ಸಮನ್ವಯ ಪಂಥದ ಹರಿಕಾರರು ತಿಂಥಿಣಿ ಮೌನೇಶ್ವರರು

Most read

ಸರ್ವಧರ್ಮ ಸಮನ್ವಯಿಗಳಾದ‌ ತಿಂಥಿಣಿ ಮೌನೇಶ್ವರರ (ಫೆಬ್ರುವರಿ 7) ಜಾತ್ರೆಯ ಪ್ರಯುಕ್ತ ಅವರನ್ನು ಸ್ಮರಿಸಿ ಡಾ. ಗಂಗಾಧರ ಹಿರೇಮಠರವರು ಬರೆದ ಲೇಖನ ಇಲ್ಲಿದೆ.

ಕನ್ನಡ ನಾಡಿನ ಜನ ಸಮೂಹದ ಮನಸ್ಸಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವ ಹಾಗೂ ಸಾಹಿತ್ಯದ ಮೂಲಕ ಜಾಗೃತಿಯನ್ನುಂಟು ಮಾಡಿ, ಹಿಂದೂ-ಮುಸ್ಲಿಂ ಭಾವೈಕ್ಯತೆ ಬೆಸೆಯುವಲ್ಲಿ ಮಹತ್ವದ ಪಾತ್ರ ವಹಿಸಿದ ಶರಣ, ಸಂತ ಹಾಗೂ ಮಾನವ ಧರ್ಮದ ಪ್ರವಾದಿ ತಿಂಥಿಣಿ ಮೌನೇಶ್ವರರು. ಜನಪರ ವ್ಯಕ್ತಿಯಾಗಿ, ವಚನಕಾರರಾಗಿ ತಮ್ಮ ಕಾಲಜ್ಞಾನ ವಚನಗಳ ಮೂಲಕ ಕಾಯಕ, ಸಮಾನತೆ, ಸಹೋದರತ್ವ, ಏಕದೇವೋಪಾಸನೆ, ಸರಳತೆ ಹಾಗೂ ಸದಾಚಾರ ಮುಂತಾದ ಲೋಕೋತ್ತರ ತತ್ವಗಳನ್ನು ನೀತಿಬೋಧನೆ ಮಾಡಿ 12ನೇ ಶತಮಾನದ ಶಿವಶರಣರ ತತ್ವ, ಹಾಗೂ ಸೂಫಿಸಂತರ ತತ್ವಗಳನ್ನು ಸಮೀಕರಿಸಿಕೊಂಡು ತನ್ನದೇ ಆದ ‘ಸಮನ್ವಯ ಪಂಥ’ ವನ್ನು ಅವರು ರೂಪಿಸಿಕೊಂಡಿದ್ದು ವಿಶೇಷ. ಅವರ ವಚನಗಳ ತಾತ್ವಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಮುಖಗಳನ್ನು ಗಮನಿಸಿದಾಗ ಅವರೊಬ್ಬ ಮಧ್ಯ ಕಾಲಿನ ಕರ್ನಾಟಕದ ಮಹಾಪುರುಷ. ಹೀಗಾಗಿ ಸಮಾಜದ ಜನತೆಯ ಮೇಲೆ ಅವರು ದಟ್ಟವಾಗಿ ಬೀರಿದ ಧಾರ್ಮಿಕ, ಸಾಂಸ್ಕೃತಿಕ ಪ್ರಭಾವಗಳ ಅರಿವನ್ನು ಸ್ಪಷ್ಟವಾಗಿ ತಿಳಿಯಬಹುದು.

