Sunday, July 14, 2024

ಪ್ರಾಣ ಪ್ರತಿಷ್ಠಾಪನೆಗೆ ಜನವರಿ ಇಪ್ಪತ್ತೆರಡನ್ನೇ ಯಾಕೆ ಆಯ್ದು ಕೊಳ್ಳಲಾಯಿತು?

Most read

ಪ್ರಜಾಪ್ರಭುತ್ವ ತೆಗೆದು ಫ್ಯಾಸಿಸ್ಟ್ ಪ್ರಭುತ್ವ ಸ್ಥಾಪಿಸಲು ಹಾಗೂ ಅಂಬೇಡ್ಕರ್ ರವರ ಸಮಾನತಾವಾದಿ ಸಂವಿಧಾನವನ್ನು ನಿವಾರಿಸಿ ಮನುಸ್ಮೃತಿ ಆಧಾರಿತ ಸಂವಿಧಾನವನ್ನು ಜಾರಿಗೆ ತರುವ ಪ್ರಯತ್ನದ ಆರಂಭಿಕ ಲಕ್ಷಣವೇ ಧಾರ್ಮಿಕ ಉನ್ಮಾದ ತೀವ್ರಗೊಳಿಸುವುದು ಮತ್ತು ಸಂವಿಧಾನದ ಪೀಠಿಕೆಯ ತೀವ್ರತೆ ಕಡಿಮೆ ಗೊಳಿಸುವುದು. ಅದಕ್ಕಾಗಿ ಜನವರಿ 22 ನೇ ದಿನಾಂಕವೇ ರಾಮಮಂದಿರದ ಉದ್ಘಾಟನೆಗೂ ಹಾಗೂ ಸಂವಿಧಾನದ ಅವನತಿಗೂ ಮೂಹೂರ್ತ ಫಿಕ್ಸ್ ಮಾಡಿದ್ದು – ಶಶಿಕಾಂತ ಯಡಹಳ್ಳಿ

ಅದೇನೆಂಬುದನ್ನು ಉದಾಹರಣೆ ಮೂಲಕ ಅವಲೋಕಿಸೋಣ. ಈಗ  ಡಿಸೆಂಬರ್ 6 ಎಂದ ಕೂಡಲೇ ಭಾರತೀಯರಿಗೆ ತಕ್ಷಣ ನೆನಪಾಗುವುದು ಬಾಬರಿ ಮಸೀದಿ ದ್ವಂಸವಾದ ದಿನವೆಂದು.  ಈ ದಿನಾಂಕ  ದೇಶವಾಸಿಗಳಿಗೆ ಮರೆತು ಹೋಗಬಾರದೆಂದು ಅವತ್ತು ಸಂಘ ಪರಿವಾರಿಗರು ವಿಜಯ್ ದಿವಸ್ ಅಂತಾ ಆಚರಿಸಿ ಹಿಂದೂಗಳಿಗೆ ನೆನಪಿಸುವ ಕೆಲಸ ಮಾಡುತ್ತಲೇ ಇರುತ್ತಾರೆ.  ಹಾಗೂ ಮುಸ್ಲಿಂ ಸಮುದಾಯದವರು ತಮ್ಮ ಮಸೀದಿ ದ್ವಂಸದ ದುರಂತ್ ದಿನದ ಗಾಯವನ್ನು ಮರೆಯಲು ಸಾಧ್ಯವೇ ಇಲ್ಲದಂತೆ ಮಾಡುತ್ತಾರೆ. ಹೀಗೆ ಡಿಸೆಂಬರ್ 6  ನ್ನು ಭಾರತೀಯರ ಮನಸ್ಸಲ್ಲಿ ಅಚ್ಚಳಿಯದಂತೆ ಮೂಡಿಸುವ ತಂತ್ರವನ್ನು ಆರೆಸ್ಸೆಸ್ ಡಿಸೆಂಬರ್ 6 ರಂದೆ ಯಾಕೆ ಹೆಣೆದಿತ್ತು? ಆ ದಿನವನ್ನೇ ಬಾಬರಿ ಮಸೀದಿ ದ್ವಂಸಕ್ಕೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಬಲವಾದ ಕಾರಣವೂ ಇತ್ತು.

