ಕಾರ್ಪೊರೆಟ್ ಶಕ್ತಿಗಳು ತಮ್ಮ ಅವಶ್ಯಕತೆ, ಆದ್ಯತೆಗಳಿಗೆ ತಕ್ಕಂತೆ ಆಯಾಕಾಲಕ್ಕೆ ಮಾತನಾಡುತ್ತವೆ. ನಮ್ಮ ಅವಶ್ಯಕತೆ, ಆದ್ಯತೆಗಳೇನೆಂಬುದು ನಮಗೆ ಗೊತ್ತಿರಬೇಕು. ಅದಕ್ಕೆ ತಕ್ಕಂತೆ ಬದುಕನ್ನು ಕಟ್ಟಿಕೊಳ್ಳಬೇಕು. ಒತ್ತಡವು ಬದುಕಿನ ಅವಿಭಾಜ್ಯ ಅಂಗವೆಂಬ ಸುಳ್ಳನ್ನು ನಮಗಾಗಿ ತೇಲಿಸಿದ ಮತ್ತು ಈಗಲೂ ಸತತವಾಗಿ ತೇಲಿಸುತ್ತಿರುವ ಶಕ್ತಿಗಳ ಕಪಿಮುಷ್ಟಿಯಿಂದ ನಮ್ಮ ಪೀಳಿಗೆಯ ಮಂದಿ ಇನ್ನಾದರೂ ನಿಧಾನವಾಗಿ ಹೊರಬರಬೇಕಿದೆ. ಇದು ನಮ್ಮ ಆಯ್ಕೆಯಷ್ಟೇ ಅಲ್ಲ, ಹಕ್ಕೂ ಹೌದು – ಪ್ರಸಾದ್ ನಾಯ್ಕ್, ದೆಹಲಿ.
ಒಂದೂ, ಎರಡೂ, ಮೂರೂ… ಕೈಯಲ್ಲೊಂದು ಬಯೋಡಾಟ ಹಿಡಿದುಕೊಂಡು ಅದೆಷ್ಟು ಸಂಸ್ಥೆಗಳ ಕದ ತಟ್ಟಿದ್ದೇವೆ ಎಂಬ ಲೆಕ್ಕವನ್ನು ನಾವು ಕ್ರಮೇಣ ಮರೆತೇಬಿಟ್ಟಿದ್ದೆವು.
ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತಿದು. ಕೊನೆಗೂ ಸ್ಥಳೀಯ ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದು ನಮ್ಮನ್ನು ಇಂಟರ್ನ್ ಆಗಿ ತೆಗೆದುಕೊಳ್ಳಲು ಒಪ್ಪಿಕೊಂಡಿತು. ಸಂಬಳವಿಲ್ಲದ ಕೆಲಸ. ಒಂದೂವರೆ ತಿಂಗಳ ನಂತರ ಸಿಗಲಿರುವ ಸರ್ಟಿಫಿಕೇಟ್ ಒಂದಕ್ಕೆ ಇಷ್ಟೆಲ್ಲ ಕಸರತ್ತು. ಹೀಗಾಗಿಯೋ ಏನೋ! ಇಲಾಖೆಯ ಸಿಬ್ಬಂದಿಗಳಿಗೆ ನಾವೆಂದರೆ ಬಹಳ ಸಸಾರ. ನಿತ್ಯವೂ ತಪ್ಪದೆ ಬಂದು ಹಾಜರಾಗುತ್ತಿದ್ದರೆ ಮತ್ತೆ ಬಂತಲ್ಲಪ್ಪ ಶನಿ ಎನ್ನುವಂತಿನ ನೋಟ.
