ಬೆಂಗಳೂರು: ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಟೀಕೆ ಮಾಡುತ್ತಿರುವ ಬಿಜೆಪಿಗರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಈದ್ಗ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಜಮೀರ್, “ಧ್ವಜಾರೋಹಣ ಮಾಡುವುದು ನನ್ನ ಸೌಭಾಗ್ಯ. ಬಿಜೆಪಿಯಿಂದ ನಾನು ದೇಶಾಭಿಮಾನ ಕಲಿಯಬೇಕಿಲ್ಲ. ಸ್ವಾತಂತ್ರ್ಯ ಯಾರಿಂದ ಬಂದಿದೆ ಎಂಬುದು ದೇಶಕ್ಕೆ ಗೊತ್ತಿದೆ. ನಾನು ಹಿಂದೂಸ್ತಾನಿ, ಕನ್ನಡಿಗ” ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಧ್ವಜಾರೋಹಣಕ್ಕೆ ಅವಕಾಶ ಸಿಕ್ಕಿತ್ತು. ಆದರೆ ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಇದೀಗ ಉಸ್ತುವಾರಿ ಜವಾಬ್ದಾರಿ ಬೇಡ ಎಂದು ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ತಮ್ಮ ಬದಲಿಗೆ ಬಸವಂತಪ್ಪ ಅವರಿಗೆ ಧ್ವಜಾರೋಹಣಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದೆ. ಈ ಕುರಿತು ಈ ಹಿಂದೆಯೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೆ ಎಂದು ಜಮೀರ್ ಅಹ್ಮದ್ ವಿವರಿಸಿದ್ದಾರೆ.
ಈ ವಿಚಾರವನ್ನು ಮುಂದಿಟ್ಟುಕೊಂಡು ತಮ್ಮನ್ನು ದೇಶದ್ರೋಹಿ ಎಂದು ಬಿಂಬಿಸುವ ಪ್ರಯತ್ನಕ್ಕೆ ಪ್ರತಿಕ್ರಿಯಿಸಿದ ಅವರು, “ನಾನು ಹಿಂದೂಸ್ತಾನಿ, ಕನ್ನಡಿಗ” ಎಂದು ಹೇಳುವ ಮೂಲಕ ತಮ್ಮ ದೇಶಭಕ್ತಿಯನ್ನು ಸಮರ್ಥಿಸಿಕೊಂಡಿದ್ದಾರೆ.