ಅದು ಏನೆಂದರೆ, 1956 ಡಿಸೆಂಬರ್ 6, ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ರವರು ನಿಧನರಾದ ದಿನ. ಈ ಮಹಾನ್ ನಾಯಕನ ಪುಣ್ಯ ತಿಥಿಯನ್ನು ಮಹಾಪರಿನಿರ್ವಾಣದ ದಿನವಾಗಿ ಪ್ರತಿವರ್ಷ ಈ ದೇಶದ ಬಹುಸಂಖ್ಯಾತ ದಲಿತರಾದಿಯಾಗಿ ಶೋಷಿತ ಸಮುದಾಯ ಸ್ಮರಿಸುತ್ತದೆ. ದೇಶಾದ್ಯಂತ ಡಿಸೆಂಬರ್ 6 ರಂದು ಅಂಬೇಡ್ಕರ್ ರವರ ನೆನಪಿನಲ್ಲಿ ಅಗಣಿತ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ. ಈ ದೇಶದ ಆತ್ಮವಾಗಿ ಅಂಬೇಡ್ಕರರವರನ್ನು ಪರಿಗಣಿಸಲಾಗುತ್ತದೆ. ಆದರೆ ದಲಿತನೊಬ್ಬ ಭಾರತದ ಭಾಗ್ಯವಿಧಾತ ಆಗಿದ್ದನ್ನು ಈ ಮೇಲ್ಜಾತಿ ಬ್ರಾಹ್ಮಣಶಾಹಿ ಸಂಘದವರಿಗೆ ಸಹಿಸಲು ಸಾಧ್ಯವಾಗಲೇ ಇಲ್ಲ. ಜಾತಿ ಸಮಾನತೆ ಹಾಗೂ ಅಸ್ಪೃಶ್ಯತೆ ನಿವಾರಣೆ ಹಾಗೂ ಮೀಸಲಾತಿ ಕುರಿತ ಬಾಬಾಸಾಹೇಬರ ವಿಚಾರ ಮೇಲ್ವರ್ಗದ ವೈದಿಕಶಾಹಿಗಳಿಗೆ ಸಹಿಸಲು ಸಾಧ್ಯವಾಗಲೇ ಇಲ್ಲ. ಜನಮಾನಸದಲ್ಲಿ ಬದುಕಿದ ಅಂಬೇಡ್ಕರ್ ರವರ ಜನಪ್ರಿಯತೆ ಮತಾಂಧ ಶಕ್ತಿಗಳಿಗೆ ಜೀರ್ಣಿಸಿ ಕೊಳ್ಳಲಾಗಲಿಲ್ಲ. 

ಹೇಗಾದರೂ ಮಾಡಿ ಅಂಬೇಡ್ಕರ್ ರವರ ಪರಿನಿರ್ವಾಣದ ನೆನಪನ್ನು ಬಹುಜನರ ಸ್ಮೃತಿಪಟಲದಿಂದ ಅಳಿಸಿ ಹಾಕಬೇಕೆಂದರೆ ಅದೇ ದಿನ ಇನ್ನೇನಾದರೂ ಮಹತ್ತರ ಕೆಲಸ ಮಾಡಬೇಕು ಎನ್ನುವುದೇ ಸಂಘದ ಸರಸಂಘಿಗಳ ಮಾಸ್ಟರ್ ಪ್ಲಾನ್ ಆಗಿತ್ತು. ಧರ್ಮದ್ವೇಷ ಬಿಟ್ಟು ಅವರಿಗೆ ಇನ್ನೇನು ತಾನೇ ಗೊತ್ತಿತ್ತು. ಅದಕ್ಕಾಗಿಯೇ ಉದ್ದೇಶಪೂರ್ವಕವಾಗಿ ಅಂಬೇಡ್ಕರರವರ ಪುಣ್ಯತಿಥಿಯ ದಿನವನ್ನೇ ಬಾಬರಿ ಮಸೀದಿ ದ್ವಂಸಕ್ಕೆ ಆಯ್ಕೆ ಮಾಡಲಾಗಿತ್ತು. ಅದಕ್ಕಾಗಿ ಪೂರ್ವಯೋಜಿತ ಕಾರ್ಯಯೋಜನೆ ರೂಪಿಸಲಾಗಿತ್ತು. ಹಿಂದೂ ಮುಸ್ಲಿಂ ಬಾಂಧವ್ಯವನ್ನು ನಾಶಗೊಳಿಸುವುದಕ್ಕೆಂದೇ ಬಾಬರಿ ಮಸೀದಿ ನಾಶ ಮಾಡಿ ಹಿಂದೂ ಮತಗಳನ್ನು ಕ್ರೋಢೀಕರಿಸುವ ಜೊತೆಗೆ ಅಂಬೇಡ್ಕರರವರ ಪುಣ್ಯದಿನಾವರಣೆಯ ದಿನದ ಪ್ರಭಾವವನ್ನು ಕಡಿಮೆ ಮಾಡುವ ಹಿಡನ್ ಅಜೆಂಡಾ ಕೇಸರಿ ಕಲಿಗಳಿಂದ ರೂಪಿಸಲಾಗಿತ್ತು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಸಂಘ ತಯಾರಿ ನಡೆಸಿತ್ತು. 

