ಇದ್ದೆವು. 1967- 78ರ ನಡುವೆ ಮತ್ತೆ ನಾಲ್ಕು ಮಕ್ಕಳು ನಮ್ಮ ಕುಟುಂಬವನ್ನು ಸೇರಿಕೊಂಡರು. ಇಬ್ಬರು ತಮ್ಮಂದಿರು ಮತ್ತು ಇಬ್ಬರು ತಂಗಿಯರು. ನಿತ್ಯದ ಕೆಲಸ ಕಾರ್ಯಗಳ ಮಟ್ಟಿಗೆ ಇಡೀ ಕುಟುಂಬದ ಹೊರೆಯನ್ನು ಹೊತ್ತಿದ್ದ ಅಮ್ಮ, ಈ ಹೊರೆ ಸಾಲದೆಂಬಂತೆ ಎರಡು ವರ್ಷಕ್ಕೊಂದರಂತೆ ಮಕ್ಕಳನ್ನು ಹೆರುತ್ತಲೇ ಇದ್ದರು. ʼಒಂದು ಬೇಕು ಎರಡು ಸಾಕುʼ, ʼಆರತಿಗೊಬ್ಬಳು ಮಗಳು, ಕೀರುತಿಗೊಬ್ಬ ಮಗʼ, ಮೊದಲಾದ ಕುಟುಂಬ ಯೋಜನಾ ಸ್ಲೋಗನ್‌ ಗಳು ಎಲ್ಲೆಲ್ಲೂ ಮೊಳಗುತ್ತಿದ್ದರೂ, ಕೆಲವೊಂದು ಕುಟುಂಬ ಯೋಜನಾ ಕ್ರಮಗಳು ಜಾರಿಯಲ್ಲಿದ್ದರೂ, ಅಪ್ಪನಿಗೆ ಆ ಬಗ್ಗೆ ಹೆಚ್ಚಿನ ಕಾಳಜಿ ಇರಲಿಲ್ಲ ಎಂದು ಕಾಣುತ್ತದೆ.

ಇಂತಹ ಹೊತ್ತಿನಲ್ಲಿಯೇ ದೇಶದಲ್ಲಿ ಬಲವಂತದ ಕುಟುಂಬ ಯೋಜನಾ ಕ್ರಮಗಳು ಜಾರಿಯಲ್ಲಿದ್ದವು. ʼಎಳೆದುಕೊಂಡು ಹೋಗಿ ಆಪರೇಷನ್‌ ಮಾಡಿಸ್ತಿದ್ದಾರಂತೆʼ ಎಂದು ಜನರು ಆಡಿಕೊಳ್ಳುತ್ತಿದ್ದರು. ಒಂದು ದಿನ ಊರ ಮಿಡ್‌ ವೈಫ್‌ ಮನೆಗೆ ಬಂದವರೇ ನನ್ನ ಅಪ್ಪ ಮತ್ತು ಅಮ್ಮನನ್ನೂ ಈ ಬಗ್ಗೆ ಮನವೊಲಿಸಿದರು. ಕುಟುಂಬ ಯೋಜನೆ ಮಾಡಿಸಿಕೊಂಡರೆ ಏನೇನು ಸವಲತ್ತು ಇದೆ ಎಂದೂ ಮನವರಿಕೆ ಮಾಡಿಕೊಟ್ಟರು. ಹಾಗಾಗಿ ಎಂಟು ಮಕ್ಕಳನ್ನು ಹೆತ್ತ ಆನಂತರ, ಕೊನೆಗೂ ಅಮ್ಮ ಕುಟುಂಬ ಯೋಜನಾ ಶಸ್ತ್ರಚಿಕಿತ್ಸೆಗೆ ಒಳಗಾಗುವುದೆಂದು ನಿರ್ಧಾರವಾಯಿತು. ಶಸ್ತ್ರಚಿಕಿತ್ಸೆ ಆಗ ನಡೆಯುತ್ತಿದ್ದುದು ಕುಂದಾಪುರದಲ್ಲಿ. ಅಲ್ಲಿ ಅಮ್ಮ ಎರಡು ದಿನ ಇರಬೇಕಾಯಿತು. ಮೊದಲ ಬಾರಿಗೆ ಅಮ್ಮ ಮನೆಯಲ್ಲಿಲ್ಲದ ಸಂದರ್ಭ ಅದು. ನಿತ್ಯವೂ ಮನೆ ಮಂದಿಗೆ ಅಡುಗೆ ಮಾಡಲು ಅಮ್ಮ ಎಷ್ಟು ಕಷ್ಟ ಪಡುತ್ತಿದ್ದರು, ಹೊತ್ತು ಹೊತ್ತಿಗೆ ಯಾವ ಬಗೆಯ ಪಲ್ಯ, ಸಾರು ಮಾಡುವುದು ಎಂಬ ಬಗ್ಗೆ ಎಷ್ಟು ತಲೆಕೆಡಿಸಿಕೊಳ್ಳುತ್ತಿದ್ದರು ಎಂದು ಅರ್ಥವಾದುದು ಆಗಲೇ. ಏನೂ ಮಾಡಲು ಅರಿಯದ ನಾವು ಮೂರೂ ಹೊತ್ತು ಸೌತೆಕಾಯಿ ಪದಾರ್ಥ ಮಾಡಿ ತಿಂದೆವು.

