ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ, ಅಸ್ವಾಭಾವಿಕ ಸಾವುಗಳು ಮತ್ತು ನಾಪತ್ತೆ ಪ್ರಕರಣಗಳನ್ನು ತನಿಖೆ ಮಾಡುತ್ತಿರುವ ವಿಶೇಷ ತನಿಖಾ ತಂಡ (ಎಸ್.ಐ.ಟಿ.) ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದ ಬಂಗ್ಲೆ ಗುಡ್ಡೆಯಲ್ಲಿ ಹೊಸ ಶೋಧ ಕಾರ್ಯಾಚರಣೆಗಳನ್ನು ನಡೆಸುವ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿದೆ.
ಅತ್ಯಂತ ವಿಶ್ವಾಸಾರ್ಹ ಸುದ್ದಿಗಳನ್ನು ಪ್ರಕಟಿಸುತ್ತಿರುವ ʼBLR POST ಈ ಕುರಿತು ವರದಿ ಮಾಡಿದೆ.
ಸೆಪ್ಟೆಂಬರ್ 2025 ರಲ್ಲಿ ಹೋರಾಟಗಾರ ಹಾಗೂ ಸೌಜನ್ಯಳ ಮಾವ ವಿಠಲ ಗೌಡರು ನೀಡಿದ ಮಾಹಿತಿ ಮೇರೆಗೆ, ಬಂಗ್ಲೆ ಗುಡ್ಡದಲ್ಲಿ ಶೋಧ ಕಾರ್ಯ ನಡೆಸಿದ ಸಮಯದಲ್ಲಿ, ಎಸ್ ಐ ಟಿ ಏಳರಿಂದ ಎಂಟು ತಲೆಬುರುಡೆಗಳು ಮತ್ತು 1000 ಕ್ಕೂ ಹೆಚ್ಚು ಮಾನವ ಮೂಳೆಗಳನ್ನು ವಶಪಡಿಸಿಕೊಂಡಿತ್ತು.
ಗೃಹ ಇಲಾಖೆಯ ಉನ್ನತ ಮೂಲಗಳು, ʼಬಂಗ್ಲೆ ಗುಡ್ಡದಲ್ಲಿನ ಸಮಾಧಿ ಅಗೆಯುವ ಕಾರ್ಯಾಚರಣೆಯ ಬಗ್ಗೆ ಎಸ್ಐಟಿ ಬಹಳ ಉತ್ಸುಕವಾಗಿದೆ. ಗುಡ್ಡದ ಮೇಲ್ಮೈಯಲ್ಲೇ ತಲೆ ಬುರುಡೆಗಳು, ಹಾಗೂ ಸಾವಿರಾರು ಮೂಳೆಗಳು ಸಿಕ್ಕಿರುವಾಗ, ವ್ಯವಸ್ಥಿತವಾಗಿ ಅಗೆಯುವಿಕೆಯನ್ನು ನಡೆಸಿದರೆ, ಇನ್ನೆಷ್ಟು ತಲೆಬುರುಡೆಗಳು ಮತ್ತು ಮೂಳೆಗಳು ಸಿಗಲಿಕ್ಕಿಲ್ಲ? ಎಂದು ತಂಡ ಅಚ್ಚರಿ ವ್ಯಕ್ತಪಡಿಸಿದೆ” ಎಂದು ಹೇಳಿವೆ.
