ಉದ್ಯೋಗ ಖಾತರಿ ಹೊಸ ಕಾನೂನು
ವರ್ಷಕ್ಕೆ ನೂರಿಪ್ಪತ್ತೈದು ದಿನಗಳ ಕೆಲಸವನ್ನು ಕೊಡುತ್ತೇವೆ ಎನ್ನುವ ಹೊಸ ಕಾನೂನು, ಎರಡು ತಿಂಗಳ ಕಾಲ ಕೆಲಸವನ್ನೇ ಕೇಳದಂತೆ ರಜಾ ಘೋಷಿಸಿಬಿಟ್ಟಿದೆ. ಬಿತ್ತುವ ಮತ್ತು ಸುಗ್ಗಿಯ ಸಮಯದ 60 ದಿನಗಳು ಕೆಲಸ ಕೇಳುವಂತಿಲ್ಲವೆಂದಾಗ ಎಷ್ಟು ದಿನಗಳ ಕೆಲಸದ ಅವಕಾಶದ ಕಾನೂನಾಯಿತಿದು? ಆ 60 ದಿನಗಳಲ್ಲಿ ಹಳ್ಳಿಯ ಎಲ್ಲಾ ಕೂಲಿಕಾರರಿಗೂ ಕೆಲಸ ಕೊಡಲು ಕೃಷಿಕರಿಗೆ ಸಾಧ್ಯವೇ? ಇದು ಕೃಷಿಕರ ಪರವಾದಂತಹ ನಿಲುವೇ? ಅಥವಾ ಕೂಲಿಕಾರರ ವಿರುದ್ಧದ ನಿಲುವೇ? ಅಥವಾ ವರ್ಷವಿಡೀ ಅಗ್ಗದ ಕೂಲಿಗಳು ಇವರ ʻಅಭಿವೃದ್ಧಿ ಕೆಲಸಗಳಿಗೆʼ ಪೂರೈಕೆಯಾಗುತ್ತಿರಲೆಂಬ ದೂರಾಲೋಚನೆಯೇ? – ಶಾರದಾ ಗೋಪಾಲ,
ʻನೀಲವ್ವ, ಇನ್ನು ಉದ್ಯೋಗ ಖಾತರಿ ಇಲ್ಲಂತೆ ಗೊತ್ತಾತೇನು? ಹೊಸಾ ಕಾನೂನು ಬಂತುʼ
ʻಹೌದ್ರೀ ನಾವೂ ಕೇಳಿದ್ವಿ. ಇನ್ನು ನೂರಾ ಇಪ್ಪತ್ತೈದು ದಿನ ಕೊಡ್ತಾರಂತೆ. ಚೊಲೋ ಆತಲ್ರೀ!ʼ ನೀಲವ್ವಳ ಮಾತಿನಲ್ಲಿ ಸಂಭ್ರಮ.
ʻಹೌದಾ ನೀಲವ್ವ, ಇಷ್ಟ್ ದಿನಾ ನೂರು ದಿನ ಇತ್ತಲ್ಲ, ಕಳೆದ ವರ್ಷ ಎಷ್ಟು ದಿನ ಕೆಲಸ ಮಾಡಿದ್ರಿ?ʼ
ʻಅಯ್ಯ, 56 ಹಾಜರಿ ಆಗೋವಾಗ ಸಾಕಾತು ನೋಡ್ರಿ.ʼ
ʻಅದರ ಹಿಂದಿನ ವರ್ಷ? ʻಆವಾಗ್ಲೂ ಅರವತ್ತು ಮುಟ್ಟಲಿಲ್ಲ ನೋಡ್ರಿ.ʼ
ʻ125 ದಿನ ಕೆಲಸ ಸಿಗ್ತದಂತೀರೇನು?ʼ
ʻಎಲ್ಲೀದ್ರೀ. ಪಂಚಾಯತಿಯೋರು ಕೆಲಸಾ ಕೊಡೋವಾಗ ತಮ್ಮ ಕಿಸೆಯಿಂದ ಕೊಡೋರಂಗ ಮಾಡ್ತಾರೆ. ಒಂದು ಸಾರೆ ಕೆಲಸ ತಗೋಬೇಕಾದ್ರೆ ಹತ್ತುಬಾರಿ ಎಡತಾಕಬೇಕು.ʼ ಸಂಭ್ರಮ ಮರೆಯಾಗಿ ಸಿಟ್ಟು ಇಣುಕಲಾರಂಭಿಸಿತ್ತು ನೀಲವ್ವಳ ಮಾತಿನಲ್ಲಿ.
