Saturday, July 27, 2024

ಇವು ಬರೀ ಶಾಲೆಗಳಲ್ಲ-ನಮ್ಮ ನಾಳೆಗಳು ಕೂಡಾ

Most read

ಧರ್ಮದ ವಿಷಯಗಳು ಮನೆ, ಮನಗಳೊಳಗೆ ಲೆಕ್ಕಕ್ಕಿಂತ ಜಾಸ್ತಿ ವಿಸ್ತರಿಸುತ್ತಿರುವುದೇ ಮುಂತಾದ ಕಾರಣಗಳಿಂದ ವಿದ್ಯಾರ್ಥಿಗಳು, ಪೋಷಕರು ಒತ್ತಡದಿಂದ ಇದ್ದಂತೆ ಕಾಣುತ್ತದೆ. ಇಂತಹ ಸಮಯದಲ್ಲಿ ಶಿಕ್ಷಣ ತಜ್ಞರು, ಸಮಾಜದ ಹಿರಿಯರು, ಸಮುದಾಯದ ಮುಂದಾಳುಗಳು ಬಹಳ ಸಹನೆಯಿಂದ, ತಾಳ್ಮೆಯಿಂದ ನಮ್ಮ ಮಕ್ಕಳ ಮತ್ತು ಸಮಾಜದ ಹಿತ ದೃಷ್ಟಿಯಿಂದ ಹೆಜ್ಜೆ ಇಡಬೇಕಾದ ಅಗತ್ಯವಿದೆ. – ಡಾ. ಉದಯಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು.

ಶಿಕ್ಷಣ ರಂಗದಲ್ಲಿ ಕಳೆದ ಹಲವಾರು ಸಮಯಗಳಿಂದ ಪಠ್ಯವಿಷಯ, ಸಮವಸ್ತ್ರ, ಶಿಕ್ಷಕರ ನಡವಳಿಕೆ ಇತ್ಯಾದಿ ಸಂಗತಿಗಳ ಕುರಿತಂತೆ ವಾದ ವಿವಾದಗಳು ನಡೆಯುತ್ತಾ ಇವೆ. ಅದರಲ್ಲಿಯೂ ವಿಶೇಷವಾಗಿ ಬುದ್ಧಿವಂತರ ಜಿಲ್ಲೆಗಳು ಎಂದೇ ಗುರುತಿಸಿಕೊಂಡ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಈ ಎಲ್ಲಾ ವಿವಾದಗಳ ಕೇಂದ್ರ ಬಿಂದುಗಳಾಗುತ್ತಿರುವುದು ನಾಡಿನೆಲ್ಲರ ಹುಬ್ಬೇರುವಂತೆ ಮಾಡಿದೆ. ಮೊನ್ನೆ ಮೊನ್ನೆಯಷ್ಟೇ ನಡೆದ ಮಂಗಳೂರಿನ ಸಂತ ಜೆರೋಸಾ ಶಾಲೆಯಲ್ಲಿ ನಡೆದ ವಿದ್ಯಮಾನ ಈ ವಿವಾದಗಳ ಪಟ್ಟಿಯಲ್ಲಿ ಹೊಸ ಸೇರ್ಪಡೆ. ಸಂತ ಜೆರೋಸಾ ಶಾಲೆಯಲ್ಲಿ ನಡೆದ ಅನಪೇಕ್ಷಿತ ಘಟನೆಯ ಕುರಿತ ತನಿಖಾ ವರದಿ ಸತ್ಯಾಸತ್ಯತೆಗಳನ್ನು ತಿಳಿಸಬಹುದು ಎಂದು ಆಶಿಸೋಣ?