ಅದರಲ್ಲಿ ಸಂಘ ಪರಿವಾರ ಒಂದಿಷ್ಟು ಯಶಸ್ವಿಯೂ ಆಯಿತು. ದೇಶಾದ್ಯಂತ ಮುಸ್ಲಿಂ ದ್ವೇಷವನ್ನು ಬಿತ್ತಿ ಅಧಿಕಾರದ ಫಲವನ್ನು ಬಿಜೆಪಿ ಪಡೆಯಿತು. ಆದರೆ ಬಹುಜನರ ಮನದಲ್ಲಿ ಬೇರು ಬಿಟ್ಟು ಆಲವಾಗಿ ಬೆಳೆದಿರುವ ಬಾಬಾಸಾಹೇಬರ ಸ್ಮೃತಿಯನ್ನು ಜನಮನದಿಂದ ಅಳಿಸುವಲ್ಲಿ ಸೋತಿತು. ಹೇಗಾದರೂ ಮಾಡಿ ಅಂಬೇಡ್ಕರರ ಪರಿನಿರ್ವಾಣದ ದಿನದ ಮಹತ್ವವನ್ನು ಡೈಲ್ಯೂಟ್ ಮಾಡಿ ಜನರ ಗಮನವನ್ನು ಬೇರೆ ಕಡೆಗೆ ತಿರುಗಿಸಲು ಪ್ರತಿ ವರ್ಷ ಡಿಸೆಂಬರ್ 6 ರಂದೇ ಸಂಘ ಪರಿವಾರದವರು ಬಾಬರಿ ಮಸೀದಿ ದ್ವಂಸದ ದಿನವನ್ನು ವಿಜಯೋತ್ಸವದ ದಿನವಾಗಿ ಆಚರಿಸುತ್ತಾ ಬಂದಿದ್ದಾರೆ. ಆದರೆ ಜನರು ಅಷ್ಟು ಮೂರ್ಖರಲ್ಲವಾದ್ದರಿಂದ ಬಾಬಾಸಾಹೇಬರ ನೆನಪನ್ನು ಅಳಿಸಲು ಇನ್ನೂ ಸಂಘ ಪರಿವಾರಕ್ಕೆ ಸಾಧ್ಯವಾಗಿಲ್ಲ. ಆದರೂ ತಮ್ಮ ಪ್ರಯತ್ನ ಬಿಡುತ್ತಿಲ್ಲ.

ಮಸೀದಿ ಒಡೆದು ರಾಮಮಂದಿರ ಕಟ್ಟಿರುವ ಸಂಘ ಪರಿವಾರ ಈಗ ರಾಮಮಂದಿರದ ಪ್ರಾಣ ಪ್ರತಿಷ್ಠಾಪನಾ ದಿನದ ನೆಪದಲ್ಲಿ ಮತ್ತದೇ ಹುನ್ನಾರವನ್ನು ಹೂಡಿದೆ. ಅರ್ಧ ಕಟ್ಟಿದ ಅಪೂರ್ಣ ಮಂದಿರದಲ್ಲಿ ಅಕಾಲಿಕವಾಗಿ ರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡುತ್ತಿದೆ. ಲೋಕಸಭಾ ಚುನಾವಣೆ ಗೆಲ್ಲವುದಕ್ಕಾಗಿಯೇ ಈ ಅಕಾಲಿಕ ಪ್ರತಿಷ್ಠಾಪನಾ ಉನ್ಮಾದವೆಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಒಂದೇ ಕಲ್ಲಲ್ಲಿ ಹಲವು ಗುರಿಗಳನ್ನು ಹೊಡೆಯುವ ತಂತ್ರ ಸಂಘಿಗಳ ಮಂತ್ರವಾಗಿದೆ. ರಾಮಮಂದಿರ ಉದ್ಘಾಟನೆಗಾಗಿ ಆಯ್ಕೆ ಮಾಡಿದ ಜನವರಿ 22 ಎನ್ನುವ ದಿನಾಂಕವೂ ಸಹ ಮತ್ತೆ ಪರೋಕ್ಷವಾಗಿ ಅಂಬೇಡ್ಕರ್ ರವರನ್ನು ಗುರಿಯಾಗಿಸಿದೆ ಎಂದರೆ ಯಾರೂ ನಂಬಲಾರರು. ಉದ್ಘಾಟನೆಗೂ ಅಂಬೇಡ್ಕರ್ ರವರಿಗೂ ಎತ್ತಣಿಂದೆತ್ತ ಸಂಬಂಧ ಎಂಬ ಪ್ರಶ್ನೆ ಕಾಡುತ್ತದೆ.

