ಏನೇ ಆಗಲಿ ಭಾರತದಲ್ಲಿ ಹಿಂದೂ ಮುಸ್ಲಿಂ ವೈರತ್ವ ಅಂತ್ಯವಾಗಲಿ. ಇವರು ನಮ್ಮವರಲ್ಲ ಎಂದು ಭಾವಿಸದೆ ಎಲ್ಲರೂ ಒಂದಾಗೋಣ. ಭಾವೈಕ್ಯತೆಯ ಬೆಳದಿಂಗಳನ್ನು ಚೆಲ್ಲುತ್ತಾ ಸ್ವಸ್ಥ ಸಮಾಜ ಕಟ್ಟೋಣ. ಯಾವುದೇ ಹಬ್ಬಗಳು ಎಲ್ಲರ ಹಬ್ಬಗಳಾಗಲಿ. ಇದು ಭಾರತದ ಸಜ್ಜನ ಮನಸ್ಸುಗಳ ಅಂತರಂಗದ ನಿರಂತರ ಅಭಿಲಾಷೆ – ರೋಶ್ನಿ ಅನಿಲ್ ರೊಜಾರಿಯೊ, ಬಜ್ಪೆ.
ಭರತ ಭೂಮಿ ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಸಮಸ್ತ ದೇಶಗಳ ಮುಸಲ್ಮಾನ್ ಬಾಂಧವರಿಗೆ ನಿಷ್ಠೆಯ ಮತ್ತು ಕಟ್ಟುನಿಟ್ಟಿನ ರಂಜಾನ್ ಉಪವಾಸ ಮುಗಿದು ಇಂದು ಸಂತೋಷದ ಈದುಲ್ ಫಿತ್ರ್. ರಂಜಾನ್ ….. ರಮದಾನ್ ಇಸ್ಲಾಮಿಕ್ ಕ್ಯಾಲೆಂಡರ್ನ ಅತ್ಯಂತ ಪವಿತ್ರ ತಿಂಗಳು. ಮನುಷ್ಯ ತನ್ನ ಅಹಂಕಾರವನ್ನು ಅಳಿಸಿ, ದೇವರಿಗೆ ಹತ್ತಿರವಾಗುವ ಆಧ್ಯಾತ್ಮಿಕ ಪಯಣವಾಗಿದೆ ಈ ರಂಜಾನ್ ಮಾಸ.
ರಂಜಾನ್ ಮಾಸದಲ್ಲಿ ಮುಸಲ್ಮಾನರು ಮುಂಜಾನೆಯಿಂದ ಸಂಜೆಯವರೆಗೆ ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನೀರು, ಆಹಾರ ಸೇವಿಸದೆ ಆತ್ಮಶುದ್ಧಿ, ದೇವರ ಮೇಲಿನ ಭಕ್ತಿಯನ್ನು ಹೆಚ್ಚಿಸುವ ಸಲುವಾಗಿ ಕಠಿಣ ಉಪವಾಸ ಆಚರಿಸುತ್ತಾರೆ.
ರಂಜಾನ್ ಉಪವಾಸ ಆರೋಗ್ಯದಿಂದಿರುವ ಎಲ್ಲಾ ವಯಸ್ಕರಿಗೆ ಕಡ್ಡಾಯವಾಗಿದೆ. ರೋಗಿಗಳಿಗೆ, ದೈಹಿಕವಾಗಿ ಸಬಲರಲ್ಲದವರಿಗೆ, ಗರ್ಭಿಣಿ ಬಾಣಂತಿಯರಿಗೆ, ಮಾನಸಿಕ ಸ್ಥಿಮಿತವಿಲ್ಲದವರಿಗೆ, ವೃದ್ಧರಿಗೆ ಪ್ರೌಢಾವಸ್ಥೆಯನ್ನು ತಲಪಿಲ್ಲದ ಮಕ್ಕಳಿಗೆ ಉಪವಾಸದಿಂದ ವಿನಾಯಿತಿ ಇದೆ. ಆದರೆ ಮಕ್ಕಳು ಚಿಕ್ಕವಯಸ್ಸಿನಿಂದಲೇ ಸಾಧ್ಯವಾದಷ್ಟು ಹೆಚ್ಚು ಉಪವಾಸಗಳನ್ನು ಹಿಡಿಯುವ ಮೂಲಕ ಮುಂದಿನ ದಿನಗಳಲ್ಲಿ ಉಪವಾಸವಿರಲು ತರಬೇತಿ ಪಡೆಯುವುದನ್ನು ಇಸ್ಲಾಂ ಬೆಂಬಲಿಸುತ್ತದೆ. ಪ್ರತೀದಿನ ಸೂರ್ಯಸ್ತವಾದೊಡನೆ ಉಪವಾಸವನ್ನು ಅಂತ್ಯಗೊಳಿಸುವ ಇಫ್ತಾರ್ ಭೋಜನ ಸೇವಿಸುತ್ತಾರೆ.

