Sunday, July 14, 2024

ಸಾಹಿತ್ಯ ಸಂದೇಶ; ಜೀವನ ಉತ್ಸವ

Most read

‘ಜೈಪುರ ಸಾಹಿತ್ಯ ಉತ್ಸವ’ದಲ್ಲಿ ಭಾಗವಹಿಸಬೇಕೆನ್ನುವ ನನ್ನ ಮತ್ತು ರಾಜಲಕ್ಷ್ಮೀ ಯವರ ಬಹು ದಿನಗಳ ಆಸೆ ಈ ವರ್ಷ ಕೈಗೂಡಿತು. ಫೆಬ್ರವರಿ ಒಂದರಿಂದ ಐದನೇ ತಾರೀಕಿನವರೆಗೆ ನಡೆದ ಈ ಉತ್ಸವದಲ್ಲಿ ದೇಶ ವಿದೇಶಗಳ ಖ್ಯಾತ ಲೇಖಕರು, ಪ್ರಮುಖ ಪ್ರಕಾಶಕರು ಮತ್ತು ಸಾವಿರಾರು ಸಾಹಿತ್ಯಾಸಕ್ತರು, ಭಾಗವಹಿಸಿದ್ದರು. ಬಹಳ ದೊಡ್ಡ ಸಂಖ್ಯೆಯಲ್ಲಿ ಸೇರುವ ಎಲ್ಲಾ ವಯೋಮಾನದ ಜನ ಇಲ್ಲಿ ಪ್ರಸ್ತುತ ಸಮಾಜಕ್ಕೆ ಸಂಬಂಧಿಸಿದ ಸಾಹಿತ್ಯ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಚರ್ಚೆ, ಸಂವಾದಗಳಲ್ಲಿ ಪಾಲ್ಗೊಳ್ಳುತ್ತಾರೆ ಕೂಡಾ. ಎಲ್ಲಾ ಚರ್ಚೆಗಳು ಐದು ದಿನ ಆರು ಕಡೆ ಏಕಕಾಲದಲ್ಲಿ ನಡೆಯುತ್ತವೆ. ಹಾಗಾಗಿ ಒಬ್ಬರಿಗೆ ಎಲ್ಲಾ ಗೋಷ್ಠಿಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಕಾರ್ಯಕ್ರಮ ಪಟ್ಟಿಯನ್ನು ಮುಂಚಿತವಾಗಿ ನೋಡಿ, ನಮ್ಮ ಆಸಕ್ತಿ ಮತ್ತು ಪ್ರಸಕ್ತ ಸನ್ನಿವೇಶದಲ್ಲಿ ಯಾವುದು ನಮ್ಮ ಆದ್ಯತೆ ಎನ್ನುವುದನ್ನು ಗಮನದಲ್ಲಿರಿಸಿಕೊಂಡು ಗೋಷ್ಠಿಯ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಆಯ್ದ ಕೆಲವು ಗೋಷ್ಠಿಗಳ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ.

