ಬೆಂಗಳೂರು : ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ಮೂವರು ಅಭ್ಯರ್ಥಿಗಳಲ್ಲಿ ಪವನ್ ಖೇರಾ ಎಂಬುವವರ ಹೆಸರು ಕಾಣಿಸಿಕೊಂಡಿದೆ. ಈ ಪವನ್ ಖೇರಾ ಯಾರು? ಕರ್ನಾಟಕಕ್ಕೂ ಇವರಿಗೂ ಏನು ಸಂಬಂಧ? ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಿಂದ ಆಯ್ಕೆ ಮಾಡಲು ಆ ಪಕ್ಷದ ನಾಯಕರು, ಕಾರ್ಯಕರ್ತರು ಯಾರೂ ಕಾಣಿಸಲಿಲ್ಲವೇ? ಉತ್ತರ ಭಾರತದ ನಿರಾಶ್ರಿತ ರಾಜಕಾರಣಿಯನ್ನು ಆಯ್ಕೆ ಮಾಡಲು ಏನು ಕಾರಣ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಪ್ರಶ್ನಿಸಿದ್ದಾರೆ.
ತಮ್ಮ x ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, ದೆಹಲಿ ಹೈಕಮಾಂಡ್ ಪಕ್ಷಗಳು ಮೊದಲಿನಿಂದಲೂ ಕನ್ನಡಿಗರ ಮೇಲೆ ಸವಾರಿ ಮಾಡುತ್ತಲೇ ಬಂದಿವೆ. ಕರ್ನಾಟಕದಿಂದ ಭಾರತೀಯ ಜನತಾ ಪಕ್ಷ ಆಯ್ಕೆ ಮಾಡಿದ ನಿರ್ಮಾಲಾ ಸೀತಾರಾಮನ್ ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಏನು? ಕನ್ನಡಿಗರ ಮೂಲಕ ಆಯ್ಕೆಯಾಗಿದ್ದೇನೆಂಬ ಕನಿಷ್ಠ ಸೌಜನ್ಯ, ಉಪಕಾರ ಪ್ರಜ್ಞೆಯೂ ಇಲ್ಲದ ಅವರು ಕರ್ನಾಟಕಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಹಣಕಾಸು ಹಂಚಿಕೆಯನ್ನೂ ನೀಡಲಿಲ್ಲ. ಇಂಥವರನ್ನು ಆಯ್ಕೆ ಮಾಡಿ ಏನು ಪ್ರಯೋಜನವಾಗಿದೆ ಎಂದು ಕೇಳಿದ್ದಾರೆ.
ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವುದು ಕೇವಲ ನಾಲ್ಕು ರಾಜ್ಯಗಳಲ್ಲಿ. ಅದರಲ್ಲೂ ಕರ್ನಾಟಕದ ಜನತೆ ವಿಶ್ವಾಸ ಇಟ್ಟು ದೊಡ್ಡ ಬಹುಮತ ನೀಡಿ ಗೆಲ್ಲಿಸಿದ್ದಾರೆ. ಕನ್ನಡಿಗರ ಈ ಔದಾರ್ಯವನ್ನು ಆ ಪಕ್ಷ ಮರೆಯುವಂತಿಲ್ಲ. ಹೀಗಿರುವಾಗ ಅನ್ಯರಾಜ್ಯಗಳ ರಾಜಕೀಯ ನಾಯಕರನ್ನು ಕರ್ನಾಟಕದಿಂದ ಆಯ್ಕೆ ಮಾಡುವ ಅಗತ್ಯವೇನು? ಕನ್ನಡಿಗರಿಗೆ ರಾಜ್ಯಸಭೆಯಲ್ಲಿ ಕುಳಿತುಕೊಳ್ಳಲು ಯೋಗ್ಯತೆ ಇಲ್ಲ ಎಂದು ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡಿದೆಯೇ? ಎಂದು ಕೇಳಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಘಟಕ ಹೈಕಮಾಂಡ್ ತೀರ್ಮಾನವನ್ನು ಧಿಕ್ಕರಿಸಬೇಕು. ಇನ್ನಾದರೂ ಹೈಕಮಾಂಡ್ ಗುಲಾಮಗಿರಿಯನ್ನು ಬಿಟ್ಟು ಪವನ್ ಖೇರಾ ಅವರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಬೇಕು. ಆದರೆ ಆ ಪಕ್ಷದ ಇತಿಹಾಸವನ್ನು ಗಮನಿಸಿದರೆ ಹೈಕಮಾಂಡ್ ಏನೇ ದಬ್ಬಾಳಿಕೆ ಮಾಡಿದರೂ ಅದನ್ನು ವಿರೋಧಿಸುವ ಎದೆಗಾರಿಕೆ ಅದರ ನಾಯಕರಿಗೆ ಇಲ್ಲ. ಈ ರಾಜಕೀಯ ದಾಸ್ಯದಿಂದ ಹೊರಬರಲು ಅವರಿಗೆ ಸಾಧ್ಯವಾಗಿಯೇ ಇಲ್ಲ. ಇದನ್ನೇ ನಾವು ಹೈಕಮಾಂಡ್ ಗುಲಾಮಗಿರಿ ಎಂದು ಕರೆಯುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪವನ್ ಖೇರಾ ಆಯ್ಕೆಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ವಿರೋಧಿಸಬೇಕು. ಯಾಕೆಂದರೆ ಅವರಿಗೆ ಸಿಗಬೇಕಾದ ಸ್ಥಾನ ಇನ್ಯಾವುದೋ ರಾಜ್ಯದ ನಾಯಕನಿಗೆ ಸಿಗುತ್ತಿದೆ. ಕಾಂಗ್ರೆಸ್ ಪಕ್ಷ ತಕ್ಷಣ ತನ್ನ ನಿರ್ಧಾರ ಬದಲಿಸಿ, ಕನ್ನಡಿಗರಿಗೆ ಆ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಆ ಪಕ್ಷ ತನ್ನ ಕಾಲ ಮೇಲೆ ತಾನೇ ಕೊಡಲಿ ಪೆಟ್ಟು ಹಾಕಿಕೊಂಡಂತಾಗುತ್ತದೆ. ಕರ್ನಾಟಕದ ಜನತೆಯಲ್ಲಿ ಜಾಗೃತಿ ಮೂಡಿಸಿ, ಈ ಇಂಥ ಅನ್ಯಾಯಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ಸಂಘಟಿಸಲಿದೆ ಎಂದು ಎಚ್ಚರಿಸಿದ್ದಾರೆ.