ಹೇಳಿಕೊಳ್ಳಲು ಆಫೀಸು ಸಂಜೆ ಐದೂವರೆಗೆ ಮುಗಿಯುತ್ತಿತ್ತು. ಆದರೆ ಬಹಳಷ್ಟು ಮಂದಿ ಆರೂವರೆ-ಏಳರವರೆಗೆ ಕೂರುತ್ತಿದ್ದರು. ಬಹುತೇಕರಿಗೆ ಯಾಕೆ ಹೀಗೆ ಕೂತಿದ್ದೇವೆ ಎಂಬುದೂ ಅರಿವಿಲ್ಲದಂತಹ ಪರಿಸ್ಥಿತಿ. ಕ್ಯಾಬಿನ್ನಿನ ಗಾಜಿನ ಬಾಗಿಲಿನ ಹಿಂದೆ ಬಾಸ್ ಕೂತಿದ್ದಾನೆ ಎಂಬ ಏಕೈಕ ಕಾರಣಕ್ಕೆ ಎಲ್ಲರೂ, ಅದರಲ್ಲೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳು ವಿಭಾಗದ ಮುಖ್ಯಸ್ಥನಿಗೆ ಶಾಪಹಾಕುತ್ತಾ ಕೂರುತ್ತಿದ್ದರು. ಕಂಪ್ಯೂಟರಿನ ಮಾನಿಟರ್ ಎದುರು ಕೂತಿದ್ದರೂ, ಅವರೆಲ್ಲರ ಕಣ್ಣಂಚಿನ ನೋಟಗಳು ಬಾಸ್ ಕ್ಯಾಬಿನಿನ್ನತ್ತಲೇ ನೋಡುತ್ತಿದ್ದವು. ಆತ ಎದ್ದು ಹೊರನಡೆದರೇನೇ ಉಳಿದ ಸಿಬ್ಬಂದಿಗಳಿಗೆ ಶಾಪವಿಮೋಚನೆ.
ಈ ಲಾಜಿಕ್ಕುಗಳು ನಮಗಂದು ಅರ್ಥವಾಗುತ್ತಲೇ ಇರಲಿಲ್ಲ. ನಾನೂ ನಂತರ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿ ಸೇರಿಕೊಂಡೆ. ಬೆಳಗ್ಗೆ ಒಂಭತ್ತೂವರೆಗೆ ಅಧಿಕೃತವಾಗಿ ಜಾಯಿನ್ ಆದೆ. ಸೇರಿದ ಮೊದಲ ದಿನವೇ ರಾತ್ರಿ ಎಂಟರವರೆಗೆ ಉಳಿಸಿಕೊಂಡರು. ಇದೇ ಇಲ್ಲಿಯ ಸಂಸ್ಕೃತಿ ಎಂಬುದನ್ನು ನನಗಂದು ಪರೋಕ್ಷವಾಗಿ, ಆದರೆ ಸ್ಪಷ್ಟವಾಗಿ ಹೇಳಲಾಯಿತು. ಯಾವ ಕೂಪದಲ್ಲಿ ಬೀಳಬಾರದೆಂದು ನಾನು ಒಂದು ಕಾಲದಲ್ಲಿ ಅಂದುಕೊಂಡಿದ್ದೇನೋ, ನೇರವಾಗಿ ಅದೇ ಕೂಪಕ್ಕೆ ಬಂದು ಬಿದ್ದಿದ್ದೆ.
ಇತ್ತೀಚೆಗೆ ಇನ್ಫೋಸಿಸ್ ಅಧ್ಯಕ್ಷರು ಮತ್ತು ಎಲ್ ಆಂಡ್ ಟಿ ಮುಖ್ಯಸ್ಥರು ವಾರಕ್ಕೆ 70-90 ತಾಸು ದುಡಿಯುವ ಬಗ್ಗೆ ಅನುಮೋದಿಸುತ್ತಿದ್ದಾಗ ನಮ್ಮಲ್ಲಿ ಯಾರಿಗೂ ಅಚ್ಚರಿಯಾಗಿರಲಿಲ್ಲ. ಏಕೆಂದರೆ ಹಲವು ವರ್ಷಗಳಿಂದ ನಮಗಿದು ಅಭ್ಯಾಸವಾಗಿಬಿಟ್ಟಿದೆ. ಹಾಗಂತ ಸದ್ದಿಲ್ಲದೆ ಕೆಲಸ ಮಾಡುತ್ತಿರುವವರೆಲ್ಲ ಇದನ್ನು ಒಪ್ಪಿಕೊಂಡಿದ್ದಾರೆ ಎಂಬುದು ಸತ್ಯವೇ? ಖಂಡಿತ ಇಲ್ಲ. ಹಾಗಿದ್ದರೆ ಈ ಹೇಳಿಕೆಗಳ ವಿರುದ್ಧ ಬಹಳಷ್ಟು ಮಂದಿ ಕಿಡಿಕಾರುತ್ತಲೇ ಇರಲಿಲ್ಲ.