ನಮ್ಮದೇ ಆಗಿ ಹೋದ ಊರು!

ಅಪ್ಪನ ಕಾರ್ಯಕ್ಷೇತ್ರ ಕಾರ್ಕಳಕ್ಕೆ ಬದಲಾದುದರಿಂದ ಈ ವರ್ಷ ವರ್ಗಾವಣೆ ಖಚಿತ ಎಂಬುದು ಅರಿವಾಗತೊಡಗಿತು. ಪ್ರತೀ ವರ್ಷವೂ ಊರು ಬದಲಾಯಿಸುವ ಬಗ್ಗೆ ಮಾತನಾಡುತ್ತಾ ಆ ಬಗ್ಗೆ ರೋಮಾಂಚಿತರಾಗುತ್ತಿದ್ದ ನಮಗೆ ಹನ್ನೊಂದು ವರ್ಷಗಳ ಕಾಲ ನಮ್ಮದೇ ಆಗಿ ಹೋದ ಊರನ್ನು ತೊರೆಯುವ ಯೋಚನೆ ಬರುತ್ತಲೇ ಮನಸು ಭಾರವಾಗ ತೊಡಗಿತು.

ಸಾಂದರ್ಭಿಕ ಚಿತ್ರ

ನಮ್ಮ ತಾಯಿನುಡಿ ತುಳು. ಆದರೆ ನಮ್ಮ ಹಾಗೆ ವರ್ಗವಾಗಿ ಬಂದ ಕೆಲ ಸರಕಾರಿ ನೌಕರರನ್ನು ಹೊರತುಪಡಿಸಿದರೆ ಶಂಕ್ರಾಣದಲ್ಲಿ ತುಳು ಮಾತನಾಡುವವರು ಯಾರೂ ಇರಲಿಲ್ಲ. ಜಾತಿ ಭೇದವಿಲ್ಲದೆ ಎಲ್ಲರೂ ಮಾತನಾಡುತ್ತಿದ್ದುದು ಕುಂದಾಪ್ರ ಕನ್ನಡ ಅಥವಾ ಕುಂದ ಕನ್ನಡದಲ್ಲಿ. ಎಳೆಯ ವಯಸಲ್ಲವೇ? ಭಾಷೆ ಕಲಿಯುವುದು ಬಹಳ ಸುಲಭ. ಆ ಭಾಷೆಯ ಪದಗಳು ಕಿವಿಗೆ ಬೀಳುತ್ತಿದ್ದರೆ ಸಾಕು. ಹಾಗಾಗಿ ಯಾವುದೇ ಶ್ರಮ ಇಲ್ಲದೆ ಕುಂದಾಪ್ರ ಕನ್ನಡ ಕಲಿತೆವು. ಆ ಭಾಷೆ ನಮ್ಮದೇ ಭಾಷೆಯಾಯಿತು. ʼವಾಲಿ ಕಳುಕೆʼ ಎಂಬುದು ಆ ಭಾಷೆಯ ಬಹುಖ್ಯಾತಿಯ ಬಯ್ಗುಳ. ಶಂಕ್ರಾಣ ತೊರೆದ ನಲವತ್ತೈದು ವರ್ಷಗಳ ಬಳಿಕವೂ ನನಗೆ ಕುಂದಾಪ್ರ ಕನ್ನಡ ಇಷ್ಟದ ಭಾಷೆ, ಕುಂದಾಪುರ ಕಡೆಯವರು ಸಿಕ್ಕರೆ ನಾನು ಮಾತನಾಡುವುದು ಅದೇ ಭಾಷೆಯಲ್ಲಿ. ಊರು ತೊರೆಯುವಾಗ ಆ ಭಾಷೆಯನ್ನೂ ತೊರೆಯಬೇಕು! ಇನ್ನು ಯಾರೊಂದಿಗೆ ಆ ಭಾಷೆಯಲ್ಲಿ ಮಾತನಾಡುವುದು?!