ತಿಂಥಿಣಿ ಮೌನೇಶ್ವರರ ಹಿನ್ನಲೆ

ತಿಂಥಿಣಿ ಮೌನೇಶ್ವರರು

ಮೌನೇಶ್ವರರು ಸಗರನಾಡಿನ, ಸುರಪುರ ತಾಲ್ಲೂಕು, ‘ಗೋನಾಳಗ್ರಾಮ’ದಲ್ಲಿ ಕ್ರಿ.ಶ. 1570 ರಲ್ಲಿ ಜನಿಸಿದರು. ತಂದೆ ಹಾವಪ್ಪ, ತಾಯಿ ಹಾವಮ್ಮ. ಮೌನೇಶ್ವರ, ಮೋನಯ್ಯ, ಮೋನಪ್ಪ, ಮೋನಪ್ಪಯ್ಯ, ಮೌನಲಿಂಗ, ಮಾನಪ್ಪ, ಮಾನಯ್ಯ, ಮೌನುದ್ದೀನ ಎಂದು ಕರೆಯಿಸಿಕೊಳ್ಳುವ ಇವರ ನಿಜನಾಮವೇನಿರಬೇಕು? ‘ಮೌನ’ ಎಂಬುದು ಅಂಕಿತನಾಮವೆ? ಅನ್ವರ್ಥಕನಾಮವೇ? ಇಂಥ ಹಲವು ಪ್ರಶ್ನೆಗಳಿವೆ. ‘ಮೋನ’ ಎಂಬುದು ಸಂಸ್ಕೃತದ ‘ಮೌನ’ ಆಗಿದೆ. ಹಳ್ಳಿಯಲ್ಲಿ ಮಾನಪ್ಪ ಹೆಸರು ಬಳಕೆಯಲ್ಲಿದೆ.  ಮೋನಪ್ಪ ಯೋಗಿಯಾಗಿ ಬೆಳೆದು, ಮಾತು ಮಿತವಾದಾಗ ಅವರನ್ನು ಗಮನಿಸಿ, ಮೂಲತಃ ಇದ್ದ ‘ಮಾನಪ್ಪ’ ಎಂಬುದರ ಬದಲು ‘ಮೌನಪ್ಪ’ ಎಂಬ ಅನ್ವರ್ಥಕ ನಾಮವನ್ನು ಜನತೆ ಬಳಸಿರಬೇಕು. ಕಾವ್ಯ ಮತ್ತು ವಚನಗಳಲ್ಲಿ ‘ಮೋನಪ್ಪ’ ಪದವೇ ಬಳಕೆಯಾಗಿದೆ. ಮುಂದೆ ‘ಈಶ್ವರ’ ನೆಂಬ ಗೌರವವಾಚಿಪದ ಸೇರುವಲ್ಲಿ ‘ಮೌನೇಶ್ವರ’ ರೂಪ ಸಿದ್ಧಗೊಂಡಿರುತ್ತದೆ. ಹುಟ್ಟಿದಾಗ ಇಟ್ಟ ಹೆಸರು ಮಾನಪ್ಪ (ರೂಢಿಯ ಹೆಸರು ಮೋನಪ್ಪ) ಮಹಾತ್ಮನಾಗಿ ಬೆಳೆದಾಗ ರೂಢಿಗೊಂಡ ಹೆಸರು ಮಾನಪ್ಪ+ ಅಯ್ಯ = ಮಾನಪ್ಪಯ್ಯ (ಮೋನಪ್ಪಯ್ಯ) ಆಗಿದೆ. ಅರ್ಕಸಾಲಿ, ಪಂಚಬ್ರಹ್ಮ ಪಂಚಾನನರ, ಕುಲದಲ್ಲಿ ತಾನು ಹುಟ್ಟಿ ಬಂದಿರುವುದಾಗಿ ತಮ್ಮ ವಚನದಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಕಾಯಕದೊಂದಿಗೆ,  ಆಧ್ಯಾತ್ಮಿಕತೆಯನ್ನು ಅನುಸಂಧಾನಗೊಳಿಸಿದ್ದಾರೆ.