ಇತ್ತೀಚಿನ ವರುಷಗಳಲ್ಲಿ ಇಫ್ತಾರ್ ಭೋಜನಕ್ಕೆ ಧರ್ಮಗಳನ್ನು ಮೀರಿ ಜನರು ಸಾಮೂಹಿಕವಾಗಿ ಒಂದಾಗುತ್ತಿರುವುದನ್ನು ನೋಡಿ ಸಂತಸವಾಗುತ್ತದೆ. ಇದುವೇ ನಿಜವಾದ ಧರ್ಮ ಅಂತನಿಸುತ್ತದೆ. ರಂಜಾನ್ ತಿಂಗಳು ಮುಸಲ್ಮಾನರಿಗೆ ಪ್ರಾರ್ಥನೆ ಮಾಡುವ ಮಾತ್ರವಲ್ಲ ದಾನ ಮಾಡುವ ಸದವಕಾಶದ ಸಮಯ. ರಂಜಾನ್ ಮಾಸದ ಅಂತ್ಯದಲ್ಲಿ ಬರುವ ಅಮಾವಾಸ್ಯೆಯ ಮರುದಿನ ಕನಿಷ್ಠ ಇಬ್ಬರು ಮಾನಸಿಕ ಸ್ಥಿಮಿತವಿರುವ ವಯಸ್ಕರು ತಮ್ಮ ಕಣ್ಣಾರೆ ನೋಡಿದ ಚಂದ್ರ ದರ್ಶನದ ಸಾಕ್ಷಿಯೊಂದಿಗೆ ರಂಜಾನ್ ಉಪವಾಸ, ಈದ್-ಉಲ್-ಫಿತರ್ ಹಬ್ಬ ಸಂತಸ ಸಡಗರ ಸಂಭ್ರಮದೊಂದಿಗೆ ಆಚರಿಸಲ್ಪಡುತ್ತದೆ.
ಶಾಂತಿ, ಸೌಹಾರ್ದತೆ ಮತ್ತು ಭಕ್ತಿಯ ಸಂಕೇತವಾದ ರಂಜಾನ್ ಹಿಂದಿದೆ ಒಂದು ಐತಿಹಾಸಿಕ ಘಟನೆ. ಸುಮಾರು ಕ್ರಿ.ಶ. 610 ರಲ್ಲಿ, ಪ್ರವಾದಿ ಮುಹಮ್ಮದ್ ಅವರಿಗೆ ಮಕ್ಕಾದ ಹತ್ತಿರದ ಹಿರಾ ಗುಹೆಯಲ್ಲಿ ಧ್ಯಾನ ಮಾಡುತ್ತಿದ್ದಾಗ ಒಂದು ರಾತ್ರಿ ದೇವದೂತ ಜಿಬ್ರೀಲ್ ಮೂಲಕ ಮೊದಲ ದೈವಿಕ ಸಂದೇಶ ಲಭಿಸಿತು.
ಆ ರಾತ್ರಿಯೇ ಇಸ್ಲಾಂನ ಪವಿತ್ರ ಗ್ರಂಥವಾದ ಕುರಾನ್ ಮಾನವಕುಲಕ್ಕೆ ಸರ್ವಕಾಲಿಕ ಮಾರ್ಗದರ್ಶನವಾಗಿ ಅವತರಿಸಿತು ಎಂದು ನಂಬಲಾಗಿದೆ. ಮುಂದಿನ ದಿನಗಳಲ್ಲಿ ಅದು ಲಿಖಿತ ರೂಪಕ್ಕೆ ಬಂತು.
