ನವದೆಹಲಿ, ಅ.16: ರಾಷ್ಟ್ರಧ್ವಜ ಹಾರಿಸುವುದನ್ನೇ ಅಪರಾಧವೆಂದು ಪರಿಗಣಿಸುವುದಾದರೆ ಜೈಲಿಗೆ ಹೋಗಲೂ ಸಿದ್ಧ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಘೋಷಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಶುಕ್ರವಾರ ದೆಹಲಿಯ ಕನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಹಮ್ಮಿಕೊಂಡಿರುವ ತಿರಂಗಾ ಯಾತ್ರೆಗೆ ನಿರ್ಬಂಧ ವಿಧಿಸಿರುವುದನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಪೊಲೀಸರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ತಡರಾತ್ರಿ ಸುದ್ದಿಗೋಷ್ಠಿ ನಡೆಸಿದ ದೀಪ್ಕೆ, ಯಾವುದೇ ಕಾರಣಕ್ಕೂ ತಿರಂಗಾ ಯಾತ್ರೆಯಿಂದ ಹಿಂದೆ ಸರಿಯುವುದಿಲ್ಲ. ಶಾಂತಿಯುತವಾಗಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಸ್ಪಷ್ಟಪಡಿಸಿದರು.
‘ತ್ರಿವರ್ಣ ಧ್ವಜ ಹಾರಿಸುವುದು ಅಪರಾಧವಾದರೆ ಜೈಲಿಗೆ ಹೋಗುತ್ತೇವೆ’
“ನಾಳೆ ನಾವು ಶಾಂತಿಯುತವಾಗಿ ಸೆಂಟ್ರಲ್ ಪಾರ್ಕ್ಗೆ ತೆರಳಿ ತ್ರಿವರ್ಣ ಧ್ವಜ ಹಾರಿಸುತ್ತೇವೆ. ಈ ದೇಶದ ನಾಗರಿಕರಾದ ನಾವು ರಾಷ್ಟ್ರಧ್ವಜ ಹಾರಿಸುವುದನ್ನೇ ನೀವು ಅಪರಾಧವೆಂದು ಪರಿಗಣಿಸಿದರೆ, ನೀವೇ ಅತಿದೊಡ್ಡ ದೇಶದ್ರೋಹಿಗಳು” ಎಂದು ದೀಪ್ಕೆ ಆಕ್ರೋಶ ವ್ಯಕ್ತಪಡಿಸಿದರು.
“ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ ನಾವು ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬಂದರೂ ಅದಕ್ಕೆ ಸಿದ್ಧರಿದ್ದೇವೆ” ಎಂದು ಘೋಷಿಸಿದರು.
‘100 ಕಡೆ ರಾಷ್ಟ್ರಧ್ವಜ ಹಾರಿಸುತ್ತೇವೆ ಎಂದರೆ 100 ಸ್ಥಳಗಳನ್ನೂ ಮುಚ್ಚುತ್ತೀರಾ?’
ಸಿಜೆಪಿ ತಿರಂಗಾ ಯಾತ್ರೆಯ ಹಿನ್ನೆಲೆಯಲ್ಲಿ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಸೆಂಟ್ರಲ್ ಪಾರ್ಕ್ ಅನ್ನು ಶುಕ್ರವಾರ ಮತ್ತು ಶನಿವಾರ ಸಾರ್ವಜನಿಕರ ಪ್ರವೇಶಕ್ಕೆ ಮುಚ್ಚುವುದಾಗಿ ಘೋಷಿಸಿದೆ. ಆಡಳಿತಾತ್ಮಕ ಕಾರಣಗಳಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಇದೇ ವೇಳೆ, ಸೀಮಿತ ಸಂಖ್ಯೆಯ ಜನರಿಗೆ ಸೂಕ್ತವಾದ ಪರ್ಯಾಯ ಸ್ಥಳದಲ್ಲಿ ರಾಷ್ಟ್ರಧ್ವಜ ಹಾರಿಸಲು ಹಾಗೂ ರಾಷ್ಟ್ರಗೀತೆ ಹಾಡಲು ಅವಕಾಶ ಕಲ್ಪಿಸಬಹುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಈ ನಿರ್ಧಾರವನ್ನು ಪ್ರಶ್ನಿಸಿದ ದೀಪ್ಕೆ, “ನಾಳೆ ನಾವು 100 ಸ್ಥಳಗಳಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೇವೆ ಎಂದು ಘೋಷಿಸಿದರೆ, ಆ 100 ಸ್ಥಳಗಳನ್ನೂ ಮುಚ್ಚುತ್ತೀರಾ? ನರೇಂದ್ರ ಮೋದಿ ಅವರ ರ್ಯಾಲಿಗೆ ಹೋಗಿ ರಾಷ್ಟ್ರಧ್ವಜ ಹಾರಿಸಿದರೆ ಪೊಲೀಸರು ಆ ರ್ಯಾಲಿಯನ್ನೂ ರದ್ದುಗೊಳಿಸುತ್ತಾರೆಯೇ? ಇದೆಂತಹ ಹಾಸ್ಯಾಸ್ಪದ ನಡೆ?” ಎಂದು ಪ್ರಶ್ನಿಸಿದರು.