ಸಂಪೂರ್ಣ ಪರಿಶೀಲನೆ ಮಾಡದೆ ಬಂಗ್ಲೆ ಗುಡ್ಡ ಪ್ರದೇಶವನ್ನು ಹಾಗೆಯೇ ಬಿಡುವುದು ಸರಿಯಲ್ಲ ಎಂದು ಎಸ್ಐಟಿ ತಂಡ ನಿರ್ಧರಿಸಿದೆ ಎಂದೂ ಸುದ್ದಿ ಮೂಲಗಳು ತಿಳಿಸಿವೆ. ಈ ಉದ್ದೇಶದಿಂದ, ಹೊಸದಾಗಿ ಸಮಾಧಿ ಅಗೆಯುವ ಕಾರ್ಯಾಚರಣೆ ಅಗತ್ಯವೆಂದು ಪರಿಗಣಿಸಲಾಗಿದೆ. ಜುಲೈ ಮತ್ತು ಆಗಸ್ಟ್ ನಡುವಿನ ತನಿಖೆಯ ಆರಂಭಿಕ ಹಂತದಲ್ಲಿ ನಡೆಸಿದಂತೆಯೇ, ಸಮಾಧಿ ಅಗೆಯುವ ಚಟುವಟಿಕೆಯನ್ನು ಪುನಃ ಪ್ರಾರಂಭಿಸುವ ಬಗ್ಗೆ ಎಸ್ಐಟಿ ಗಂಭೀರವಾಗಿ ಚಿಂತಿಸುತ್ತಿದೆ.
13 ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆಸಿದ ಮೊದಲ ಕಾರ್ಯಾಚರಣೆಯ ಸಂದರ್ಭದಲ್ಲಿ, ಎರಡು ಜೊತೆ ಮಾನವ ಅಸ್ಥಿಪಂಜರದ ಅವಶೇಷಗಳು ಎಸ್ಐಟಿಗೆ ಸಿಕ್ಕಿವೆ – ಒಂದು ಆರನೇ ಸ್ಥಳದಲ್ಲಿ ಮತ್ತು ಇನ್ನೊಂದು ಸ್ಥಳ 11 (ಎ) ನಲ್ಲಿ. ಸ್ಥಳ 11 (ಎ) ನಲ್ಲಿ, ಭೂಮಿಯ ಮೇಲ್ಮೈಯಲ್ಲಿಯೇ ಮಾನವ ಅವಶೇಷಗಳು ಕಂಡುಬಂದಿವೆ.
ಕುಸುಮಾವತಿ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ:
ಸೌಜನ್ಯಳ ತಾಯಿ ಕುಸುಮಾವತಿ ಅವರು 74 ಅಸಹಜ ಸಾವುಗಳ ಪ್ರಕರಣಗಳನ್ನು ತನಿಖೆ ಮಾಡಲು ಎಸ್ ಐ ಟಿ ಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿ ಐ ಎಲ್) ಸಲ್ಲಿಸಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಧರ್ಮಸ್ಥಳ ಪಂಚಾಯತ್ ಗ್ರಾಮದ ಸುತ್ತಲೂ ಸತ್ತಂತೆ ಕಂಡುಬಂದ 74 ಶವಗಳನ್ನು ಅದೇ ದಿನದಂದು ಸಮಾಧಿ ಮಾಡಿದೆ ಎಂದು ಪಿ ಐ ಎಲ್ ಗೆ ಲಗತ್ತಿಸಲಾದ ದಾಖಲೆಗಳು ಸೂಚಿಸಿವೆ.
ಮಂಗಳವಾರ (ಫೆಬ್ರವರಿ 3, 2026) ವಿಚಾರಣೆಯ ಸಮಯದಲ್ಲಿ, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ʼಅಗತ್ಯವಿದ್ದಾಗ ಹೊಸ ಪ್ರಥಮ ಮಾಹಿತಿ ವರದಿ (ಎಫ್ ಐ ಆರ್) ನೋಂದಾಯಿಸುವುದಕ್ಕೆ ಸರಕಾರದ ಆಕ್ಷೇಪವಿಲ್ಲʼ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ವಾದ ಮಂಡಿಸಲು ಶಶಿಕಿರಣ್ ಶೆಟ್ಟಿಯವರಿಗೆ ನಿರ್ದೇಶನ ನೀಡಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ಕರ್ನಾಟಕ ಸರ್ಕಾರವನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡುವಂತೆ ಕುಸುಮಾವತಿ ಪರ ವಕೀಲ ಎಸ್ ಬಾಲನ್ ಅವರಿಗೆ ಸೂಚಿಸಿದರು.