ರಂಜಾನ್ ಸಮಯದಲ್ಲಿ ಕುರಾನ್ ಓದುವ ಮೂಲಕ ಮಾಡುವ ಪ್ರಾರ್ಥನೆಯು ಇಡೀ ಜೀವಿತಾವಧಿಯಲ್ಲಿ ಮಾಡುವ ಪ್ರಾರ್ಥನೆಗಿಂತ ಹೆಚ್ಚಿನ ಪ್ರತಿಫಲವನ್ನು ನೀಡುತ್ತದೆ ಎಂದು ಮುಸಲ್ಮಾನರು ನಂಬುತ್ತಾರೆ.
‘ಓ ಅಲ್ಲಾಹನೇ, ನನ್ನನ್ನೂ ಸೇರಿದಂತೆ, ಅರಿತೋ ಅರಿಯದೆಯೋ ಮಾಡುವ ಎಲ್ಲರ ತಪ್ಪುಗಳನ್ನು ಮನ್ನಿಸು, ಎಲ್ಲರಿಗೂ ಒಳಿತನ್ನೇ ಮಾಡು. ದಯೆ, ಧರ್ಮ, ದಾನದ ಮೂಲಕ ಶಾಂತಿ, ಸಮೃದ್ಧಿಯ ವಾತಾವರಣ ನಿರ್ಮಿಸು’ ಎನ್ನುವ ಬೇಡಿಕೆಯನ್ನು ದೇವರಲ್ಲಿ ಅರಿಕೆ ಮಾಡುವ ಮಹತ್ವದ ಪ್ರಾರ್ಥನೆಯನ್ನು ಕುರಾನ್ ಒಳಗೊಂಡಿದೆ.
ಅರಬ್ಬೀ ಭಾಷೆಯಲ್ಲಿ ರಂಜಾನ್ ಅಂದರೆ ಸುಡುವುದು ಎಂದರ್ಥ. ದ್ವೇಷ ಪಾಪ ಕೋಪಗಳನ್ನು ಸುಡಬೇಕೆಂದು ರಂಜಾನ್ ಉಪವಾಸ ಪ್ರತಿಪಾದಿಸಿದ ಕುರಾನ್ ಹೇಳುತ್ತದೆ, ಅಷ್ಟೇ ಅಲ್ಲ ರಂಜಾನ್ ತಿಂಗಳಲ್ಲಿ ಬಡವರಿಗೆ, ದೀನ ದುರ್ಬಲರಿಗೆ ಕಡ್ಡಾಯವಾಗಿ ದಾನ ಮಾಡಿ ಪವಿತ್ರರಾಗಬೇಕು ಎಂದು ಪವಿತ್ರ ಕುರಾನ್ ಗ್ರಂಥದ ಸಂದೇಶ ನೀಡುತ್ತದೆ. ಕುರಾನ್ ನಲ್ಲಿ ಅನ್ಯ ಧರ್ಮದ್ವೇಷಗಳನ್ನು ಹೇಳಿಕೊಡಲಾಗಿದೆ, ಹಿಂಸಾಚಾರ ಪ್ರಚೋದಿಸಲಾಗಿದೆ ಎಂದು ಹೇಳುವವರಿಗೆ ತಲೆ ಸರಿ ಇಲ್ಲ ಅಷ್ಟೇ.
ನಮ್ಮ ರಾಷ್ಟ್ರಕವಿ ಕುವೆಂಪು ‘ಸರ್ವಜನಾಂಗಗಳ ಶಾಂತಿಯ ತೋಟ’ ಎಂದು ಭಾವದುಂಬಿ ಹೇಳಿದ ಬಹುತ್ವದ ಭಾರತ, ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ ಜೈನ ಸಿಖ್ ಪಾರಸಿಕ ಹಲವು ಧರ್ಮಗಳ ತವರೂರು. ಸಂಸ್ಕೃತಿ ಶಾಂತಿ ಸೌಹಾರ್ದತೆಗಳ ಬೀಡು.