ಹನ್ನೊಂದು ವರ್ಷಗಳ ಕಾಲವೂ ನಾವು ವಾಸಿಸಿದ್ದು ಜೀರ್ಣ ಸ್ಥಿತಿಯಲ್ಲಿದ್ದ ಮಣ್ಣಿನ ಗೋಡೆಯ ಹುಲ್ಲಿನ ಗುಡಿಸಲಲ್ಲಿ. ಮನೆ ಸ್ವಂತದ್ದಲ್ಲ, ಬಾಡಿಗೆ ಮನೆ, ಆದರೆ ಅದರೊಂದಿಗೆ ಏನೋ ಭಾವನಾತ್ಮಕ ನಂಟು. ನಾಲ್ಕು ಮಂದಿ ಸಹೋದರ ಸಹೋದರಿಯರು ಜನಿಸಿದ್ದು ಆ ಗುಡಿಸಲಲ್ಲಿ. ಹನ್ನೊಂದು ವರ್ಷಗಳ ರಾತ್ರಿ ಹಗಲು ಬೇಸಗೆ ಮಳೆಗಾಲ ನಮಗೆ ನೆಮ್ಮದಿಯ ಆಶ್ರಯ ಕೊಟ್ಟ ಮನೆ ಅದು. ಭತ್ತದ ಗದ್ದೆಗಳ ನಡುವಣ ಆ ಗುಡಿಸಲಲ್ಲಿ ಬದುಕುತ್ತಾ, ಸುತ್ತ ಕಾಯಿಪಲ್ಲೆ ಬೆಳೆಸುತ್ತಾ, ದನ, ಕೋಳಿ ಸಾಕುತ್ತಾ, ಅಪ್ಪಟ ಕೃಷಿಕರಂತೆ ಬದುಕಿದ್ದೆವು ನಾವು ಅಲ್ಲಿ.

ಒಮ್ಮೆ ನನ್ನ ಕಿರಿಯ ತಮ್ಮ ಬಾಲಕೃಷ್ಣ (ಈಗ ಆತ ಎಂ ಆರ್‌ ಬಾಲಕೃಷ್ಣ, ಬೆಂಗಳೂರಿನಲ್ಲಿ ಹೈಕೋರ್ಟ್‌ ಹಿರಿಯ ವಕೀಲ) ಚಿಮಣಿ ದೀಪದಿಂದ ಮನೆಯ ಮುಂಭಾಗದ ತಟ್ಟಿಗೆ ಬೆಂಕಿ ತಗುಲಿಸಿಬಿಟ್ಟ. ಮನೆಗೆ ಬೆಂಕಿ ಹಿಡಿಯಿತು. ಕ್ಷಣ ಮಾತ್ರದಲ್ಲಿ ಹುಲ್ಲಿನ ಮಾಡಿಗೆ ಬೆಂಕಿ ಪಸರಿಸಿತು. ಎಲ್ಲರೂ ಬೊಬ್ಬೆ ಹಾಕಿದರು. ನನ್ನ ಕಿರಿಯ ಅಣ್ಣ ಉಮೇಶ ಮಹಾ ಧೈರ್ಯಶಾಲಿ. ಆತ ಮಾಡಿಗೆ ಏರಿದವನೇ ಹುಲ್ಲನ್ನು ಎಳೆದು ಹಾಕತೊಡಗಿದ. ಹುಲ್ಲನ್ನು ಹಾಗೆ ಎಳೆದುಹಾಕಿದರೆ ಬೆಂಕಿ ಹರಡುವುದು ಇನ್ನೂ ಬೇಗ. ಮನೆಗೆ ಬೆಂಕಿ ಹಿಡಿದುದು ಬಲು ದೂರಕ್ಕೆ ಕಂಡು ಜನ ಓಡೋಡಿ ಬಂದು ನೀರು ಹಾಕಿ ಬೆಂಕಿ ಆರಿಸಿದರು. ಮನೆ ಪೂರ್ತಿಯಾಗಿ ಭಸ್ಮವಾಗುತ್ತಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತು? ಊಹಿಸುವುದೂ ಕಷ್ಟ.

