ಹೆಣ್ಣನ್ನು ಗೌರವಿಸುವುದೇ ಸಂಸ್ಕೃತಿಯೆಂದಾದರೆ, ಅವಳನ್ನು ಪ್ರೀತಿಸುವುದನ್ನು ಅಪಹಾಸ್ಯ ಮಾಡುವ ಮನಸ್ಥಿತಿಗೆ ಸಂಸ್ಕೃತಿಯ ಪಾಠ ಹೇಳುವ ಹಕ್ಕಾದರೂ ಇದೆಯೇ? ಈ ದ್ವಂದ್ವದ ಬಗ್ಗೆ ಸಮಾಜ ಒಮ್ಮೆ ಗಂಭೀರವಾಗಿ ಯೋಚಿಸಬೇಕಿದೆ. ಪ್ರೀತಿಯನ್ನು ಸಹಿಸಿಕೊಳ್ಳಲಾಗದವರು ಸಂಸ್ಕೃತಿಯ ಬಗ್ಗೆ ಮಾತನಾಡುವುದಾದರೂ ಏಕೆ? – ಶೈಲಜಾ H M. ಗಂಗಾವತಿ, ಸಮಾಜ ಚಿಂತಕಿ.
ಸೋನಿಯಾ ಗಾಂಧಿಯವರ Belonging: A Journey of Love ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ ತಮ್ಮ ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿಯವರ ನಡುವಿನ ಪ್ರೀತಿಯ ಸುಂದರ ನೆನಪೊಂದನ್ನು ಹಂಚಿಕೊಂಡರು.
ಊಟ ಮಾಡುವಾಗ ರಾಜೀವ್ ಗಾಂಧಿ ಸೋನಿಯಾ ಅವರನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಪ್ರೀತಿಯಿಂದ ಮಾತನಾಡಿಸುತ್ತಿದ್ದರಂತೆ. ಮನೆಯವರು, ಮಕ್ಕಳು ಮತ್ತು ಸಿಬ್ಬಂದಿಯ ಎದುರಲ್ಲೂ ತಮ್ಮ ಪ್ರೀತಿಯನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಿದ್ದರಂತೆ.
ಇದರಲ್ಲಿ ಅಸಭ್ಯವಾದದ್ದೇನಿದೆ?
ಗಂಡ ತನ್ನ ಹೆಂಡತಿಯನ್ನು ಪ್ರೀತಿಸುವುದು, ಆ ಪ್ರೀತಿಯನ್ನು ಮುಕ್ತವಾಗಿ ವ್ಯಕ್ತಪಡಿಸುವುದು ಯಾವ ಕಾಲದಿಂದ ಅಪರಾಧವಾಯಿತು? ಇಷ್ಟೊಂದು ಸಹಜವಾದ, ಸುಂದರವಾದ ಕೌಟುಂಬಿಕ ನೆನಪೊಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವ ವಿಷಯವಾಗಿರುವುದೇ ನಮ್ಮ ಸಮಾಜದ ರೋಗಗ್ರಸ್ತ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ಒಂದು ಕ್ಷಣ ಯೋಚಿಸಿ. ರಾಹುಲ್ ಗಾಂಧಿ ತಮ್ಮ ತಂದೆ ಮನೆಯಲ್ಲಿದ್ದಾಗ ಎಲ್ಲರೂ ಹೆದರುತ್ತಿದ್ದರು, ತಾಯಿ ಮಾತನಾಡುವ ಸ್ವಾತಂತ್ರ್ಯವೂ ಇರಲಿಲ್ಲ, ಎಲ್ಲ ನಿರ್ಧಾರಗಳನ್ನೂ ಅವರೇ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದ್ದರೆ ಅದನ್ನು ಪುರುಷನ ಗಾಂಭೀರ್ಯ, ಶಿಸ್ತು, ಕುಟುಂಬದ ಮೇಲಿನ ಹಿಡಿತ ಎಂದು ಹೊಗಳುತ್ತಿದ್ದರೇನೋ!
ಅಥವಾ,
ತಾಯಿ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಎಲ್ಲರಿಗೂ ಅಡುಗೆ ಮಾಡಿ, ಎಲ್ಲರಿಗೂ ಬಡಿಸಿ, ಕೊನೆಗೆ ಉಳಿದಿದ್ದನ್ನು ತಿನ್ನುತ್ತಿದ್ದರು ಎಂದಿದ್ದರೆ, ಅವರನ್ನು ಆದರ್ಶ ಭಾರತೀಯ ಗೃಹಿಣಿ ಎಂದು ಕೊಂಡಾಡುತ್ತಿದ್ದರೇನೋ!
