ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಂಡರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಯ ಉಂಟಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ. ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಮೋದಿ ತಿಳಿಸಿದ್ದಾರೆ ಎಂಬ ಟ್ರಂಪ್ ಹೇಳಿಕೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು, ಭಾರತ ಎಲ್ಲಿಂದ ತೈಲಲ ಖರೀದಿ ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಲು ಟ್ರಂಪ್ ಅವರಿಗೆ ಅಧಿಕಾರ ನೀಡಲಾಗಿದೆ. ಈ ಅವಕಾಶವನ್ನು ಪ್ರಧಾನಿ ಮೋದಿ ನೀಡಿದ್ದಾರೆ.
ಆಪರೇಷನ್ ಸಿಂಧೂರವನ್ನು ನಿಲ್ಲಿಸಿದ್ದು ನಾನೇ ಎಂಬಬಗ್ಗೆ ಟ್ರಂಪ್ ಹೇಳಿಕೆಯನ್ನು ಇದುವರೆಗೂ ಪ್ರಧಾನಿ ಮೋದಿ ಖಂಡಿಸಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಮೆರಿಕ ಭೇಟಿಯನ್ನು ರದ್ದುಗೊಳಿಸಲಾಯಿತು. ಈ ಎಲ್ಲ ಬೆಳವಣಿಗೆಗಳು ಏನನ್ನು ಸೂಚಿಸುತ್ತವೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಟ್ರಂಪ್ ನಿರಂತರವಾಗಿ ಮುಖಭಂಗ ಮಾಡುತ್ತಿದ್ದರೂ ಮೋದಿ ಮಾತ್ರ ಅಭಿನಂದನೆಗಳನ್ನು ತಿಳಿಸುತ್ತಲೇ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.