ದಾಳಿಯಾಗಿದ್ದು ಮುಸ್ಲಿಂ ಸಮುದಾಯದವರ ಮೇಲೆ, ದೌರ್ಜನ್ಯವಾಗಿದ್ದು ಕ್ರೈಸ್ತ ಜನಾಂಗದವರ ಮೇಲೆ ಎಂದು ಹಿಂದೂ ಸಮುದಾಯದವರು ಸುಮ್ಮನಿದ್ದರೆ ಮುಂದೊಂದು ದಿನ ಈ ಹಿಂದುತ್ವವಾದಿ ಶಕ್ತಿಗಳು ಬಹುಸಂಖ್ಯಾತ ದಲಿತರನ್ನು, ಹಿಂದುಳಿದವರನ್ನು, ಆದಿವಾಸಿಗಳನ್ನು ಹಾಗೂ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಿ ಹಿಂದೂ ಧರ್ಮದ ಹೆಸರಲ್ಲಿ ವೈದಿಕ ಧರ್ಮವನ್ನು ಸ್ಥಾಪಿಸುವುದರಲ್ಲಿ ಸಂದೇಹವಿಲ್ಲ. ಮತ್ತೆ ಈ ದೇಶ ಸನಾತನಿ ವೈದಿಕಶಾಹಿಗಳ ಕೈಗೆ ಹೋಗಬಾರದು ಎಂದರೆ ಸಮಸ್ತ ಭಾರತೀಯರು ಜಾಗೃತರಾಗಬೇಕಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಪ್ರಕ್ಷುಬ್ಧ ಬಾಂಗ್ಲಾ ದೇಶದಲ್ಲಿ ಕೆಲವು ಮುಸ್ಲಿಂ ಧರ್ಮೀಯ ಮತಾಂಧರು ಅಲ್ಲಿಯ ಅಲ್ಪಸಂಖ್ಯಾತ ಹಿಂದೂ ಧರ್ಮೀಯ ದೀಪು ಚಂದ್ರ ದಾಸ್ ಎನ್ನುವ ಯುವಕನನ್ನು ಬೆತ್ತಲೆ ಮಾಡಿ ನೇಣು ಹಾಕಿ ಸಾರ್ವಜನಿಕವಾಗಿ ಸುಟ್ಟು ಹಾಕಿದ್ದರು, ತದನಂತರ ಅಮೃತ್ ಮಂಡಲ್ ಎನ್ನುವ ಯುವಕನನ್ನೂ ಕೊಂದು ಹಾಕಿದರು. ಇದು ಖಂಡಿತಾ ಖಂಡನೀಯ, ಮಾನವೀಯತೆಗೆ ಮಾಡಿದ ಗಾಯ. ಭಾರತದಾದ್ಯಂತ ಸಂಘ ಪರಿವಾರದವರು ಹಿಂದೂಗಳ ಮೇಲಿನ ಹಲ್ಲೆ ಮತ್ತು ಕೊ*ಲೆಯ ಬಗ್ಗೆ ಆಕ್ರೋಶಗೊಂಡು ಪ್ರತಿಭಟನೆಗೆ ಇಳಿದವು.
