ಮಾಡ್ರನ್ ಜಗತ್ತಿನ ಕೊಡುಗೆಯಾದ ಮಾಲ್ ನಲ್ಲಿ ಪಾತ್ರೆಯಿಂದ ಹಿಡಿದು, ಬಟ್ಟೆಯಿಂದ ಹಿಡಿದು, ಚಪ್ಪಲಿಯಿಂದ ಹಿಡಿದು ತರಕಾರಿ ಹಣ್ಣು ಹಂಪಲು ಎಲ್ಲವೂ ಸುಲಭವಾಗಿ ಸಿಕ್ಕಂತೆ ಹೆಣ್ಣು ಸಿಗುತ್ತಾಳೆಂಬ ಭ್ರಮೆಯ ಮನಸ್ಥಿತಿಯಿಂದ ಗಂಡಸರು ಆಚೆಗೆ ಬರಬೇಕಿದೆ. ಇಲ್ಲಿ ಪ್ರತಿಯೊಬ್ಬರ ಸ್ಪೇಸ್ ಬಹಳ ಮುಖ್ಯ. ಅದನ್ನು ದುರಪಯೋಗ ಮಾಡಿಕೊಳ್ಳಲು ನಾವು ವಸ್ತುಗಳಲ್ಲ.. ನಾವು ಸುಲಭಕ್ಕೆ ಸಿಗುವವರೂ ಅಲ್ಲ – ಶೃಂಗಶ್ರೀ ಟಿ, ಉಪನ್ಯಾಸಕಿ.
ಇತ್ತಿಚಿನ ದಿನಗಳಲ್ಲಿ ನಾ ಅನುಭವಿಸುತ್ತಿರುವ ಸಮಸ್ಯೆ ಏನಂದ್ರೆ ಕೆಲವು ಗಂಡಸರ ಸಹವಾಸದಿಂದ ತಪ್ಪಿಸಿಕೊಳ್ಳುವುದು. ಹಾಗಂತ ನನ್ನನ್ನ ಏನಪ್ಪಾ ಇವಳಿಗೆ ಅಷ್ಟೊಂದು ಗಂಡಸರ ಸಹವಾಸವಿದೆಯಾ ಅಂದುಕೊಂಡಿರಾ ಮತ್ತೆ !!.. ಹೌದು ಇವತ್ತಿನ ಈ ಮಾಡ್ರನ್ ಮೆಟೀರಿಯಲಿಸ್ಟಿಕ್ ಪಾಶ್ ಯುಗದಲ್ಲಿ ಎಲ್ಲವೂ ಬಹಳ ಈಸಿಯಾಗಿ ಸಿಕ್ಕಿಬಿಡುತ್ತದೆ. ಎಲ್ಲವನ್ನೂ ಈಸಿಯಾಗಿ ನೋಡಲಾಗುತ್ತದೆ ಕೂಡ. ಹಾಗಂತ ಹೆಣ್ಣಿನ ಸಂಗವೂ ಹಾಗೆಯೇ ದೊರಕುತ್ತದೆ ಎಂದರೆ ಅದು ತಪ್ಪಾದೀತು. ಆದರೆ ಅಂತಹುದೇ ತಪ್ಪಾದ ಗ್ರಹಿಕೆಯಲ್ಲಿ ಇಂದಿನ ಪೀಳಿಗೆ ಮುಂದುವರಿಯುತ್ತಿರುವುದು ಬಹಳ ಅಪಾಯಕಾರಿ.
ಹೆಣ್ಣು ಸ್ವಲ್ಪ ಸಡಿಲದಿಂದ ಸಲುಗೆಯಿಂದ ವರ್ತಿಸಿದಾಕ್ಷಣ ಹೋ.. ಇವಳು ಸುಲಭಕ್ಕೆ ಸಿಗುವವಳು ಎಂಬ ಅಭಿಪ್ರಾಯಕ್ಕೆ ಕೆಲವರು ಬಂದುಬಿಡುತ್ತಾರೆ. ಸ್ನೇಹದಿಂದಲೋ ಗೌರವದಿಂದಲೋ ಮಾತಾಡಿದಾಕ್ಷಣ ಒಂದು ಛಾನ್ಸ್ ನೋಡುವ ಎಂಬ ಆಸೆಯಲ್ಲಿರುತ್ತಾರೆ. ಹೊತ್ತು, ಗಳಿಗೆ ನೋಡದೆ ಎಷ್ಟೆಷ್ಟೊತ್ತಿಗೋ ಕಾಲ್ ಮಾಡುವುದು, ಹೇಗೆ ಬೇಕೋ ಹಾಗೆ ಮೆಸೇಜ್ ಕಳಿಸುವುದು, ಬೇಡ ಎಂದರೂ ಡ್ರಾಪ್ ಮಾಡುತ್ತೇನೆನ್ನುವುದು, ತಮಾಷೆಗೆ ಅಸಭ್ಯವಾಗಿ ಡಬಲ್ ಮೀನಿಂಗ್ ಮಾತಾಡುವುದು, ನಮ್ಮ ಆಕ್ಷನ್ ಗಳನ್ನ ಕಂಟ್ರೋಲ್ ಮಾಡುವುದು, ಮೈ ಮುಟ್ಟಿ ಮಾತಾಡುವುದು, ವಿನಾಕಾರಣ ಬೇಡದ ವಸ್ತುವಿಷಯಗಳ ಬಗೆಗೆ ಮಾತಾಡುವುದು ಹೀಗೆ. ಹುಡುಗಿ ಲಿಬರಲ್ ಮೈಂಡ್ ನವಳು ಅಂತ ಗೊತ್ತಾದರಂತೂ ಮುಗಿಯಿತು ಆಮೇಲಿನ ಮಾತುಕತೆಗಳೇ ಬೇರೆ.
