Thursday, July 25, 2024

ಅಡುಗೆ ಅನಿಲ, ಪೆಟ್ರೋಲ್ ಡೀಸೆಲ್, ಗೊಬ್ಬರ, ಕಾಳು ಬೇಳೆ, ಅಡುಗೆ ಎಣ್ಣೆ ಬೆಲೆ ಕಡಿಮೆ ಆಗುತ್ತೆ ಅಂದ್ರಲ್ಲಾ , ಕಡಿಮೆ ಮಾಡಿದ್ರಾ ಮೋದಿಯವರೇ?: ಸಿದ್ದರಾಮಯ್ಯ

Most read

ಮಡಿಕೇರಿ ಜ 25 : ಪ್ರಧಾನಿ ನರೇಂದ್ರ ಮೋದಿಯವರೊಬ್ಬರ ಅವಧಿಯಲ್ಲಿ ದೇಶದ ಸಾಲ 173 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ 10 ವರ್ಷಗಳ ಮೋದಿ ಅವಧಿಯಲ್ಲಿ 120 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಸಾಲದ ಪಟ್ಟಿಯನ್ನು ವಿವರವಾಗಿ ಬಿಚ್ಚಿಟ್ಟರು. 

ಕೊಡಗು ಜಿಲ್ಲೆಯ ಹತ್ತಕ್ಕೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ಮಾಡಿ, ಹಲವು ಕಾರ್ಯಗಳ ಶಂಕುಸ್ಥಾಪನೆ ನೆರವೇರಿಸಿ ಬೃಹತ್ ಜನ ಸಾಗರವನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುವ ನೈತಿಕ ಹಕ್ಕು ಬಿಜೆಪಿ ಗೆ ಇಲ್ಲ. ಏಕೆಂದರೆ ದೇಶದಲ್ಲಿರುವ ಎಲ್ಲಾ ಪ್ರತಿಷ್ಠಿತ ಸಂಸ್ಥೆಗಳು, ವಿಶ್ವ ವಿದ್ಯಾಲಯಗಳು, ಅಣೆಕಟ್ಟುಗಳು ಆಗಿದ್ದು ಬಿಜೆಪಿ ಯೇತರ ಕಾಂಗ್ರೆಸ್ ಮತ್ತು ಇತರೆ ಸರ್ಕಾರಗಳ ಅವಧಿಯಲ್ಲಿ. ನಿಮ್ಮ ಅವಧಿಯಲ್ಲಿ ಏನು ಮಾಡಿದಿರಿ ಹೇಳಿ ಎಂದು ಪ್ರದಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ರಲ್ಲಾ ಮೋದಿಯವರೇ. ಮಾಡಿದ್ರಾ ? ಎಲ್ಲಿ 20 ಕೋಟಿ ಉದ್ಯೋಗ ?

*ಅಡುಗೆ ಅನಿಲ, ಪೆಟ್ರೋಲ್ ಡೀಸೆಲ್, ಗೊಬ್ಬರ, ಕಾಳು ಬೇಳೆ, ಅಡುಗೆ ಎಣ್ಣೆ ಬೆಲೆ ಕಡಿಮೆ ಆಗುತ್ತೆ ಅಂದ್ರಲ್ಲಾ , ಕಡಿಮೆ ಮಾಡಿದ್ರಾ ಮೋದಿಯವರೇ?

* ದೇಶದ ಸಾಲ ತೀರಿಸಿ ಬಿಡ್ತೀನಿ ಅಂದ್ರಲ್ಲಾ ಮಾಡಿದ್ರಾ ? ನೀವು ಬರುವ ಮೊದಲು ದೇಶದ ಸಾಲ 53 ಲಕ್ಷ ಕೋಟಿ ಸಾಲ ಇತ್ತು. ನಿಮ್ಮ ಹತ್ತು ವರ್ಷಗಳಲ್ಲಿ ದೇಶದ ಸಾಲ 173 ಲಕ್ಷ ಕೋಟಿ ಆಗಿದೆ. ನಿಮ್ಮೊಬ್ಬರ ಅವಧಿಯಲ್ಲಿ 120 ಲಕ್ಷ ಕೋಟಿ ಮಾಡಿದ್ದೀರಿ. ಇದೆನಾ ನಿಮ್ಮ ಸಾಧನೆ?

*ಸಬ್ ಕಾ ಸಾಥ್, ಸಬ್ ಕಾ ವಿಕಾಸ್  ಎಲ್ಲಾದರೂ ಜಾರಿಯಾಗಿದೆಯಾ ? ಸಣ್ಣ ಉದಾಹರಣೆ ಇದ್ದರೆ ಹೇಳಿ ಮೋದಿಯವರೇ?