ಪ್ರಭಾವ, ಪ್ರೇರಣೆ, ಸಾಹಿತ್ಯ ಕೃತಿಗಳು

ಮೌನೇಶ್ವರರು 12ನೇ ಶತಮಾನದ ಶಿವಶರಣರ ಪ್ರಭಾವ, ಸೂಫಿಸಂತರ ತತ್ವವನ್ನು ಅಳವಡಿಸಿಕೊಂಡು ‘ಸಮನ್ವಯ ಪಂಥದ’ ಹರಿಕಾರನಾಗಿ ಹಿಂದೂ-ಮುಸ್ಲಿಂ ಭಾವೈಕ್ಯತೆಗಾಗಿ ಶ್ರಮಿಸಿದರು. ಇವರದು ಶಿಷ್ಟಪದ, ಜನಪದ ಸಾಹಿತ್ಯ. 1929 ರಿಂದ 1987ರ ವರೆಗೆ 20ಕ್ಕೂ ಹೆಚ್ಚು ಶಿಷ್ಟ ಸಾಹಿತ್ಯದಲ್ಲಿ ಮೌನೇಶ್ವರರನ್ನು ಕುರಿತಾಗಿ ಕೃತಿಗಳು ಪ್ರಕಟಗೊಂಡಿವೆ. ಜನಪದ ಸಾಹಿತ್ಯದಲ್ಲಿ ವಿಪುಲವಾದ ಸಾಹಿತ್ಯ ಸೃಷ್ಟಿಯಾಗಿದೆ. ಶರಣ, ಸಂತ, ಸನ್ಯಾಸಿ, ಫಕೀರ, ಪೀರ, ಅಲ್ಲಮ, ಶಿವ, ಬ್ರಹ್ಮ, ವಿಶ್ವಕರ್ಮ, ಜಗದ್ಗುರು ಹೀಗೆ ವಿವಿಧ ಸ್ವರೂಪದಲ್ಲಿ ಕಾಣುವ ಜನ ಮೌನೇಶ್ವರರನ್ನು ಹಾಡಿ ಹೊಗಳಿದ್ದಾರೆ. ಮುಕ್ತಕ (ತ್ರಿಪದಿ) ಪುರವಂತರ ಹಾಡು, ಕೋಲು ಪದ, ಮೊಹರಂ ಹಾಡು, ಆರತಿ ಪದ, ಭಜನೆ ಹಾಡು, ಜೋಗುಳ ಹಾಡು, ಡೊಳ್ಳಿನ ಪದ, ಹಾಗೂ ಜನಪದ ಸುಪ್ರಭಾತ ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಜನಪದ ಗೀತ ಸಾಹಿತ್ಯ ಮೈದಾಳಿರುತ್ತದೆ.

ಮೌನೇಶ್ವರರ ದೇಶಪರ್ಯಟನೆ

ತಿಂಥಿಣಿ ಜಾತ್ರೆ

ಮೋನಪ್ಪಯ್ಯನದು ಚರವ್ಯಕ್ತಿತ್ವ, ಅಲ್ಲಮಪ್ರಭು, ಸರ್ವಜ್ಞನಂತೆ ಲೋಕಸಂಚಾರಿ. ಸಂಚಾರದ ಉದ್ದೇಶ ಆತ್ಮಕಲ್ಯಾಣ ಮತ್ತು ಲೋಕಕಲ್ಯಾಣ. ಫೀರ ಫಕೀರನಾಗಿ, ವೀರ ವಿರಕ್ತನಾಗಿ ಕಂಗೊಳಿಸಿ ಅಲ್ಲಲ್ಲಿಯ ಘಟನೆಗಳಿಗೆ ಸ್ಪಂದಿಸಿ ಮಾನವೀಯತೆ ಮೆರೆದ ಕುರಿತು ಕಾವ್ಯಗಳು ತಿಳಿಸುತ್ತವೆ. ಮೋನಪ್ಪಯ್ಯ ಹುಟ್ಟಿದ್ದು ಗೋನಾಳ, ಐಕ್ಯನಾದದ್ದು ತಿಂಥಿಣಿಯಾದರೂ, ಲಿಂಗನಬಂಡಿ, ವರವಿಗ್ರಾಮಗಳು ಇವರ ದರ್ಶನದಿಂದ ಪುಣ್ಯಕ್ಷೇತ್ರಗಳಾಗಿವೆ. ಈ ನಾಲ್ಕು ಸ್ಥಳಗಳಲ್ಲಿ ಮೌನೇಶ್ವರನ ಹೆಸರಿನಲ್ಲಿ ಕಟ್ಟಿಸಿದ ದೇವಾಲಯಗಳಿವೆ. ಅಲ್ಲಿ ಆರಾಧನೆ, ಜಾತ್ರೆ, ಉತ್ಸವಗಳು ನಡೆಯುತ್ತಿವೆ. ಕಾಶಿ, ರಾಯಚೋಟ, ಹಂಪೆ, ದೇವದುರ್ಗ, ಕನಕಗಿರಿ, ಆನೆಗುಂದಿ, ಯಲಬುರ್ಗ, ರಾಯಚೂರು, ಬಂಕಾಪುರ, ಶಿರಸಂಗಿ, ಲಕ್ಷ್ಮೇಶ್ವರ, ಬಸವಾಪಟ್ಟಣ, ಲಿಂಗನಬಂಡಿ, ವಜ್ರುದಬಂಡಿ, ವರವಿ, ಛಬ್ಬಿ, ಶಿರಹಟ್ಟಿ, ಗದಗ, ಉಳವಿ, ವಿಜಾಪೂರ, ಸಗರ, ಶಹಾಪುರ, ಗೋಗಿ, ಉಕ್ಕಲಿ, ಧುತ್ತರಗಾಂವ್, ಬಿದುರುಕೆರೆ, ಕಲ್ಯಾಣ ಮುಂತಾದ ಸ್ಥಳ ಸಂದರ್ಶಿಸಿದ ಉಲ್ಲೇಖ ವಚನಗಳಲ್ಲಿವೆ.