ರೆವಿನ್ಯೂ ಜಾಗದಲ್ಲಿದ್ದ ಮರಗಳೆಂದರೆ ಅದು ಸಾರ್ವಜನಿಕರ ಮರಗಳು. ನಮ್ಮ ಮನೆಯ ಹೊರವಲಯದಲ್ಲಿ ಅಪಾರ ಪ್ರಮಾಣದಲ್ಲಿ ಆಗ ರೆವಿನ್ಯೂ ಜಾಗಗಳಿದ್ದವು. ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಗೇರು ಮರಗಳಿರುತ್ತಿದ್ದವು. ಅದರಲ್ಲಿನ ಗೇರುಹಣ್ಣನ್ನು ಯಾರೂ ಒಯ್ಯಬಹುದು. ಒಮ್ಮೆ ನನ್ನ ಕಿರಿಯ ಅಣ್ಣ ಉಮೇಶ, ನಾನು ಮತ್ತು ನನ್ನ ತಂಗಿ ಕಾಡಿಗೆ ಹೋದೆವು. ಗೇರು ಹಣ್ಣು ಕೊಯ್ಯಲು ಉಮೇಶ ಮರ ಏರಿದ. ಕೆಲವು ಹಣ್ಣುಗಳನ್ನು ಉದುರಿಸಿದ ಬಳಿಕ, ಒಂದು ಗೇರು ಹಣ್ಣು ಕೊಯ್ಯಲು ಯತ್ನಿಸುತ್ತಾ, ʼಈಗ ಬೀಳುತ್ತದೆ, ಈಗ ಬೀಳುತ್ತದೆʼ ಎನ್ನುತ್ತಾ ಗೆಲ್ಲು ಮುರಿದು ಆತನೇ ಬಿದ್ದುಬಿಟ್ಟ. ಸ್ವಲ್ಪ ಹೊತ್ತು ಶ್ವಾಸ ನಿಂತೇ ಹೋಯಿತು. ಬಹಿರ್ದೆಸೆಗೆ ಎಂದು ಕಾಣುತ್ತದೆ, ಚೊಂಬು ಹಿಡಿದು ಕಾಡಿಗೆ ಬಂದಿದ್ದ ಶಂಭುಶಾಸ್ತ್ರಿಗಳು ನಮ್ಮ ಬೊಬ್ಬೆ ಕೇಳಿ ಓಡೋಡಿ ಬಂದು ಆತನಿಗೆ ಅದೇ ನೀರು ಹಾಕಿ ಉಪಚಾರ ಮಾಡಿದರು. ಉಮೇಶ ನಿಧಾನಕ್ಕೆ ಎದ್ದು ಕುಳಿತ. ಆ ಬಳಿಕ ಮನೆ ಕಡೆಗೆ ಹೊರಟೆವು. ಆಘಾತದಿಂದ ಒಂದು ರೀತಿಯ ಭ್ರಮೆಗೆ ಒಳಗಾಗಿದ್ದ ಆತ ಏನೇನೋ ಬಿಂಗ್ರಿ ಬಿಂಗ್ರಿಯಾಗಿ ಮಾಡನಾಡುತ್ತಿದ್ದ. ಆತನಿಗೆ ಚೇತರಿಸಿಕೊಳ್ಳಲು ಒಂದೆರಡು ದಿನ ಬೇಕಾಯಿತು. ನಮ್ಮ ಇಂತಹ ದುಸ್ಸಾಹಸಗಳಿಂದಾಗಿ ನಾವು ಏನೂ ಅವಘಡ ಮಾಡಿಕೊಳ್ಳದೇ ಬದುಕಿದ್ದೇ ಹೆಚ್ಚು. ʼನಾವು ಬದುಕಿರುವುದೇ ಒಂದು ದೊಡ್ಡ ಆಕ್ಸಿಡೆಂಟ್‌ʼ, ಎಂಬ ಮಾತೇ ಇದೆಯಲ್ಲ.