ನಾವೀಗ ಸತ್ಯೋತ್ತರ ಕಾಲಘಟ್ಟದಲ್ಲಿ ಬದುಕುತ್ತಿರುವುದೇ ಈ ಕಾಲದ ಅತ್ಯಂತ ದೊಡ್ಡ ದುರಿತ. ಈ ಹಿಂದೆ ಯಾರಿಗಾದರೂ ಅನ್ಯಾಯವಾಗಿದೆ ಎನಿಸಿದರೆ ಅಥವಾ ಅವರ ಹಕ್ಕುಗಳಿಗೆ ಚ್ಯುತಿ ಬಂದಿದೆ ಅಂತ ಅನಿಸಿದರೆ ನೊಂದವರು, ಅನ್ಯಾಯಕ್ಕೆ, ವಂಚನೆಗೆ ಒಳಗಾದವರು ನಮ್ಮ ನೆಲದ ಕಾನೂನಿನಂತೆ ಸಂಬಂಧಪಟ್ಟವರಿಗೆ ದೂರು ನೀಡುತ್ತಿದ್ದರು. (ಲಿಖಿತ ಯಾ ಮೌಖಿಕ) ಆ ದೂರನ್ನು ಸ್ವೀಕರಿಸಿದ ನಂತರ ಸ್ವೀಕರಿಸಿದವರು ಅದನ್ನು ಕಾನೂನು ರೀತಿಯಲ್ಲಿ ಪರಿಶೀಲಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ದೂರಿಗೆ ಸಂಬಂಧಿಸಿದ ಎಲ್ಲರನ್ನೂ ಎಲ್ಲವನ್ನೂ ವಿಚಾರಣೆಗೆ ಒಳಪಡಿಸಿ, ಅನಂತರ ದೊರೆತ ಮಾಹಿತಿಗಳ ಮತ್ತು ಅಂತಹ ಮಾಹಿತಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಒಂದು ತೀರ್ಮಾನಕ್ಕೆ ಬರುತ್ತಿದ್ದರು. ಅದರನ್ವಯ ಯಾರು ಸರಿ, ಯಾರು ತಪ್ಪು ಎನ್ನುವುದನ್ನು ನಿರ್ಣಯಿಸಿ, ತಪ್ಪಿತಸ್ಥರಿಗೆ ನೆಲದ ಕಾನೂನಿನ ಅನ್ವಯ ಶಿಕ್ಷೆಯಾಗುತ್ತಿತ್ತು. ಒಂದು ವೇಳೆ ಯಾರಿಗಾದರೂ ಈ ತೀರ್ಮಾನದ ಬಗ್ಗೆ ತಕರಾರು ಇದ್ದರೆ ಅಂತಹವರು ಮೇಲಾಧಿಕಾರಿಗಳಿಗೆ ಯಾ ಸಕ್ಷಮ ಪ್ರಾಧಿಕಾರಕ್ಕೆ ತೀರ್ಮಾನದ ಮರುಪರಿಶೀಲನೆ ನಡೆಸುವಂತೆ ಮೇಲ್ಮನವಿ ಸಲ್ಲಿಸುವ ಕ್ರಮವಿತ್ತು.

ಜೆರೋಸಾ ಶಾಲೆಯಲ್ಲಿ….