*ಅಚ್ಛೇ ದಿನ್ ಆಯೆಗಾ ಎಂದಿರಿ? ಕಹಾಂ ಹೈ ಅಚ್ಛೆ ದಿನ್ ಮೋದೀಜಿ…ಎಂದು ಮುಖ್ಯಮಂತ್ರಿಗಳು ಪ್ರಧಾನಿ ಮೋದಿ ಅವರಿಗೆ ಸಾಲು ಸಾಲು ಪ್ರಶ್ನೆಗಳ ಮೂಲಕ ಟೀಕಿಸಿದರು.

ಮಂಡಲ್ ಕಮಿಷನ್ ವರದಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ್ದು ಪ್ರಧಾನಿಗಳಾಗಿದ್ದ ವಿ.ಪಿ.ಸಿಂಗ್ ಮತ್ತು ನರಸಿಂಹರಾಯರು. ನೀವೇನು ಮಾಡಿದೀರಿ ಹೇಳಿ ಮೋದಿಯವರೇ ಎಂದು ಪ್ರಶ್ನಿಸಿದರು.

*ಸಾಮಾಜಿಕ ನ್ಯಾಯ, ಸಂವಿಧಾನ, ಜಾತ್ಯತೀತತೆ, ಮೀಸಲಾತಿ ಪರವಾಗಿ ಯಾವತ್ತೂ ಮಾತನಾಡದ ನೀವು, ಈ ಬಗ್ಗೆ ಏನೂ ಕಾರ್ಯಕ್ರಮಗಳನ್ನು ನಿಮ್ಮ ಅವಧಿಯಲ್ಲಿ ಕೊಡಲಿಲ್ಲ ಏಕೆ ಎಂದರು.

ಬಿಜೆಪಿ ಯವರು ತಮ್ಮ ಪ್ರಣಾಳಿಕೆಗಳಲ್ಲಿ ಕೊಟ್ಟ ಆಶ್ವಾಸನೆಗಳಲ್ಲಿ ಶೇ10 ರಷ್ಟನ್ನೂ ಜಾರಿ ಮಾಡಲೇ ಇಲ್ಲ. ನಾವು ನುಡಿದಂತೆ ನಡೆದಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡು ಜನರ ಋಣ ತೀರಿಸಿದ್ದೇವೆ. ಇದನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು ಎಂದು ಕರೆ ನೀಡಿದರು.

ನಾಡಿನ ಯುವಕರಿಗೆ ಉದ್ಯೋಗ ನೀಡದೆ, ಕೇವಲ ಯುವ ಸಮೂಹವನ್ನು, ವಿದ್ಯಾರ್ಥಿ ಸಮೂಹವನ್ನು ಭಾವನಾತ್ಮಕವಾಗಿ ಕೆರಳಿಸಿ ಅವರ ಬದುಕಿನ ಜತೆ ಚೆಲ್ಲಾಟ ಆಡಿದ್ದೀರಿ ಎಂದು ಹೇಳಿ ಬಿಜೆಪಿಯನ್ನು ತಿರಸ್ಕರಿಸುವಂತೆ ಕರೆ ನೀಡಿದರು.

ನಾವು ತಂದ ಗ್ಯಾರಂಟಿಗಳನ್ನು ಮೋದಿಯವರು ಆಡಿಕೊಂಡರು. ಜಾರಿಗೆ ತಂದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದರು. ಈಗ ಅದೇ ಮೋದಿಯವರೇ ನಮ್ಮ ಗ್ಯಾರಂಟಿ ಕಾರ್ಯಕ್ರಮಗಳನ್ನು ಕಾಪಿ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿ ಆರ್ಥಿಕವಾಗಿ ಇನ್ನೂ ಸದೃಡವಾಗಿದೆ ಎಂದು ಪ್ರತೀ ಗ್ಯಾರಂಟಿ ಕಾರ್ಯಕ್ರಮಗಳ ಜಾರಿ ಕುರಿತು ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಗೃಹ ಸಚಿವರಾದ ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್, ರೇಷ್ಮೆ ಸಚಿವರಾದ ಕೆ.ವೆಂಕಟೇಶ್, ಮಾಜಿ ಸಚಿವ ಎಂ.ಸಿ.ನಾಣಯ್ಯ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಮಡಿಕೇರಿ ಶಾಸಕರಾದ ಮಂಥರ್ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೆಹರೂಸ್ ಖಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

More articles

Latest article