ನವದೆಹಲಿ: ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ವಿರುದ್ಧ ದಾಖಲಾಗಿದ್ದ ಆರೋಪಗಳು ಸಾಬೀತಾಗಿವೆ ಎಂದು ಸುಪ್ರೀಂಕೋರ್ಟ್ ನೇಮಿಸಿದ್ದ ವಿಚಾರಣಾ ಸಮಿತಿ ತಿಳಿಸಿದೆ. ಜತೆಗೆ ಅವರನ್ನು ಸೇವೆಯಿಂದ ವಜಾಗೊಳಿಸುವಂತೆಯೂ ಶಿಫಾರಸು ಮಾಡಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ನೇತೃತ್ವದ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ ವಿಚಾರಣಾ ಸಮಿತಿಯು 10 ದಿನಗಳ ಕಾಲ ವಿಚಾರಣೆ ನಡೆಸಿ ಈ ವರದಿ ನೀಡಿದೆ. ಇದಕ್ಕಾಗಿ 55 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ, ಘಟನಾ ಸ್ಥಳಕ್ಕೆ ಭೇಟಿ ನೀಡಿ 64 ಪುಟಗಳ ಈ ವರದಿಯನ್ನು ಸಿದ್ದಪಡಿಸಿದೆ.
ನಗದು ಇಡಲಾಗಿದ್ದ ಕೊಠಡಿಯನ್ನು ವರ್ಮಾ ಹಾಗೂ ಅವರ ಕುಟುಂಬದ ಸದಸ್ಯರು ರಹಸ್ಯವಾಗಿ ನಿರ್ವಹಿಸುತ್ತಿದ್ದರು ಎನ್ನುವುದೂ ಸಾಬೀತಾಗಿದೆ. 2025ರ ಮಾರ್ಚ್ 15ರ ಬೆಳಗಿನ ಜಾವ ಆ ಕೊಠಡಿಯಿಂದ ನಗದನ್ನು ಹೊರಗೆ ಸಾಗಿಸಲಾಗಿದೆ ಎನ್ನುವುದೂ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಎಲ್ಲಾ ಪ್ರತ್ಯಕ್ಷ ಹಾಗೂ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಪರಿಗಣಿಸಿ ವರ್ಮಾ ಅವರ ವಿರುದ್ಧದ ಆರೋಪಗಳು ಸಾಬೀತಾಗಿರುವುದನ್ನು ಹಾಗೂ ಈ ಅಪರಾಧಗಳು ಅವರ ವಾಗ್ದಂಡನೆಯನ್ನು ಪ್ರತಿಪಾದಿಸುವಷ್ಟು ಗಂಭೀರವಾದವು ಎಂಬುದನ್ನು ಸಮಿತಿ ಒಪ್ಪುತ್ತದ‘ ಎಂದೂ ತಿಳಿಸಲಾಗಿದೆ.
ವರ್ಮಾ ಅವರ ನಿವಾಸದಲ್ಲಿ ನಗದು ಪತ್ತೆಯಾದ ಬಗ್ಗೆ ವರ್ಮಾ ಅವರ ಪ್ರತಿಕ್ರಿಯೆ ಕೇಳಲಾಗಿತ್ತು. ಆದರೆ, ಅವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ನಗದು ಹಣವನ್ನು ಕೊಠಡಿಯಿಂದ ಹೊರಗೆ ತೆಗೆದುಕೊಂಡು ಹೋದವರು ಯಾರು ಎಂಬ ಬಗ್ಗೆಯೂ ಸಮಿತಿ ವಿಚಾರಣೆ ನಡೆಸಿದೆ. ವರ್ಮಾ ಅವರ ಪುತ್ರಿಯನ್ನೂ ವಿಚಾರಣೆಗೆ ಒಳಪಡಿಸಿದಾಗ ಆಕೆ ಭಯಭೀತಳಾಗಿದ್ದಳು ಎಂಬುದನ್ನು ವರದಿ ಉಲ್ಲೇಖಿಸಿದೆ.
ಏನಿದು ಪ್ರಕರಣ?:
2025ರ ಮಾರ್ಚ್ 14ರಂದು ರಾತ್ರಿ 11.35ರ ವೇಳೆಗೆ ವರ್ಮಾ ಅವರ ನಿವಾಸದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಈ ಸಂದರ್ಭದಲ್ಲಿ ಅವರ ನಿವಾಸದಲ್ಲಿ ನಗದು ಪತ್ತೆಯಾಗಿತ್ತು. ಈ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಮಾ.22ರಂದು ಆಗಿನ ಸಿಜೆಐ ಸಂಜೀವ್ ಖನ್ನಾ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿದ್ದರು. ಹಿಮಾಚಲ ಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜಿ.ಎಸ್. ಸಂಧಾವಾಲಿಯಾ, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರು ಸಮಿತಿ ಸದಸ್ಯರಾಗಿದ್ದರು. ಈ ಸಮಿತಿಯ ವರದಿಯನ್ನು ಆಧರಿಸಿ ಸಂಜೀವ್ ಖನ್ನಾ ಅವರು ರಾಷ್ಟ್ರಪತಿ ದೌಪದಿ ಮುರ್ಮು ಹಾಗೂ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ವರ್ಮಾ ಅವರ ವಾಗ್ದಂಡನೆಗೆ ಶಿಫಾರಸು ಮಾಡಿದ್ದರು.