Tuesday, June 17, 2025

ಹೆಣದ ಮೇಲೆ ರಾಜಕೀಯ ಮಾಡಿ ಅಸ್ತಿತ್ವ ಕಂಡುಕೊಳ್ಳುವುದು ಬಿಜೆಪಿ ಜಾಯಮಾನ: ಡಿಸಿಎಂ ಶಿವಕುಮಾರ್‌ ವ್ಯಂಗ್ಯ

Most read

ಬೆಂಗಳೂರು: ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡಲೆಂದೇ ಇದ್ದಾರೆ. ಅನಾದಿ ಕಾಲದಿಂದಲೂ ಅದೇ ಕೆಲಸ ಮಾಡುತ್ತಿದ್ದಾರೆ. ಈಗಲೂ ಮಾಡಲಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಟೀಕಿಸಿದ್ದಾರೆ.

ಐಪಿಎಲ್‌ ಸಂಭ್ರಮಾಚರಣೆ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ಹೊಣೆಯನ್ನು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳೇ ಹೊಣೆ ಹೊರಬೇಕು ಎಂದು ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.

ರಾಜ್ಯ ಮಾಲಿನ್ಯ ಮಂಡಳಿ ವಿಶ್ವ ಪರಿಸರ ದಿನದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಮ್ಯಾರಥಾನ್ ಸಂದರ್ಭದಲ್ಲಿ ಸೈಕಲ್‌ ಚಾಲನೆ ಮಾಡಿದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಅನೇಕ ರೈಲ್ವೇ ನಿಲ್ದಾಣಗಳಲ್ಲಿ ಕಾಲ್ತುಳಿತ ಸಂಭವಿಸಿದೆ. ಉತ್ತರ ಪ್ರದೇಶದ ದೇವಸ್ಥಾನವೊಂದರಲ್ಲಿ ನೂರಾರು ಜನ ಕಾಲ್ತುಳಿತಕ್ಕೆ ಒಳಗಾಗಿ ಸತ್ತರು. ಈ ಅವಘಡಗಳಿಗೆ ಬಿಜೆಪಿ ಹೊಣೆ ಹೊರಲಿದೆಯೇ? ಎರಡು ದಿನದ ಹಿಂದೆ ನಾನು ವಿಮಾನ ಅಪಘಾತ ಸಂಭವಿಸಿದ ಅಹಮದಾಬಾದ್ ಗೆ ಹೋಗಿದ್ದೆ. ಆಗ ನಾನು ಆ ಘಟನೆ ಬಗ್ಗೆ ಕೇಂದ್ರ ಸರ್ಕಾರವನ್ನು ಗುರಿ ಮಾಡಿ ಮಾತನಾಡಿದ್ದೇನೆಯೇ? ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡರು ಇರುವುದೇ ಹೆಣದ ಮೇಲೆ ರಾಜಕೀಯ ಮಾಡಲು. ಅವರು ಎಲ್ಲಾ ಕಾಲದಿಂದಲೂ ಅದೇ ಕೆಲಸ ಮಾಡುತ್ತಿದ್ದಾರೆ. ಬಂದ್, ಗಂಗಾಧರ್ ಕೊಲೆ ಪ್ರಕರಣ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಅವರು ಇದೇ ರೀತಿ ನಡೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಕಾಲ್ತುಳಿತ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಲಾಗಿದೆ. ತನಿಖೆಗಾಗಿ ಏಕ ಸದಸ್ಯ ಆಯೋಗವನ್ನು ನೇಮಕ ಮಾಡಲಾಗಿದೆ. ಇಡೀ ದೇಶದಲ್ಲಿ ಇಂತಹ ನೂರಾರು ಘಟನೆಗಳು ನಡೆದಿವೆ. ಆದರೂ ಕಾಂಗ್ರೆಸ್ ಪಕ್ಷ ಯಾವತ್ತೂ ಹೆಣದ ಮೇಲೆ ರಾಜಕೀಯ ಮಾಡಲು ಹೋಗಲಿಲ್ಲ ಎಂದು ಹೇಳಿದರು. ತಮ್ಮ ಅಸ್ತಿತ್ವ ಇನ್ನೂ ಇದೇ ಎಂದು ತೋರಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ. ಜನ ಸಾಮಾನ್ಯರು ಅವರ ಜೊತೆಯಿಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಕೇವಲ ನಿಮ್ಮನ್ನು ಮಾತ್ರ ಏಕೆ ಗುರಿಯಾಗಿಸಿಕೊಂಡಿದೆ ಎಂಬ ಪ್ರಶ್ನೆಗೆ  ಯಾರಿಗೆ ಹೆಚ್ಚು ಬಲ ಇರುತ್ತದೆಯೋ ಅವರಿಗೆ ಶತ್ರುಗಳು ಹೆಚ್ಚು. ಕಡಿಮೆ ಬಲ ಇದ್ದರೆ ಕಡಿಮೆ ಶತ್ರುಗಳು, ಬಲವೇ ಇಲ್ಲದಿದ್ದರೇ ಶತ್ರುಗಳೇ ಇಲ್ಲ. ಅವರಿಗೆ ನಮ್ಮನ್ನು ಕಂಡರೆ ಭಯ. ಮಾಧ್ಯಮಗಳು ನಮ್ಮ ಜತೆ ಇದ್ದರೆ 2028 ಕ್ಕೆ ಮತ್ತೆ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇವೆ. ಎಂದು ಉತ್ತರಿಸಿದರು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವಿರಾ ಎಂದಾಗ, ಕಾಂಗ್ರೆಸ್ ಸರ್ಕಾರ ಪ್ರಮಾಣ ವಚನ ಸ್ವೀಕಾರ ಮಾಡುತ್ತದೆ ಎಂದು ಸೂಚ್ಯವಾಗಿ ಹೇಳಿದರು.

More articles

Latest article