ಸಂವಿಧಾನವನ್ನೇ ಒಪ್ಪಿಕೊಳ್ಳದವರು ಸಂವಿಧಾನದ ಪೀಠಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಾ? ಮನುವಾದಿ ಆಶಯಗಳಿಗೆ ವಿರುದ್ಧವಾದ ಉದ್ದೇಶವನ್ನು ಪೀಠಿಕೆಯಲ್ಲಿ ಉಲ್ಲೇಖಿಸಲಾಗಿದೆ. ಸಂವಿಧಾನವನ್ನು ಇದ್ದಕ್ಕಿದ್ದಂತೆ ಬದಲಾಯಿಸಲಂತೂ ಸಾಧ್ಯವಿಲ್ಲ. ಆದರೆ ಅದರ ಮಹತ್ವವನ್ನು ಕಂತು ಕಂತುಗಳಲ್ಲಿ ಕಡಿಮೆ ಮಾಡುವುದೇ ಸಂಘದ ಹಿಡನ್ ಅಜೆಂಡಾ. ಸಂವಿಧಾನ ಬದಲಾಯಿಸುವ ಮುನ್ನ ಮನುವಾದಿಗಳಿಗೆ ಆತ್ಮಘಾತಕವಾಗಿರುವ ಅದರ  ಪೀಠಿಕೆಯನ್ನು ಬದಲಾಯಿಸುವ ಕಾರ್ಯವನ್ನು ಮಾಡಬೇಕಿದೆ. ಅದಕ್ಕಾಗಿಯೇ ಸಮಾಜವಾದಿ ಪದವನ್ನೇ ತೆರವುಗೊಳಿಸಲು ಪ್ರಯತ್ನಿಸಲಾಗಿದೆ. ಈ ಯತ್ನಕ್ಕೆ ಪೂರಕವಾಗಿ ರಾಮಮಂದಿರ ಉದ್ಘಾಟನೆಗೆ ಬೇರೆ ಅನೇಕ ಮುಹೂರ್ತಗಳಿದ್ದರೂ ಜನವರಿ 22 ನ್ನೇ ಆಯ್ಕೆ ಮಾಡಿ ಅಂತಿಮಗೊಳಿಸಲಾಯಿತು.

ಆದರೆ ಸಂಬಂಧ ಇದೆ. ಅಂಬೇಡ್ಕರ್ ರವರು ಭಾರತದ ಸಂವಿಧಾನ ಪ್ರಮುಖ ಶಿಲ್ಪಿ ಎನ್ನುವುದು ನಿರಾಕರಿಸಲಾಗದ ಸತ್ಯ. ಭಾರತದ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದವರು ಹಾಗೂ ಸಂವಿಧಾನದ ಪ್ರತಿಗಳನ್ನು ಬೀದಿಯಲ್ಲಿ ಸುಟ್ಟವರು ಈ ಸಂಘಿಗಳೇ ಎಂಬುದು ನಿರ್ವಿವಾದ. ಸಮಾನತೆ ಸಾರುವ ಸಂವಿಧಾನಕ್ಕೂ, ವರ್ಣಾಶ್ರಮದ ಜಾತಿ ಅಸಮಾನತೆ ಸಮರ್ಥಿಸುವ ಮನುವಾದಿ ಆರೆಸ್ಸೆಸ್ಸಿಗೂ ಸಾಮ್ಯತೆ ಎಂಬುದೇ ಇಲ್ಲ. ಮೊದಲಿನಿಂದಲೂ ಸಂಘದ ನಾಯಕರು ಭಾರತದ ಸಂವಿಧಾನವನ್ನು ಒಪ್ಪಿಕೊಳ್ಳಲಿಲ್ಲ, ರಾಷ್ಟ್ರಧ್ವಜವನ್ನೂ ಅಪ್ಪಿಕೊಳ್ಳಲಿಲ್ಲ. 