‘ರಾಷ್ಟ್ರಧ್ವಜ ಹಾರಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿ’
ರಾಷ್ಟ್ರಧ್ವಜ ಹಾರಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ದೀಪ್ಕೆ ತೀವ್ರವಾಗಿ ಟೀಕಿಸಿದರು.
“ನಾವು ರಾಷ್ಟ್ರಧ್ವಜ ಹಾರಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿ. ಆಗ ನೀವೇ ದೇಶದ್ರೋಹಿಗಳು. ಈ ದೇಶದ ಇತಿಹಾಸದಲ್ಲಿ ಇದುವರೆಗೆ ಯಾವುದೇ ಪ್ರಧಾನಿಯಾಗಲಿ, ಯಾವುದೇ ಸರ್ಕಾರವಾಗಲಿ ಇಂತಹ ಕೆಲಸ ಮಾಡಿಲ್ಲ” ಎಂದು ಆರೋಪಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಚುನಾವಣಾ ಅಕ್ರಮಗಳ ಆರೋಪಗಳನ್ನು ಮುಂದಿಟ್ಟುಕೊಂಡು ಶುಕ್ರವಾರ ಸೆಂಟ್ರಲ್ ಪಾರ್ಕ್ನಲ್ಲಿ ರಾಷ್ಟ್ರಧ್ವಜ ಹಾರಿಸಲು ಸಿಜೆಪಿ ಸಾರ್ವಜನಿಕರು ಮತ್ತು ಪಕ್ಷದ ಬೆಂಬಲಿಗರಿಗೆ ಕರೆ ನೀಡಿದೆ.
‘ಮೋದಿ ಅವರಿಗೆ ರಾಷ್ಟ್ರಧ್ವಜದ ಮೇಲೆ ಇಷ್ಟೊಂದು ದ್ವೇಷವೇಕೆ?’
ಅಕ್ಟೋಬರ್ 13ರಂದು ಜಂತರ್ ಮಂತರ್ ಪ್ರದೇಶಕ್ಕೆ ರಾಷ್ಟ್ರಧ್ವಜ ಹಿಡಿದು ಪ್ರವೇಶಿಸಿದ್ದ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದನ್ನು ದೀಪ್ಕೆ ಖಂಡಿಸಿದರು.
ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸುವ ನಾಗರಿಕರನ್ನು ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದರು.
“ಭಾರತದ ಪ್ರಧಾನಿಗೆ ತ್ರಿವರ್ಣ ಧ್ವಜದ ಮೇಲೆ ಇಷ್ಟೊಂದು ದ್ವೇಷವೇಕೆ? ರಾಷ್ಟ್ರಧ್ವಜವನ್ನು ದ್ವೇಷಿಸುವ ವ್ಯಕ್ತಿ ಪ್ರಧಾನಿಯಾಗಿ ಮುಂದುವರಿಯಲು ಅರ್ಹರೇ?” ಎಂದು ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದರು.
