ಬೆಂಗಳೂರು: KPSC ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಮಂಗಳವಾರ ಕರ್ನಾಟಕದ 21 ಸ್ಥಳಗಳಲ್ಲಿ ದಾಳಿ ನಡೆಸಿದೆ. ದಾಳಿಗೆ ಸಂಬಂಧಿಸಿದ ಮಾಧ್ಯಮ ವರದಿಗಳ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ʻಇಂಡಿಯಾ ಟುಡೇ’ ಮತ್ತು ‘CNN ನ್ಯೂಸ್18’ ಅನ್ನು ಟ್ಯಾಗ್ ಮಾಡಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, KPSC ನೇಮಕಾತಿ ಅಕ್ರಮ ಹಾಗೂ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಮೇಲಿನ ED ದಾಳಿ ವರದಿ ಮಾಡುವಾಗ ಹಾಲಿ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಅವರ ದೃಶ್ಯಗಳನ್ನು ದುರುದ್ದೇಶದಿಂದ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಸ್ಕ್ರೀನ್ ಶಾಟ್ ಗಳನ್ನು ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
“ಇದರಿಂದ ನೀವು ನಿಖರವಾಗಿ ಏನನ್ನು ಸಾಧಿಸಲು ಉದ್ದೇಶಿಸಿದ್ದೀರಿ?” ಎಂದು ಪ್ರಶ್ನಿಸಿರುವ ಅವರು, ಶಿವಶಂಕರಪ್ಪ ಸಾಹುಕಾರ್ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದರು ಎಂಬ ಅಂಶವನ್ನು ವರದಿಗಳಲ್ಲಿ ಅನುಕೂಲಕರವಾಗಿ ಮರೆಮಾಚಲಾಗಿದೆ ಎಂದು ಟೀಕಿಸಿದ್ದಾರೆ. ಅವರ ಸಮಿತಿಯ ಸದಸ್ಯರೂ ಬಿಜೆಪಿ ಸರ್ಕಾರದಲ್ಲಿ ನೇಮಕಾತಿಯಾಗಿದ್ದರು ಎಂಬುದನ್ನು ಪ್ರಿಯಾಂಕ್ ಖರ್ಗೆ ನೆನಪಿಸಿದ್ದಾರೆ.
CNN ನ್ಯೂಸ್18 ವಿರುದ್ಧ ಮತ್ತಷ್ಟು ಕಿಡಿಕಾರಿರುವ ಪ್ರಿಯಾಂಕ್ ಖರ್ಗೆ, ಶಿವಶಂಕರಪ್ಪ ಸಾಹುಕಾರ್ ಬದಲು ಮೃತಪಟ್ಟಿರುವ ಶಾಮನೂರು ಶಿವಶಂಕರಪ್ಪ ಅವರ ಛಾಯಾಚಿತ್ರವನ್ನು ಬಳಸಿರುವುದು “ಅತ್ಯಂತ ನಾಚಿಕೆಗೇಡಿನ ಸಂಗತಿ” ಎಂದು ಹೇಳಿದ್ದಾರೆ.
ಸಾಹುಕಾರ್ ಯಾರು ಮತ್ತು ಅವರ ರಾಜಕೀಯ ಸಂಬಂಧಗಳು ಏನು ಎಂಬುದನ್ನು ತಿಳಿದುಕೊಳ್ಳಲು ಸರಳವಾದ ಗೂಗಲ್ ಹುಡುಕಾಟವೇ ಸಾಕಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
“ಇದು ಪತ್ರಿಕೋದ್ಯಮವಲ್ಲ. ಆಯ್ದ ಸತ್ಯಾಂಶಗಳು ಮತ್ತು ತಪ್ಪುದಾರಿಗೆಳೆಯುವ ದೃಶ್ಯಗಳ ಮೂಲಕ ನಿರ್ಮಿಸಲಾದ ರಾಜಕೀಯ ಬಣ್ಣದ ನಿರೂಪಣೆ” ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಇದಕ್ಕೂ ಮುನ್ನ KPSC ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ED ರಾಜ್ಯದ ವಿವಿಧೆಡೆ 21 ಸ್ಥಳಗಳಲ್ಲಿ ಶೋಧ ನಡೆಸಿತ್ತು. ಬೆಂಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕಾರವಾರ, ಕಲಬುರಗಿ, ಬೆಳಗಾವಿ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳು ಹಾಗೂ ಗುಜರಾತ್ನ ಅಹಮದಾಬಾದ್ನಲ್ಲಿ ಶೋಧ ನಡೆದಿದ್ದು, KPSC ಕಚೇರಿ, ಅಮಾನತುಗೊಂಡಿರುವ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸ, KPSC ಸದಸ್ಯೆ ಶಾಂತಾ ಹೊಸಮನಿ, ಮಧ್ಯವರ್ತಿಗಳು ಹಾಗೂ ನೇಮಕಗೊಂಡ ಅಭ್ಯರ್ಥಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಶೋಧ ನಡೆದಿದೆ.
ಸುಮಾರು 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದ್ದು, ಅಭ್ಯರ್ಥಿಗಳಿಂದ ₹70–80 ಲಕ್ಷದವರೆಗೆ ಹಣಕ್ಕೆ ಬೇಡಿಕೆ ಇಡಲಾಗಿತ್ತು ಎಂಬ ಆರೋಪಗಳೂ ತನಿಖೆಯಲ್ಲಿವೆ. ಪ್ರಶ್ನೆಪತ್ರಿಕೆ ಸೋರಿಕೆ, OMR ಉತ್ತರ ಪತ್ರಿಕೆಗಳ ತಿದ್ದುಪಡಿ ಹಾಗೂ ಅಂಕಗಳ ಅಕ್ರಮ ಬದಲಾವಣೆ ಸೇರಿದಂತೆ ಹಲವು ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ED ದಾಳಿ ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದ್ದು, ಮಾಧ್ಯಮಗಳು ಪ್ರಕರಣವನ್ನು ವರದಿ ಮಾಡುತ್ತಿರುವ ರೀತಿಯನ್ನು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಅವರ ಆರೋಪಗಳಿಗೆ ಸಂಬಂಧಿಸಿದಂತೆ ‘ಇಂಡಿಯಾ ಟುಡೇ’ ಅಥವಾ ‘CNN ನ್ಯೂಸ್18’ ನೀಡಿರುವ ಪ್ರತಿಕ್ರಿಯೆ ಲಭ್ಯವಾಗಿಲ್ಲ.