ಯಾಕೆಂದರೆ, ಭಾರತದ ಸಂವಿಧಾನದ ಪೀಠಿಕೆಯು ಇಡೀ ಸಂವಿಧಾನದ ಆಶಯವನ್ನು ಸಂಕ್ಷಿಪ್ತವಾಗಿ ಹೇಳುವಂತಹುದು. ಭಾರತವನ್ನು ಸ್ವತಂತ್ರ ಸಾರ್ವಭೌಮ ಗಣರಾಜ್ಯವೆಂದು ಘೋಷಿಸುವ ನಿರ್ಣಯವನ್ನು  ಸಂವಿಧಾನ ಸಭೆ ತೆಗೆದುಕೊಂಡ ದಿನ 22 ಜನವರಿ 1947

ಭಾರತೀಯರಿಗೆ ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ಅವಕಾಶಗಳಲ್ಲಿ  ಸಮಾನತೆ ಇರಬೇಕು. ಕಾನೂನಿನ ಮುಂದೆ ಸರ್ವರೂ ಸಮಾನರಾಗಿರಬೇಕು. ಅಭಿವ್ಯಕ್ತಿ, ನಂಬಿಕೆ, ಪೂಜೆ, ವೃತ್ತಿ ಮತ್ತು ಕ್ರಿಯೆಗಳು ಕಾನೂನು ಮತ್ತು ಸಾರ್ವಜನಿಕ ನೈತಿಕತೆಗೆ ಒಳಪಟ್ಟಿರಬೇಕು. ಅಲ್ಪಸಂಖ್ಯಾತರು, ಬಡವರು, ಹಿಂದುಳಿದ ಮತ್ತು ಬುಡುಕಟ್ಟು ಸಮುದಾಯಗಳನ್ನು ರಕ್ಷಿಸಬೇಕು. ಗಣರಾಜ್ಯದ ಪ್ರಾದೇಶಿಕ ಸಮಗ್ರತೆ ಸಾರ್ವಭೌಮ ಹಕ್ಕುಗಳನ್ನು ಕಾನೂನಿಗೆ ಅನುಗುಣವಾಗಿ ಸಂರಕ್ಷಿಸಬೇಕು. ಬಹುತ್ವವು ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿದೆ ಹಾಗೂ ಧಾರ್ಮಿಕ ಸಹಿಷ್ಣುತೆಯು ಅಡಿಪಾಯವಾಗಿದೆ” ಎಂಬ ಉದ್ದೇಶಿತ ನಿರ್ಣಯಗಳನ್ನು 1946, ಡಿಸೆಂಬರ್ 13 ರಂದು ನಡೆದ ಸಂವಿಧಾನ ಸಭೆಯಲ್ಲಿ ಜವಾಹರಲಾಲ್ ನೆಹರುರವರು ಪರಿಚಯಿಸಿದ್ದರು. ಈ ನಿರ್ಣಯಗಳು ಸಂವಿಧಾನ ನಿರ್ಮಿತಿಯ ಪರಿಕಲ್ಪನೆಗೆ ಬುನಾದಿಯಾಗಿ ಮಾರ್ಗದರ್ಶಿ ಸೂತ್ರವಾಯಿತು. ಹಾಗೂ ಅಂತಿಮವಾಗಿ ಸಂವಿಧಾನದ ಪೀಠಿಕೆಯಾಗಿ ರೂಪಗೊಂಡು 1947 ಜನವರಿ 22 ರಂದು ನಡೆದ ಸಂವಿಧಾನ ಸಭೆಯಲ್ಲಿ ಅಂಗೀಕಾರಗೊಂಡಿತು.