ಇದನ್ನೇ ನಾನು ಕೆಲ ವರ್ಷಗಳ ಹಿಂದೆ “ಕಾರ್ಪೊರೆಟ್ ಜೀತ” ಎಂದು ಒಂದೆಡೆ ಬರೆದಿದ್ದೆ. ಇದಕ್ಕೆ ಚಂದದ ಸಮರ್ಥನೆಗಳನ್ನು ಕೂಡ ಸಂಸ್ಥೆಗಳು ನೀಡುತ್ತವೆ. ಈ ವಾದಗಳನ್ನು ಸಮರ್ಥಿಸಿಕೊಳ್ಳಲು, ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಿರುವ ದಿಗ್ಗಜರ ಮಾತುಗಳನ್ನು ಕೂಡ ತಮ್ಮ ಮೋಟಿವೇಷನಲ್ ಸೆಷನ್ನುಗಳಲ್ಲಿ ಪರಿಚಯಿಸಲಾಗುತ್ತದೆ. ಈ ಮಾತುಗಳನ್ನು ಸಾರ್ವತ್ರಿಕ ಸತ್ಯ ಎಂಬಂತೆ ಬಿಂಬಿಸಲಾಗುತ್ತದೆ. ಕೊನೆಗೆ “ನಿಮ್ಮ ಬಳಿ ನಾವೇನೂ ವಿನಂತಿ ಮಾಡುತ್ತಿಲ್ಲ. ಮಾಡಬೇಕು ಅಂದರೆ ಮಾಡಬೇಕು. ಅಷ್ಟೇ”, ಎಂಬರ್ಥದಲ್ಲಿ ಸೆಷನ್ನುಗಳನ್ನು ತಣ್ಣಗೆ ಮುಗಿಸಲಾಗುತ್ತದೆ.
ಬಾಲಿವುಡ್ ಕಿಂಗ್ ಶಾರೂಖ್ ಖಾನ್ ದಿನಕ್ಕೆ ನಾಲ್ಕೇ ತಾಸು ಮಲಗುತ್ತಾರೆ ಎಂದು ನಾನು ಒಂದೆಡೆ ಓದಿದ್ದೆ. ಶಾರೂಖ್ ಇಂದು ಈ ಮಟ್ಟಿಗೆ ಬೆಳೆದಿದ್ದರೆ ಅದು ಸತ್ಯವೂ ಆಗಿರಬಹುದು. ನಾಲ್ಕು ವರ್ಷಗಳಿಗೊಮ್ಮೆ ಬರುವ ಒಲಿಂಪಿಕ್ಸ್ ನಲ್ಲಿ, ಒಂಭತ್ತೇ ಒಂಭತ್ತು ಸೆಕೆಂಡುಗಳ ಓಟಕ್ಕಾಗಿ ಅನುದಿನವೂ ತನ್ನನ್ನು ದಂಡಿಸಿಕೊಳ್ಳುವ ಬಗ್ಗೆ ಉಸೇನ್ ಬೋಲ್ಟ್ ಬಗ್ಗೆ ತಿಳಿದುಕೊಂಡಾಗ ನನಗೆ ನಿಜಕ್ಕೂ ಅಚ್ಚರಿಯಾಗಿತ್ತು. ಆತನಿಗೆ ಅದೊಂದು ತಪಸ್ಸು. ಇಂತಹ ಜೀವನಶೈಲಿಯನ್ನು ಮಹಮ್ಮದ್ ಆಲಿ, ಜಾಕಿ ಚಾನ್, ಅರ್ನಾಲ್ಡ್… ಹೀಗೆ ಹಲವು ಸಾಧಕರ ಬದುಕಿನಲ್ಲಿ ನಾವು ನೋಡಬಹುದು. ಇವರೆಲ್ಲರ ಅಗಾಧ ಯಶಸ್ಸಿನ ಹಿಂದೆ ಇಷ್ಟೆಲ್ಲಾ ಪರಿಶ್ರಮ ಇದೆಯೆನ್ನುವುದು ಕೂಡ ಸತ್ಯವೇ.
