ಬೆಂಗಳೂರು ಆ.18 : ಕಾಂಗ್ರೆಸ್‌ನ ಯಾವುದೇ ಕಾರ್ಯಕ್ರಮದಲ್ಲೂ ‘ವಂದೇ ಮಾತರಂ’ ಗೀತೆಯನ್ನು ಪೂರ್ಣವಾಗಿ ಹಾಡುವುದಿಲ್ಲ. ಗೀತೆಯ ಎರಡು ಪ್ಯಾರಾಗಳನ್ನಷ್ಟೇ ಹಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
‘ವಂದೇ ಮಾತರಂ’ ಗೀತೆಗೆ ಕಾಂಗ್ರೆಸ್ ವಿರೋಧವಿಲ್ಲ. ಆದರೆ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಬಂಕಿಮಚಂದ್ರ ಚಟರ್ಜಿ ರಚಿಸಿರುವ ಗೀತೆಯ ಎರಡು ಪ್ಯಾರಾಗಳನ್ನಷ್ಟೇ ಹಾಡಲಾಗುತ್ತದೆ. ಜೈಲಿಗೆ ಹಾಕಿದರೂ, ನೇಣಿಗೆ ಹಾಕಿದರೂ ಪೂರ್ಣ ಗೀತೆ ಹಾಡುವುದಿಲ್ಲ ಎಂದು ಹರಿಪ್ರಸಾದ್ ಹೇಳಿದ್ದಾರೆ.
‘ವಂದೇ ಮಾತರಂ’ ಅನ್ನು ಕಡ್ಡಾಯಗೊಳಿಸುವ ಮೂಲಕ ರಾಷ್ಟ್ರಗೀತೆ ‘ಜನಗಣಮನ’ವನ್ನು ಎರಡನೇ ದರ್ಜೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ರಾಷ್ಟ್ರಗೀತೆ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಚಿಹ್ನೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅಪಮಾನ ಮಾಡಿವೆ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆ ಹಾಡದಿರುವುದು ಪಕ್ಷದ ನಿಲುವು. ಆದರೆ ಸರ್ಕಾರದ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆ ಹಾಡುವ ವಿಚಾರ ಸರ್ಕಾರಕ್ಕೆ ಬಿಟ್ಟದ್ದು. ಸರ್ಕಾರ ಜನರಿಂದ ಆಯ್ಕೆಯಾಗಿದೆ; ಕಾನೂನು ಪಾಲನೆ ಮಾಡಲಿ, ತಮ್ಮ ಆಕ್ಷೇಪವಿಲ್ಲ ಎಂದೂ ಅವರು ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ವಂದೇ ಮಾತರಂ’ ಹಾಡದಂತೆ ತಡೆದಿದ್ದಾರೆ ಎಂಬ ಆರೋಪವನ್ನೂ ಹರಿಪ್ರಸಾದ್ ತಳ್ಳಿಹಾಕಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಗೀತೆ ಹಾಡುವಾಗ ಕೆಲವು ತಪ್ಪುಗಳಾಗಿದ್ದವು. ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಸೋನಿಯಾ ಗಾಂಧಿ ಸೂಚಿಸಿದ್ದರು ಎಂದು ಅವರು ಹೇಳಿದ್ದಾರೆ.

