ಬಳ್ಳಾರಿ: ಈಗ ಬಳ್ಳಾರಿ ಜನ ಶಾಂತಿಯಿಂದ ಬದುಕುತ್ತಿದ್ದಾರೆ. ಅಂಥಹ ಕಾಲ ಈಗ ಬಂದಿದೆ. ಹಿಂದೆ ಇಲ್ಲಿನ ಜನ ದೊಡ್ಡ ದೊಡ್ಡ ಕಷ್ಟಗಳನ್ನು ಎದುರಿಸಿದ್ದಾರೆ. ಒಳ್ಳೆಯ ಕಾಲಕ್ಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸಂಡೂರು ತಾಲೂಕಿನ ತೋರಣಗಲ್ನ ತಿಮ್ಮಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ. ಅನ್ನಪೂರ್ಣ ಪರವಾಗಿ ಮಂಗಳವಾರ ಪ್ರಚಾರ ನಡೆಸಿದ ಅವರು ಮಾತನಾಡಿದರು. ರಾಜ್ಯ ದೇಶಕ್ಕೆ ಕಾಂಗ್ರೆಸ್ ಕನಿಷ್ಠ ಸೇವೆಯನ್ನಾದರೂ ಮಾಡಿದೆ. ಅದಕ್ಕೆ ಕೂಲಿ ಕೇಳುತ್ತಿದ್ದೇವೆ. ಸಿಂಗಪುರ ಮಾಡುತ್ತೇವೆ, ನ್ಯೂಯಾರ್ಕ್ ಮಾಡುತ್ತೇವೆ, ಬೀಜಿಂಗ್ ಮಾಡುತ್ತೇವೆ ಎಂದು ಹೇಳುತ್ತಿಲ್ಲ. ಆದ್ದರಿಂದ ಪ್ರಯೋಜನವೂ ಆಗುವುದಿಲ್ಲ. ನೀವು ನೆಮ್ಮದಿಯಾಗಿರುವುದಷ್ಟೇ ಮುಖ್ಯ ಎಂದು
ಹೇಳಿದರು.
ನಮ್ಮ ಸರ್ಕಾರ ಬಂದ ಮೇಲೆ ಪೊಲೀಸರಿಂದ ಕಿರುಕುಳ ಆಗುತ್ತಿದೆಯೇ, ರೌಡಿಗಳಿಂದ ಕಿರುಕುಳ ಇದೆಯೇ, ಯಾವುದಾದರೂ ತೊಂದರೆ ಇದೆಯೇ ಎಂದು ಪ್ರಶ್ನಿಸಿ ಬಳ್ಳಾರಿ ಜನ ಶಾಂತಿಯಿಂದ ಬದುಕುತ್ತಿದ್ದಾರೆ. ಅಂಥಹ ಕಾಲ ಈಗ ಬಂದಿದೆ. ಎಷ್ಟೋ ಜನ ಎಲ್ಲವನ್ನೂ ಮಾರಿಕೊಂಡು ದೊಡ್ಡ ದೊಡ್ಡ ಕಷ್ಟ ಅನುಭವಿಸಿದರು. ಯಾಕೆ ಕಷ್ಟ ಬಂತು ಎಂಬುದರ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ. ಕಾಂಗ್ರೆಸ್ಗೆ ಮತ ನೀಡಬೇಕು ಎಂದು ಮಾತ್ರ ಕೇಳುತ್ತೇನೆ ಎಂದು ಹೇಳಿದರು.
ಗ್ಯಾರಂಟಿಯಂತಹ ಜನಪರ ಕಾರ್ಯಕ್ರಮವನ್ನು ಕೊಡಲು ಬಿಜೆಪಿಗಾಗಲಿ, ಯಡಿಯೂರಪ್ಪ ಅವರಿಗಾಗಲಿ, ಅವರ ಮಗ ವಿಜಯೇಂದ್ರ ಅವರಿಗಾಗಲಿ, ಜನಾರ್ದನ ರೆಡ್ಡಿಗಾಗಲಿ ಸಾಧ್ಯವಾಗಿಲ್ಲ ಎಂದೂ ಅವರು ಹೇಳಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, ರಾಜ್ಯದಲ್ಲಿ ಶಾಂತಿ ಕೆಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಅವರ ಕಣ್ಣು ಗುಡ್ಡದ ಮೇಲೆ
ಬಿದ್ದಿದೆ. ಹಿಂದೆ ಗುಡ್ಡದ ಮೇಲೆ ಕಣ್ಣು ಹಾಕಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಜನ ಜಾಗೃತರಾಗಿರಬೇಕು ಎಂದು ಎಚ್ಚರಿಸಿದರು.
ನಾವು ಸಂಡೂರನ್ನು ಬೀಜಿಂಗ್, ನ್ಯೂಯಾರ್ಕ್ ಮಾಡುವುದಿಲ್ಲ. ಎಲ್ಲರಿಗೂ ಉದ್ಯೋಗ, ಮೂಲಕಸೌಕರ್ಯ ಸಿಗಬೇಕು ಎನ್ನುವುದು ಮಾತ್ರ ನಮ್ಮ ಗುರಿ ಎಂದು ಅವರು ಹೇಳಿದರು.