ಒಮ್ಮೆ ಹಿರಿಯ ತಂಗಿ ತಾರಾಮತಿಗೆ (ಈಗ ನಿವೃತ್ತ ಶಿಕ್ಷಕಿ) ಭಯಂಕರ ಜ್ವರ ಬಂತು. ಜ್ವರ ತಲೆಗೆ ಏರಿ ಆಕೆ ಹುಚ್ಚು ಹುಚ್ಚಾಗಿ ಮಾತನಾಡತೊಡಗಿದಳು. ಇನ್ನು ಆಕೆ ಬದುಕಿ ಉಳಿಯುವುದು ಕಷ್ಟ ಎಂಬುದು ಅರಿವಾಗುತ್ತಲೇ ಅಪ್ಪ ಆಕೆಯನ್ನು ಹೆಗಲಿಗೆ ಏರಿಸಿ, ಕಿಲೋಮೀಟರ್‌ ದೂರದ ಶಂಕ್ರಾಣದ ಪೇಟೆಯ ಡಾಕ್ಟರ್‌ ಮಧ್ಯಸ್ಥರಲ್ಲಿಗೆ ಹೊರಟೇ ಬಿಟ್ಟ. ಸಕಾಲದ ಚಿಕಿತ್ಸೆಯಿಂದ ತಂಗಿ ಉಳಿದುಕೊಂಡಳು. ಕಿರಿಯ ತಮ್ಮ ಬಾಲಕೃಷ್ಣನಿಗೆ ಜೋರಾಗಿ ಅತ್ತು ಉಸಿರುಗಟ್ಟುವ ಒಂದು ಸಮಸ್ಯೆ ಇತ್ತು. ಅನೇಕ ಬಾರಿ ಸಾವಿನಂಚಿಗೆ ಹೋಗಿ ವಾಪಸಾಗುತ್ತಿದ್ದ. ಅಪ್ಪ ರಾತ್ರಿ ಹೊತ್ತು ಬೇಟೆಗೆ ಹೋಗಿ ಒಮ್ಮೆ ಹಾವಿನ ಕಡಿತಕ್ಕೆ ಒಳಗಾಗಿದ್ದ. ಕಾಲು ಊದಿಕೊಂಡಿತ್ತು. ಇನ್ನೊಮ್ಮೆ ಜಾರಿ ಬಿದ್ದು ಕಾಲರ್‌ ಬೋನ್‌ ಮುರಿದುಕೊಂಡು ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ. ಓಹ್! ಇಂಥ ಎಷ್ಟೊಂದು ಸಿಹಿ ಮತ್ತು ಕಹಿ ನೆನಪುಗಳು!