ಆದರೆ, ಗಂಡ ಹೆಂಡತಿಯನ್ನು ಪ್ರೀತಿಯಿಂದ ತೊಡೆಯ ಮೇಲೆ ಕೂರಿಸಿಕೊಂಡ ನೆನಪು ಮಾತ್ರ ಇವರಿಗೆ ಅಸಹ್ಯವಾಗುತ್ತದೆ.
ಮಕ್ಕಳು ತಂದೆ-ತಾಯಿಯ ನಡುವಿನ ಸಂಬಂಧವನ್ನು ನೋಡುತ್ತಲೇ ಬೆಳೆಯುತ್ತಾರೆ. ಮನೆಯಲ್ಲಿ ಪರಸ್ಪರ ಗೌರವ, ಪ್ರೀತಿ ಮತ್ತು ಆತ್ಮೀಯತೆಯನ್ನು ಕಂಡ ಮಕ್ಕಳು ಮುಂದೆ ತಮ್ಮ ಸಂಗಾತಿಯನ್ನೂ ಅದೇ ಗೌರವದಿಂದ ಕಾಣಲು ಕಲಿಯುತ್ತಾರೆ. ಪ್ರೀತಿಯನ್ನು ಮುಚ್ಚಿಡುವುದರಿಂದ ಕುಟುಂಬದ ಘನತೆ ಹೆಚ್ಚುತ್ತದೆಯೇ?
ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುವುದರಿಂದ ಸಂಸ್ಕೃತಿ ಹಾಳಾಗುತ್ತದೆಯೇ?

ನಮ್ಮ ದೇವಾಲಯಗಳ ಶಿಲ್ಪಕಲೆಗಳನ್ನೇ ನೋಡಿ. ಶಿವನ ಮಡಿಲಲ್ಲಿ ಪಾರ್ವತಿ ಕುಳಿತಿರುವ ಶಿಲ್ಪಗಳನ್ನು ಶತಮಾನಗಳಿಂದ ಭಕ್ತಿಯಿಂದ ನೋಡುತ್ತಿದ್ದೇವೆ.
ರಾಮರಕ್ಷಾ ಸ್ತೋತ್ರದಲ್ಲಿ ಬರುವ “ವಾಮಾಂಕಾರೂಢ ಸೀತಾ ಮುಖಕಮಲಮಿಲಲ್ಲೋಚನಮ್” ಎಂಬ ಸಾಲು, ಶ್ರೀರಾಮನ ಎಡತೊಡೆಯ ಮೇಲೆ ಕುಳಿತಿರುವ ಸೀತೆಯ ಮುಖಕಮಲವನ್ನು ಪ್ರೀತಿಯಿಂದ ನೋಡುತ್ತಿರುವ ರಾಮನನ್ನು ಧ್ಯಾನಿಸುತ್ತದೆ.
ಕೆಲವು ಸಮುದಾಯಗಳ ಮದುವೆ ಸಂಪ್ರದಾಯಗಳಲ್ಲಿಯೂ ಹೆಂಡತಿಯನ್ನು ಗಂಡನ ತೊಡೆಯ ಮೇಲೆ ಕೂರಿಸಿ ಪ್ರೀತಿಯಿಂದ ಊಟ ಮಾಡಿಸುವ ಆಚರಣೆಗಳಿವೆ.
ದೇವರ ಶಿಲ್ಪದಲ್ಲಿ ಪವಿತ್ರವೆನಿಸುವ ಪ್ರೀತಿ ನೈಜ ಬದುಕಿನಲ್ಲಿ ಅಸಭ್ಯವಾಗುವುದೇಕೆ? ದೇವರ ಮಡಿಲಲ್ಲಿ ಕುಳಿತ ಪತ್ನಿ ಗೌರವಕ್ಕೆ ಅರ್ಹಳು; ಗಂಡನ ತೊಡೆಯ ಮೇಲೆ ಕುಳಿತ ಪತ್ನಿ ಅಪಹಾಸ್ಯಕ್ಕೆ ಅರ್ಹಳೇ?