‘ನನ್ನ ಹಿಂದೆ ನಂಬರ್ ಪ್ಲೇಟ್ ಇಲ್ಲದ ವಾಹನಗಳ ಸಂಚಾರ’
ತಮ್ಮ ಚಲನವಲನಗಳ ಮೇಲೆ ನಿಗಾ ಇಡಲಾಗುತ್ತಿದೆ ಎಂದೂ ಅಭಿಜಿತ್ ದೀಪ್ಕೆ ಗಂಭೀರ ಆರೋಪ ಮಾಡಿದರು. ನಂಬರ್ ಪ್ಲೇಟ್ ಇಲ್ಲದ ವಾಹನಗಳು ತಮ್ಮನ್ನು ಹಿಂಬಾಲಿಸುತ್ತಿವೆ. ಗುಪ್ತಚರ ಇಲಾಖೆಯ (IB) ಸಿಬ್ಬಂದಿ ತಮ್ಮ ಮನೆಯ ಹೊರಗಿರುವ ಕಾವಲುಗಾರನಿಂದ ತಮ್ಮ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿದರು.
“ದೆಹಲಿ ಪೊಲೀಸರು ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ನನ್ನನ್ನು ವಶಕ್ಕೆ ಪಡೆಯಬಹುದು. ಆದರೆ, ನರೇಂದ್ರ ಮೋದಿ ಅವರಿಗೆ ಒಂದು ವಿಷಯ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ನಾವು ಯಾವುದೇ ಕಾರಣಕ್ಕೂ ಹೆದರುವುದಿಲ್ಲ” ಎಂದು ದೀಪ್ಕೆ ಹೇಳಿದರು.
‘ನಾವು ಸರ್ಕಾರ ಬದಲಾವಣೆ ಕೇಳುತ್ತಿಲ್ಲ, ಚುನಾವಣಾ ಆಯುಕ್ತರನ್ನು ಬದಲಾಯಿಸಿ ಎನ್ನುತ್ತಿದ್ದೇವೆ’
ತಮ್ಮ ಹೋರಾಟದ ಉದ್ದೇಶ ಕೇಂದ್ರ ಸರ್ಕಾರವನ್ನು ಬದಲಾಯಿಸುವುದಲ್ಲ ಎಂದು ದೀಪ್ಕೆ ಸ್ಪಷ್ಟಪಡಿಸಿದರು. “ನಾವು ಕೇಳುತ್ತಿರುವುದು ಒಂದೇ. ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಿ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ರೀತಿಯಲ್ಲಿ ಹೊಸ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸಿ. ನಾವು ಸರ್ಕಾರ ಬದಲಾವಣೆ ಮಾಡಬೇಕು ಎಂದು ಹೇಳುತ್ತಿಲ್ಲ” ಎಂದರು.
ತಮ್ಮ ಸಹ ಚುನಾವಣಾ ಆಯುಕ್ತರ ಮಾತನ್ನೂ ಕೇಳದ ಜ್ಞಾನೇಶ್ ಕುಮಾರ್ ಅವರನ್ನು ತೆಗೆದುಹಾಕಬೇಕು ಎಂದು ಆಗ್ರಹಿಸುತ್ತಿದ್ದೇವೆ. ಇದರಲ್ಲಿ ಅಪರಾಧವೇನಿದೆ?” ಎಂದು ಪ್ರಶ್ನಿಸಿದರು.
‘ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ’
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ದೀಪ್ಕೆ, ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಇದು ತುರ್ತು ಪರಿಸ್ಥಿತಿ. ಆದರೆ, ಅದನ್ನು ಅಧಿಕೃತವಾಗಿ ಘೋಷಿಸಿದರೆ ತಮ್ಮ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬ ಭಯದಿಂದ ನರೇಂದ್ರ ಮೋದಿ ಘೋಷಿಸುತ್ತಿಲ್ಲ” ಎಂದು ಹೇಳಿದರು.
ಚುನಾವಣಾ ಆಯೋಗದ ವಿರುದ್ಧದ ಆರೋಪಗಳು, ಸಿಜೆಪಿ ನಾಯಕರ ಬಂಧನ ಹಾಗೂ ತಿರಂಗಾ ಯಾತ್ರೆಗೆ ವಿಧಿಸಲಾಗಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದೀಪ್ಕೆ ವಾಗ್ದಾಳಿ ನಡೆಸಿದ್ದು, ಶುಕ್ರವಾರದ ಪ್ರತಿಭಟನೆಗೆ ಮತ್ತಷ್ಟು ರಾಜಕೀಯ ಮಹತ್ವ ಬಂದಿದೆ.

