ಮುಷ್ತಾಕ್ ಹೆನ್ನಾಬೈಲ್
ಕಳೆದ ಎರಡು ದಶಕಗಳ ರಾಜ್ಯದ ರಾಜಕೀಯಲ್ಲಿ ತಮ್ಮ ಎಲ್ಲಾ ಹಕ್ಕುಗಳನ್ನು ಸರ್ಕಾರಿ ಮಟ್ಟದಲ್ಲಿ ಸ್ಥಾಪಿಸಿಕೊಳ್ಳುವ ಅವಕಾಶ ತಮಗೆ ಇಲ್ಲ ಎನ್ನುವ ಕಹಿಸತ್ಯ ಮುಸ್ಲಿಮರಿಗೆ ಇನ್ನೂ ಗೊತ್ತಾಗಿಲ್ಲದಿರುವುದು ದುರಂತ. ಈಗಲೂ ಕೂಡ ಮುಸ್ಲಿಂ ಸಮುದಾಯ ಒಕ್ಕೊರಲಿನಿಂದ ಕೂಗಿದರೆ ಸರ್ಕಾರ ಕೋರ್ಟಿನಲ್ಲಿರುವ ಹಿಜಾಬ್ ಮತ್ತು ಮೀಸಲಾತಿ ರದ್ದತಿ ಆದೇಶಗಳನ್ನು ಒತ್ತಡದಲ್ಲಿ ಖಂಡಿತವಾಗಿ ಹಿಂತೆಗೆದುಕೊಳ್ಳುತ್ತದೆ – ಮುಷ್ತಾಕ್ ಹೆನ್ನಾಬೈಲ್, ಲೇಖಕರು.
ಕಾಂಗ್ರೆಸ್ ಸರ್ಕಾರ ಬಂದ ನಂತರ ಮುಸ್ಲಿಮರು ಕೇಳುವ ಪ್ರಶ್ನೆ ಇದು. ನಿಜಕ್ಕೂ ಸರ್ಕಾರಕ್ಕೆ ಹಿಜಾಬ್ ಮತ್ತು ಮೀಸಲಾತಿ ರದ್ದತಿಗಳು ಮುಂದುವರಿಯಬೇಕೆಂಬ ಬಯಕೆಯಿಲ್ಲ. ಆದರೆ ಈ ವಿಚಾರದಲ್ಲಿ ಸರ್ಕಾರ ಹೆಲ್ಪ್‌ಲೆಸ್. ಒಂದೊಮ್ಮೆ ಮುಸ್ಲಿಮರು ಬಯಸಿದಂತೆ ಸುಪ್ರೀಂಕೋರ್ಟಿನಲ್ಲಿರುವ ಈ ಎರಡು ವಿವಾದಗಳಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿದರೆ, ಮೊದಲೇ ಸರ್ಕಾರ ಈ ತಪ್ಪು ಮಾಡುವುದನ್ನೇ ಕಾಯುತ್ತಿರುವ ಮುಸ್ಲಿಮ್ ವಿರೋಧಿ ಶಕ್ತಿಗಳು ಇಡೀ ಸರ್ಕಾರವನ್ನು ಮುಸ್ಲಿಂ ಸರ್ಕಾರ ಎಂಬಂತೆ ಸುಲಭದಲ್ಲಿ ಬಿಂಬಿಸಿಬಿಡುತ್ತವೆ..
ಇದು ಮುಂಬರುವ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಸೇರಿದಂತೆ ರಾಜ್ಯಾದ್ಯಂತ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಚುನಾವಣೆಯಲ್ಲಿ ಫಲಿತಾಂಶ ಸರ್ಕಾರದ ವಿರುದ್ಧ ಬಂದರೆ ಇದು ಮುಂದಿನ ವಿಧಾನಸಭಾ ಚುನಾವಣೆಗಳ ಮೇಲೆ ದೂರಗಾಮಿ ಪರಿಣಾಮ ಬೀರುವ ದೊಡ್ಡ ಅಪಾಯವಿರುತ್ತದೆ. 2013ರಲ್ಲಿ ಸಿದ್ದರಾಮಯ್ಯನವರು ಮೊದಲು ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ, ಶಾದಿಭಾಗ್ಯ ಸೇರಿದಂತೆ ಹಲವು ಮುಸ್ಲಿಂ ಪರ ನಿಲುವುಗಳನ್ನು ತೆಗೆದುಕೊಂಡಿದ್ದರು. ಇದನ್ನೇ ದಾಳವಾಗಿಸಿಕೊಂಡ ವಿರೋಧ ಪಕ್ಷಗಳು ಜನಪರವಾಗಿದ್ದ ಸರ್ಕಾರವನ್ನು ಆಹುತಿ ತೆಗೆದುಕೊಂಡವು. ನಂತರ ಬಿಜೆಪಿ ಸರ್ಕಾರ ಬಂತು. ಆ ಸರ್ಕಾರ ಆಜಾನ್, ಹಲಾಲ್, ಹಿಜಾಬ್ ಮುಂತಾದ ವಿಚಾರಗಳನ್ನು ಮುಂದೆತ್ತಿಕೊಂಡು ಮುಸ್ಲಿಮ್ ಶೋಷಣೆಯನ್ನೇ ದಂಧೆಯನ್ನಾಗಿ ಮಾಡಿಕೊಂಡಿತು. ನಿಜಕ್ಕೂ ಅದು ಮುಸ್ಲಿಮರು ಕೋಲು ಕೊಟ್ಟು ಪೆಟ್ಟು ತಿಂದಂತಾಯ್ತು.