ನಮ್ಮೊಂದಿಗೆ ಹಲ್ಲಿ, ತಿಗಣೆ, ಹೆಕ್ಕಳೆ, ಹಾವು, ಗುಬ್ಬಚ್ಚಿ ಎಲ್ಲರಿಗೂ ವಾಸ ಸ್ಥಾನವಾಗಿದ್ದ ಹುಲ್ಲಿನ ಮನೆ, ನಾನು ಓಡಾಡಿದ ತೋಟ, ಭತ್ತದ ಗದ್ದೆ, ಕಾಡು, ರಾಶಿ ರಾಶಿ ಅಣಬೆಗಳ ದೂಪದ ಕಾಡು, ಪೊದೆಗಳ ಬೆಟ್ಟ, ನಾನು ಏರಿದ ಹಲಸು ಮಾವು ಬನ್ನೇರಳೆ ಹೆಬ್ಬಲಸಿನ ಮರಗಳು, ನಾನು ಆಸ್ವಾದಿಸಿದ ಚಾಂಪೆ ಹಣ್ಣು, ನನಗೆ ಈಜು ಕಲಿಸಿದ ಕೆರೆ, ಸೈಕಲ್‌ ಕಲಿಸಿದ ರಸ್ತೆಗಳು, ಜಿಗಿತದಲ್ಲಿ ಕುದುರೆಯನ್ನು ಮೀರಿಸುತ್ತಿದ್ದ ಕಪಿಲೆ ದನ, ಹೊಸತು ಊಟ, ದೀಪಾವಳಿ, ಗೋಪೂಜೆ ಸಂಭ್ರಮ, ಗಣಪತಿ, ಅಷ್ಟಮಿ ಹಬ್ಬ, ಹಂದಿ ಬೇಟೆ, ಕೋಳಿ ಅಂಕ, ಕಬ್ಬಿನ ಗದ್ದೆಗಳು, ಆಲೆಮನೆ, ಹಂದಿಕೋಡ್ಲು, ಕುಪ್ಪೆಗುಡ್ಡೆ, ಮೈಕ್ರೋವೇವ್‌ ಸ್ಟೇಶನ್‌, ಕೆರೆಕಾಡು, ಸಿಂಗಿನ ಕೋಡ್ಲು, ಹಾಲಾಡಿ ಗೆಂಡ, ವಂಡಾರು ಕಂಬಳ, ಉಳ್ಳೂರು ಜಾತ್ರೆ, ಕುಪ್ಪಾರು ಅರೆಕಲ್ಲು, ಅದರಲ್ಲಿ ರಾವಣ ಎಳೆದುಕೊಂಡು ಹೋಗುವಾಗ ಆದ ಸೀತೆಯ ಸೀರೆಯ ಗುರುತುಗಳು, ಶಂಕ್ರಾಣ ಜಾತ್ರೆ, ವಿಟ್ಲ ಪಿಂಡಿ, ಕಲ್ಲಕುಟಿಗ ಜಾತ್ರೆ, ಸೈಕಲ್‌ ಸರ್ಕಸ್‌, ಓದು ಕಲಿಸಿದ ಶಾಲೆ, ಮೆಚ್ಚಿನ ಸಹಪಾಠಿಗಳು, ಪ್ರೀತಿಯ ಶಿಕ್ಷಕರು, ಮಸಾಲೆ ದೋಸೆಯ ಕೃಷ್ಣ ಭವನ, ನರಸಿಂಹ ನಾಯಕರ ದಿನಸಿ ಅಂಗಡಿ, ಸರ್ವೋತ್ತಮ ಶೇಟರ ಬಟ್ಟೆ ಅಂಗಡಿ, ಮನೋಹರನ ಸೈಕಲ್‌ ಅಂಗಡಿ, ಅಂಬಾಭವನ, ಗಣಪತಿ ಮೂರ್ತಿ ತಯಾರಿಸುತ್ತಿದ್ದ ಸಂಡ್ರಾಯರು (ಸಣ್ಣರಾಯರು), ಓಹ್! ಊರು ಬಿಡುವಾಗ ಎಷ್ಟೆಲ್ಲವನ್ನು ಶಾಶ್ವತವಾಗಿ ತೊರೆದು ನೆನಪುಗಳ ಗಂಟುಮೂಟೆಗಳನ್ನಷ್ಟೇ ಹೊತ್ತುಕೊಂಡು ಹೊರಡಬೇಕು!

ಕಾರ್ಕಳಕ್ಕೆ ಹೋದ ಬಳಿಕ ನಾನು ಭುವನೇಂದ್ರ ಕಾಲೇಜಿನಲ್ಲಿ ಓದು ಮುಂದುವರಿಸುವುದು ಎಂದಾಯಿತು. ಒಂದು ರೀತಿಯ ಖುಷಿ. ಯಾಕೆಂದರೆ ಆಗ ಪಿಯುಸಿ ಮತ್ತು ಪದವಿ ಕಾಲೇಜಿನ ಫಲಿತಾಂಶ ಹೊರಬಿದ್ದಾಗ ಹೆಚ್ಚಿನ rank ಗಳಿಸುತ್ತಿದ್ದ ಕಾಲೇಜು ಅದು.