ಈ ಹಿನ್ನೆಲೆಯಲ್ಲಿ ಉದ್ಯೋಗಿಗಳು ವಾರಕ್ಕೆ 70-90 ಗಂಟೆ ದುಡಿದರೆ ನೀವೂ ನಮ್ಮಂತಾಗಬಹುದು, ಈ ದಿಗ್ಗಜರ ಸಾಲಿನಲ್ಲಿ ನಿಲ್ಲಬಹುದು ಎಂಬುದು ದೈತ್ಯ ಕಾರ್ಪೊರೆಟ್ ಸಂಸ್ಥೆಗಳ ಸಣ್ಣ ದನಿಯ ಆದೇಶ. ಈ ವಾದವನ್ನು ಅವರು ಬಹಿರಂಗವಾಗಿ ಹೇಳಿಕೊಳ್ಳದಿರಬಹುದು. ಆದರೆ ಇವರೆಲ್ಲರ ಸಮರ್ಥನೆಯ ಕ್ಯಾರವಾನ್ ಕೊನೆಗೆ ಬಂದು ನಿಲ್ಲುವುದು ಇಲ್ಲಿಗೇ. ಇವೆಲ್ಲ ಹೌದು ಅಂತಲೇ ಇಟ್ಟುಕೊಳ್ಳೋಣ. ಆದರೆ ಎಷ್ಟು ಮಂದಿ ನಿಜಕ್ಕೂ ಶಾರೂಖ್-ಸಚಿನ್ ಆಗಬಯಸುತ್ತಾರೆ ಎಂಬುದು ದೊಡ್ಡ ಪ್ರಶ್ನೆ. ಅಲ್ಲದೆ ಶಾರೂಖ್-ಸಚಿನ್ ಆಗದಿದ್ದರೆ ಬದುಕಿಗೆ ಅರ್ಥವಿಲ್ಲವೇ ಅನ್ನುವುದು ಎರಡನೆಯ ಪ್ರಶ್ನೆ. ಇನ್ಫೋಸಿಸ್ ನಂತಹ ಜಾಗತಿಕ ಮಟ್ಟದ ಸಂಸ್ಥೆ ಕಟ್ಟಿ ಬೆಳೆಸುವುದು ಹುಡುಗಾಟದ ಮಾತಲ್ಲ. ಅದರ ಸ್ಥಾಪಕರಿಗೆ ಅಂಥದೊಂದು ಕನಸು, ದೂರದೃಷ್ಟಿ, ಪರಿಶ್ರಮ ಎಲ್ಲವೂ ಇತ್ತು. ಹಾಗಂತ ಎಲ್ಲರ ಬದುಕಿನ ಗುರಿಯೂ ಅದೊಂದೇನಾ? ಇದನ್ನು ಮಾತ್ರ ಕೇಳುವವರಿಲ್ಲ.
ಯಶಸ್ಸು ಎಂದರೆ ಅರ್ಥಿಕ ಯಶಸ್ಸೊಂದೇ ಎಂಬ ಧೋರಣೆಯು ಬಂದಾಗಿನಿಂದ ಬಹುತೇಕ ಕಾರ್ಪೊರೆಟ್ ದೈತ್ಯರಿಗೆ ಈ ಧಾಟಿಯನ್ನು ಬಳಸುವುದು ಬಹಳ ಅನುಕೂಲವಾಗಿ ಬಿಟ್ಟಿದೆ. ಇಪ್ಪತ್ತೈದರ ಒಳಗೆ ಹೇಗೆ ಕೋಟ್ಯಾಧಿಪತಿ ಆಗಬಹುದು, ಮೂವತ್ತರೊಳಗೆ ಹೇಗೆ ರಿಟೈರ್ ಆಗಬಹುದು… ಇತ್ಯಾದಿಗಳ ಬಗ್ಗೆ ದಂಡಿಯಾಗಿ ವೀಡಿಯೋ-ಪುಸ್ತಕ-ಪಾಡ್ ಕಾಸ್ಟ್ ಕಾರ್ಯಕ್ರಮಗಳು ಬರುವುದರ ಜೊತೆಗೆ, ದುಡಿದಿದ್ದನ್ನು ಪೋಲು ಮಾಡಲು ಮೈಕ್ರೋ ಫೈನಾನ್ಸ್, ಕ್ರೆಡಿಟ್ ಕಾರ್ಡ್, ದಿಢೀರ್ ದುಡ್ಡಿನ ಆಮಿಷ ತೋರಿಸುವ ಪಿರಾಮಿಡ್ ಸ್ಕೀಮುಗಳ ದಾಳಿಗಳೂ ಹೆಚ್ಚಾಗಿವೆ. ಹಾಗೆ ನೋಡಿದರೆ ಇಂದು ದುಡಿಯುವುದು ಬಹಳ ಕಷ್ಟವೇನಲ್ಲ. ಆದರೆ ಜಗತ್ತಿನ ಹತ್ತಾರು ಡಿಸ್ಟ್ರಾಕ್ಷನ್ನುಗಳ ಮಧ್ಯೆ ದುಡಿದಿದ್ದನ್ನು ಉಳಿಸುವುದೇ ಸವಾಲು. ಇನ್ನು ಆದಾಯಕ್ಕಾಗಿ ಉದ್ಯೋಗವೊಂದನ್ನೇ ಅವಲಂಬಿಸಿರುವ ಈ ದೇಶದ ಬಹುದೊಡ್ಡ ಮಧ್ಯಮವರ್ಗಕ್ಕೆ ಉದ್ಯೋಗವೆಂಬುದು ಹೊಟ್ಟೆಪಾಡೂ ಹೌದು, ಅನಿವಾರ್ಯತೆಯೂ ಹೌದು. ಹೀಗಿರುವಾಗ ಈ ವರ್ಗದ ಮಂದಿಯನ್ನು ದಾಳಗಳಾಗಿ ಬಳಸಿಕೊಳ್ಳುವುದು ಕಾರ್ಪೊರೆಟ್ ಕುಳಗಳಿಗೆ ಮಹಾಕಷ್ಟದ ಸಂಗತಿಯೇನಲ್ಲ.