ಧರ್ಮಗಳಿದ್ದರೇ ದೇಶ ಸುಸ್ಥಿರ. ಒಂದು ದೇಶದೊಳಗೆ ಎಲ್ಲಾ ಧರ್ಮದ ಜನಗಳಿಗೆ ವಾಸಿಸಲು ಅವಕಾಶವಿದೆ ಎಂದರೆ ಅದು ಜಾಗತಿಕ ಮಟ್ಟದಲ್ಲಿ ಅಪಾಯದಿಂದ ಒಂದು ಮೆಟ್ಟಿಲು ದೂರ. ಇಂದು ಹೆಚ್ಚಿನ ಎಲ್ಲಾ ದೇಶಗಳಲ್ಲಿ ಎಲ್ಲಾ ಧರ್ಮಗಳು ನೆಲೆ ನಿಂತರೂ ಯುದ್ಧಗಳು, ಭಯೋತ್ಪಾದನೆಗಳು ಕೊನೆಯಾಗಿಲ್ಲ. ಅಂತಿರುವಾಗ ಒಂದು ದೇಶದಲ್ಲಿ ಒಂದೇ ಒಂದು ಧರ್ಮ ನೆಲೆ ನಿಂತರೆ ಏನಾಗಬಹುದು ಯೋಚಿಸಿ. ಅದಕ್ಕಾಗಿ ವಿವಿಧ ಧರ್ಮಗಳು ಬೇಕು. ಎಲ್ಲಾ ದೇಶಗಳಲ್ಲಿ ಎಲ್ಲಾ ಧರ್ಮದವರು ನೆಲೆ ನಿಲ್ಲಬೇಕು. ಅಂತಹ ಅವಕಾಶಗಳು ಇರಬೇಕು.
ಆರಾಧನೆ, ಪ್ರಾರ್ಥನೆ, ಧ್ಯಾನ, ಆಧ್ಯಾತ್ಮಿಕತೆಯ ಮೂಲಕ ಸನ್ಮಾರ್ಗದಲ್ಲಿ ನಡೆಸುವ, ಸರಿ ತಪ್ಪುಗಳ ಜ್ಞಾನ ನೀಡುವ, ವೈವಿಧ್ಯತೆಗಳಲ್ಲಿ ಏಕತೆಯನ್ನು ಎತ್ತಿಹಿಡಿಯುವ, ಸಾಮಾಜಿಕ ಸಾಮರಸ್ಯ, ಪರಸ್ಪರ ಗೌರವ, ಪ್ರೀತಿ, ಸಹಿಷ್ಣುತೆಯನ್ನು ಬೋಧಿಸುವ, ಶಿಸ್ತು, ಸಹಬಾಳ್ವೆಯನ್ನು ಕಲಿಸುವ ಧರ್ಮಗಳು ದೇಶದ ಮತ್ತು ಸಮಾಜದ ನೈತಿಕತೆ, ಶಾಂತಿ, ನೆಮ್ಮದಿ ಮಾನವೀಯ ಮೌಲ್ಯಗಳನ್ನು ಕಾಪಾಡಲು ಅವಶ್ಯ ಬೇಕೇ ಬೇಕು.
ಜೀವನದ ಅತ್ಯಂತ ಕಷ್ಟದ ಸಮಯದಲ್ಲಿ ಧರ್ಮ ಮತ್ತು ದೈವಿಕ ನಂಬಿಕೆಗಳು ಮನುಷ್ಯನಿಗೆ ಆಶಾಭಾವ ಮತ್ತು ಧೈರ್ಯವನ್ನು ನೀಡಲು ಬೇಕು. ಧರ್ಮಗಳ ಉದ್ದೇಶವೇ ಮನುಜ ಕಲ್ಯಾಣ ಸಾಮಾಜಿಕ ಬಾಂಧವ್ಯ. ದೇವರಿದ್ದಾರೋ ಗೊತ್ತಿಲ್ಲ, ಆದರೆ ಮನುಷ್ಯನನ್ನು ಮೃಗೀಯ ಪ್ರವೃತ್ತಿಯಿಂದ ಮಾನವೀಯತೆಗೆ ಕೊಂಡೊಯ್ಯುಯುವ ಕೊಂಡಿಯೇ ಧರ್ಮ.
ಕೆಲವು ಧರ್ಮಗಳನ್ನು ಸ್ವತ: ಮಾನವ ಪುಣ್ಯಪುರುಷರು ಸ್ಥಾಪಿಸಿದ್ದಾದರೆ, ಇನ್ನು ಕೆಲವು ಧರ್ಮಗಳು ನಂಬಿಕೆಯಿಂದಲೇ ಹುಟ್ಟಿಕೊಂಡಿವೆ. ಜನರು ಅ ಪುಣ್ಯ ಪುರುಷರನ್ನೇ ದೇವರೆಂದು ನಂಬಿದ್ದಾರೆ, ಇನ್ನು ಕೆಲವರು ಮಾನವರಚಿತ ಗ್ರಂಥಗಳಿಂದ ದೇವರಿದ್ದಾರೆ ಎಂದು ನಂಬಿದ್ದಾರೆ.
