ಕಲರ್ಸ್ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ 11 ಕಾರ್ಯಕ್ರಮದಲ್ಲಿ ಮಹಿಳೆಯರ ಸಾಂವಿಧಾನಿಕ ಹಕ್ಕುಗಳನ್ನು ದಮನ ಮಾಡಿ ಸಾರ್ವಜನಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂಧು ಅರೋಪಿಸಿದ ವಕೀಲೆ ರಕ್ಷಿತಾ ಪಿ ಸಿಂಗ್ ಅವರು ಕರ್ನಾಟಕ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ದೂರಿನಲ್ಲಿ, ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಖ್ಯಾತ ಚಲನಚಿತ್ರ ನಟ ಸುದೀಪ್ ಅವರು ನಿರೂಪಣೆ ಮಾಡುವ ಬಿಗ್ ಬಾಸ್ 11 ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಪುರುಷ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಬಿಗ್ ಬಾಸ್ 11ರ ಕಾರ್ಯಕ್ರಮದಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ವಿಚಾರದ ಮೇಲೆ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಭಾರತದ ನಾಗರಿಕರನ್ನು ಖಾಸಗಿ ವ್ಯಕ್ತಿಗಳು ಬಂಧನದಲ್ಲಿರಿಸುವ ಹಕ್ಕನ್ನು ಹೊಂದಿರುವುದಿಲ್ಲ ಎಂಧು ಆರೋಪಿಸಿದ್ದಾರೆ.
ಮುಂದುವರೆದು, ಪ್ರಸ್ತುತ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಪುರುಷ ಮತ್ತು ಮಹಿಳೆಯರನ್ನು ಒಂದು ಜೈಲಿನ ರೂಪದಲ್ಲಿರುವ ಬಂದಿಖಾನೆಯಂತಹ ಕೊಠಡಿಯಲ್ಲಿ ನೂರಾರು ಕ್ಯಾಮರಗಳಲ್ಲಿ ರೆಕಾರ್ಡ್ ಆಗುವಂತೆ ಅಕ್ರಮಬಂಧನದಲ್ಲಿ ಇರಿಸಲಾಗಿದೆ. ಇವರಿಗೆ ಕೇವಲ ಗಂಜಿಯನ್ನು ಆಹಾರವಾಗಿ ನೀಡಲಾಗುತ್ತಿರುವುದು ಸಂವಿಧಾನ ಪ್ರಕಾರ ನಾಗರಿಕರಿಗೆ ಪೌಷ್ಟಿಕ ಆಹಾರವನ್ನು ಕೊಡದಿರುವುದು ಅಪರಾಧವಾಗುತ್ತದೆ. ಅದರಲ್ಲೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಲಗುವ ವ್ಯವಸ್ಥೆ ನೀಡದೆ ಅವರನ್ನು ದೈಹಿಕ ಬಾದೆ ತೀರಿಸಿಕೊಳ್ಳಲು ಮತ್ತೊಬ್ಬರ ಅನುಮತಿ ಮೇರೆಗೆ ಶೌಚಾಲಯ ಉಪಯೋಗಿಸಲು ಬಲವಂತಕ್ಕೆ ಒಳಪಡಿಸುವುದು ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಿಗ್ ಬಾಸ್ 11ರ ಕಾರ್ಯಕ್ರಮದಲ್ಲಿ ಸ್ಪರ್ಧಿಗಳೊಂದಿಗೆ ಕಾನೂನು ಬದ್ಧವಾಗಿ ಒಪ್ಪಂದ ಮಾಡಿಕೊಂಡಿದ್ದು ಇಂತಹ ನಿರ್ಬಂಧಗಳನ್ನು ಹೇರುವುದು ಸಂವಿಧಾನ ಬಾಹಿರ. ಮಹಿಳೆಯರಿಗೆ ಸೂಕ್ತ ಸೌಲಭ್ಯಗಳನ್ನು ನೀಡದೆ ಆಹಾರ ನಿರಾಕರಿಸುವ ಮೂಲಕ ಅವರ ಹಕ್ಕುಗಳನ್ನು ದಮನ ಮಾಡುತ್ತಿರುವ ಬಿಗ್ ಬಾಸ್ 11ರ ಕಾರ್ಯಕ್ರಮ ನಿರ್ವಹಿಸುತ್ತಿರುವ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.