ಬೆಂಗಳೂರು: ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ತ್ಯಾಗರಾಜನಗರದ ಶಾಲೆಯೊಂದರ ಮುಖ್ಯಸ್ಥ ಹಾಗೂ ಕಾಂಗ್ರೆಸ್ ಮುಖಂಡ ಡಾ.ಗುರಪ್ಪ ನಾಯ್ಡು ಅವರ ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನವೆಂಬರ್ 26ರಂದು ನಾಯ್ಡು ಅವರು ನಡೆಸುತ್ತಿರುವ ಶಾಲೆಯ ಶಿಕ್ಷಕಿಯೊಬ್ಬರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಿಕ್ಷಕಿಯ ಹೇಳಿಕೆಯನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಶಿಕ್ಷಕಿಯರೂ ಸೇರಿದಂತೆ 75ಕ್ಕೂ ಹೆಚ್ಚು ಮಹಿಳೆಯರು ಆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಗುರಪ್ಪ ನಾಯ್ಡು ಕೆಲವು ಶಿಕ್ಷಕಿಯರು ಹಾಗೂ ಸಿಬ್ಬಂದಿಯ ಗಮನಕ್ಕೆ ಬಾರದಂತೆ ಬೆತ್ತಲೆ ಹಾಗೂ ಅಶ್ಲೀಲ ವಿಡಿಯೊಗಳನ್ನು ಚಿತ್ರೀಕರಿಸಿಕೊಂಡು ಇಟ್ಟುಕೊಂಡಿದ್ದಾರೆ. ಇವುಗಳನ್ನು ಇಟ್ಟುಕೊಂಡು ಮಹಿಳಾ ಉದ್ಯೋಗಿಗಳನ್ನು ಹೆದರಿಸುತ್ತಿದ್ದಾರೆ. ಹೇಳಿದ ಹಾಗೆ ನಡೆದುಕೊಳ್ಳದಿದ್ದರೆ ವಿಡಿಯೊ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಹೆಣ್ಣು ಮಕ್ಕಳನ್ನು ಲೈಂಗಿಕ ತೃಷೆಗೆ ಬಳಸಿಕೊಂಡಿದ್ದಾರೆ ಎಂದು ಶಿಕ್ಷಕಿ ದೂರಿನಲ್ಲಿ ವಿವರಿಸಿದ್ದಾರೆ.
ಈ ಹಿಂದೆಯೇ ಗುರಪ್ಪ ನಾಯ್ಡು ಅವರ ವಿರುದ್ಧ ದೂರು ನೀಡಲು ಕೆಲವು ಶಿಕ್ಷಕಿಯರು ಹಾಗೂ ಸಿಬ್ಬಂದಿ ನಿರ್ಧರಿಸಿದ್ದೆವು. ಆದರೆ, ಗುರಪ್ಪ ನಾಯ್ಡು ಪ್ರಭಾವಿ ಹಾಗೂ ಆರ್ಥಿಕವಾಗಿ ಬಲಾಡ್ಯರಾಗಿದ್ದು ಅವರನ್ನು ಎದುರಿಸುವುದು ಕಷ್ಟ ಎಂದು ಸುಮ್ಮನಿದ್ದೆವು ಎಂದೂ ದೂರಿನಲ್ಲಿ ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ. 2021ರಿಂದ 2023ರವರೆಗೆ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಗುರಪ್ಪ ನಾಯ್ಡು ಅವರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಲೈಂಗಿಕ ಚಟುವಟಿಕೆಗೆ ಪ್ರಚೋದಿಸಿ ತಮ್ಮ ಕಚೇರಿಯಲ್ಲಿ ಕೈಹಿಡಿದು ಎಳೆದಾಡಿದ್ದರು. ನಾನು ಗೌರವಸ್ಥ ಕುಟುಂಬದಿಂದ ಬಂದಿದ್ದೇನೆ. ಸಭ್ಯವಾಗಿ ವರ್ತಿಸಬೇಡಿ ಎಂದು ಹೇಳಿದಾಗ ನನ್ನ ಮೇಲೆಯೇ ಕೋಪ ಮಾಡಿಕೊಂಡಿದ್ದರು. ಬೂಟಿನಲ್ಲಿ ಹೊಡೆಯುತ್ತೇನೆಂದು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಘಟನೆಯಿಂದ ನಾನು ಆಘಾತಕ್ಕೆ ಒಳಗಾಗಿದ್ದೇನೆ. ಆಘಾತದಿಂದ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿದ್ದೇನೆ ಎಂದು ದೂರುದಾರರು ತಿಳಿಸಿದ್ದಾರೆ.