ಆದರೆ ಒಂದು ಮಾತ್ರ ಸತ್ಯ.
ಯಾವ ಧಾರ್ಮಿಕ ಗ್ರಂಥಗಳೂ ದೇವರ ಪೂಜೆ ಮಾಡಿದರೆ ಮಾತ್ರ ಅನ್ನ ನೀರು ಗಾಳಿ ಬೆಳಕು ಕೊಟ್ಟು ದೇವರು ಸಾಕುತ್ತಾರೆ ಎಂದಿಲ್ಲ. ಜೈವಿಕ ವಾದ ಬೇರೇ ಇದ್ದರೂ, ಪರಮಾತ್ಮ ಹುಟ್ಟಿಸಿದ ಎಂದೇ ನಂಬುವ ಪ್ರತೀ ಜೀವಿಗೂ ಜಗತ್ತಿನಲ್ಲಿ ಆಹಾರ ಮತ್ತೆಲ್ಲವೂ ನೈಸರ್ಗಿಕವಾಗಿ ಇದ್ದೇ ಇದೆ. ದೇವರನ್ನು ನಂಬುವವರಿಗೆ ಹೆಚ್ಚು ಅನ್ನ ನೀರು ಗಾಳಿ ಬೆಳಕು…. ದೇವರನ್ನು ನಂಬದವರಿಗೆ, ನಿಂದನೆ ಮಾಡುವವರಿಗೆ ಕಡಿಮೆ ಎಂಬ ಭೇದ ಇಲ್ಲ. ದೇವರನ್ನು ನಿಂದಿಸುವವರೂ ಪೊಗದಸ್ತಾಗಿ ತಿಂದು ಸುಖವಾಗಿಯೇ ಇದ್ದಾರೆ.
ಧರ್ಮ ಎಂದರೆ ಹಿಂದೂಗಳಿಗೆ ನೆನಪಾಗಬೇಕು ಶ್ರೀರಾಮ. ತನ್ನ ಜೀವಿತಾವಧಿಯಲ್ಲಿ ನೋವು ಸಂಕಟ ಅನುಭವಿಸಿದರೂ ಒಂದು ಹೆಜ್ಜೆಯೂ ತಪ್ಪದೇ ಧರ್ಮದ ನಡೆಯಲ್ಲೇ ನಡೆದು ಕೊನೆಗೆ ಗೆಲುವನ್ನು ಪಡೆದ…ತನ್ನ ರಾಜ್ಯದ ಪ್ರಜೆಗಳನ್ನೆಲ್ಲಾ ತನ್ನ ಮಕ್ಕಳಂತೆ ನೋಡಿಕೊಂಡ.
ಶ್ರೀಕೃಷ್ಣನೂ ಒಂದೇ ಧರ್ಮದ ದಾಯಾದಿಗಳ ಕದನದಲ್ಲಿ ನಿಂತು ದುರ್ಜನರ ಅಂತ್ಯಗೊಳಿಸಲು ಸಹಾಯ ಮಾಡಿ ಸಜ್ಜನರನ್ನು ಉಳಿಸಿ ಮಾನವ ಧರ್ಮ ಪಾಲಿಸಿದ.
ಧರ್ಮವೆಂದರೆ ಕ್ರಿಶ್ಚಿಯನ್ನರು ನಂಬಬೇಕು ಯೇಸುಕ್ರಿಸ್ತನನ್ನು. ಮಾನವ ಕುಲದ ಉದ್ಧಾರಕ್ಕೆ ಹೋಗಿ ತನ್ನ ಧರ್ಮದವರಿಂದಲೇ ಶಿಲುಬೆಯ ಮರಣದಂಡನೆಗೆ ಬಲಿಯಾದರೂ ಅವರನ್ನೆಲ್ಲ ಕ್ಷಮಿಸು ಎಂದು ಮಾನವ ಧರ್ಮ ಮೆರೆದ ಆದರ್ಶಮಾನವ.
ಮುಸಲ್ಮಾನರು ಅನುಸರಿಸಬೇಕು ಮಹಮ್ಮದ್ ಪೈಗಂಬರ್ ಅವರನ್ನು.