ಆದರೆ ಸಂವಿಧಾನದ ಪೀಠಿಕೆಯಲ್ಲಿರುವ ಯಾವ ಅಂಶವೂ ಸಂಘಿಗಳಿಗೆ ಮೊದಲಿನಿಂದಲೂ ಪಥ್ಯವಲ್ಲ. ಸರ್ವಾಧಿಕಾರಿ ಮನಸ್ಥಿತಿಯವರಿಗೆ ಸಮಾಜವಾದಿ ಶಬ್ದ ಹಿಡಿಸುವುದಿಲ್ಲ. ಚಾತುರ್ವರ್ಣದ ಜಾತಿಬೇಧವಾದಿಗಳಿಗೆ  ಜಾತ್ಯತೀತತೆ  ಆಗಿಬರುವುದಿಲ್ಲ. ಒಂದೇ ದೇಶ ಒಂದೇ ಚುನಾವಣೆ ಎನ್ನುವ ಕೇಂದ್ರೀಕೃತ ಆಡಳಿತ ವ್ಯವಸ್ಥೆ ನಿರ್ಮಿಸಲು ಹೊರಟವರಿಗೆ ಗಣರಾಜ್ಯವೆಂಬ ಒಕ್ಕೂಟ ವ್ಯವಸ್ಥೆಯನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಅಸಮಾನತೆಯನ್ನೇ ಉಸಿರಾಡುವ ಮನುವಾದಿಗಳಿಗೆ  ಸಮಾನತೆ ಸಹೋದರತ್ವ ಸ್ವಾತಂತ್ರ್ಯ ಎನ್ನುವ ಶಬ್ದಗಳನ್ನು ಕಂಡರಾಗುವುದಿಲ್ಲ. ಹೀಗಾಗಿ 1949 ನವೆಂಬರ್ 26 ರಂದು ಜಾರಿಯಾದ ಸಂವಿಧಾನದ ಪೀಠಿಕೆ ಅಂತಿಮಗೊಂಡ ಜನವರಿ 22 ಸಂಘದ ನಾಯಕತ್ವಕ್ಕೆ ದುಸ್ವಪ್ನವಾಗಿ ಕಾಡುತ್ತಲೇ ಇದೆ. ಹಾಗಾಗಿ ಸಂವಿಧಾನ ಪೀಠಿಕೆಯ ಮಹತ್ವವನ್ನು ಕಡಿಮೆ ಮಾಡಬೇಕೆಂದರೆ ಪೀಠಿಕೆ ಅಂತಿಮಗೊಂಡ ದಿನದಂದೇ ಎಲ್ಲರ ನೆನಪಲ್ಲಿ ಅಚ್ಚೊತ್ತುವಂತಹ ಮಹತ್ಕಾರ್ಯವನ್ನು ಹಮ್ಮಿಕೊಳ್ಳಬೇಕಿತ್ತು. ಅದಕ್ಕಾಗಿಯೇ ಅತೀ ಅವಸರದಲ್ಲಿ ಅಪೂರ್ಣ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ಜನವರಿ  22 ರಂದೇ ಮುಹೂರ್ತವನ್ನು ನಿಗದಿಪಡಿಸಲಾಯ್ತು.

ದೇಶಾದ್ಯಂತ ರಾಮದೇವರ ಹೆಸರಲ್ಲಿ ಉನ್ಮಾದವನ್ನು ಸೃಷ್ಟಿಸಿ ಮತ್ತೆ ಬಿಜೆಪಿ ಪಕ್ಷ ಅಧಿಕಾರ ಹಿಡಿಯಲು ಸ್ವಯಂ ಸೇವಕ ಸಂಘವು ನೀಲಿನಕ್ಷೆಯನ್ನು ಸಿದ್ಧವಾಗಿಟ್ಟುಕೊಂಡಿದೆ. ಸಂವಿಧಾನ ಅಧಿಕೃತವಾಗಿ ಜಾರಿಯಾದ ನವೆಂಬರ್ 26 ರಂದೇ ರಾಮಮಂದಿರ ಉದ್ಘಾಟನೆ ನಿಕ್ಕಿ ಮಾಡುವ ಸಂಭವವಿತ್ತು. ಆದರೆ ನವೆಂಬರ್ 26 ರಷ್ಟರಲ್ಲಿ ರಾಮಮಂದಿರ ಸಿದ್ಧವಾಗಿರಲಿಲ್ಲ ಹಾಗೂ ಮುಂದಿನ ವರ್ಷದ ನವೆಂಬರ್ 26 ರಷ್ಟರಲ್ಲಿ ಮಂದಿರ ಪೂರ್ಣಗೊಳಿಸಿ ಉದ್ಘಾಟಿಸಬಹುದಾಗಿತ್ತಾದರೂ ಅಷ್ಟರಲ್ಲಿ ಲೋಕಸಭಾ ಚುನಾವಣೆ ಮುಗಿದಿರುತ್ತಿತ್ತು. ಹಾಗಾಗಿ ಪೀಠಿಕೆ ಪ್ರಸ್ತಾವನೆ ನಿರ್ಣಯ ತೆಗೆದುಕೊಂಡ ಜನವರಿ 22 ನ್ನೇ ಪ್ರಾಣ ಪ್ರತಿಷ್ಠಾಪನೆಗೆ ನಿಗದಿಪಡಿಸುವುದು ಸಂಘಕ್ಕೆ ಅನಿವಾರ್ಯವಾಯಿತು.