ಇಂದಿನ ಯುವಜನತೆ ಮೂವತ್ತೈದು-ನಲವತ್ತರೊಳಗೆ ರಿಟೈರ್ ಆಗಬೇಕು ಅಂತ ಏಕೆ ಬಯಸುತ್ತಿದೆ ಎಂಬುದನ್ನು ಅವರಲ್ಲೇ ಒಮ್ಮೆ ಕೇಳಿನೋಡಿ. ಅವರದ್ದು ಮೈಗಳ್ಳತನವೇನಲ್ಲ. ಅಸಲಿಗೆ ಇವರಲ್ಲಿ ಬಹುತೇಕರು ಈಗಾಗಲೇ ಇವೆಲ್ಲದರಿಂದ ರೋಸಿಹೋಗಿದ್ದಾರೆ. ಇನ್ನಿಲ್ಲದಂತೆ ಸುಸ್ತು ಹೊಡೆದಿದ್ದಾರೆ. ಇಂಗ್ಲಿಷ್ ನಲ್ಲಿ ಇದಕ್ಕೆ “Burn Out” ಎಂಬ ಚಂದದ ಪದವಿದೆ. ಕುಟುಂಬದ ಸದಸ್ಯರ ಅವಾಸ್ತವಿಕ ಅಭಿಲಾಷೆಗಳು, ಓರಗೆಯವರ ಮಧ್ಯೆ ದೊಡ್ಡವನೆನಿಸಿಕೊಳ್ಳುವ ಸಾಮಾಜಿಕ ಒತ್ತಡ, ಮುಗಿಯದ ಸಾಲದ ಕಂತುಗಳು, ವ್ಯಕ್ತಿಯೊಬ್ಬನ ಸಾಮರ್ಥ್ಯವನ್ನು ಮೀರಿ ನೀಡಲಾಗುವ ಆಫೀಸ್ ಡೆಡ್ಲೈನ್ ಗಳು, ಮಂಜೂರಾಗದ ರಜೆಗಳು, ಇರುವ ಒಂದು ಉದ್ಯೋಗವನ್ನು ಉಳಿಸಿಕೊಳ್ಳುವ ಆತಂಕ, ಕಿತ್ತು ತಿನ್ನುವ ವಿಧವಿಧದ ತೆರಿಗೆಗಳು, ಕಂಗಾಲಾಗಿಸುವ ವಿಪರೀತ ಖರ್ಚುಗಳು… ಹೀಗೆ ಈ ಮಂದಿಯ ತಲೆಬಿಸಿಗಳು ಒಂದೆರಡಲ್ಲ.
ಅಷ್ಟಕ್ಕೂ ಉದ್ಯೋಗಿಯೊಬ್ಬನನ್ನು ಜೀತದಾಳಿನಂತೆ ದುಡಿಸಿಕೊಳ್ಳುವುದು ಯಾವ ಷಡ್ಯಂತ್ರಕ್ಕೂ ಕಮ್ಮಿಯಿಲ್ಲ. ಈ ಬಗೆಯ ಜೀವನಶೈಲಿಯು ವ್ಯಕ್ತಿಯೊಬ್ಬನನ್ನು ಯಾವ ಮಟ್ಟಿಗೆ ಗಾಣದೆತ್ತಿನಂತೆ ಪರಿವರ್ತಿಸುತ್ತದೆ ಎಂದರೆ ಆ ವ್ಯಕ್ತಿಗೆ ಸ್ವಂತಕ್ಕೂ, ತನ್ನ ಕುಟುಂಬಕ್ಕೂ, ತನ್ನ ವೈಯಕ್ತಿಕ ಬೆಳವಣಿಗೆಗೂ ಸಮಯವನ್ನೇ ಉಳಿಸುವುದಿಲ್ಲ. ಹೀಗಿರುವಾಗ ಉದ್ಯೋಗ ಮಾರುಕಟ್ಟೆಯ ಹೊಸ ಅವಕಾಶಗಳಿಗೆ ತೆರೆದುಕೊಳ್ಳುವುದು, ಅವುಗಳಿಗಾಗಿ ಸಿದ್ಧನಾಗುವುದು ಹಾಗಿರಲಿ. ಇರುವ ಪರಿಸ್ಥಿತಿಯನ್ನು ಮಟ್ಟಸವಾಗಿ ಬ್ಯಾಲೆನ್ಸ್ ಮಾಡುವುದೇ ದೊಡ್ಡ ಸವಾಲು ಎಂಬಂತಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಬಹುಬೇಗನೆ ಕಾಂಪ್ರೊಮೈಸ್ ಆಗಿಬಿಡುವುದು ನಿದ್ದೆ, ಆಹಾರಶೈಲಿ ಮತ್ತು ನೆಮ್ಮದಿ. ಸರಳವಾಗಿ, ಒಂದೇ ಪದದಲ್ಲಿ ಹೇಳುವುದಾದರೆ ಆರೋಗ್ಯ.