ಅಪ್ಪ ಅದಾಗಲೇ ಕಾರ್ಕಳ ಜೋಡುರಸ್ತೆಯ ಬಳಿ ಒಂದು ಬಾಡಿಗೆ ಮನೆ ಗೊತ್ತು ಮಾಡಿದ್ದ.1978 ನೇ ಇಸವಿಯ ಎಪ್ರಿಲ್‌ ಮೇ ತಿಂಗಳಿರಬೇಕು. ಕಾರ್ಕಳಕ್ಕೆ ಗಂಟುಮೂಟೆ ಕಟ್ಟ ತೊಡಗಿದೆವು. ಮರದ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಗೋಳಿಯಂಗಡಿ ಭಟ್ಟರಿಗೆ ಅನೇಕ ಲಾರಿಗಳಿದ್ದವು. ಅವರ ಲಾರಿಯಲ್ಲಿ ನಾಟಾ ಒಯ್ಯುವಾಗ ನಮ್ಮ ಅಪ್ಪನೇ ಪರ್ಮಿಟ್‌ ಕೊಡುತ್ತಿದ್ದುದು. ಒಂದು ಪರ್ಮಿಟ್‌ ಕೊಡುವಾಗ ಅವರು ಅಪ್ಪನ ಕೈಗೆ ಹತ್ತರ ಒಂದು ನೋಟು ಕೊಡುತ್ತಿದ್ದರು. ನಮ್ಮ ಮನೆ ಸಾಮಾನು ಸಾಗಾಟಕ್ಕೆ ಗೋಳಿಯಂಗಡಿ ಭಟ್ಟರ ಲಾರಿಯನ್ನೇ ಗೊತ್ತುಮಾಡಲಾಗಿತ್ತು. ಸಂಜೆಯ ಹೊತ್ತು, ಲಾರಿ ನಮ್ಮ ಮನೆ ಸನಿಹದ ರಸ್ತೆಯ ಬದಿಯಲ್ಲಿ ಬಂದು ನಿಂತಿತು. ಸಾಮಾನು ಸರಂಜಾಮುಗಳನ್ನು ಮನೆಯಿಂದ ಒಯ್ದು ಲಾರಿಗೆ ಹೇರಲಾರಂಭಿಸಿದೆವು. ಸ್ಥಳೀಯರೂ ನೆರವಾದರು. ಈ ಬಾರಿ ಬೂದುಕುಂಬಳ ಮತ್ತು ಸಿಹಿಕುಂಬಳದ ಫಸಲು ಚೆನ್ನಾಗಿ ಬಂದಿತ್ತು. ಅವನ್ನು ಒಯ್ಯಲು ಸ್ಥಳಾಭಾವ ಇತ್ತು. ಕೆಲವು ರಸ್ತೆಯ ಬದಿಯಲ್ಲಿಯೇ ಉಳಿದವು. ಅಪ್ಪನ ಪ್ರೀತಿಯ ದನವನ್ನು ಭಾರವಾದ ಮನಸಿನೊಂದಿಗೆ ಪರಿಚಿತರೊಬ್ಬರಿಗೆ ಮಾರಿಯಾಗಿತ್ತು. ಅವಕಾಶ ಇದ್ದರೆ ಅದನ್ನು ಒಯ್ದು ಸಾಕುವವರೇ ಅಪ್ಪ. ಆದರೆ ಸಂದರ್ಭ ಹಾಗಿರಲಿಲ್ಲ. ಕರಿಕಲ್ಲಿನ ಕಾರ್ಕಳದಲ್ಲಿ ದನ ಸಾಕುವುದು ಹೇಗೆ? ಮುಸ್ಸಂಜೆಯ ಹೊತ್ತು, ಕಡೆಯುವ ಕಲ್ಲು, ಮೇಜು, ಕುರ್ಚಿ, ಹೀಗೆ ಎಲ್ಲವನ್ನೂ ಲಾರಿಗೆ ಹೇರಿ, ಆರ್ದ್ರ ಕಣ್ಣುಗಳೊಂದಿಗೆ ಶಂಕ್ರಾಣಕ್ಕೆ ಶಾಶ್ವತ ವಿದಾಯ ಹೇಳಿ, ಲಾರಿ ಏರಿದೆವು. ಹನ್ನೊಂದು ವರ್ಷಗಳ ಹಿಂದೆ ನಮ್ಮನ್ನು ಕಾರ್ಕಳದಿಂದ ತಂದ ಅದೇ ಹಾಲಾಡಿ, ಹೆಬ್ರಿ ಮಾರ್ಗವಾಗಿ ಕಾರ್ಕಳ ಜೋಡುರಸ್ತೆಯತ್ತ ಲಾರಿ ಚಲಿಸಿತು.

(ಮುಂದುವರಿಯುವುದು…)

ಶ್ರೀನಿವಾಸ ಕಾರ್ಕಳ
ಚಿಂತಕರು

ಇದನ್ನೂ ಓದಿ- ಅದೊಂದು ದೊಡ್ಡ ಕಥೆ, ಆತ್ಮಕಥನ ಸರಣಿ- 15 -ಎಸ್‌ ಎಸ್‌ ಎಲ್‌ ಸಿ ಮುಗಿಯಿತು

More articles

Latest article

Most read