ಆದರೆ ಇತ್ತೀಚಿನ ಎಲ್ಲ ಬೆಳವಣಿಗೆಗಳಲ್ಲಿ ಇದ್ಯಾವುದೂ ನಡೆಯುತ್ತಲಿಲ್ಲ. ಯಾರಿಗೋ ಅನ್ಯಾಯವಾಗಿದೆ, ಅವರಿಗೆ ಇಂತಹ ಕ್ರಮದ ಮೂಲಕ ತಕ್ಷಣ ನ್ಯಾಯ ದೊರಕಬೇಕಿದೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ, ಮಾಧ್ಯಮಗಳ ಮೂಲಕ ತೀರ್ಮಾನವಾಗಿ ‘ಅದೃಶ್ಯ ದೇವತೆ’ಗಳ ಮೂಲಕ ನ್ಯಾಯ ತೀರ್ಮಾನವಾಗಿ, ಕ್ಷಣಾರ್ಧದಲ್ಲಿ ನೊಂದವರ (?) ಪರವಾಗಿ ಜನರೇ ಗುಂಪುಗೂಡಿ ತೀರ್ಮಾನದ ಅನುಷ್ಠಾನಕ್ಕೆ ಮುಂದಾಗುವ ವಿದ್ಯಮಾನವನ್ನು ನಾವು ಕಾಣುತ್ತಿದ್ದೇವೆ. ಇದು ಬಹಳ ಅಪಾಯಕಾರಿ ಮತ್ತು ನಮ್ಮೆಲ್ಲರ ಭವಿಷ್ಯದ ದೃಷ್ಟಿಯಿಂದ ಅನಪೇಕ್ಷಣೀಯ. ಯಾವುದೇ ದೂರಿನ, ಹಿನ್ನಲೆ, ಸತ್ಯಾಸತ್ಯತೆ, ಸಂಬಂಧಿತರಿಗೆ ಅವರ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವೇ ಇಲ್ಲದೆ ಸತ್ಯವನ್ನು ಒಂದು ವರ್ಗ, ಪಂಗಡ ಯಾ ಗುಂಪಿಗೆ ಹಿತವಾಗುವ ರೀತಿಯಲ್ಲಿ ಪ್ರಮಾಣೀಕರಿಸದೆ ಪ್ರಸ್ತುತಪಡಿಸಿ ಉಳಿದವರೆಲ್ಲರೂ ಒಪ್ಪತಕ್ಕದೆಂದು ಫರ್ಮಾನು ಹೊರಡಿಸುವುದನ್ನು ಪ್ರಜಾಪ್ರಭುತ್ವದಲ್ಲಿರುವ ನಾಗರಿಕ ಸಮಾಜ ಖಂಡಿತವಾಗಿಯೂ ಒಪ್ಪತಕ್ಕದ್ದಲ್ಲ. ಈ ಎಲ್ಲ ಘಟನೆಗಳಲ್ಲಿ ಮುಂಚೂಣಿಯಲ್ಲಿರುವವರು ಅನ್ಯಾಯ ಮಾಡಿದವರು ಅಥವಾ ಅನ್ಯಾಯಕ್ಕೆ ಒಳ ಪಟ್ಟವರಾಗಿರುವುದಿಲ್ಲ ಎನ್ನುವುದನ್ನೂ ಗಮನಿಸಬಹುದು.

ಸತ್ಯದ ಕಾಲದಲ್ಲಿ ಅಥವಾ ವ್ಯವಸ್ಥೆಯಲ್ಲಿ ಅಹವಾಲು ಸ್ವೀಕರಿಸಿದ ನಂತರ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ತಿಳಿದು ಒಂದು ತೀರ್ಮಾನಕ್ಕೆ ಬರಲಾಗುತ್ತದೆ. ಸತ್ಯೋತ್ತರ ಕಾಲದಲ್ಲಿ ಒಂದು ವ್ಯಕ್ತಿಯನ್ನು ಯಾ ವರ್ಗವನ್ನು ಗುರಿಯಾಗಿಸಿ ಅಹವಾಲನ್ನು ಸಿದ್ಧಪಡಿಸಿ ಅದನ್ನು ಸತ್ಯವಾಗಿಸಲು ಬೇಕಾದ ಎಲ್ಲ ತಾಲೀಮು ನಡೆಸಿ ಅದನ್ನು ರಂಗದ ಮೇಲೆ ಪ್ರಯೋಗಿಸಲಾಗುತ್ತದೆ. ಇದರ ಮೂಲಕ ಪೂರ್ವ ನಿರ್ಧರಿತ ಉದ್ದೇಶ ಒಂದನ್ನು ಯಶಸ್ವಿಯಾಗಿ ಸಾಧಿಸಲಾಗುತ್ತದೆ. ಸಮಾಜದಲ್ಲಿ ಬೇರೆ ಬೇರೆ ರೀತಿಯ ಹಿತಾಸಕ್ತಿ ಇರುವ ಜನರಿಗೆ ತಮ್ಮ ಗುರಿ ಸಾಧಿಸಿಕೊಳ್ಳಲು ಈ ಸತ್ಯೋತ್ತರ ಕಾಲದ ವ್ಯೂಹಗಳು ಹೆಚ್ಚು ಪರಿಣಾಮಕಾರಿ ಎನಿಸತೊಡಗಿದೆ. ಇದರಿಂದಾಗಿ ಸ್ವಹಿತಾಸಕ್ತಿಯ ಗುರಿಗಳು ಅಲ್ಫಾವಧಿಯಲ್ಲಿ  ಬಹುಬೇಗನೆ ಈಡೇರಬಹುದು. ಆದರೆ ಸಮಾಜದಲ್ಲಿ ಘಟನೆಗಳು ಜನರ ನಡುವೆ ಉಂಟುಮಾಡುವ ಕಂದಕಗಳು ಅಮಾಯಕರ ಹೃದಯಗಳಿಗೆ ಮಾಡುವ ಗಾಯಗಳು ಆಳವಾದವುಗಳು. ಈ ಅವಾಂತರದ ಪರಿಣಾಮವನ್ನು ಸರಿಮಾಡಲು ಸುದೀರ್ಘ ಸಮಯವೇ ಬೇಕಾಗುತ್ತದೆ.

ಸಾಂಧರ್ಭಿಕ ಚಿತ್ರ

ಶಿಕ್ಷಣ ಸಂಸ್ಥೆಗಳು ಕುಟುಂಬದ ವಿಸ್ತರಣೆ ಇದ್ದ ಹಾಗೆ. ಈ ಕಾರಣದಿಂದಲೇ ನಮ್ಮ ಪರಂಪರೆಯಲ್ಲಿ ಮಾತೃ ದೇವೋಭವ, ಪಿತೃ ದೇವೋಭವ ಮತ್ತು ಗುರು ದೇವೋಭವ ಎಂದಿರುವುದು. ಮಕ್ಕಳ ಮೂಲಕ ನಾವು ನಮ್ಮ ಬದುಕಿಗೆ ಒಂದು ಅರ್ಥ ಕಂಡುಕೊಳ್ಳುತ್ತೇವೆ. ಅವರ ಮೂಲಕ ನಮ್ಮ ಅರಿವಿಗೊಂದು ಆಕಾರ, ತಿಳುವಿಗೊಂದು ತಿರುವು ನೀಡುವ ಮೂಲಕ ಬದುಕಿನ ಅರ್ಥ ಕಂಡುಕೊಳ್ಳುತ್ತೇವೆ. ಕುಟುಂಬದಲ್ಲಿ ನಮ್ಮ ಜನನ ಆಕಸ್ಮಿಕ ಇರಬಹುದು ಆದರೆ ಶಾಲೆ ನಮ್ಮದೇ ಆಯ್ಕೆ. ಆಯ್ಕೆ ಮಾಡುವ ಮೊದಲು ನಾವು ಸಾಕಷ್ಟು ವಿಷಯ ಸಂಗ್ರಹಿಸಿ ವಿಚಾರ ವಿಮರ್ಶೆ ಮಾಡಿದ ನಂತರವೇ ಮಕ್ಕಳನ್ನು ಶಾಲೆಗೆ ಸೇರಿಸುತ್ತೇವೆ. ಪ್ರತಿಯೊಂದು ಶಿಕ್ಷಣ ಸಂಸ್ಥೆಗೆ ಒಂದು ಧ್ಯೇಯವಿದೆ, ದೃಷ್ಟಿಯಿದೆ, ಆ ಧ್ಯೇಯ ಮತ್ತು ದೃಷ್ಟಿಯನ್ನಿಟ್ಟುಕೊಂಡು ಅದು ತನ್ನ ಎಲ್ಲ ಕಾರ್ಯಗಳನ್ನು ನಿರ್ಧರಿಸುತ್ತದೆ. ಇಂತಹ ಒಂದು ಧ್ಯೇಯ ಸಾಧನೆಗೆ ಸಂಸ್ಥೆಯಲ್ಲಿ ದುಡಿಯುವವರು ಮತ್ತು ಕಲಿಯುವ ವಿದ್ಯಾರ್ಥಿಗಳು, ಪೋಷಕರು, ಪರಿಸರ ಎಲ್ಲರೂ ಒಟ್ಟಾಗಿ ದುಡಿಯುವ ಮೂಲಕ ತಮ್ಮನ್ನು ಅರ್ಪಿಸಿಕೊಳ್ಳ ಬೇಕಿರುತ್ತದೆ. ಒಂದು ವಿದ್ಯಾಸಂಸ್ಥೆಗೆ ಇರುವ ಉದ್ದೇಶ, ಸಾಧನೆಯ ಮಾರ್ಗೋಪಾಯ, ಗುರಿಗಳು, ಇದೆಲ್ಲದರ ಬಗ್ಗೆ ಸಂಪೂರ್ಣ ಅರಿವು ಪೋಷಕರಿಗೆ ಇರಬೇಕು. ಈ ಅರಿವು ಇದ್ದು ಅವು ತಮಗೆ ಸ್ವೀಕೃತವಾಗಿದ್ದರೆ ಮಾತ್ರ ಮಕ್ಕಳನ್ನು ಅಂತಹ ಕಡೆ ದಾಖಲಾತಿ ಮಾಡಬಹುದು. ಇಲ್ಲದೇ ಹೋದರೆ ತಮ್ಮ ಹಿತಾಸಕ್ತಿಗೆ ಅನುಗುಣವಾದ ಕಡೆ ಮಕ್ಕಳನ್ನು ಸೇರಿಸಬಹುದು.

ಮಕ್ಕಳ ಎರಡನೆಯ ಮನೆಯಾದ ಶಾಲೆಯಲ್ಲಿ ಕಲಿಕೆಗೆ, ನಲಿಯುವಿಕೆಗೆ ಉತ್ತಮ ಪರಿಸರವಿರಬೇಕು ಮತ್ತು ಈ ಪರಿಸರವನ್ನು ಹೆತ್ತವರು, ಶಿಕ್ಷಕರು, ಆಡಳಿತ ಮಂಡಳಿ ಮತ್ತು ಸರಕಾರ ಸೇರಿ ನಿರ್ಮಿಸಬೇಕು. ಅಧ್ಯಯನದ ಅವಧಿಯಲ್ಲಿ ಉಂಟಾಗಬಹುದಾದ ಸಂದೇಹ, ಸಂಶಯ, ಯಾವುದೇ ವಿಷಯಗಳಿದ್ದರೂ ಶಿಕ್ಷಕ – ರಕ್ಷಕ ಸಂಘವಿರುತ್ತದೆ ಮತ್ತು ಸರಕಾರದ ಅಧಿಕಾರಿಗಳಿರುತ್ತಾರೆ. ಒಟ್ಟಿನಲ್ಲಿ ಶಿಕ್ಷಣ ರಂಗದಲ್ಲಿ ಕಲಿಕೆಗೆ ಸೂಕ್ತವಾದ ಒಂದು ವ್ಯವಸ್ಥೆ ಇರುತ್ತದೆ. ಮಕ್ಕಳಿಗೆ ಮತ್ತು ಪೋಷಕರಿಗೆ ಕಲಿಕೆಗೆ ಸಂಬಂಧಿಸಿ ಎದುರಾಗ ಬಹುದಾದ ಯಾವುದೇ ಸಮಸ್ಯೆಯನ್ನು ಅಂತಹ ವ್ಯವಸ್ಥೆಯ ಒಳಗೆ ಪರಿಹರಿಸಿಕೊಳ್ಳಬಹುದು ಎನ್ನುವುದು ನನ್ನ ಅನುಭವ ನನಗೆ ಕಲಿಸಿದ ಪಾಠ.

ಈ ಹಿಂದಿನ ಅಂಕಣ ಓದಿದ್ದೀರಾ ? ಸಾಹಿತ್ಯ ಸಂದೇಶ; ಜೀವನ ಉತ್ಸವ

ಗಂಡ ಹೆಂಡತಿಯರ ನಡುವೆ, ಹೆತ್ತವರ ಮತ್ತು ಪೋಷಕರ ನಡುವೆ ಮನಸ್ತಾಪವಾದರೆ ಅದು ಮನೆಯ ನಾಲ್ಕು ಗೋಡೆಗಳ ನಡುವೆಯೇ ಪರಿಹಾರ ಕಾಣಬೇಕು. ಒಂದು ವೇಳೆ ಇದು ಹೊರಗೆ ಹೋದರೆ ಸಂಸಾರ ಮೂರಾಬಟ್ಟೆಯಾಗಿ ಬಿಡುತ್ತದೆ. ಇದೆಲ್ಲವೂ ಬಹಳ ಸೂಕ್ಷ್ಮವಾದ ವಿಚಾರ. ಯುವಜನರಿಗೆ ೧೮ನೇ ವರ್ಷಕ್ಕೆ ಮತದಾನದ ಹಕ್ಕು ನೀಡಿರುವ ಕಾರಣ ವಿದ್ಯಾರ್ಥಿಗಳ ಮೇಲೆ ರಾಜಕೀಯ ರಂಗ ಪ್ರಭಾವ ಬೀರಲು ಪ್ರಯತ್ನ ನಡೆಸುತ್ತಿರುವುದು ಕೂಡಾ ಶಿಕ್ಷಣ ಕ್ಷೇತ್ರದ ನಿಜವಾದ ಸಮಸ್ಯೆಗಳ ಬದಲಿಗೆ ರಾಜಕೀಯ, ಮತ, ಧರ್ಮ, ಜಾತಿ ಜನಾಂಗ ಕೇಂದ್ರಿತ ವಿಷಯಗಳು ಚರ್ಚೆಯಾಗುವಂತೆ ಮಾಡಿದೆ. ಈ ಬೆಳವಣಿಗೆಗಳು ಹೀಗೆಯೇ ಮುಂದುವರಿದರೆ ಹೆಚ್ಚು ನಷ್ಟಕ್ಕೆ ಒಳಗಾಗುವವರು ಬಡವರು, ಸಮಾಜದ ದುರ್ಬಲ ವರ್ಗದ ಜನ ಎನ್ನುವುದನ್ನು ನೆನಪಿಡಬೇಕು. ಆಡಳಿತದ ಅವಧಿಯಲ್ಲಿ ನನ್ನ ಅನುಭವಗಳನ್ನು ನಾನು ಈ ಹಿಂದೆ ಪುಸ್ತಕ ರೂಪದಲ್ಲಿ ದಾಖಲಿಸಿದ್ದೆ.

ಸಾಂಧರ್ಭಿಕ ಚಿತ್ರ

ಕೊರೋನೋತ್ತರ ಕಾಲದಲ್ಲಿ ಶಿಕ್ಷಣ ವ್ಯವಸ್ಥೆ ಹಲವಾರು ಸಮಸ್ಯೆಗಳನ್ನು ಎದುರಿಸಿದೆ. ಶಾಲಾ ವೇಳಾಪಟ್ಟಿಯಲ್ಲಿ ವ್ಯತ್ಯಯ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಇನ್ನಿತರ ಹಿತಾಸಕ್ತಿಗಳು ನುಸುಳಿ ಪರಸ್ಪರರ ನಡುವೆ ಈ ಮೊದಲಿದ್ದ ಸಂಬಂಧಗಳಲ್ಲಿ ವ್ಯತ್ಯಯ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ ವಿಷಯಗಳು, ಜಾತಿ, ಧರ್ಮದ ವಿಷಯಗಳು ಮನೆ, ಮನಗಳೊಳಗೆ ಲೆಕ್ಕಕ್ಕಿಂತ ಜಾಸ್ತಿ ವಿಸ್ತರಿಸುತ್ತಿರುವುದೇ ಮುಂತಾದ ಕಾರಣಗಳಿಂದ ವಿದ್ಯಾರ್ಥಿಗಳು, ಪೋಷಕರು ಒತ್ತಡದಿಂದ ಇದ್ದಂತೆ ಕಾಣುತ್ತದೆ. ಇಂತಹ ಸಮಯದಲ್ಲಿ ಶಿಕ್ಷಣ ತಜ್ಞರು, ಸಮಾಜದ ಹಿರಿಯರು, ಸಮುದಾಯದ ಮುಂದಾಳುಗಳು ಬಹಳ ಸಹನೆಯಿಂದ, ತಾಳ್ಮೆಯಿಂದ ನಮ್ಮ ಮಕ್ಕಳ ಮತ್ತು ಸಮಾಜದ ಹಿತ ದೃಷ್ಟಿಯಿಂದ ಹೆಜ್ಜೆ ಇಡಬೇಕಾದ ಅಗತ್ಯವಿದೆ. ಶಾಲೆಗಳು ಬರೀ ಶಾಲೆಗಳು ಮಾತ್ರ ಅಲ್ಲ. ಅದು ನಮ್ಮ ಮತ್ತು ದೇಶದ ನಾಳೆಗಳೂ ಹೌದು.

ಡಾ. ಉದಯಕುಮಾರ ಇರ್ವತ್ತೂರು

ನಿವೃತ್ತ ಪ್ರಾಂಶುಪಾಲರು

More articles

Latest article