ನನಗೊಂದು ಅರ್ಥವಾಗದ್ದು ಲಿಬರಲ್ ಇದ್ದಾಕ್ಷಣ, ಸ್ವತಂತ್ರವಾಗಿದ್ದಾಕ್ಷಣ ನಾವು ಎಲ್ಲದಕ್ಕೂ ಅವಕಾಶ ಕೊಟ್ಟಿದ್ದೀವಾ?! ಎಷ್ಟೊತ್ತಿಗಾದರೂ ಎಲ್ಲಿಗಾದರೂ ಕರೆದಲ್ಲಿ ಬಂದು ಬಿಡುತ್ತೀವಾ ?! ನಾವೇ ಕೊಡದ ಸ್ಪೇಸ್ ಅನ್ನ ಇನ್ಯಾರೋ ತುಂಬುವುದಾದರೂ ಹೇಗೆ?. ನಾವೇ ಕೊಡದ ಸ್ವಾತಂತ್ರ್ಯವನ್ನು ಅವರು ಕಸಿಯುವುದಾದರೂ ಹೇಗೆ? ಸೂಕ್ಷ್ಮತೆಯನ್ನೇ ಅರ್ಥಮಾಡಿಕೊಳ್ಳದಿದ್ದರೆ ನಮ್ಮೊಟ್ಟಿಗೆ ನಡೆದು ಕೊಳ್ಳುವುದಾದರೂ ಹೇಗೆ.. ಇವೆಲ್ಲವೂ ನಿಜಕ್ಕೂ ಆಶ್ಚರ್ಯ.
ಒಮ್ಮೆ ನನ್ನ ಗೆಳೆಯನನ್ನು ಎಷ್ಟೋ ವರುಷಗಳ ನಂತರ ಭೇಟಿಯಾಗಿದ್ದೆ. ಒಂದು ಪಾರ್ಕ್ ನಲ್ಲಿ ಕುಳಿತು ಮಾತಾಡುವ ನಿರ್ಧಾರಕ್ಕೆ ಬಂದಿದ್ದೆವು. ದೂರವಿದ್ದ ಕಾರಣ ಅವನ ಬೈಕ್ ಏರಿ ಹೊರಟ ನನಗೆ ವಿಚಿತ್ರ ಅನುಭವಗಳಾದವು. ನನ್ನೂರು ತೀರಾ ಹಳ್ಳಿಯಲ್ಲದಿದ್ದರೂ ಹಳ್ಳಿಯ ವಾತಾವರಣವೇ. ಅವನೋ ಕೆಲಸಕ್ಕೆಂದು ಬೆಂಗಳೂರು ಸೇರಿದ್ದವ. ಗಾಡಿ ಹತ್ತಿದೊಡನೆ ಬಹಳಾನೇ ಸ್ಪಿಡಾಗಿ ಓಡಿಸಲು ಶುರು ಮಾಡಿದ. ಬೇಕು ಬೇಕಂತಲೇ ಬ್ರೇಕ್ ಹಾಕುತ್ತಿದ್ದ. ಎಷ್ಟು ಹೇಳಿದರೂ ಕೇಳದಾತ “ಹಿಡ್ಕೊಂಡು ಕೂರು ಯಾಕಿಷ್ಟು ದೂರ ಕೂತಿದ್ದಿಯಾ? ಹತ್ತಿರ ಬಾ ಬೆಂಗಳೂರಿನಲ್ಲೆಲ್ಲಾ ಇವೆಲ್ಲ ಮಾಮೂಲಿ” ಅಂತೆಲ್ಲಾ ಭಾಷಣ ಬಿಗಿದ. ಒಂದೊಳ್ಳೆ ಸ್ನೇಹವನ್ನು, ಸಲುಗೆಯನ್ನು ಮೋಜಿಗಾಗಿ ದುರುಪಯೋಗ ಮಾಡಿಕೊಳ್ಳುವ ಅವರುಗಳ ಮನಸ್ಥಿತಿಯ ಹಿಂದೆ ಹೆಣ್ಣು ಸುಲಭವಾಗಿ ಸಿಗುತ್ತಾಳೆ, ಲಿಬರಲ್ ಇರುವ ಹುಡುಗಿಯರ ಸ್ವಾತಂತ್ರ್ಯ ಹರಣಗೊಳಿಸುವ, ತನಗೆ ಹೇಗೆ ಬೇಕೋ ಹಾಗೆ ಉಪಯೋಗಿಸುವ ಎನ್ನುವ ಹುನ್ನಾರವೇ ಅಡಗಿದೆ.
ಸಾವಿರಾರು ವರ್ಷಗಳಿಂದ ಹೆಣ್ಣನ್ನು ಮನೆಯಲ್ಲಿಯೇ ನಾಲ್ಕು ಗೋಡೆಗಳ ಮಧ್ಯೆಯೇ ಇರಿಸಿ ಬಂಧಿಸಲಾಗುತ್ತಿತ್ತು. ಈಗ ಹೆಣ್ಣಿಗೆ ಓದುವುದಕ್ಕೆ ಬರೆಯುವುದಕ್ಕೆ ಸ್ವಾತಂತ್ರ್ಯ ದೊರಕಿದೆ. ಅವಳ ಹಕ್ಕುಗಳನ್ನು ಸಂಪೂರ್ಣ ಪಡೆಯಲು ಹೋರಾಡುತ್ತಲೇ ಇದ್ದಾಳೆ. ಒಂದಷ್ಟು ಹೆಣ್ಣುಮಕ್ಕಳು ತೀರಾ ಸಾಂಪ್ರದಾಯಿಕ ಮನಸ್ಥಿತಿಗಳಿಂದ ದೂರ ಬಂದು ಹೊಸ ಜಗತ್ತಿಗೆ ತಮ್ಮನ್ನ ತಾವು ತೆರೆದು ಕೊಂಡಿದ್ದಾರೆ; ಮುಕ್ತವಾಗಿ ಹಂಚಿಕೊಳ್ಳುವ ನಿಲುವು ತಾಳಿದ್ದಾರೆ. ಆದರೆ ಇಲ್ಲಿ ಅದೇ ಸಮಸ್ಯೆ. ನಾವು ಟ್ರೆಡಿಷನಲ್ ಅಲ್ಲ ಎಂದು ಗೊತ್ತಾದಾಕ್ಷಣ ಕೆಲವರ ಚಹರೆಯೇ ಬೇರೆ. ನಮ್ಮ ತನ ಇಲ್ಲಿ ದುರುಪಯೋಗ ಗೊಳ್ಳುವುದೇ ಹೆಚ್ಚು.
ನಮ್ಮ ಲಿಬರಲ್ ಫ್ರೀ ಜೀವನ ಶೈಲಿ ಕೆಲವರಿಗೆ ಆಡುವ ವಸ್ತು. ಸುಲಭವಾಗಿ ಫ್ಲರ್ಟ್ ಮಾಡುವುದಕ್ಕೆ, ಟೈಂ ಪಾಸ್ ಮಾಡುವುದಕ್ಕೆ ಇದೊಂದು ಸುಲಭದ ದಾರಿ. ಮೊದಲು ಈ ಎಲ್ಲಾ ಸೂಕ್ಷ್ಮತೆಗಳನ್ನ ಅರ್ಥಮಾಡಿಕೊಳ್ಳಬೇಕು.
ಮಾಡ್ರನ್ ಜಗತ್ತಿನ ಕೊಡುಗೆಯಾದ ಮಾಲ್ ನಲ್ಲಿ ಪಾತ್ರೆಯಿಂದ ಹಿಡಿದು, ಬಟ್ಟೆಯಿಂದ ಹಿಡಿದು ಚಪ್ಪಲಿಯಿಂದ, ಹಿಡಿದು ತರಕಾರಿ ಹಣ್ಣು ಹಂಪಲು ಎಲ್ಲವೂ ಸುಲಭವಾಗಿ ಸಿಕ್ಕಂತೆ ಹೆಣ್ಣು ಸಿಗುತ್ತಾಳೆಂಬ ಭ್ರಮೆಯ ಮನಸ್ಥಿತಿಯಿಂದ ಆಚೆಗೆ ಬರಬೇಕಿದೆ. ಇಲ್ಲಿ ಪ್ರತಿಯೊಬ್ಬರ ಸ್ಪೇಸ್ ಬಹಳ ಮುಖ್ಯ. ಅದನ್ನು ದುರಪಯೋಗ ಮಾಡಿಕೊಳ್ಳಲು ನಾವು ವಸ್ತುಗಳಲ್ಲ.. ನಾವು ಸುಲಭಕ್ಕೆ ಸಿಗುವವರೂ ಅಲ್ಲ.
ಶೃಂಗ ಶ್ರೀ ಟಿ
ಅತಿಥಿ ಉಪನ್ಯಾಸಕಿ, ಶಿವಮೊಗ್ಗ.
ಇದನ್ನೂ ಓದಿ- ಗ್ಯಾಸ್ ಬೆಲೆ ಏರಿಕೆ |ನೌಟಂಕಿ ಬೀಸಿದ ಮಾಯಾಜಾಲ