ಬೆಂಗಳೂರು: ಯಶವಂತ ಎಂಬ ವ್ಯಕ್ತಿ ಮಧ್ಯರಾತ್ರಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಕಿರುತೆರೆ ನಟಿ ದೀಪಿಕಾ ದಾಸ್ ಅವರ ತಾಯಿ ಪದ್ಮಲತಾ ತುಮಕೂರು ರಸ್ತೆಯ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಎಂಟು ತಿಂಗಳ ಹಿಂದೆ ಚಲನಚಿತ್ರ ಮತ್ತು ಕಿರುತೆರೆ ನಟಿಯಾಗಿರುವ ನನ್ನ ಮಗಳು ದೀಪಿಕಾ ದಾಸ್ ಗೆ ದೀಪಕ್ ಕುಮಾರ್ ಎಂಬುವರ ಜತೆ ವಿವಾಹವಾಗಿದೆ. ಇಬ್ಬರೂ ತಿಂಗಳ ಹಿಂದೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದಾರೆ. ಈಗ ಪರಿಚಯವೇ ಇಲ್ಲದ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ನಿಮ್ಮ ಮಗಳಿಗೆ ಮದುವೆ ಮಾಡಿದ್ದು ಏಕೆ? ಅಳಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಜನರಿಗೆ ಮೋಸ ಮಾಡಿದ್ದಾರೆ ಎಂದು ಬೆದರಿಕೆ ಹಾಕಿದ್ದ. ಒಂದು ವೇಳೆ ನನ್ನ
ಅಳಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ದೂರು ನೀಡಬಹುದು ಎಂದು ನಾನು ಹೇಳಿದ್ದೆ ಎಂದು ಪದ್ಮಾಲತಾ ದೂರಿನಲ್ಲಿ ತಿಳಿಸಿದ್ದಾರೆ.
ಕೆಲವು ದಿನಗಳ ನಂತರ ದೀಪಿಕಾಗೆ ಕರೆ ಮಾಡಿದ್ದ ಇದೇ ವ್ಯಕ್ತಿ ನಿಮ್ಮ ಪತಿ ಮೋಸ ಮಾಡಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೆ ಎಂದು ಪ್ರಶ್ನಿಸಿ ಪುನೀತ್ ರಾಜ್ ಕುಮಾರ್ ಸಮಾಧಿ ಬಳಿ ಬಂದು ಆಣೆ ಮಾಡಬೇಕು ಎಂದು ಒತ್ತಾಯಿಸಿದ್ದ. ಕಾನೂನು ರೀತಿ ದೂರು ನೀಡುವಂತೆಯೂ ನನ್ನ ಮಗಳು ಹೇಳಿದ್ದಳು. ಹಣ ನೀಡದೆ ಇದ್ದರೆ ನಿಮ್ಮ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ವ್ಯಕ್ತಿ ನನ್ನ ಮಗಳು ಮತ್ತು ಅಳಿಯನ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾನೆ. ಪದೇ ಪದೇ ಫೋನ್ ಹಣಕ್ಕೆ ಬೇಡಿಕೆ ಇಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸುತ್ತಿದ್ದಾನೆ. ಆದ್ದರಿಂದ ಯಶವಂತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.