ಆಯ್ತು ಒಂದು ಅಮಾನವೀಯ ಘಟನೆಯ ವಿರುದ್ಧ ಪ್ರತಿಭಟಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಹೀಗೆ ಹಿಂದೂ ಧರ್ಮೀಯ ಯುವಕರ ಮೇಲೆ ಆದ ದೌರ್ಜನ್ಯವನ್ನು ಖಂಡಿಸುವ ಇದೇ ಸಂಘ ಪರಿವಾರ 2025 ಡಿಸೆಂಬರ್ 25 ರ ಕ್ರಿಸ್ಮಸ್ ದಿನದಂದು ಮಾಡಿದ್ದಾದರೂ ಏನು? ಮತ್ತದೇ, ಅಲ್ಪಸಂಖ್ಯಾತ ಧರ್ಮೀಯರಾದ ಕ್ರಿಶ್ಚಿಯನ್ನರ ಮೇಲೆ ಭಾರತದಾದ್ಯಂತ ಹಲವಾರು ರಾಜ್ಯಗಳಲ್ಲಿ ದೌರ್ಜನ್ಯವೆಸಗಿದ್ದು ಅಸಮರ್ಥನೀಯ. ಬೇರೆ ದೇಶದ ಮತಾಂಧರು ಧರ್ಮಾಧಾರಿತವಾಗಿ ಅಲ್ಪಸಂಖ್ಯಾತರ ಮೇಲೆ ಕ್ರೌರ್ಯ ಮೆರೆದಿದ್ದು ಎಷ್ಟು ಖಂಡನೀಯವೋ, ನಮ್ಮ ದೇಶದ ಹಿಂದುತ್ವವಾದಿ ಸಂಘಟನೆಯ ಮತಾಂಧರು ಅಲ್ಪಸಂಖ್ಯಾತ ಕ್ರಿಶ್ಚಿಯನ್ ಹಬ್ಬದ ದಿನ ಮಾಡಿದ ದಮನವೂ ಖಂಡನೀಯವೇ ಆಗಿದೆ. ಪ್ರಪಂಚದಾದ್ಯಂತ ಡಿಸೆಂಬರ್ 25 ರಂದು ಕ್ರಿಸ್ಮಸ್ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ. ಆದರೆ ಭಾರತದಲ್ಲಿ ಮಾತ್ರ ಸಂಭ್ರಮವನ್ನು ಹಾಳು ಮಾಡುವ ದುಷ್ಕೃತ್ಯಗಳು ನಡೆದಿವೆ.
ಹಿಂದೂ ಮತಾಂಧರ ದೌರ್ಜನ್ಯ :

• ಆಸ್ಸಾಮಿನ ನಲ್ಬಾರಿಯ ಸಂತ ಮೇರಿ ಕ್ರಿಶ್ಚಿಯನ್ ಶಾಲೆಯಲ್ಲಿ ಕ್ರಿಸ್ಮಸ್ ಅಲಂಕಾರಗಳನ್ನು ವಿಶ್ವ ಹಿಂದೂ ಪರಿಷತ್ ನ ಗುಂಪು ನಾಶಪಡಿಸಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ವ್ಯಾಪಾರಸ್ಥರನ್ನು ಬೆದರಿಸಿದ್ದಾರೆ. ಕ್ರಿಸ್ಮಸ್ ಅಲಂಕಾರಿಕ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆ. VHP ಯ ನಾಲ್ವರನ್ನು ಬಂಧಿಸಲಾಗಿದೆಯಾದರೂ ವಿಶ್ವ ಹಿಂದೂ ಪರಿಷತ್ ಈ ಘಟನೆಯನ್ನು ಖಂಡಿಸಿಲ್ಲ.
• ಛತ್ತಿಸ್‌ಘಡದಲ್ಲಿ ಭಜರಂಗದಳದ ಗುಂಡಾಗಳ ಗುಂಪೊಂದು ಮಾಲ್ ನಲ್ಲಿ ಸ್ಥಾಪಿಸಲಾಗಿದ್ದ ಸಾಂತಾಕ್ಲಾಜಾ ಪುತ್ತಳಿಯನ್ನು ಒಡೆದುಹಾಕಿ ಭಯಾನಕ ವಾತಾವರಣವನ್ನು ಹುಟ್ಟಿಸಿದರು.
• ಕೇರಳದ ಪಾಲಕ್ಕಾಡ್ ನಲ್ಲಿ ಮಕ್ಕಳ ಕ್ಯಾರೋಲ್ ಮೇಲೆ RSS-BJP ಸಂಬಂಧಿಸಿದ ವ್ಯಕ್ತಿ ದಾಳಿ ಮಾಡಿ ಆತಂಕ ಸೃಷ್ಟಿಸಿದ್ದಾನೆ. ಇಲ್ಲಿವರೆಗೂ ಈ RSS-BJP ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸಿಲ್ಲ.
• ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ ಪ್ರಾರ್ಥನಾ ಸಭೆಗಳು ಹಾಗೂ ಕ್ಯಾರೋಲ್ ಪ್ರಕ್ರಿಯೆಗಳಲ್ಲಿ ಕ್ರಿಶ್ಚಿಯನ್ ಗುಂಪುಗಳ ಮೇಲೆ ಹಿಂದೂಪರ ಸಂಘಟನೆಯ ಮತಾಂಧರು ಹಿಂಸಾಚಾರ ನಡೆಸಿದ್ದು ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಿದ್ದಾರೆ. ಬಿಜೆಪಿ ಮೌನವಾಗಿದೆ.
• ಮಧ್ಯಪ್ರದೇಶದ ಬಿಜೆಪಿಯ ಜಿಲ್ಲಾಧ್ಯಕ್ಷೆಯ ಮುಂದಾಳತ್ವದ ಗುಂಪೊಂದು ಅಂಧಮಹಿಳೆಯ ಮೇಲೆ ಹಲ್ಲೆ ಮಾಡಿ ಹಿಂಸಿಸಿದರು.
• ಉತ್ತರಪ್ರದೇಶದ ಬರೇಲಿಯಲ್ಲಿ ಕೆಲವು ಮತಾಂಧರ ಗುಂಪು ಚರ್ಚ್ ಮುಂದೆ ಹೋಗಿ ಹನುಮಾನ್ ಚಾಲಿಸಾ ಪಠಿಸಿ ಕ್ರೈಸ್ತರ ಹಬ್ಬದ ಸಡಗರಕ್ಕೆ ಧಕ್ಕೆ ತಂದರು.

ಇವು ಕೆಲವು ಉದಾಹರಣೆಗಳು ಮಾತ್ರ. ಇನ್ನೂ ಹಲವಾರು ಕಡೆ ಮತಾಂಧರ ದೌರ್ಜನ್ಯಗಳು ಬೇಕಾದಷ್ಟಾಗಿವೆ. 2025 ರಲ್ಲಿ ಭಾರತದಲ್ಲಿ ಒಟ್ಟು 700ಕ್ಕೂ ಹೆಚ್ಚು ಬಾರಿ ಕ್ರಿಶ್ಚಿಯನ್ ಸಮುದಾಯದವರ ಮೇಲೆ ಹಿಂದೂ ಮತಾಂಧರು ಹಲ್ಲೆ ಮಾಡಿದ್ದಾರೆ. ಮುಸ್ಲಿಂ ಸಮುದಾಯದವರ ಮೇಲಿನ ದಾಳಿಗಳಿಗಂತೂ ಲೆಕ್ಕವೇ ಇಲ್ಲ. ಈ ಸಂಘ ಪರಿವಾರದವರು ತಮ್ಮ ಈ ದುಷ್ಕೃತ್ಯಗಳಿಗೆ ಕೊಡುವ ಸಮರ್ಥನೆಗಳು ಹೀಗಿವೆ. “ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಭಾರತೀಯ ಸಂಸ್ಕೃತಿಯ ಮೇಲೆ ಹೇರಲಾಗುತ್ತಿದೆ. ಇದು ಹಿಂದೂರಾಷ್ಟ್ರವಾದ್ದರಿಂದ ಅನ್ಯ ಧರ್ಮೀಯರು ಹಬ್ಬ ಆಚರಿಸುವಂತಿಲ್ಲ” ಎನ್ನುವ ನೆಪದಲ್ಲಿ ಹಿಂದೂ ಮತಾಂಧರು ಈ ರೀತಿಯ ದಾಳಿಯನ್ನು ಮಾಡಿ ಅಲ್ಪಸಂಖ್ಯಾತರಲ್ಲಿ ಆತಂಕವನ್ನು ಹುಟ್ಟಿಸುತ್ತಿದ್ದಾರೆ. ಈ ಸಂಘಿಗಳು ಕ್ರಿಶ್ಚಿಯನ್ ಹಬ್ಬದ ದಿನದಂದೇ ಅದಕ್ಕೆ ಪರ್ಯಾಯವಾಗಿ ತುಳಸಿ ದಿನ ಎನ್ನುವ ಹಬ್ಬವನ್ನು ಆಚರಿಸಲು ಒತ್ತಾಯಿಸುತ್ತಿದ್ದಾರೆ . ಈ ತುಳಸಿ ಹಬ್ಬವನ್ನು ಹುಟ್ಟು ಹಾಕಿದ್ದೂ ಸಹ ಅತ್ಯಾಚಾರದ ಅಪರಾಧಿಯಾಗಿ ಜೈಲು ಸೇರಿರುವ ಆಸ್ಸಾರಾಂ ಬಾಪು.