ಅವರು ಅರೇಬಿಯಾದಲ್ಲಿದ್ದ ವಿಗ್ರಹಾರಾಧನೆ, ಹೆಣ್ಣು ಮಕ್ಕಳ ಶೋಷಣೆ, ತಾರತಮ್ಯ, ಸಾಮಾಜಿಕ ಅಸಮಾನತೆಯನ್ನು ನಿರ್ಮೂಲನೆ ಮಾಡಿ, ನ್ಯಾಯಯುತ ಸಮಾಜವನ್ನು ನಿರ್ಮಿಸಿದವರು. ಅವರು ನಮ್ಮ ಶ್ರೀರಾಮ ಯೇಸುಕ್ರಿಸ್ತರಂತೆ, ರಾಜಾ ಸತ್ಯ ಹರಿಶ್ಚಂದ್ರನಂತೆ ಅತ್ಯಂತ ಸತ್ಯವಂತ, ಕರುಣಾಮಯಿ, ವಿನಯಶೀಲ ಮತ್ತು ದಯೆಯ ಮೂರ್ತಿಯಾಗಿದ್ದರು. ಶತ್ರುಗಳಿಗೂ ಕ್ಷಮೆ ನೀಡುವ ಗುಣವನ್ನು ಹೊಂದಿದ್ದರು. ಸಾಮಾಜಿಕ ನ್ಯಾಯ, ಕರುಣೆ ಸಮಾನತೆಯನ್ನು ಪ್ರತಿಪಾದಿಸಿದ ಆದರ್ಶಪುರುಷರು.

ಮಹಮ್ಮದ್ ಪೈಗಂಬರ್ ಅವರು ತಮಗೆ ಲಭಿಸಿದ ದೈವಿಕ ಸಂದೇಶವನ್ನು ಕುರಾನ್ ಮೂಲಕ ಇಸ್ಲಾಂ ಧರ್ಮದ ಅನುಯಾಯಿಗಳಿಗೆ ನೀಡದೇ ಹೋಗಿದ್ದರೆ ಇಂದು ಇಸ್ಲಾಂ ಧರ್ಮ, ಕಟ್ಟರ್ ಮೂಲಭೂತವಾದಿಗಳ ಕಬಂಧ ಬಾಹುಗಳಲ್ಲಿ ಬಂಧಿಯಾಗಿ ಯಾವ ದಾರಿ ಹಿಡಿಯುತ್ತಿತ್ತೋ? ಆ ದಯಾಳು ಮಹಮ್ಮದ್ ಪೈಗಂಬರ್ ಅವರನ್ನು ಈ ಹೊತ್ತು ನೆನಪಿಸಿಕೊಳ್ಳುವೆ. ಭಾರತದಲ್ಲಿ ಮುಸುಲ್ಮಾನರನ್ನು ದ್ವೇಷಿಸುವ ಕಟ್ಟಾ ಹಿಂದುತ್ವವಾದಿಗಳು, ಶತಶತಮಾನಗಳಿಂದ ಜಾಗತಿಕವಾಗಿ ಮುಸುಲ್ಮಾನರೆಂದರೆ ತಮ್ಮ ಶತ್ರುಗಳೆಂದು ತಿಳಿದಿರುವ ಕ್ರಿಶ್ಚಿಯನ್ ಸಂಪ್ರದಾಯವಾದಿಗಳು ಇದನ್ನು ತಿಳಿದುಕೊಳ್ಳಬೇಕು.
ಭಾರತ ದೇಶದೊಳಗಿನ ಕೊಲೆ ಅತ್ಯಾಚಾರಗಳ ವಿಷಯಕ್ಕೆ ಬಂದರೆ ಮುಸ್ಲಿಂ ಧರ್ಮದವರಿಗಿಂತಲೂ ಭಾರತದಲ್ಲಿ ಅತ್ಯಾಚಾರ ಕೊಲೆಗಳು ಹಿಂದೂ ಧರ್ಮೀಯರಿಂದಲೇ ಆಗುತ್ತಿರುವುದು ಹೆಚ್ಚು. ಸಮಾಜ ತಜ್ಞರ ಪ್ರಕಾರ ವಾರ್ಷಿಕ ಸರಾಸರಿಯನ್ನು ದಿನದ ಲೆಕ್ಕಚಾರದಲ್ಲಿ ತೆಗೆಯುವಾಗ ಒಂದು ದಿನಕ್ಕೆ ಭಾರತದಲ್ಲಿ 85 ಕೊಲೆಗಳು 90 ಅತ್ಯಾಚಾರಗಳು. ಅದೂ ಹಿಂದೂ ಮೇಲ್ವರ್ಗದವರಿಂದ ತಮ್ಮದೇ ಧರ್ಮದ ದಲಿತ, ಹಿಂದುಳಿದ ಶೂದ್ರ ಸಮುದಾಯ, ಆದಿವಾಸಿ, ಬುಡಕಟ್ಟು ಜನಾಂಗದವರ ಮೇಲೆ ಬರ್ಬರ ಕ್ರೌರ್ಯಗಳು. ಕ್ಷಮಿಸಿ. ಆದರೆ ಇದು ಭಾರತದಲ್ಲಿನ ವಾಸ್ತವ ಸತ್ಯ. ಅಷ್ಟೊಂದು ಪ್ರಮಾಣದಲ್ಲಿ ಮುಸಲ್ಮಾನರಿಂದ ಅತ್ಯಾಚಾರ, ಕೊಲೆಗಳು ನಡೆಯುವುದಾಗಿದ್ದರೆ ಇಂದು ಭಾರತದಲ್ಲಿ ಮುಸಲ್ಮಾನರಿಗೆ ಉಳಿಗಾಲವೇ ಇರುತ್ತಿರಲಿಲ್ಲ. ಇದೊಂದನ್ನು ಯೋಚಿಸಿ ಅಷ್ಟು ಸಾಕು.