ವಚನಕಾರರ ಪರಂಪರೆಯ ಮೋನಪ್ಪಯ್ಯ

ಸಾಹಿತ್ಯಿಕವಾಗಿ ವಚನಕಾರರ ಹಾಗೂ ಸರ್ವಜ್ಞನ ಪರಂಪರೆಯವರೆಂದು ಗುರುತಿಸಲು ಸಾಧ್ಯವಿದೆ. 12ನೇ ಶತಮಾನದ ಶಿವಶರಣರ ಜೀವನ, ವಚನಗಳು ಅವರ ಮೇಲೆ ಗಾಢವಾದ ಪ್ರಭಾವ ಬೀರಿವೆ. ಅವರ ಸಾಹಿತ್ಯ ಕೃಷಿಯೆಲ್ಲವೂ ತ್ರಿಪದಿ (ಮುಕ್ತಕಗಳು) ಹಾಗೂ ವಚನ ರಚನೆಯೇ ಆಗಿದೆ. ಮೋನಪ್ಪಯ್ಯನ ವಚನಗಳಿಗೆ ‘ಬಸವಣ್ಣ’ ಎಂಬ ಅಂಕಿತವಿದೆ. ಜನಪದ ಭಾಷೆ, ಆಡು ಭಾಷೆಯನ್ನೇ ಬಳಸಿದ್ದಾರೆ. ವಚನ ರಚನೆಯ ಗುರಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದು. ಮೋನಪ್ಪಯ್ಯನ ಆಲೋಚನೆ, ಅಭಿವ್ಯಕ್ತಿ ಸಮಾನಗುಣ ಧರ್ಮದಲ್ಲಿ ಭಾಷೆ, ವಚನ ಶಿಲ್ಪಗಳಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಸಮಾಜದ ವಿಡಂಬನೆ, ಚತುರೋಕ್ತಿಯಲ್ಲಿ, ಆಕೃತಿಯಲ್ಲಿ ಭಿನ್ನತೆ ಕಂಡರೂ ಆಶಯದಲ್ಲಿ ಏಕತೆ ಇದೆ.  ಮೋನಪ್ಪಯ್ಯ ಅಪಾರ ಸಂಖ್ಯೆಯ ಭಕ್ತರಿಂದ ಆರಾಧಿಸಿಕೊಳ್ಳುವ ದೈವ. ಇವರ ಸಮಾಜ ಶುದ್ಧೀಕರಣ ಪ್ರವೃತ್ತಿಯೇ ಕಾರಣವಾಗಿರಬೇಕು. ಮೋನಪ್ಪಯ್ಯನಿಗೆ ದೇವತ್ವದ ಪಟ್ಟ ದೊರೆಯಿತು. ಸರ್ವಜ್ಞನಿಗೆ ದೊರೆಯಲಿಲ್ಲ. ಪ್ರಭುತ್ವವನ್ನು ನೇರವಾಗಿ ಖಂಡಿಸಿದರೂ ಮೋನಪ್ಪಯ್ಯ ಪ್ರಭುವರ್ಗಕ್ಕೆ ಪಾತ್ರರಾಗಿ ಅವರಿಂದ ಪೂಜಿಸಿ ಕೊಂಡರು.

ವಚನ ರೂಪ, ತತ್ವ, ಸಮಾಜದರ್ಶನ

ಅನುಭಾವಿಗಳಿಗೆ ಅಕ್ಷರವಿದ್ಯೆಗಿಂತ ಆಧ್ಯಾತ್ಮವಿದ್ಯೆ ಹಿರಿದಾದುದು. ತಾನು ಅಕ್ಷರ ವಿದ್ಯೆ ಹೊಂದಿಲ್ಲವೆಂದು ಮೋನಪ್ಪಯ್ಯ ಹೇಳಿಕೊಂಡಿದ್ದಾನೆ. ಹಾಗಾದರೆ ಆತನ ವಚನಗಳು ಹೇಗೆ ರಚನೆಯಾದವು? ಅವರ ವಚನವಾಣಿಯನ್ನು ಆತನ ಭಕ್ತರು ಬರೆದಿಟ್ಟು ಕೊಂಡಿರಬೇಕು. ಹೀಗೆ ಬರೆದಿಟ್ಟುಕೊಳ್ಳುವ ಪದ್ಧತಿ ಕುರುಬ ಹೇಳಿಕೆ (ದೇವರಹೇಳಿಕೆ)ಗಳ ಸಂದರ್ಭದಲ್ಲಿ ಈಗಲೂ ಕಾಣಬಹುದು. ಮೋನಪ್ಪಯ್ಯನ ವಚನ, ಮೂರು, ನಾಲ್ಕು, ಐದು ಹಾಗೂ ಆರು ಸಾಲುಗಳ ತ್ರಿಪದಿಯಲ್ಲಿಯೇ ಇವೆ. ಧಾರ್ಮಿಕ ಸಮನ್ವಯ ತತ್ವ ಸಾರುತ್ತ, ಜನಪರ ಕಾಳಜಿಗೆ ವಚನಗಳನ್ನು ಅಭಿವ್ಯಕ್ತಿಯಾಗಿ ಬಳಸಿಕೊಂಡು ಸಮಾಜದ ಓರೆ-ಕೋರೆಗಳ ವಿಮರ್ಶೆ, ನೀತಿ, ನಿಜವಾದ ಧರ್ಮದ ನೆಲೆಗಟ್ಟು, ಸಮಾಜಕಟ್ಟುವ ಕೆಲಸ ಆತನದು. ವಚನಗಳಲ್ಲಿ ಜೀವಾತ್ಮ-ಪರಮಾತ್ಮ, ಅದ್ವೈತ, ಜಂಗಮತತ್ವ, ಏಕದೇವೋಪಾಸನೆ, ವೇದ, ಶಾಸ್ತ್ರ, ಪುರಾಣ, ಜಪ, ತಪ, ಶೀಲ, ಮಳೆ, ಬೆಳೆ, ಇಳೆ, ಅರಸು-ಅರಸೊತ್ತಿಗೆ, ಹೆಣ್ಣು-ಹೇಮ, ಮೂಢನಂಬಿಕೆಗಳ ಖಂಡನೆ, ಜಾತಿವ್ಯವಸ್ಥೆ, ಸಮಾನತೆ, ಜೀವದಯೆ ನೀತಿಬೋಧೆ ಸರಳತೆ, ಸದಾಚಾರ ಮುಂತಾದ ಸಂಗತಿಗಳ ಕುರಿತು ಹಂಬಲ-ಕಾಳಜಿಗಳನ್ನು ಅವರ ವಚನಗಳಲ್ಲಿ ಕಾಣಬಹುದು.

ಜಾತ್ರೆ, ಆರಾಧನೆ, ಆಚರಣೆಗಳು

ಹಿಂದೂ ಮುಸ್ಲಿಂ ಭಾವೈಕ್ಯತೆ

ಮೋನಪ್ಪಯ್ಯ ಹೆಸರಿನ ಮಠ-ಮಂದಿರಗಳು ಹುಟ್ಟಿಕೊಂಡಿವೆ. ಮಠಗಳು ಮೋನಪ್ಪಯ್ಯನ ಜಯಂತಿ, ಉತ್ಸವ, ಭಜನೆ ಹಾಗೂ ದಾಸೋಹವನ್ನು ನಡೆಸಿದರೆ. ಮಂದಿರಗಳು ಜಾತ್ರೆ-ಉತ್ಸವಗಳನ್ನು ನಡೆಸಿಕೊಂಡು ಬರುತ್ತವೆ. ಇವರ ಜೀವಂತ ಸಮಾಧಿಯೇ ತಿಂಥಿಣಿಯಲ್ಲಿ ಮಂದಿರವಾಗಿದೆ. ಇತರೇ ಮಂದಿರ-ಮಠಗಳು ಆತನ ಪುಣ್ಯನಾಮವನ್ನು ಹೊತ್ತು ದರ್ಶನ ಭಾಗ್ಯವನ್ನು ಸಾರುವ ಪುಣ್ಯಸ್ಮಾರಕಗಳಾಗಿವೆ. ರಾಜ್ಯಾದ್ಯಂತ ಸಾಕಷ್ಟು ಮಠ-ಮಂದಿರಗಳು ಸ್ಥಾಪನೆಯಾದರೂ ಪ್ರಮುಖವಾದವುಗಳು ಎಂದರೆ ಗೋನಾಳ, ಲಿಂಗನಬಂಡಿ, ವರವಿ ಹಾಗೂ ತಿಂಥಿಣಿ ದೇವಾಲಯಗಳು. ಇವು ಹಿಂದೂ-ಮುಸ್ಲಿಂ ಸಮನ್ವಯ ಶೈಲಿಯ ವಾಸ್ತುಶಿಲ್ಪ ಹಾಗೂ ಏಕರೂಪದ ಆರಾಧನೆಯನ್ನು, ಧರ್ಮಸಮನ್ವಯವನ್ನು ಸಾರುತ್ತಲಿವೆ. ಗದ್ದನಕೇರಿ, ಸಿರಸಂಗಿ, ಕೊಣ್ಣುರು, ಸವದತ್ತಿ, ಬೈಲಹೊಂಗಲ, ಬೆಳಗಾವಿ, ಹುಬ್ಬಳ್ಳಿ, ಕೊಪ್ಪಳ, ಹುಲಗೂರ, ಮಸ್ಕಿ, ಶಹಾಪುರ, ಅಳ್ಳೋಳ್ಳಿ ಹೀಗೆ (ನಾಡಿನಲ್ಲಿ 15ಕ್ಕೂ ಹೆಚ್ಚು) ಮೌನೇಶ್ವರರ ಮಠಗಳಿವೆ. ಒಟ್ಟಾರೆ ಸಂತನಾಗಿ, ನಾಡಿನ ಭಕ್ತಿ ಪರಂಪರೆಯ ಹರಿಕಾರರಾದ ಶಿವಶರಣರು ಮತ್ತು ಹರಿದಾಸರಿಗಿಂತಲೂ ಹೆಚ್ಚಿನ ಜನಪ್ರಿಯತೆ ಗಮನಿಸಿದಾಗ ಮೋನಪ್ಪಯ್ಯನ ಪ್ರಭಾವವಲಯದ ‘ಹರವು’ ಗೊತ್ತಾಗುತ್ತದೆ. ಸಮನ್ವಯ ಪಂಥದ ಹರಿಕಾರನಾದ ಮೌನೇಶ್ವರರ ತತ್ವಗಳು ಪ್ರಸ್ತುತ ಸಂದರ್ಭದಲ್ಲಿ ತುಂಬಾ ಅಗತ್ಯ ಮತ್ತು ಅವಶ್ಯಕತೆವೆನಿಸಿವೆ.

ಡಾ. ಗಂಗಾಧರಯ್ಯ ಹಿರೇಮಠ

ವಿಶ್ರಾಂತ ಪ್ರಾಧ್ಯಾಪಕರು

ಇದನ್ನೂ ಓದಿ- ಸಮಾಜದ ಕಣ್ತೆರೆಸುವ ಮಹತ್ತರ ಗ್ರಂಥ “ ಭೂ ಸ್ವಾಧೀನ ಒಳಸುಳಿಗಳು”

More articles

Latest article