ಇಷ್ಟಕ್ಕೂ ಬೇರೆ ದೇಶಗಳಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ದಾಳಿ ದೌರ್ಜನ್ಯಗಳಾದಾಗ ಖಂಡಿಸಿ ಪ್ರತಿಭಟಿಸುವ ಇದೇ ಸಂಘ ಪರಿವಾರದವರು ಹಾಗೂ ಅವರ ಬೆಂಬಲಿಗರು ನಮ್ಮ ದೇಶದಲ್ಲೇ ಅಲ್ಪಸಂಖ್ಯಾತ ಧರ್ಮೀಯರ ಮೇಲೆ ನಡೆಯುವ ಹಿಂದೂ ಮತಾಂಧರ ಕ್ರೌರ್ಯದ ಬಗ್ಗೆ ಬಾಯಿ ಬಿಡುವುದಿಲ್ಲ. ಹಿಂದೂ ಧರ್ಮದ ಗುತ್ತಿಗೆದಾರರಾದ ಆರೆಸ್ಸೆಸ್ ಹಾಗೂ ಬಿಜೆಪಿ ನಾಯಕರುಗಳು ಸಂಘ ಪರಿವಾರದ ಮತಾಂಧತೆಯ ಬಗ್ಗೆ ಎಂದೂ ತಮ್ಮ ವಿರೋಧವನ್ನು ವ್ಯಕ್ತಪಡಿಸುವುದಿಲ್ಲ. ಯಾಕೆಂದರೆ ಆರೆಸ್ಸೆಸ್ ಸಂವಿಧಾನವನ್ನೇ ಒಪ್ಪುವುದಿಲ್ಲ. ಆರೆಸ್ಸೆಸ್ ಸಂಘಟನೆಯ ಮೋಹನ್ ಭಾಗವತರು “ ಸಂವಿಧಾನ ಒಪ್ಪಲಿ ಬಿಡಲಿ ಭಾರತ ಹಿಂದೂ ರಾಷ್ಟ್ರ” ಎಂದು ಹೇಳಿದ್ದಾರೆ. ಅದನ್ನೇ ನಂಬಿಕೊಂಡ ಸಂಘ ಪರಿವಾರಿಗರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗುತ್ತಾ ಹಿಂದೂರಾಷ್ಟ್ರದ ಭ್ರಮೆಯಲ್ಲಿ ದಾಳಿ ಮಾಡುತ್ತಿದ್ದಾರೆ.
ಈ ರೀತಿ ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಿ ಆತಂಕವನ್ನು ಸೃಷ್ಟಿಸುವುದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮೆದುಳು ತೊಳೆಸಿಕೊಂಡ ಈ ಸಂಘಿಗಳಿಗೆ ಅರಿವು ಇಲ್ಲವಾಗಿದೆ. ಹೀಗೆ ಕ್ರಿಶ್ಚಿಯನ್ ಸಮುದಾಯದ ಮೇಲೆ ಅದೂ ಅವರ ಧಾರ್ಮಿಕ ಹಬ್ಬದ ಮೇಲೆ ದಾಳಿ ಮಾಡಿದರೆ ಏನಾಗಬಹುದು?
