RCB ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಮುಂದಿನ ಪರಿಣಾಮಗಳಿಗೆ ನಾವು ಹೊಣೆಯಲ್ಲ : ಕರವೇ ನಾರಾಯಣಗೌಡ

Most read

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಫ್ರಾಂಚೈಸಿ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿಯಲ್ಲಿ ಪುಟವನ್ನು ತೆರೆದಿದೆ. ಇದು ಯಾವ ಕಾರಣಕ್ಕೆ ಎಂದು ಅವರು ಸ್ಪಷ್ಟಪಡಿಸಬೇಕು. ಕನ್ನಡಿಗರ ಮೇಲೆ ಹಿಂದಿ ಗುಲಾಮಗಿರಿಯನ್ನು ಹೇರುವುದು ಅವರ ಉದ್ದೇಶವಾಗಿದ್ದರೆ  ಕರ್ನಾಟಕ ಬಿಟ್ಟು ತೊಲಗಲಿ. ನಿಮ್ಮ ಅವಶ್ಯಕತೆ ನಮಗಿಲ್ಲ‌ ಎಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಆಕ್ರೋಶ ಹೊರಹಾಕಿದ್ದಾರೆ.

ಆರ್‌ಸಿಬಿಯನ್ನು ಕನ್ನಡಿಗರು ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದಿದ್ದಾರೆ. ಆರ್ ಸಿಬಿಗೆ ಇರುವಷ್ಟು ಅಭಿಮಾನಿಗಳು ಇನ್ಯಾವ ತಂಡಕ್ಕೂ ಇಲ್ಲ‌. ಹೀಗಾಗಿಯೇ ಅದರ ಆದಾಯ ವರ್ಷವರ್ಷಕ್ಕೂ ಹೆಚ್ಚುತ್ತಲೇ ಇದ್ದು, ಒಮ್ಮೆಯೂ ಕಪ್ ಗೆಲ್ಲದಿದ್ದರೂ ಮೂರನೇ ಶ್ರೀಮಂತ ತಂಡವಾಗಿದೆ. ಇದಕ್ಕೆ ಕಾರಣ ಕನ್ನಡಿಗರು ಎಂಬುದನ್ನು ಅದು ಮರೆತಿದೆಯೇ  ಎಂದು ಪ್ರಶ್ನಿಸಿದ್ದಾರೆ.

ಆರ್ ಸಿಬಿ ಹಿಂದಿಯಲ್ಲಿ ಪುಟವನ್ನು ತೆರೆಯುವ ಮೂಲಕ ಕನ್ನಡಿಗರನ್ನು ಅಪಮಾನಿಸುತ್ತಿದೆ. ತಂಡದಲ್ಲಿ ಇತರ ರಾಜ್ಯಗಳ ಆಟಗಾರರಿದ್ದಾರೆ ಎಂಬ ಕಾರಣಕ್ಕೆ, ಹೊರರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ ಎಂಬ ಕಾರಣಕ್ಕೆ ಹಿಂದಿಯಲ್ಲಿ ಪುಟ ತೆರೆದಿರುವುದಾದರೆ, ದೇಶದ ಎಲ್ಲ ಭಾಷೆಗಳಲ್ಲೂ ಪುಟ ತೆರೆಯಬೇಕಿತ್ತು. ಹಿಂದಿಯಲ್ಲಿ ಮಾತ್ರ ಯಾಕೆ ತೆರೆದರು? ಎಂದು ಕಿಡಿಕಾರಿದ್ದಾರೆ.

ಆರ್ ಸಿಬಿ ಫ್ರಾಂಚೈಸಿ ನಡೆಸುತ್ತಿರುವವರಿಗೆ ಹಿಂದಿಯೇ ಅತಿಪ್ರಿಯವಾಗಿದ್ದರೆ ಹಿಂದಿ ರಾಜ್ಯಗಳಿಗೆ ವಲಸೆ ಹೋಗಲಿ, ಬೆಂಗಳೂರು ಎಂಬ ಹೆಸರನ್ನು ಕೈಬಿಡಲಿ. ಕನ್ನಡಿಗರ ಆದರ, ಆತಿಥ್ಯ, ಅಭಿಮಾನವನ್ನು ಗಳಿಸಿ ಕನ್ನಡಿಗರ ಬೆನ್ನಿಗೆ ಚೂರಿ ಇರಿಯುವ ಕೆಲಸವನ್ನೇಕೆ ಮಾಡುತ್ತಿದ್ದಾರೆ?. ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಆರ್ ಸಿಬಿ ಐದಾರು ಕನ್ನಡಿಗರನ್ನು ಖರೀದಿಸುವ ನಿರೀಕ್ಷೆ ಅಭಿಮಾನಿಗಳಿಗಿತ್ತು. ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಖರೀದಿಸಿ ನಾಯಕನನ್ನಾಗಿಸುವ ಅವಕಾಶವೂ ಆರ್ ಸಿಬಿಗೆ ಇತ್ತು. ಆದರೆ ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಅವಕಾಶಗಳನ್ನು ಕೈಚೆಲ್ಲಲಾಯಿತು ಎಂದು ಹೇಳಿದ್ದಾರೆ.

ಕರ್ನಾಟಕ ಪರವಾಗಿ ಆಡುತ್ತಿರುವ ಹಲವಾರು ಪ್ರತಿಭಾವಂತ ಆಟಗಾರರನ್ನು ಆರ್ ಸಿಬಿ ಮೊದಲಿನಿಂದಲೂ ನಿರ್ಲಕ್ಷಿಸುತ್ತ ಬಂದಿದೆ. ಈ ಬಾರಿಯೂ ಅದೇ ಆಗಿದೆ. ದೇವದತ್ತ ಪಡಿಕ್ಕಲ್, ಮನೋಜ್ ಬಾಂಡಗೆ ಹೊರತುಪಡಿಸಿ ಯಾವ ಕನ್ನಡಿಗರನ್ನೂ ಖರೀದಿಸುವ ಮನಸು ಮಾಡಲಿಲ್ಲ. 25 ಆಟಗಾರರ ಪೈಕಿ 22 ಆಟಗಾರರನ್ನು ಖರೀದಿ ಮಾಡಲಾಗಿದೆ. ಬಾಕಿ ಉಳಿದಿರುವ ಇನ್ನು ಮೂರು ಸ್ಥಾನಗಳಿಗಾದರೂ ಕನ್ನಡಿಗ ಆಟಗಾರರನ್ನೇ ಖರೀದಿಸಬೇಕು. ಸಾಮಾಜಿಕ ಜಾಲತಾಣಗಳಿಂದ ಈ ಕೂಡಲೇ ಹಿಂದಿ ಪುಟಗಳನ್ನು ಅಳಿಸಿಹಾಕಬೇಕು. ಇಲ್ಲವಾದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಕನ್ನಡಿಗರ ಪ್ರೀತಿ, ಅಭಿಮಾನಗಳಿಂದ ಆರ್ ಸಿಬಿ ಬೆಳೆದಿದೆ. ಆದರೆ ಅದು ಮಾಡಿರುವ ವಿಶ್ವಾಸಘಾತಕತನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದು ತನ್ನ ತಪ್ಪುಗಳನ್ನು ಈ ಕೂಡಲೇ ತಿದ್ದಿಕೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ತೀವ್ರ ಸ್ವರೂಪದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಮುಂದಿನ ಪರಿಣಾಮಗಳಿಗೆ ನಾವು ಹೊಣೆಯಲ್ಲ ಎಂದು ಎಚ್ಚರಿಸುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣವಾದ ʼಎಕ್ಸ್‌ʼ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

More articles

Latest article