ʻಕೇಂದ್ರ ಸರಕಾರ ದುಡ್ಡು ಕೊಡ್ತಿದ್ದಾಗಲೇ ತಮ್ಮ ಕಿಸೇಲಿಂದ ಕೊಡೋ ಹಂಗೆ ಮಾಡ್ತಾರೆ ಅಂತೀರಿ ನೀವು. ಇನ್ಮೇಲೆ ನಿಜವಾಗಲೂ ಅವರ ಕಿಸೆಯಿಂದಲೇ ಕೊಡಬೇಕು. ಏನು ಮಾಡ್ತಾರೋʼ ನಾನೆಂದಾಗ ನೀಲವ್ವಳ ಹುಬ್ಬು ಮೇಲೇರಿತು.
ʻಅಂದ್ರೆ ಇನ್ಮೇಲೆ ಪಂಚಾಯಿತಿಯವರೇ ಹಣ ಕೊಡ್ತಾರೇನ್ರೀ?
ʻಪಂಚಾಯಿತಿಯಲ್ಲ, ಇಷ್ಟು ದಿನ ದುಡಿದವರ ಕೂಲಿನ ಪೂರ್ತಿಯಾಗಿ ಕೇಂದ್ರ ಸರಕಾರ ಕೊಡ್ತಾ ಇತ್ತು. ಇನ್ಮೇಲೆ ಕೂಲಿಹಣದ 40% ಭಾಗವನ್ನು ರಾಜ್ಯ ಸರಕಾರವೇ ಕೊಡಬೇಕಂತ ಹೊಸ ಕಾನೂನಿನಲ್ಲಿ ಬರೆದಿದ್ದಾರೆ.
ನೀಲವ್ವಳ ಮುಖದಲ್ಲಿ ಸಂಶಯ, ಆತಂಕ ಎಲ್ಲವೂ ಮನೆಮಾಡಿದ್ದನ್ನು ನೋಡಿ ಅವಳಿಗೆ ಹೊಸ ಕಾಯಿದೆಯ ಬಗ್ಗೆ ವಿವರಿಸುವ ಪ್ರಯತ್ನ ಮಾಡಿದೆ.

ಇಲ್ಲೀವರೆಗೆ ಕೆಲಸ ಕೊಡುವವರು ರಾಜ್ಯ ಸರಕಾರವಾಗಿದ್ದರೂ ಕೂಲಿಕಾರರಿಗೆ ಹಣ ಬರುವುದು ಕೇಂದ್ರ ಸರಕಾರದಿಂದಾಗಿತ್ತು. ಸಾಮಗ್ರಿ ವೆಚ್ಚದಲ್ಲೂ ಸಹ ನೂರಕ್ಕೆ ಎಪ್ಪತ್ತೈದರಷ್ಟನ್ನು ಕೇಂದ್ರ ಸರಕಾರವೇ ಭರಿಸುತ್ತಿತ್ತು. ಒಟ್ಟಾರೆಯಾಗಿ ನೂರಕ್ಕೆ 90 ಭಾಗ ಜವಾಬ್ದಾರಿ ಕೇಂದ್ರ ಸರಕಾರದ್ದಾಗಿತ್ತು. ಹತ್ತು ಭಾಗ ಮಾತ್ರ ರಾಜ್ಯದ್ದಾಗಿತ್ತು. ಇನ್ಮೇಲೆ 40 ಭಾಗವನ್ನು ರಾಜ್ಯವೇ ಕೊಡಬೇಕು.
ಆ ಹೆಣ್ಮಗಳಿಗೆ ಎಷ್ಟು ತಿಳೀತೋ ಎಷ್ಟು ಬಿಡ್ತೋ, ನಾನಂತೂ ಆಕೆಗೆ ತಿಳಿಸುವ ನನ್ನ ಪ್ರಯತ್ನವನ್ನು ಮುಂದುವರೆಸಿದೆ. ಹಣಕಾಸಿನ ಈ ವ್ಯವಹಾರವನ್ನು ಎಲ್ಲರೂ ತಿಳಿದುಕೊಳ್ಳಲೇಬೇಕು. ಇಲ್ಲವೆಂದರೆ 125 ದಿನಗಳ ಕತೆ ಹೇಳುತ್ತ ಎಲ್ಲರನ್ನೂ ಏಮಾರಿಸುವ ಅವರ ಚಾಳಿ ಮುಂದುವರಿಯುತ್ತದೆ.