• ಇಡೀ ಪ್ರಪಂಚದಾದ್ಯಂತ ಹೆಚ್ಚಾಗಿರುವ ಕ್ರಿಶ್ಚಿಯನ್ ಸಮುದಾಯವೇ ಭಾರತದ ವಿರುದ್ಧ ತಿರುಗಿ ಬೀಳುತ್ತದೆ.
• ನಮ್ಮ ದೇಶದ ಆರ್ಥಿಕತೆಯಲ್ಲಿ ಕ್ರಿಶ್ಚಿಯನ್ ದೇಶದ ಬಂಡವಾಳಿಗರ ಹೂಡಿಕೆ ಅಪಾರವಾಗಿದೆ. ಯಾವಾಗ ಅವರ ಧರ್ಮಕ್ಕೆ ಹಾಗೂ ಅವರ ಧರ್ಮೀಯರಿಗೆ ಈ ದೇಶದಲ್ಲಿ ಬೆಲೆ ನೆಲೆ ಎರಡೂ ಇಲ್ಲವೆಂದು ಗೊತ್ತಾಗುವುದೋ ಆಗ ಹೂಡಿಕೆ ಮಾಡಿದ ಬಂಡವಾಳವನ್ನು ಹಿಂತೆಗೆದುಕೊಂಡರೆ ಭಾರತ ಆರ್ಥಿಕವಾಗಿ ದಿವಾಳಿ ಎದ್ದು ಹೋಗುತ್ತದೆ.
• ನಮ್ಮ ದೇಶದ ಹಿಂದೂ ಸಮುದಾಯದವರೂ ಸಹ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಕೆಲಸ ಅರಸಿ ಹೋಗಿ ಬದುಕು ಕಟ್ಟಿಕೊಂಡಿದ್ದಾರೆ ಹಾಗೂ ದುಡಿದ ಹಣವನ್ನು ಭಾರತಕ್ಕೆ ಕಳುಹಿಸಿ ಈ ದೇಶದ ಆರ್ಥಿಕತೆಗೆ ಬಲ ತುಂಬಿದ್ದಾರೆ. ಕ್ರಿಶ್ಚಿಯನ್ ದೇಶದವರು ಹಾಗೂ ಇಸ್ಲಾಂ ದೇಶದವರು ಭಾರತೀಯರನ್ನು ಅದರಲ್ಲೂ ಹಿಂದೂಗಳನ್ನು ಅವರ ದೇಶಗಳಿಂದ ಹೊರಗೆ ಹಾಕಿದರೆ ಅಥವಾ ಈ ಸಂಘಿಗಳು ಇಲ್ಲಿ ಮಾಡಿದಂತೆ ಅಲ್ಲಿಯೂ ಜನಾಂಗ ದ್ವೇಶ ಮಾಡಿ ಹಲ್ಲೆ ಮಾಡಿದರೆ ಆಗುವ ನಷ್ಟ ಭಾರತಕ್ಕೆ ಹಾಗೂ ಹಿಂದೂಗಳಿಗೆ.