ದೇವರ ಶಿಲ್ಪಗಳನ್ನು ಪೂಜಿಸುವುದಷ್ಟೇ ಭಕ್ತಿಯಲ್ಲ. ಆ ಶಿಲ್ಪಗಳು ಸಾರುವ ಪ್ರೀತಿ, ಗೌರವ ಮತ್ತು ಅನ್ಯೋನ್ಯತೆಯನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳುವುದೇ ನಿಜವಾದ ಭಕ್ತಿ.
ಮಹಿಳೆಯ ಸ್ವಾತಂತ್ರ್ಯ ಮತ್ತು ಘನತೆಯ ವಿಚಾರದಲ್ಲಿ ನಮ್ಮ ಸಮಾಜದ ಮನಸ್ಥಿತಿ ಎಷ್ಟು ವಿಚಿತ್ರವಾಗಿದೆ ಎಂಬುದಕ್ಕೆ ಮನುಸ್ಮೃತಿಯಲ್ಲಿರುವ ಈ ಶ್ಲೋಕವೇ ಸಾಕ್ಷಿ:
“ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ ।
ರಕ್ಷಂತಿ ಸ್ಥವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ॥”
ಬಾಲ್ಯದಲ್ಲಿ ತಂದೆ, ಯೌವನದಲ್ಲಿ ಗಂಡ, ವೃದ್ಧಾಪ್ಯದಲ್ಲಿ ಮಕ್ಕಳು ಮಹಿಳೆಯನ್ನು ರಕ್ಷಿಸಬೇಕು; ಮಹಿಳೆ ಸ್ವತಂತ್ರಳಾಗಿರಲು ಅರ್ಹಳಲ್ಲ ಎಂಬುದು ಇದರ ಆಶಯ. ಆದರೆ ನಮ್ಮ ಸಂವಿಧಾನ ಮಹಿಳೆಗೆ ಸಮಾನತೆ, ಸ್ವಾತಂತ್ರ್ಯ, ಘನತೆ ಮತ್ತು ತನ್ನ ಬದುಕಿನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವ ಹಕ್ಕನ್ನು ನೀಡಿದೆ. ಹಾಗಾದರೆ ನಾವು ಯಾವ ಮೌಲ್ಯಗಳನ್ನು ಅನುಸರಿಸುತ್ತಿದ್ದೇವೆ?
ತಮ್ಮ ರಾಜಕೀಯ ನಾಯಕರು ಹೆಂಡತಿಯನ್ನು ಬಾಳ ನಡುದಾರಿಯಲ್ಲಿ ಕೈಬಿಟ್ಟು ರಾಜಾರೋಷವಾಗಿ ಮರೆಯುವುದು, ಅದು ಅವರ ವೈಯಕ್ತಿಕ ಬದುಕಿನ ತ್ಯಾಗ, ವೈರಾಗ್ಯ, ನಿಸ್ವಾರ್ಥ ಸೇವೆ, ಆದರ್ಶ ನಾಯಕತ್ವ ಎಂದು ಬಣ್ಣಿಸುತ್ತಾರೆ. ಆದರೆ ಒಬ್ಬ ವ್ಯಕ್ತಿ ತನ್ನನ್ನು ನಂಬಿ ಬಂದ ಬಾಳಸಂಗಾತಿಗೆ ಪ್ರೀತಿ, ಗೌರವ ಮತ್ತು ಆತ್ಮೀಯತೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದರೆ ಅದನ್ನೇ ಅಪಹಾಸ್ಯ ಮಾಡುತ್ತಾರೆ.
ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪರಾಧಿಗಳಿಗೆ ಕ್ಷಮಾದಾನದ ಮೂಲಕ ಬಿಡುಗಡೆ ನೀಡಿದಾಗ, ಅವರನ್ನು ಹಾರ ಹಾಕಿ, ಸಿಹಿ ಹಂಚಿ ಸ್ವಾಗತಿಸಿ ಸಂಭ್ರಮಿಸಿದ ಘಟನೆ ನಮ್ಮ ಕಣ್ಣ ಮುಂದೆಯೇ ಇದೆ. 2024ರ ಜನವರಿ 8ರಂದು ಸುಪ್ರೀಂ ಕೋರ್ಟ್ ಆ ಕ್ಷಮಾದಾನ ಆದೇಶಗಳನ್ನು ರದ್ದುಪಡಿಸಿತು. ಆಗ ಅಪರಾಧಿಗಳನ್ನು ಬಹಿರಂಗವಾಗಿ ಸನ್ಮಾನ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದ್ದು ಈ ಟ್ರೋಲ್ ಪೀಳಿಗೆಗೆ ಅಸಹ್ಯ ಹುಟ್ಟಿಸಲಿಲ್ಲವೇ?