ʻಆದರೆ ನಿಮ್ಮ ಪಂಚಾಯತಿಗೆ ಕೆಲಸ ಸಿಕ್ಕೇ ಸಿಗುತ್ತದೆಂಬ ಖಾತರಿ ಇಲ್ಲ. ಅದನ್ನು ಕೇಂದ್ರ ಸರಕಾರ ನಿರ್ಧರಿಸುತ್ತದೆ.ʼ
ಹೊಸ ಕಾನೂನಿನ ಸೆಕ್ಷನ್ 37ರಲ್ಲಿ ಇನ್ನುಮುಂದೆ ಮಹಾತ್ಮಾಗಾಂಧಿ ನರೇಗಾ ಇರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಗಾಂಧಿಯನ್ನು ಕೊಂದವರ ಪಕ್ಷದ ಈ ಸರಕಾರ ಮಹಾತ್ಮರ ಹೆಸರನ್ನು ತೆಗೆದುಹಾಕಿದ್ದು ಆಶ್ಚರ್ಯವೂ ಅಲ್ಲ, ಮುಖ್ಯವೂ ಅಲ್ಲ. ಗಾಂಧೀಜಿಯವರ ಆಶಯಗಳಿಗೆ ವಿರುದ್ಧವಾಗಿರುವ ಈ ಕಾನೂನು ಅವರ ಹೆಸರನ್ನು ಮುಂದುವರಿಸಿದ್ದರೇ ದೊಡ್ಡ ಅಪಚಾರವಾಗುತ್ತಿತ್ತು. ಹೊರಗಿನ ಹೆಸರಿಗಿಂತಲೂ ಒಳಗಿನ ಹೂರಣ ಹೆಚ್ಚು ಮುಖ್ಯ. ಗಾಂಧೀಜಿಯವರ ಗ್ರಾಮಸ್ವರಾಜ್ ಕಲ್ಪನೆ ಉದ್ಯೋಗ ಖಾತರಿಯ ಕಾನೂನಿನಲ್ಲಿತ್ತು. ಜೊತೆಗೆ ಮಹಿಳೆಯರಿಗೆ ಸಮಾನ ವೇತನ, ಭೂಹೀನರಿಗೆ ಗೌರವದ ಉದ್ಯೋಗ ನೀಡುವುದರ ಮುಖಾಂತರ ಅಂಬೇಡ್ಕರರ ವಿಚಾರಧಾರೆಯನ್ನೂ ಪ್ರಚುರಪಡಿಸುತ್ತಲಿತ್ತು.
ಈಗಿನ ಕಾನೂನು ತನ್ನ ಅಭಿವ್ಯಕ್ತಿಯಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ಇಬ್ಬರ ಆಶಯಗಳ ಬುಡಕ್ಕೂ ಕೊಡಲಿಯನ್ನೇ ಝಳಪಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಜೇಂದ್ರನ್ ನಾರಾಯಣನ್ ಹೇಳುತ್ತಾರೆ.
ಜನ ಕೇಳುತ್ತಿದ್ದರು, ಸರಕಾರ ಕೆಲಸ ಕೊಡುತ್ತಿತ್ತು. ಬೇರು ಮೂಲದಿಂದ ಬಂದ ಹಕ್ಕು ಆಧಾರಿತ ಬೇಡಿಕೆಗೆ ಮೇಲಿನಿಂದ ಮಾನ್ಯತೆ ದೊರಕುವ ಕಾನೂನಾಗಿತ್ತದು. ಅಷ್ಟೇ ಅಲ್ಲ, ಗ್ರಾಮ ಸಭೆಯಲ್ಲಿ ಊರಿನ ಜನರು ಸೇರಿ ತಮ್ಮಲ್ಲಿ ಯಾವ ಕೆಲಸ ಮಾಡಿಸಬೇಕೆಂದು ನಿರ್ಣಯ ಮಾಡಬೇಕು. ಆದರೆ ಹೊಸ ಕಾನೂನಿನಲ್ಲಿ ಎಲ್ಲವನ್ನೂ ಕೇಂದ್ರ ಸರಕಾರವೇ ನಿರ್ಧರಿಸುತ್ತದೆ. ನಮ್ಮ ಊರಲ್ಲಿ ಏನು ಕೆಲಸ ಮಾಡಿಸಬೇಕೆಂದು ದಿಲ್ಲಿಯಲ್ಲಿರುವವರು ನಿರ್ಧರಿಸುತ್ತಾರೆಯೇ?