• ಯಾವಾಗ ಅಲ್ಪಸಂಖ್ಯಾತ ಧರ್ಮೀಯರ ಮೇಲೆ ದೌರ್ಜನ್ಯ ಹೆಚ್ಚಾಗುವುದೋ ಆಗ ಆಯಾ ಧರ್ಮೀಯರು ಬಹುಸಂಖ್ಯಾತರಾಗಿರುವ ದೇಶಗಳಲ್ಲಿ ಹಿಂದೂ ಧರ್ಮೀಯರ ವಿರುದ್ಧ ಅಸಹನೆ ದ್ವೇಷ ಭಾವನೆ ಹೆಚ್ಚಾಗುತ್ತದೆ. ಆಯಾ ದೇಶಗಳಲ್ಲೂ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ಸಂಘಿಗಳು ಮಾಡಿದಂತಹ ದೌರ್ಜನ್ಯವೇ ಪುನರಾವರ್ತನೆಯಾಗುತ್ತದೆ. ಇದರಿಂದಾಗಿ ದೇಶ ದೇಶಗಳ ನಡುವೆ ಧಾರ್ಮಿಕ ವಿಷಮತೆ ಹೆಚ್ಚುತ್ತದೆ. ಮತಾಂಧತೆ ಉಲ್ಪಣಗೊಳ್ಳುತ್ತದೆ. ಸಂಘರ್ಷ ಅತಿಯಾಗುತ್ತದೆ.
• ಭಾರತದ ಜನಸಂಖ್ಯೆಯಲ್ಲಿ ಶೇಕಡಾ ಹತ್ತಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿರುವ ಈ ಸಂಘ ಪರಿವಾರದ ಹಿಂದೂ ಮತಾಂಧರು ಮಾಡುವ ಧಾರ್ಮಿಕ ದೌರ್ಜನ್ಯದಿಂದಾಗಿ ಇಡೀ ಭಾರತ ಹಿಂದೂ ಭಯೋತ್ಪಾದಕ ದೇಶವಾಗಿ ಪ್ರಪಂಚದಲ್ಲಿ ಬಿಂಬಿತವಾಗುತ್ತದೆ. ಜ್ಯಾತ್ಯತೀತ ಪ್ರಜಾಪ್ರಭುತ್ವಕ್ಕೆ ಕಳಂಕ ಬರುತ್ತದೆ.

ಆದರೆ ಈ ಯಾವ ದುಷ್ಟರಿಣಾಮಗಳ ಬಗ್ಗೆ ಕನಿಷ್ಟ ಆಲೋಚನೆಯನ್ನೂ ಮಾಡದ ಈ ಮತಾಂಧ ಸನಾತನಿ ಸಂಘಿಗಳು ಹಿಂದೂ ರಾಷ್ಟ್ರದ ಭ್ರಮೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ಅವ್ಯಾಹತವಾಗಿ ನಡೆಸುತ್ತಲೇ ಬಂದಿವೆ. ಇಂತಹ ದುಷ್ಕೃತ್ಯಗಳನ್ನು ಖಂಡಿಸುವ ಹಾಗೂ ಅಂತಹ ಕೃತ್ಯಗಳಲ್ಲಿ ಭಾಗವಹಿಸಿದವರನ್ನು ಉಚ್ಚಾಟಿಸಿ ಕಾನೂನಾತ್ಮಕ ಶಿಕ್ಷೆಗೆ ಆಗ್ರಹಿಸುವ ಕೆಲಸವನ್ನೂ ಈ ಸಂಘ ಪರಿವಾರದ ಮಾತೃ ಸಂಸ್ಥೆಯಾದ ಆರೆಸ್ಸೆಸ್ ಮಾಡುತ್ತಿಲ್ಲ. ಒಂದು ಕಡೆ ಕ್ರಿಸ್ಮಸ್ ದಿನದಂದು ಈ ದೇಶದ ಪ್ರಧಾನಿ ಚರ್ಚಿಗೆ ಹೋಗಿ ಪ್ರಾರ್ಥಿಸಿದರೆ ಅವರದೇ ಸಂಘ ಪರಿವಾರದವರು ಕ್ರಿಶ್ಚಿಯನ್ ಸಮುದಾಯದವರ ಮೇಲೆ ದಾಳಿ ಮಾಡಿ ಕ್ರಿಸ್ಮಸ್ ಹಬ್ಬದ ಸಡಗರವನ್ನು ಹಾಳು ಮಾಡಿದ್ದಾರೆ. ಪ್ರಧಾನಿಗಳ ಮೌನ ಈ ಹಿಂದೂ ಭಯೋತ್ಪಾದಕ ಸಂಘಟನೆಗಳಿಗೆ ಸಮ್ಮತಿಯಾಗಿ ಗೋಚರಿಸುತ್ತಾ ಮತ್ತಷ್ಟು ದಾಳಿಗಳನ್ನು ಮಾಡಲು ಪ್ರಚೋದಿಸುವಂತಿದೆ. ಜ್ಯಾತ್ಯತೀತ ದೇಶವನ್ನು ಹಿಂದೂ ರಾಷ್ಟ್ರವಾಗಿ ಮಾಡುವ, ಅಂಬೇಡ್ಕರ್ ರಚಿಸಿದ ಸಮಾನತೆಯ ಸಂವಿಧಾನವನ್ನು ತೆಗೆದು ಹಾಕಿ ಮನುಸ್ಮೃತಿ ಆಧಾರದ ಚಾತುರ್ವಣ್ಯ ಸಂವಿಧಾನವನ್ನು ಜಾರಿಗೆ ತರುವ ಹುನ್ನಾರದ ಭಾಗವಾಗಿಯೇ ಸಂಘ ಪರಿವಾರದವರ ದಾಳಿಗಳು ಅವ್ಯಾಹತವಾಗಿ ದೇಶಾದ್ಯಂತ ನಡೆಯುತ್ತಿವೆ.
ದಾಳಿಯಾಗಿದ್ದು ಮುಸ್ಲಿಂ ಸಮುದಾಯದವರ ಮೇಲೆ, ದೌರ್ಜನ್ಯವಾಗಿದ್ದು ಕ್ರೈಸ್ತ ಜನಾಂಗದವರ ಮೇಲೆ ಎಂದು ಹಿಂದೂ ಸಮುದಾಯದವರು ಸುಮ್ಮನಿದ್ದರೆ ಮುಂದೊಂದು ದಿನ ಈ ಹಿಂದುತ್ವವಾದಿ ಶಕ್ತಿಗಳು ಬಹುಸಂಖ್ಯಾತ ದಲಿತರನ್ನು, ಹಿಂದುಳಿದವರನ್ನು, ಆದಿವಾಸಿಗಳನ್ನು ಹಾಗೂ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಿ ಹಿಂದೂ ಧರ್ಮದ ಹೆಸರಲ್ಲಿ ವೈದಿಕ ಧರ್ಮವನ್ನು ಸ್ಥಾಪಿಸುವುದರಲ್ಲಿ ಸಂದೇಹವಿಲ್ಲ. ಮತ್ತೆ ಈ ದೇಶ ಸನಾತನಿ ವೈದಿಕಶಾಹಿಗಳ ಕೈಗೆ ಹೋಗಬಾರದು ಎಂದರೆ ಸಮಸ್ತ ಭಾರತೀಯರು ಜಾಗೃತರಾಗಬೇಕಿದೆ. ಈ ದೇಶದ ಸಂವಿಧಾನವನ್ನು ಈ ಸನಾತನಿಗಳಿಂದ ರಕ್ಷಿಸಲೇಬೇಕಿದೆ. ಅಲ್ಪಸಂಖ್ಯಾತರೂ ಈ ದೇಶದ ಪ್ರಜೆಗಳೇ ಎಂಬ ವಾಸ್ತವತೆ ಅರ್ಥಮಾಡಿಕೊಂಡು ಅವರನ್ನು ಕಾಪಾಡಿಕೊಳ್ಳಬೇಕಿದೆ. ಈ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಿದೆ. .
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು.
ಇದನ್ನೂ ಓದಿ- ರಸ್ತೆ ಪಕ್ಕ ಅಡುಗೆ, ಬೀದಿಯಲ್ಲೇ ಊಟ ಮಾಡಿಸುವ ಹೊಸ ಕಾನೂನು!