ಕಳೆದ ಎರಡು ದಶಕಗಳ ರಾಜ್ಯದ ರಾಜಕೀಯಲ್ಲಿ ತಮ್ಮ ಎಲ್ಲಾ ಹಕ್ಕುಗಳನ್ನು ಸರ್ಕಾರಿ ಮಟ್ಟದಲ್ಲಿ ಸ್ಥಾಪಿಸಿಕೊಳ್ಳುವ ಅವಕಾಶ ತಮಗೆ ಇಲ್ಲ ಎನ್ನುವ ಕಹಿಸತ್ಯ ಮುಸ್ಲಿಮರಿಗೆ ಇನ್ನೂ ಗೊತ್ತಾಗಿಲ್ಲದಿರುವುದು ದುರಂತ. ಈಗಲೂ ಕೂಡ ಮುಸ್ಲಿಂ ಸಮುದಾಯ ಒಕ್ಕೊರಲಿನಿಂದ ಕೂಗಿದರೆ ಸರ್ಕಾರ ಕೋರ್ಟಿನಲ್ಲಿರುವ ಹಿಜಾಬ್ ಮತ್ತು ಮೀಸಲಾತಿ ರದ್ದತಿ ಆದೇಶಗಳನ್ನು ಒತ್ತಡದಲ್ಲಿ ಖಂಡಿತವಾಗಿ ಹಿಂತೆಗೆದುಕೊಳ್ಳುತ್ತದೆ. ಆದರೆ ಸರ್ಕಾರ ಮಾತ್ರ ವಿರೋಧಪಕ್ಷಗಳ ತಟ್ಟೆಗೆ ಹೋಗುತ್ತದೆ..
ಹೀಗಾದರೆ ಮತ್ತೊಮ್ಮೆ ಕೋಮುವಾದಿ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಆಗ ಕಳೆದುಕೊಳ್ಳುವುದು ಮತ್ತು ಅನುಭವಿಸುವುದು ಹೆಚ್ಚು ಮುಸ್ಲಿಮರೇ. ಸರ್ಕಾರದ ಮೇಲೆ ಅನಗತ್ಯ ಒತ್ತಡ ಹೇರುವ ಮುಸ್ಲಿಮರು ಇದನ್ನು ಅರಿತುಕೊಳ್ಳಬೇಕು. ಮುಸ್ಲಿಮರು ತಮ್ಮ ಹಕ್ಕು ಮತ್ತು ತೊಂದರೆ ಕೊಡದ ಸರ್ಕಾರ ಎರಡನ್ನೂ ಆಯ್ದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಹಿಜಾಬ್ ಮತ್ತು ಮೀಸಲಾತಿ ಪ್ರಕರಣಗಳು ಕೋರ್ಟಿನಲ್ಲಿ ಇದ್ದು, ಅದಕ್ಕೆ ಮಧ್ಯಂತರ ತಡೆಯೂ ಇರುವುದರಿಂದ ಸರ್ಕಾರದ ಮೇಲೆ ಅನಗತ್ಯ ಒತ್ತಡ ಹೇರದೆ ಅಂತಿಮ ಆದೇಶದವರೆಗೆ ಕಾಯುವುದೇ ಜಾಣತನ. ಕರ್ನಾಟಕ ಹೈಕೋರ್ಟ್ ಹಿಜಾಬನ್ನು ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೊಳಿಸುವುದು ಸರ್ಕಾರದ ವಿವೇಚನೆಗೆ ಬಿಟ್ಟಿದೆ. ಒಂದೊಮ್ಮೆ ಸುಪ್ರೀಂ ಕೋರ್ಟ್ ಎತ್ತಿ ಹಿಡಿದರೂ ಅದನ್ನೇ ಹಿಡಿಯಬೇಕು. ಹಾಗೆ ಆದೇಶ ಬಂದರೆ ಸರ್ಕಾರ ವಿವೇಚನೆ ಬಳಸಿ ಸುತ್ತೋಲೆ ಹಿಂತೆಗೆದುಕೊಳ್ಳಬಹುದು. ತೀರಾ ಅವೈಜ್ಞಾನಿಕವಾದ ಮೀಸಲಾತಿ ರದ್ಧತಿ ಆದೇಶವನ್ನು ಕೂಡ ಸುಪ್ರೀಂ ಕೋರ್ಟ್ ತಳ್ಳಿ ಹಾಕುವ ಸಾಧ್ಯತೆಯೇ ಹೆಚ್ಚು. ಮುಸ್ಲಿಮರು ಸಂಯಮ ವಹಿಸುವುದು ಉತ್ತಮ. ಅವಸರ ತೋರಿ ಒಂದಕ್ಕಾಗಿ ಇನ್ನೊಂದು ಕಳೆದುಕೊಳ್ಳುವುದಕ್ಕಿಂತ ಸಂಯಮವಹಿಸಿ ಎರಡನ್ನು ಉಳಿಸಿಕೊಳ್ಳುವುದೇ ಉತ್ತಮ.
ಮುಷ್ತಾಕ್ ಹೆನ್ನಾಬೈಲ್
ಲೇಖಕರು
ಇದನ್ನೂ ಓದಿ- http://ಮರು ಗಣತಿಯ ಮೌಲ್ಯವೆಷ್ಟು….