This image has an empty alt attribute; its file name is ayodhya_e6bb2d-1-1024x557.webp

ಹೀಗಾಗಿ.. ಸಂವಿಧಾನದ ಪೀಠಿಕೆ ನಿರ್ಣಯದ ದಿನವಾದ ಜನವರಿ 22 ನ್ನೇ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಗಾಗಿ ಆಯ್ಕೆ ಮಾಡಿಕೊಂಡಿರುವುದು ಕಾಕತಾಳೀಯವಂತೂ ಅಲ್ಲಾ. ಪ್ರಜಾಪ್ರಭುತ್ವ ತೆಗೆದು ಫ್ಯಾಸಿಸ್ಟ್ ಪ್ರಭುತ್ವ ಸ್ಥಾಪಿಸಲು ಹಾಗೂ ಅಂಬೇಡ್ಕರ್ ರವರ ಸಮಾನತಾವಾದಿ ಸಂವಿಧಾನವನ್ನು ನಿವಾರಿಸಿ ಮನುಸ್ಮೃತಿ ಆಧಾರಿತ ಸಂವಿಧಾನವನ್ನು ಜಾರಿಗೆ ತರುವ ಪ್ರಯತ್ನದ ಆರಂಭಿಕ ಲಕ್ಷಣವೇ ಧಾರ್ಮಿಕ ಉನ್ಮಾದ ತೀವ್ರಗೊಳಿಸುವುದು ಮತ್ತು ಸಂವಿಧಾನದ ಪೀಠಿಕೆಯ ತೀವ್ರತೆ ಕಡಿಮೆ ಗೊಳಿಸುವುದು. ಅದಕ್ಕಾಗಿ ಜನವರಿ 22 ನೇ ದಿನಾಂಕವೇ ರಾಮಮಂದಿರದ ಉದ್ಘಾಟನೆಗೂ ಹಾಗೂ ಸಂವಿಧಾನದ ಅವನತಿಗೂ ಮೂಹೂರ್ತ ಫಿಕ್ಸ್ ಮಾಡಿದ್ದು. 

ಈ ದೇಶದ ಬಹುಜನರು ಈ ಶಡ್ಯಂತ್ರವನ್ನು ಅರಿಯದೇ ದೇವರ ಉನ್ಮಾದ ಹಾಗೂ ಧರ್ಮದ ಭ್ರಮೆಯಲ್ಲಿ ಮೈಮರೆತದ್ದೇ ಆದರೆ ಈಗಿರುವ ಕನಿಷ್ಟ ಸ್ವಾತಂತ್ರ್ಯ ಸಮಾನತೆ ಹಾಗೂ ಕಾನೂನಿನ ರಕ್ಷಣೆಯನ್ನೂ ಕಳೆದುಕೊಂಡು ವೈದಿಕಶಾಹಿಯ ಅಕ್ಟೋಪಸ್ ಹಿಡಿತದಲ್ಲಿ ನರಳುವುದಂತೂ ಖಂಡಿತ. 

ಶಶಿಕಾಂತ ಯಡಹಳ್ಳಿ

ಪತ್ರಕರ್ತರು, ರಂಗಕರ್ಮಿ

ಇದನ್ನೂ ಓದಿ-ರಾಮ ರಾಜಕಾರಣ ವರ್ಸಸ್ ಬಸವ ರಾಜಕಾರಣ

More articles

Latest article