ಆದರೆ, ನಿರ್ಮಲ ಪ್ರೀತಿಯಿಂದ ಗಂಡ ಹೆಂಡತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದ ನೆನಪನ್ನು ತಂದೆಯನ್ನು ಕಳೆದುಕೊಂಡ ಮಗ ಬಹಿರಂಗವಾಗಿ ಹೇಳಿಕೊಂಡಾಗ ಈ ಅಸಭ್ಯ, ಅನಾಗರಿಕ ಮನಸ್ಥಿತಿಗೆ ಅಸಹ್ಯವಾಗುತ್ತದೆ.
ಹಾಗಾದರೆ ಸಮಾಜ ಯಾವುದನ್ನು ಅಸಹ್ಯಪಡಬೇಕು ಎಂಬುದಕ್ಕೆ ಮಾನದಂಡ ಯಾವುದು? ಹೆಣ್ಣಿನ ಮೇಲಿನ ಪ್ರೀತಿಯೇ ಅಸಹ್ಯವೇ? ಅಥವಾ ಹೆಣ್ಣಿನ ಘನತೆಗೆ ಧಕ್ಕೆ ತರುವ ಕೃತ್ಯಗಳನ್ನು ಸಂಭ್ರಮಿಸುವುದೇ ಅಸಹ್ಯವೇ?
ಹೆಣ್ಣನ್ನು ನಿಯಂತ್ರಿಸುವುದೇ ಪುರುಷತ್ವವಲ್ಲ, ಅವಳನ್ನು ಗೌರವಿಸುವುದೇ ನಿಜವಾದ ಮನುಷ್ಯತ್ವ.
ನಿಷ್ಕಾಮ ಪ್ರೀತಿಯೂ ನಮ್ಮ ಸಂಸ್ಕೃತಿಯ ಒಂದು ಭಾಗವೇ. ಅದರಲ್ಲಿ ಸ್ವಾರ್ಥವಿಲ್ಲ, ಅಧಿಕಾರದ ದರ್ಪವಿಲ್ಲ, ಅಧೀನತೆಯ ನಿರೀಕ್ಷೆಯಿಲ್ಲ. ಇರುವುದು ಕೇವಲ ಪ್ರೀತಿ, ಗೌರವ ಮತ್ತು ಆತ್ಮೀಯತೆ. ಇಂತಹ ನಿರ್ಮಲ ಪ್ರೀತಿಯನ್ನೇ ಸಹಿಸಿಕೊಳ್ಳಲಾಗದವರು ಮಹಿಳಾ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿಂದ ತಂದುಕೊಳ್ಳುತ್ತಾರೆ?
ಹೆಣ್ಣನ್ನು ಗೌರವಿಸುವುದೇ ಸಂಸ್ಕೃತಿಯೆಂದಾದರೆ, ಅವಳನ್ನು ಪ್ರೀತಿಸುವುದನ್ನು ಅಪಹಾಸ್ಯ ಮಾಡುವ ಮನಸ್ಥಿತಿಗೆ ಸಂಸ್ಕೃತಿಯ ಪಾಠ ಹೇಳುವ ಹಕ್ಕಾದರೂ ಇದೆಯೇ? ಈ ದ್ವಂದ್ವದ ಬಗ್ಗೆ ಸಮಾಜ ಒಮ್ಮೆ ಗಂಭೀರವಾಗಿ ಯೋಚಿಸಬೇಕಿದೆ. ಪ್ರೀತಿಯನ್ನು ಸಹಿಸಿಕೊಳ್ಳಲಾಗದವರು ಸಂಸ್ಕೃತಿಯ ಬಗ್ಗೆ ಮಾತನಾಡುವುದಾದರೂ ಏಕೆ?
ಶೈಲಜಾ H M. ಗಂಗಾವತಿ,
ಲೇಖಕಿ ಹಾಗೂ ಸಮಾಜ ಚಿಂತಕಿ
ಇದನ್ನೂ ಓದಿ- ರಾಜಕೀಯ ನೀಚತನಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮುಖವಾಡವೇ?


