ಮತ ಮಾರಾಟ ಜನತಂತ್ರಕ್ಕೆ ಮಾರಕ

Most read

ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಮೌಲ್ಯ ಘನತೆಯನ್ನು ಕಳೆದುಕೊಳ್ಳುವುದರಲ್ಲಿ ಮತ ಮಾರಾಟವೂ ಪ್ರಮುಖ ಕಾರಣವಾಗಿದೆ. ಪ್ರಜಾಪ್ರಭುತ್ವದ ಅಳಿವು ಉಳಿವು ಪ್ರಾಮಾಣಿಕ ಮತದಾನದ ಪ್ರಕ್ರಿಯೆಯಲ್ಲಿದೆ.

ಸ್ವಾತಂತ್ರ್ಯ ಬಂದು ಇಷ್ಟು ದಶಕಗಳಾದರೂ ಇನ್ನೂ ಬಡತನ ನಿವಾರಣೆಯಾಗಿಲ್ಲ. 80 ಕೋಟಿ ಬಡವರು ಸರಕಾರ ಕೊಡುವ ಉಚಿತ ಅಕ್ಕಿ ಪಡೆಯುತ್ತಿದ್ದಾರೆ. ಬಡಜನರು ಹೆಚ್ಚಾಗಿರುವುದರಿಂದ  ಸ್ವಲ್ಪ ಆಸೆ ಆಮಿಷ ಒಡ್ಡಿದಾಗ ಮತವನ್ನೇ ಮಾರಿಕೊಳ್ಳುವ ಅನಿವಾರ್ಯತೆಗೆ ಒಳಗಾಗುತ್ತಾರೆ.

ಈಗಲೂ ಅನಕ್ಷರಸ್ಥರ ಸಂಖ್ಯೆ ಈ ದೇಶದಲ್ಲಿ ಹೆಚ್ಚಿದೆ. ಅಂತವರಿಗೆ ದೇಶ ಪ್ರಜಾಪ್ರಭುತ್ವ, ಸಂವಿಧಾನ, ಸರ್ವಾಧಿಕಾರ ಎನ್ನುವುದು ಅರ್ಥವಾಗುವುದಿಲ್ಲ. ಅರ್ಥ ಮಾಡಿಸುವ ವ್ಯವಸ್ಥೆಯೂ ಇಲ್ಲ. ಹೀಗಾಗಿ ಯಾರು ಹೆಚ್ಚು ಹಣ ಹೆಂಡ ಗೃಹೋಪಯೋಗಿ ವಸ್ತುಗಳನ್ನು ಹಂಚುತ್ತಾರೋ ಅವರ ಪರವಾಗಿ ಮತ ಚಲಾಯಿಸುತ್ತಾರೆ.

ಅನಕ್ಷರತೆ ಹಾಗೂ ಬಡತನ ಇದ್ದಲ್ಲಿ ಮೂಢ ನಂಬಿಕೆಗಳೂ ಹೆಚ್ಚಾಗಿರುತ್ತವೆ. ಅದನ್ನೇ ಬಂಡವಾಳವಾಗಿ ಬಳಸಿಕೊಳ್ಳುವ ರಾಜಕಾರಣಿಗಳು  ಹಾಗೂ ಅವರ ಬೆಂಬಲಿಗರು ಹಣ ಹಂಚಿ ಅದಕ್ಕೆ ಬದಲಾಗಿ ಉಪ್ಪು ಹಾಲು ಮನೆದೇವರುಗಳ ಮೇಲೆಲ್ಲಾ ‘ಮತ ಹಾಕುತ್ತೇವೆ’ ಎಂದು ಆಣೆ ಪ್ರಮಾಣ ಮಾಡಿಸಿ ಕೊಳ್ಳುತ್ತಾರೆ. ಮಹಿಳೆಯರಾದರೆ ತಾಳಿ ಮುಟ್ಟಿ ಪ್ರಮಾಣ ಮಾಡಬೇಕಾಗುತ್ತದೆ. ಇದೊಂದು ರೀತಿ ಭಾವನಾತ್ಮಕ ಬ್ಲಾಕ್ಮೇಲ್. ಮತದಾರರನ್ನು ದೇವಸ್ಥಾನಗಳಿಗೆ ಕರೆದೊಯ್ದು ಪ್ರಮಾಣ ಮಾಡಿಸಿ ಕೊಟ್ಟ ಹಣಕ್ಕೆ ಬದಲಾಗಿ ಗ್ಯಾರಂಟಿ ಪಡೆಯಲಾಗುತ್ತದೆ.

ಕೆಲವು ಊರುಗಳ ದೇವಸ್ಥಾನದ ಆಡಳಿತ ಮಂಡಳಿ ಇಲ್ಲವೇ ಊರ ಮುಖಂಡರನ್ನೇ ಬುಕ್ ಮಾಡಲಾಗುತ್ತದೆ. ಆಯಾ ದೇವಸ್ಥಾನದ ಅಭಿವೃದ್ಧಿಗೆ ಯಾವ ಪಕ್ಷದ ಅಭ್ಯರ್ಥಿ ಹೆಚ್ಚು ಹಣ ಕೊಡುತ್ತಾನೋ ಅಂತವನ ಪರವಾಗಿ ಊರಿಗೆ ಊರೆ ಒಗ್ಗಟ್ಟಾಗಿ ಮತ ಹಾಕುತ್ತದೆ. ಇದೊಂದು ರೀತಿಯಲ್ಲಿ ಹೋಲ್‌ಸೇಲ್ ಮತ ಮಾರಾಟ. 

ಇನ್ನು ಮಠಮಾನ್ಯಗಳು, ಚರ್ಚ್ ಮಸೀದಿಗಳಿಂದಲೂ ಸಹ ತಮ್ಮ ಜಾತಿ ಜನಾಂಗ ಧರ್ಮಗಳ ಜನರನ್ನು ಇಂತಹುದೇ ಪಕ್ಷಕ್ಕೆ ಮತ ಹಾಕಬೇಕು ಎಂದು ಒತ್ತಾಯಿಸಲಾಗುತ್ತದೆ. ಅದರ ಬದಲಾಗಿ ಆ ಧಾರ್ಮಿಕ ಸಂಸ್ಥೆಗಳು ರಾಜಕೀಯ ಲಾಭವನ್ನೂ ಪಡೆದುಕೊಳ್ಳುತ್ತವೆ. ಬೇಕಾದಷ್ಟು ಅನುಕೂಲತೆಗಳನ್ನೂ ಕಾಲಕಾಲಕ್ಕೆ ತಮ್ಮದಾಗಿಸಿಕೊಳ್ಳುತ್ತವೆ. 

ಚುನಾವಣೆಯಲ್ಲಿ ಕೇವಲ ಹಣ ಹೆಂಡ ವಸ್ತುಗಳ ಆಮಿಷ ಮಾತ್ರ ತೋರಲಾಗುತ್ತದೆ ಎಂಬುದು ಅರ್ಧಸತ್ಯ. ಭಾವನಾತ್ಮಕ ಉನ್ಮಾದವೂ ಸಹ ಮತವಾಗಿ ಪರಿವರ್ತನೆಯಾಗುತ್ತದೆ. ಮಸೀದಿ ಧ್ವಂಸ, ರಾಮಜನ್ಮಭೂಮಿ ವಿವಾದ, ರಾಮಮಂದಿರ ನಿರ್ಮಾಣ, ರಾಮದೇವರ ಪ್ರಾಣ ಪ್ರತಿಷ್ಠಾಪನೆ, ಹನುಮಧ್ವಜ ವಿವಾದಗಳ ಮೂಲಕ ಜನರನ್ನು ಪ್ರಚೋದಿಸಿ ಮತಕ್ರೋಢಿಕರಣ ಮಾಡಲಾಗುತ್ತದೆ. 

ಅಂದರೆ ಮತದಾರರು ಯೋಗ್ಯ ಅಭ್ಯರ್ಥಿಯ ಅರ್ಹತೆಯನ್ನು ಅಳೆದು ತಮ್ಮ ಪ್ರತಿನಿಧಿಯಾಗಿ ಅಸೆಂಬ್ಲಿ ಇಲ್ಲವೇ ಪಾರ್ಲಿಮೆಂಟಿಗೆ ಆಯ್ಕೆ ಮಾಡಿ ಕಳುಹಿಸಬೇಕು ಎಂಬುದು ಸಂವಿಧಾನದ ಆಶಯ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಮತದಾರರಿಗೆ ಆಮಿಷ ಒಡ್ಡಿ, ಸುಳ್ಳು ಭರವಸೆಯನ್ನು ಕೊಟ್ಟು, ಭಾವನಾತ್ಮಕ ಉನ್ಮಾದ ಹುಟ್ಟಿಸಿ ಮತಗಳನ್ನು ಪಡೆದು ಅಧಿಕಾರ ಪಡೆಯುವ ಪ್ರಯತ್ನ ಪ್ರತಿ ಚುನಾವಣೆಯ ಅನಧಿಕೃತ ನಿಯಮವಾದಂತಿದೆ.

ಜನರನ್ನು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸಬಲೀಕರಣ ಗೊಳಿಸುವ ಕೆಲಸ ಸರಕಾರಗಳೇ ಅವಿರತವಾಗಿ ಮಾಡಬೇಕಿದೆ. ಆದರೆ ಅದನ್ನು ಆಳುವ ವರ್ಗಗಳು ಮಾಡುವುದಿಲ್ಲ. ಮತದಾರರನ್ನು ಎಜುಕೇಟ್ ಮಾಡಿದಷ್ಟೂ ಜನರು ಪ್ರಶ್ನೆ ಕೇಳುತ್ತಾರೆ. ವಿವೇಚನೆ ಬಳಸಿ ಮತ ಚಲಾಯಿಸುತ್ತಾರೆ. ಇದು ಈ ಪಕ್ಷಗಳಿಗೆ ಬೇಕಿಲ್ಲ. ಜನರು ಬಡತನದಲ್ಲಿ ಇದ್ದಷ್ಟೂ, ಹೆಚ್ಚು ಶಿಕ್ಷಿತರಾಗದೇ ಇದ್ದಷ್ಟೂ ವೃತ್ತಿಪರ ರಾಜಕಾರಣಿಗಳಿಗೆ ಅನುಕೂಲ. 

ರಾಜಕೀಯವೆಂಬುದು ಜನಸೇವೆಯ ಮುಖವಾಡ ಧರಿಸಿ ಅಧಿಕಾರ ಪಡೆಯುವ ವಿದ್ಯಮಾನ. ಅಧಿಕಾರಕ್ಕಾಗಿ ಚುನಾವಣೆ ಗೆಲ್ಲಬೇಕು. ಹೇಗಾದರೂ ಗೆಲ್ಲಲು ಮತದಾರರನ್ನು ಆಕರ್ಷಿಸಬೇಕು. ಅದಕ್ಕಾಗಿ ಅಡ್ಡದಾರಿಗಳನ್ನು ಹಿಡಿಯಬೇಕು. ಪವರ್ ಪಾಲಿಟಿಕ್ಸ್ ಈಗ ಸರ್ವಿಸ್ ಸೆಕ್ಟರ್ ಆಗಿರದೆ ಬೃಹತ್ ಉದ್ಯಮವಾಗಿದೆ. ಕೋಟ್ಯಾಂತರ ರೂಪಾಯಿ ಹಣವನ್ನು ಇನ್ವೆಸ್ಟ್ ಮಾಡಿ ನೂರಾರು ಕೋಟಿಗಳ ಲಾಭವನ್ನು ಮಾಡಿಕೊಳ್ಳುವುದು ಚುನಾವಣೆಗೆ ಸ್ಪರ್ಧಿಸಿದ ಬಹುತೇಕ ಪ್ರಮುಖ ಪಕ್ಷಗಳ ಉದ್ದೇಶವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಹಲವಾರು ಜನರು ರಾಜಕೀಯದ ಆಟಗಳಿಂದ ಹತಾಶರಾಗಿ ಮತ ಹಾಕಲು ಆಸಕ್ತಿ ತೋರುವುದಿಲ್ಲ. ‘ಯಾರೇ ಅಧಿಕಾರಕ್ಕೆ ಬಂದರೂ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕುವುದಿಲ್ಲ’ ಎನ್ನುವ ನಿರಾಸೆಯೂ ಜನರ ಮನದಾಳದಲ್ಲಿದೆ. ಹೀಗಾಗಿ ಮತದಾನ ಪ್ರಮಾಣ ಯಾವಾಗಲೂ ಕಡಿಮೆ ಇರುತ್ತದೆ. ಎಂದೂ ನೂರಕ್ಕೆ ನೂರು ಮತಚಲಾವಣೆ ನಡೆದ ಉದಾಹರಣೆಗಳೇ ಇಲ್ಲ. 

ಮತದಾರರು ಪ್ರಜ್ಞಾವಂತರಾಗಿ ಇರುವುದರಲ್ಲೇ ಅರ್ಹ ಅಭ್ಯರ್ಥಿಗೆ ತಪ್ಪದೇ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಲೇ ಬೇಕಿದೆ. ಚುನಾವಣೆಗೆ ಸ್ಪರ್ಧಿಸಿದವರಲ್ಲಿ ಯಾರೂ ಅರ್ಹರು ಇಲ್ಲದೇ ಹೋದರೆ, ಭ್ರಷ್ಟರು ದುಷ್ಟರೇ ಉಮೇದುವಾರರಾಗಿದ್ದರೆ ಅನಿವಾರ್ಯವಾಗಿ ನೋಟಾ ಆಪ್ಶನ್ ಬಳಸಬಹುದಾಗಿದೆ. ಬಹುಮತದಿಂದ ಓಟಿಂಗ್ ಆಗದೇ ಹೋದರೆ ಭಾವಪ್ರಚೋದನೆ ಮಾಡಿದ ಅಭ್ಯರ್ಥಿ ಅಲ್ಪಮತದಿಂದ ಆಯ್ಕೆಯಾಗುವ ಸಂಭವ ಹೆಚ್ಚಿದೆ. ಹಣ ಹೆಂಡ ಹಂಚಿದ ಅತೀ ಭ್ರಷ್ಟ ವ್ಯಕ್ತಿಯೇ ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ಅಧಿಕವಾಗಿದೆ. ಭ್ರಷ್ಟರನ್ನು, ದುಷ್ಟರನ್ನು, ಲೂಟಿಕೋರರನ್ನು, ಮತಾಂಧರನ್ನು, ಧರ್ಮಾಂಧರನ್ನು ಸೋಲಿಸಬೇಕೆಂದರೆ ಚುನಾವಣೆಯ ದಿನ ಎಲ್ಲರೂ ಮತ ಚಲಾಯಿಸಬೇಕಿದೆ. ಇರುವುದರಲ್ಲಿಯೇ ಸೂಕ್ತ ಎನ್ನಿಸಿದ, ಕೋಮುವಾದಿಯಲ್ಲದ, ಕೆಲಸಗಾರ ಅಭ್ಯರ್ಥಿಗೆ ಓಟ್ ಮಾಡಿ ಸಾಂವಿಧಾನಿಕ ಹಕ್ಕನ್ನು ಚಲಾಯಿಸಬೇಕಿದೆ. ಜನವಿರೋಧಿ ವ್ಯಕ್ತಿಯನ್ನು, ಜೀವವಿರೋಧಿ ಪಕ್ಷವನ್ನು ಆರಿಸಿ ಕಳುಹಿಸಿದ್ದೇ ಆದರೆ ಅದರ ದುಷ್ಪರಿಣಾಮಗಳನ್ನೂ ಜನತೆಯೇ ಅನುಭವಿಸ ಬೇಕಾಗುತ್ತದೆ. 

ಆದ್ದರಿಂದ ಎಚ್ಚರ.. ನೋಟಿಗೆ ಓಟಿತ್ತರೆ ಭ್ರಷ್ಟನನ್ನು ಆರಿಸಿದಂತೆ. ಆಮಿಷಕ್ಕೆ ಒಳಗಾಗಿ ಓಟಾಯಿಸಿದರೆ ಮತಭ್ರಷ್ಟರಾದಂತೆ. ಭಾರತದ ಪ್ರಜಾತಂತ್ರವನ್ನು ರಕ್ಷಿಸುವುದು ಹಾಗೂ ಸಂವಿಧಾನದ ಆಶಯವನ್ನು ಮುಂದುವರೆಸುವುದು ಪ್ರಾಮಾಣಿಕ ಮತದಾರರ ಮತದ ಮೇಲೆ ಅವಲಂಬಿತವಾಗಿದೆ. ಎಲ್ಲರೂ ಯೋಚಿಸಬೇಕು, ವಿವೇಚನೆಯನ್ನು ಉಪಯೋಗಿಸಬೇಕು, ಮತ ಚಲಾಯಿಸಬೇಕು.‌ ಮತ ದಾನವಲ್ಲ, ಮತ ನಮ್ಮ ಹಕ್ಕು.‌ ಅದಕ್ಕೆ ಪ್ರತಿಫಲವಾಗಿ ಜನರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವುದು ಆಯ್ಕೆಯಾದವರ ಕರ್ತವ್ಯ. ಪ್ರಜಾಪ್ರಭುತ್ವ ಚಿರಾಯುವಾಗಲಿ. ಮತದಾರ ಪ್ರಭುಗಳು ಪ್ರಜ್ಞಾವಂತರಾಗಲಿ. ಸಂವಿಧಾನದ ಆಶಯವನ್ನು ಪಾಲಿಸುವವರು ಅಧಿಕಾರಕ್ಕೆ ಬರಲಿ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಮೀನನ್ನು ಕ್ರಿಮಿನಲೈಸ್ ಮಾಡಿದ್ರೆ ಮೋದಿಗೇನು ಲಾಭ ಗೊತ್ತಾ ?!

More articles

Latest article