ನಾವಿಂದು ಮುಕ್ತವಾಗಿ ಮಾತಾಡದಿರುವ ಸತ್ಯವೆಂದರೆ ಬರ್ನ್ ಔಟ್ ಆಗಿರುವ ಈ ಮಂದಿ ತಮ್ಮ ಒತ್ತಡಗಳನ್ನು ನೀಗಿಕೊಳ್ಳಲು ಯಾವ್ಯಾವ ಅಡಿಕ್ಷನ್ನುಗಳ ದಾಸರಾಗಿದ್ದಾರೆ ಎಂಬುದು. ಇದು ಮದ್ಯಪಾನ-ಧೂಮಪಾನ-ಡ್ರಗ್ಸ್ ಗಳಿಂದ ಹಿಡಿದು, ಕಾಫಿ/ಟೀ-ಸ್ಮಾರ್ಟ್‌ಫೋನ್ ಬಳಕೆ-ವಿಪರೀತ ಜಂಕ್ ಫುಡ್ ತಿನ್ನುವುದು-ಪೋರ್ನೋಗ್ರಫಿ ವೀಕ್ಷಣೆ ಹೀಗೆ ಹತ್ತಾರು ವ್ಯಸನಗಳವರೆಗೆ ಬಂದಿದೆ. ನನಗೆ ಗೊತ್ತಿರುವ ಹಲವಾರು ವಿದ್ಯಾವಂತ ಮಂದಿ ದಿನಕ್ಕೆ ಐದಾರು ತಾಸುಗಳ ಕಾಲ ಒಟಿಟಿಗಳಲ್ಲಿ ಸಿನೆಮಾ-ವೆಬ್ ಸೀರೀಸುಗಳನ್ನು ನಿತ್ಯವೂ ಸಮ್ಮೋಹಿತರಾದಂತೆ ವೀಕ್ಷಿಸುತ್ತಾರೆ. ಬಿಡುವಿಲ್ಲದ ಸ್ಮಾರ್ಟ್‌ಫೋನ್ ಬಳಕೆಯಿಂದಾಗಿ ಕಣ್ಣು-ಕತ್ತು-ಭುಜಗಳಲ್ಲಿ ಇಲ್ಲದ ನೋವುಗಳನ್ನು ಆಹ್ವಾನಿಸಿಕೊಂಡಿದ್ದಾರೆ. ಏಕಾಗ್ರತೆಯ ಕೊರತೆ, ತಲೆನೋವು, ನಿದ್ರಾಹೀನತೆಯಿಂದಲೂ ಬಳಲುತ್ತಿದ್ದಾರೆ. ಹಿಂದೆಲ್ಲ ನಾವು ಹೆಚ್ಚೆಂದರೆ “ಟೆನ್ಷನ್” ಆಗುತ್ತಿದೆ ಅನ್ನುತ್ತಿದ್ದೆವು. ಆದರೆ ಈಗ ಆ ಸ್ಥಾನವನ್ನು “ಸ್ಟ್ರೆಸ್” ಅಥವಾ “ಡಿಪ್ರೆಷನ್” ಪದಗಳು ಗಿಟ್ಟಿಸಿಕೊಂಡಿವೆ. ಹಿಂದೆಲ್ಲ ಸಾಮಾನ್ಯವಾಗಿ ಮಧ್ಯವಯಸ್ಸಿನಲ್ಲಿ ಬರುತ್ತಿದ್ದ ಕಾಯಿಲೆ-ಕಸಾಲೆಗಳನ್ನು ಇಪ್ಪತ್ತು-ಮೂವತ್ತರ ಹಂತಕ್ಕೇ ಅಂಟಿಸಿದ ಕುಖ್ಯಾತಿಯು ಇವರೆಲ್ಲರಿಗೆ ಸಲ್ಲಬೇಕು.
ಇತ್ತೀಚೆಗೆ ಖ್ಯಾತ ಉದ್ಯಮಿಯೊಬ್ಬರು ಮಾತನಾಡುತ್ತಾ “ವರ್ಕ್-ಲೈಫ್ ಬ್ಯಾಲೆನ್ಸ್ ಅನ್ನುವುದು ಒಂದು ಭ್ರಮೆ. ಯಶಸ್ಸು ನಿಮ್ಮದಾಗಬೇಕಿದ್ದರೆ ದುಡಿಯುತ್ತಲೇ ಇರಿ” ಎಂದಿದ್ದರು. ಅವರ ಪಟ್ಟಿಯಲ್ಲಿರುವ, ವ್ಯಾಖ್ಯಾನಕ್ಕೆ ಬರುವ “ಯಶಸ್ಸು” ಒಂದು ಬಗೆಯದ್ದಾಗಿರಬಹುದು. ಆದರೆ ಅದು ಎಲ್ಲರ ಪಾಲಿಗೂ ಸತ್ಯ ಎಂಬ ಪೂರ್ವಾಗ್ರಹ ಮಾತ್ರ ಮೂರ್ಖತನವಾಗಿ ಬಿಡುತ್ತದೆ. ಅಲ್ಲದೆ ಇದನ್ನು ಹೆಚ್ಚು ಬಾರಿ ಹೇಳಿಕೊಂಡಷ್ಟು ಅದು ಎಲ್ಲರ ಸತ್ಯವೂ ಆಗಿಬಿಡುತ್ತದೆ ಎಂಬ ಚಾಣಾಕ್ಷ ಲೆಕ್ಕಾಚಾರವೂ ಇಲ್ಲಿದೆ. ದುರಾದೃಷ್ಟವಶಾತ್ ಸಮೂಹಸನ್ನಿಯಂತಿರುವ ಈ ಚಿಂತನಾಶೈಲಿಯು ಒಂದು ಮಟ್ಟಿಗೆ ಫಲಿಸಿರುವುದು ಕೂಡ ಸತ್ಯ.
ಹೀಗೆ ದುಡಿಮೆ-ಯಶಸ್ಸಿನ ಬಗ್ಗೆ ಉಪದೇಶ ಮಾಡುವ ಸಂಸ್ಥೆಗಳ ಮುಖ್ಯಸ್ಥರು ತಾಸುಗಳ ಲೆಕ್ಕಾಚಾರ ಮಾಡದೆ ನಿಷ್ಠೆಯಿಂದ ದುಡಿಯುವ ಅದೆಷ್ಟು ಉದ್ಯೋಗಿಗಳಿಗೆ ಅವಶ್ಯಕ ಸೌಲಭ್ಯಗಳು, ಭತ್ಯೆಗಳು, ವೇತನ ಹೆಚ್ಚಳ, ವಿಮೆಗಳು, ಉದ್ಯೋಗ ಭದ್ರತೆಗಳನ್ನು ನೀಡಿದ್ದಾರೆ ಎಂಬುದನ್ನು ಮಾತ್ರ ಬಾಯಿತಪ್ಪಿಯೂ ಹೇಳುವುದಿಲ್ಲ. ಈ ಸತ್ಯಗಳು ಸಿಗುವುದು ಗುಸುಗುಸು “ಆಫ್-ದ-ರೆಕಾರ್ಡ್” ಮಾತುಕತೆಗಳಲ್ಲಿ ಮಾತ್ರ. ನಮ್ಮ ನಡುವಿನ ಬಹುತೇಕ ಪ್ರತಿಷ್ಠಿತ ಸಂಸ್ಥೆಗಳು ತಮ್ಮ ಯೂನಿಯನ್ನುಗಳನ್ನು ಹಲ್ಲು ಕಿತ್ತ ಹಾವಿನಂತಾಗಿಸಿದ ಬಳಿಕ ಇಂದು ಉದ್ಯೋಗಿಗಳ ಪರವಾಗಿ ಮಾತಾಡುವವರೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಗಳು ಮತ್ತಷ್ಟು ಬಲಿಷ್ಠವಾಗಿರುವುದರಲ್ಲಿ ಅಚ್ಚರಿಯಿಲ್ಲ.