ನಾವೇ ದಾರಿ ತಪ್ಪಿದರೆ ನಮ್ಮ ಮಕ್ಕಳನ್ನು ಹೇಗೆ ತಿದ್ದಲು ಸಾಧ್ಯ? ಅನ್ಯ ಧರ್ಮದ್ವೇಷದಿಂದ ರಕ್ತ ಮೆತ್ತಿದ ಕೈಗಳು ಮುಂದೊಂದು ದಿನ ತಮ್ಮದೇ ಧರ್ಮದವರನ್ನು, ಮತ್ತೆ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಕುಟುಂಬದವರನ್ನು, ತಂದೆ ತಾಯಿಯಂದಿರನ್ನು, ಒಡಹುಟ್ಟಿದವರನ್ನು ಕೊಲ್ಲಲು ಹಿಂದೆ ಮುಂದೆ ನೋಡದಿರರು ಅನ್ನುವುದು ಕೇವಲ ಕಲ್ಪನೆಯಾಗಿ ಉಳಿಯದು. ರಕ್ತ ಹರಿಸುವ ಪ್ರವೃತ್ತಿ ನಮ್ಮ ಮಕ್ಕಳಲ್ಲಿ ಬೆಳೆದು ಬಂದರೆ ಮುಂದೆ ಏನಾದೀತು? ನಾಳೆ ನಮ್ಮ ಮಕ್ಕಳು ಜೈಲಿನ ಕಂಬಿಗಳ ಒಳಗೆ ಬಂಧಿಯಾದರೆ ನೋಡುವ ಸಂಕಟ ಯಾರಿಗೆ ಬೇಕು?
ಏನೇ ಆಗಲಿ ಭಾರತದಲ್ಲಿ ಹಿಂದೂ ಮುಸ್ಲಿಂ ವೈರತ್ವ ಅಂತ್ಯವಾಗಲಿ. ಇವರು ನಮ್ಮವರಲ್ಲ ಎಂದು ಭಾವಿಸದೆ ಎಲ್ಲರೂ ಒಂದಾಗೋಣ. ಭಾವೈಕ್ಯತೆಯ ಬೆಳದಿಂಗಳನ್ನು ಚೆಲ್ಲುತ್ತಾ ಸ್ವಸ್ಥ ಸಮಾಜ ಕಟ್ಟೋಣ. ಯಾವುದೇ ಹಬ್ಬಗಳು ಎಲ್ಲರ ಹಬ್ಬಗಳಾಗಲಿ. ಇದು ಭಾರತದ ಸಜ್ಜನ ಮನಸ್ಸುಗಳ ಅಂತರಂಗದ ನಿರಂತರ ಅಭಿಲಾಷೆ.
ರೋಶ್ನಿ ಅನಿಲ್ ರೊಜಾರಿಯೊ, ಬಜ್ಪೆ
ಹವ್ಯಾಸಿ ಬರಹಗಾರ್ತಿ
ಇದನ್ನೂ ಓದಿ- http://‘ಜ್ಞಾನಪೀಠ’ದ ಸುತ್ತ ವಿವಾದದ ಹುತ್ತ https://kannadaplanet.com/controversy-surrounds-jnanpith/