ಅಷ್ಟೇ ಅಲ್ಲ, ದೇಶದ ಯಾವ ರಾಜ್ಯದಲ್ಲಿ, ಯಾವ ಜಿಲ್ಲೆಯಲ್ಲಿ, ಅಷ್ಟೇ ಏಕೆ ಯಾವ ಗ್ರಾಮಪಂಚಾಯತಿಯಲ್ಲಿ ಯಾವ ಕೆಲಸ ತೆಗೆದುಕೊಳ್ಳಬಹುದೆನ್ನುವುದನ್ನೂ ಕೂಡ ಕೇಂದ್ರ ಸರಕಾರವೇ ನಿರ್ಧರಿಸುತ್ತದೆ. ತಮ್ಮೂರಿನಲ್ಲಿ ಯಾವ ಕೆಲಸ ಎಂಬುದನ್ನು ನಿರ್ಣಯಿಸುವ ಅಧಿಕಾರ ಹೋಗಲಿ, ಕೆಲಸ ಇದೆಯೋ ಇಲ್ಲವೋ ಎಂಬುದನ್ನೂ ಯಾರೋ ನಿರ್ಣಯಿಸುವಂತಾಗಿ ಪ್ರಜಾಪ್ರಭುತ್ವದ, ಪಂಚಾಯತಿ ರಾಜ್ ದ ಮೂಲ ಆಶಯಕ್ಕೇ ಧಕ್ಕೆ ತರುವ ಕಾಯಿದೆಯಿದು.
ಕೇಂದ್ರ ಸರಕಾರವು ಎಷ್ಟು ಹಣವನ್ನಿಡುತ್ತದೆಂಬುದರ ಆಧಾರದ ಮೇಲೆ ಆಯಾ ವರ್ಷ ಏನೇನು ಕೆಲಸ ಮಾಡಿಸುವುದೆಂದು ನಿರ್ಣಯವಾಗುತ್ತದೆ. ಇಲ್ಲಿಯವರೆಗೂ ಕೇಂದ್ರ ಸರಕಾರ ಇಡುವ ಬಜೆಟ್ ಕಡಿಮೆ ಇದ್ದರೂ ಕೂಡ ಜನರು ಕೆಲಸವನ್ನು ಮುಂದುವರೆಸಬಹುದಾಗಿತ್ತು. ಮುಂದಿನ ವರ್ಷದ ಬಜೆಟ್ಟಿನಲ್ಲಾದರೂ ದುಡಿದ ಹಣ ಖಾತೆಗೆ ಬಂದು ಬೀಳುವ ಭರವಸೆ ಇರುತ್ತಿತ್ತು. ಇನ್ನು ಮುಂದೆ ಆ ಭರವಸೆ ಉಳಿಯುವುದಿಲ್ಲ. 40% ಹಣವನ್ನು ನೀವು ಕೊಡಿ ಎಂದು ರಾಜ್ಯ ಸರಕಾರಕ್ಕೆ ಹೇಳಿದಾಗ ಮೊದಲೇ ಹಣಕಾಸಿನಲ್ಲಿ ಬಡತನವನ್ನು ಎದುರಿಸುತ್ತಿರುವ ರಾಜ್ಯ ಸರಕಾರ-ಪಂಚಾಯತಿಯವರು ಕೆಲಸ ಕೊಡುವುದೇ ಇಲ್ಲ. ದೇಶದೆಲ್ಲಾ ಭಾಗದ ತೆರಿಗೆ ಸಂಗ್ರಹದ ಬಲುದೊಡ್ಡ ಪಾಲನ್ನು ತಾನೇ ಇಟ್ಟುಕೊಂಡು, ತನ್ನ ಸರಕಾರ ಇರುವ ರಾಜ್ಯಗಳಿಗೆ ಮಾತ್ರ ಹಣ ಕೊಡುತ್ತಿದೆ ಈಗಿನ ಕೇಂದ್ರ ಸರಕಾರ. ನಮ್ಮ ಮುಖ್ಯಮಂತ್ರಿಗಳು ಮತ್ತೆ ಮತ್ತೆ ಹೋಗಿ ಕೇಳಿದರೂ ನಮ್ಮ ಪಾಲಿನ ಹಣದ ಬಿಡುಗಡೆ ಮಾಡದೆ ಇಲ್ಲಿನ ಅಭಿವೃದ್ಧಿಕಾರ್ಯಗಳಿಗೆ ಹಣವಿಲ್ಲದಂತೆ ಮಾಡಿದೆ. ಉದ್ಯೋಗ ಖಾತರಿಯ ಹಣದ ಪಾಲನ್ನೂ ನೀವೇ ಕೊಡಿ ಎಂದು ಈ ಕಾನೂನಿನ ಮೂಲಕ ಹೇಳುತ್ತಿದೆ ಈಗ.

ಲೋಕಸಭೆಯಲ್ಲಿ ಗಂಭೀರವಾದ ಚರ್ಚೆಯನ್ನೂ ಮಾಡದೇ ಜನವಿರೋಧಿಯಾದ ಈ ಬಿಲ್‌ನ್ನು ಪಾಸು ಮಾಡಿರುವ ಸಂಸದರು ತಮ್ಮ ಸ್ಥಾನದ ಮರ್ಯಾದೆಯನ್ನೂ ಕಾಪಾಡಿಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ. ಮನರೇಗಾ ಕಾನೂನು ಬರುವ ಮೊದಲು ವರ್ಷಾಂತರಗಳ ಅಧ್ಯಯನ, ಬೇಡಿಕೆ, ಹೋರಾಟಗಳಾಗಿದ್ದವು. ಸಂಸತ್ತಿನ ಸ್ಥಾಯಿ ಸಮಿತಿಯಲ್ಲಿ ಸಂಪೂರ್ಣ ಅಧ್ಯಯನವಾಗಿ ನಂತರ ಸಂಸತ್ತಿನಲ್ಲಿ ಮಂಡನೆಯಾಗಿತ್ತು. ಇಡೀ ಸಂಸತ್ತು ಸರ್ವಾನುಮತದಿಂದ, ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಿ ಉದ್ಯೋಗವನ್ನು ನಾಗರಿಕರ ಹಕ್ಕನ್ನಾಗಿ ಮಾಡಿದ್ದರು. ಅಂತಹ ಇತಿಹಾಸವುಳ್ಳ ಕಾನೂನೊಂದನ್ನು ಕೇವಲ ಎರಡೇ ದಿನಗಳ ಅವಧಿಯಲ್ಲಿ, ಸರಿಯಾದ ಚರ್ಚೆಯನ್ನೂ ಆಗಗೊಡದೆ ಅಳಿಸಿ ಹಾಕುವ ಮೂಲಕ ತನಗೆ ತಾನೇ ಅಗೌರವವನ್ನು ಕೊಟ್ಟುಕೊಂಡಿದೆ ಸಂಸತ್ತು.
ವರ್ಷಕ್ಕೆ ನೂರಿಪ್ಪತ್ತೈದು ದಿನಗಳ ಕೆಲಸವನ್ನು ಕೊಡುತ್ತೇವೆ ಎನ್ನುವ ಹೊಸ ಕಾನೂನು, ಎರಡು ತಿಂಗಳ ಕಾಲ ಕೆಲಸವನ್ನೇ ಕೇಳದಂತೆ ರಜಾ ಘೋಷಿಸಿಬಿಟ್ಟಿದೆ. ಬಿತ್ತುವ ಮತ್ತು ಸುಗ್ಗಿಯ ಸಮಯದ 60 ದಿನಗಳು ಕೆಲಸ ಕೇಳುವಂತಿಲ್ಲವೆಂದಾಗ ಎಷ್ಟು ದಿನಗಳ ಕೆಲಸದ ಅವಕಾಶದ ಕಾನೂನಾಯಿತಿದು? ಆ 60 ದಿನಗಳಲ್ಲಿ ಹಳ್ಳಿಯ ಎಲ್ಲಾ ಕೂಲಿಕಾರರಿಗೂ ಕೆಲಸ ಕೊಡಲು ಕೃಷಿಕರಿಗೆ ಸಾಧ್ಯವೇ? ಇದು ಕೃಷಿಕರ ಪರವಾದಂತಹ ನಿಲುವೇ? ಅಥವಾ ಕೂಲಿಕಾರರ ವಿರುದ್ಧದ ನಿಲುವೇ? ಅಥವಾ ವರ್ಷವಿಡೀ ಅಗ್ಗದ ಕೂಲಿಗಳು ಇವರ ʻಅಭಿವೃದ್ಧಿ ಕೆಲಸಗಳಿಗೆʼ ಪೂರೈಕೆಯಾಗುತ್ತಿರಲೆಂಬ ದೂರಾಲೋಚನೆಯೇ?
ಖಂಡಿತವಾಗಿಯೂ ದೂರಾಲೋಚನೆಯೇ ಇರಬಹುದು. ಯಾಕೆಂದರೆ ಮನರೇಗಾ ಉದ್ಯೋಗ ಖಾತರಿ ಕಾನೂನು ಬಹಳಷ್ಟು ಹಳ್ಳಿಗಳಲ್ಲಿ ವಲಸೆಯನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಿತ್ತು. ಕುಟುಂಬ ಕುಟುಂಬವೇ ವಲಸೆ ಹೋಗಿ ಸರಕಾರದ ಎಲ್ಲಾ ಯೋಜನೆಗಳನ್ನೂ ತಪ್ಪಿಸಿಕೊಳ್ಳುತ್ತಿದ್ದ ಕುಟುಂಬಗಳು ಉದ್ಯೋಗ ಖಾತರಿಯಿಂದಾಗಿ ಊರಲ್ಲೇ ಉಳಿದು ಗರ್ಭಿಣಿಯರಿಗೆ, ಪುಟ್ಟ ಮಕ್ಕಳಿಗೆ ಅಂಗನವಾಡಿ ಸೇವೆ, ಮಕ್ಕಳ ಶಿಕ್ಷಣ ಎಲ್ಲವೂ ಸಿಗುವಂತಾಗಿತ್ತು. ಈಗ ಮತ್ತೆ ಹಳೆಯ ಜೀವನ ಪುನಸ್ಥಾಪನೆಯಾಗಲಿದೆ. ಇಟ್ಟಿಗೆ ಭಟ್ಟಿಗಳಲ್ಲಿ, ಮಣ್ಣಿನಲ್ಲಿ, ಬೀದಿಯಲ್ಲಿ ಹೊರಳಾಡುತ್ತ, ರಸ್ತೆ ಬದಿಯಲ್ಲೇ ಊಟ ತಿನ್ನುತ್ತ ಇರುವ ಮಕ್ಕಳು ನಿತ್ಯದೃಶ್ಯವಾಗಬಹುದು. ಈಗ ದೂರದ ಗುಜರಾತ್, ರಾಜಸ್ಥಾನಗಳಿಂದ ಆಟಿಗೆಗಳನ್ನು ಮಾರುತ್ತ ಬಂದು ರಸ್ತೆ ಪಕ್ಕ ಚಾ ಬಿಸ್ಕಿಟ್ ತಿನ್ನುವವರನ್ನು ನೋಡುತ್ತೇವೆ. ಇನ್ಮುಂದೆ ನಮ್ಮ ಜನವೂ ಕೂಡ ರಸ್ತೆ ಪಕ್ಕ ಊಟ ತಿಂಡಿ ಮಾಡುವುದನ್ನು ಕಾಣಬಹುದು. ಅದು ಹೊಸ ಮಸೂದೆಗೆ ಒಪ್ಪಿಗೆ ಸೂಚಿಸಲು ಕೈಯೆತ್ತಿದ ಈ ಸಂಸದರಿಗೆ ಸಮಾಧಾನ ತಂದುಕೊಡಬಹುದಲ್ಲವೇ?!
ಶಾರದಾ ಗೋಪಾಲ
ಲೇಖಕಿ, ಅಂಕಣಗಾರ್ತಿ.
ಇದನ್ನೂ ಓದಿ- ನ್ಯಾಯಾಂಗವೇ ಮಾಡಿದರೆ ಗಾಯಾ, ಎಲ್ಲಿದೆಯೋ ನ್ಯಾಯಾ?