ಉದ್ಯೋಗಿಗಳ ದಿನನಿತ್ಯದ ಜೀವನವನ್ನು ಹೈರಾಣಾಗಿಸುತ್ತಾ, ವರ್ಷಕ್ಕೊಮ್ಮೆ ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಶಿಬಿರವನ್ನು ಆಯೋಜಿಸುವ ಅತಿಬುದ್ಧಿವಂತಿಕೆಯ ನಡೆಯು ವಿರೋಧಾಭಾಸ ಮತ್ತು ಆಷಾಢಭೂತಿತನದ್ದು. ಬೂಟಾಟಿಕೆಯ ಇಂತಹ ಸರ್ಕಸ್ಸುಗಳನ್ನು ದೊಡ್ಡವರೆನಿಸಿಕೊಂಡವರು ತಕ್ಷಣ ಬಿಡಬೇಕು. ದೇಹ-ಮನಸ್ಸಿಗೆ ಅಗತ್ಯವಾಗಿ ಬೇಕಿರುವ ವಿಶ್ರಾಂತಿಯನ್ನು ಮೈಗಳ್ಳತನ ಎಂದು ಹೀಗಳೆಯುವ, ಎವರೇಜ್ ಅನ್ನುವುದನ್ನು ಮೀಡಿಯೋಕರ್ ಎಂದು ಹಂಗಿಸುವ, ಸಂತೃಪ್ತಿಯ ಭಾವವನ್ನು ಅಲ್ಪತೃಪ್ತಿ ಎಂಬಂತೆ ಬಿಂಬಿಸುತ್ತಿರುವ ವಿಚಿತ್ರ ಕಾಲಮಾನದಲ್ಲಿ ನಾವಿಂದು ಬದುಕುತ್ತಿದ್ದೇವೆ. ಉದ್ಯೋಗದ ಹೆಸರಿನಲ್ಲಿ ಜೀತ ಮಾಡಿಸುವುದು ಅಕ್ಷಮ್ಯ ಅಪರಾಧವೆಂಬುದನ್ನು ಹೇಳಿಕೊಡಲು ಬ್ರಹ್ಮಜ್ಞಾನವೂ ಬೇಕಾಗಿಲ್ಲ, ದೀಪಿಕಾ ಪಡುಕೋಣೆಯೂ ಬರಬೇಕಿಲ್ಲ. ಇದಕ್ಕೆ ಒಂದಿಷ್ಟು ಮಾನವೀಯತೆ, ಹಿಡಿಯಷ್ಟು ಸಾಮಾನ್ಯಪ್ರಜ್ಞೆ ಮತ್ತು ನೈಜತೆಯ ಅರಿವಿದ್ದರೆ ಸಾಕು.
ಕಾರ್ಪೊರೆಟ್ ಶಕ್ತಿಗಳು ತಮ್ಮ ಅವಶ್ಯಕತೆ, ಆದ್ಯತೆಗಳಿಗೆ ತಕ್ಕಂತೆ ಆಯಾಕಾಲಕ್ಕೆ ಮಾತನಾಡುತ್ತವೆ. ನಮ್ಮ ಅವಶ್ಯಕತೆ, ಆದ್ಯತೆಗಳೇನೆಂಬುದು ನಮಗೆ ಗೊತ್ತಿರಬೇಕು. ಅದಕ್ಕೆ ತಕ್ಕಂತೆ ಬದುಕನ್ನು ಕಟ್ಟಿಕೊಳ್ಳಬೇಕು. ಒತ್ತಡವು ಬದುಕಿನ ಅವಿಭಾಜ್ಯ ಅಂಗವೆಂಬ ಸುಳ್ಳನ್ನು ನಮಗಾಗಿ ತೇಲಿಸಿದ ಮತ್ತು ಈಗಲೂ ಸತತವಾಗಿ ತೇಲಿಸುತ್ತಿರುವ ಶಕ್ತಿಗಳ ಕಪಿಮುಷ್ಟಿಯಿಂದ ನಮ್ಮ ಪೀಳಿಗೆಯ ಮಂದಿ ಇನ್ನಾದರೂ ನಿಧಾನವಾಗಿ ಹೊರಬರಬೇಕಿದೆ. ಇದು ನಮ್ಮ ಆಯ್ಕೆಯಷ್ಟೇ ಅಲ್ಲ, ಹಕ್ಕೂ ಹೌದು.
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.
ಇದನ್ನೂ ಓದಿ- http://ವಾರಾಂತ್ಯ ಬಂತೆಂದರೆ… https://kannadaplanet.com/when-the-weekend-comes/