೨೦೨೩ನೇ ಇಸವಿಯ ‘ಬೂಕರ್ ಬಹುಮಾನ’ ವಿಜೇತ ಲೇಖಕ ಐರ್ಲೆಂಡ್ ದೇಶದ ಪೌಲ್ ಲಿಂಚ್ ತನ್ನ ಕೃತಿ “ಪ್ರೊಫೆಟ್ ಸಾಂಗ್” ಕುರಿತು ನಂದಿನಿ ನಾಯರ್ ಅವರೊಂದಿಗೆ ನಡೆಸಿದ ಸಂವಾದ ಜಗತ್ತಿನಾದ್ಯಂತ ಪ್ರಭುತ್ವ ಅಧಿಕಾರ ಕೇಂದ್ರೀಕರಣದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ನನಗೆ ಬಹಳ ಪ್ರಸ್ತುತ ಅನಿಸಿತು. ಐರ್ಲೆಂಡ್ ದೇಶದಲ್ಲಿ ದಮನಕಾರಿ ನೀತಿಯನ್ನು ಅನುಸರಿಸುವ ಅಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ವ್ಯಕ್ತಿ ಮತ್ತು ಕುಟುಂಬಗಳು ಅನುಭವಿಸುವ ಒತ್ತಡ, ಸವಾಲುಗಳ ನಡುವೆ ತಾಯಿಯೊಬ್ಬಳು ಕುಟುಂಬವನ್ನು ಒಟ್ಟಾಗಿಟ್ಟುಕೊಂಡು ಬದುಕು ನಡೆಸುವ ಪ್ರಯತ್ನದ ಕುರಿತ ಈ ಕೃತಿ, ವರ್ತಮಾನದ ತಲ್ಲಣಗಳನ್ನು ಹಿಡಿದಿಡಲು ಯಶಸ್ವಿಯಾಗಿದೆ ಅನಿಸಿತು. ಪೌಲ್ ಅವರ ಸಾಮಾಜಿಕ ಕಳಕಳಿಯ ಕನಸು ಅವರ ಮಾತುಗಳಲ್ಲಿ ಮಾರ್ಧನಿಸಿತು. ಸಂವಾದವನ್ನು ಮುಗಿಸಿ ಹೊರಟಾಗ ಮನದಲ್ಲಿ “ಬದುಕಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಫಲವಾಗದ ಕುರಿತು ತಿಳಿಸುವ ತಾಣವೇ ಇತಿಹಾಸ” ಎನ್ನುವ ಅವರ ಮಾತು ಯಾಕೊ ಗಾಢವಾಗಿ ಹಾಗೆ ಮನದಲ್ಲಿ ಅಂಟಿ ಕೂತಂತೆ ಅನಿಸಿತು.

ಆರ್ಥಿಕ ಚಿಂತಕರಾದ ರಘುರಾಮ ರಾಜನ್ ಹಾಗೂ ರೋಹಿತ ಲಂಬಾ

ಭಾರತದ ರಿಸರ್‌ ಬ್ಯಾಂಕಿನ ಮಾಜಿ ಗವರ್ನರ್ ಹಾಗೂ ಆರ್ಥಿಕ ತಜ್ಞ ರಘುರಾಮ ರಾಜನ್ ಹಾಗೂ ಇನ್ನೊಬ್ಬ ಆರ್ಥಿಕ ಚಿಂತಕ ರೋಹಿತ ಲಂಬಾ ಅವರೊಂದಿಗೆ ನಡೆದ “ಬ್ರೇಕಿಂಗ್ ದಿ ಮೌಲ್ಡ್” ಎನ್ನುವ ಸಂವಾದ ಗೋಷ್ಠಿಯೂ ಅಸಕ್ತಿದಾಯಕವಾಗಿತ್ತು. ದೇಶವು ಆರ್ಥಿಕ ಅಭಿವೃದ್ಧಿಯ ಕುರಿತು ಆಕಾಂಕ್ಷೆ ಇರಿಸಿಕೊಂಡು ಮುಂದುವರಿಯುವುದು ಸರಿಯಾಗಿದೆ. ಆದರೆ ವಿಶಾಲವಾದ ಈ ದೇಶದಲ್ಲಿ ನಮ್ಮೆದುರು ಇರುವ ವಾಸ್ತವದ ಕಟು ಸತ್ಯಗಳಿಗೆ ಬೆನ್ನು ತಿರುಗಿಸಲಾಗದು. ನಮ್ಮ ಶಕ್ತಿಯನ್ನು ಸಂಪನ್ಮೂಲವನ್ನು ಭವಿಷ್ಯದಲ್ಲಿ ಹೆಚ್ಚಿನ ಪ್ರತಿಫಲ ಮತ್ತು ಸ್ವರೂಪಾತ್ಮಕವಾಗಿ ಅನುಕೂಲ ಕಲ್ಪಿಸುವ ವಲಯದಲ್ಲಿ ವಿನಿಯೋಗಿಸುವತ್ತ ಗಮನ ಹರಿಸುವ ಅವಶ್ಯಕತೆ ಇದೆ. ಸಣ್ಣ ಫಲ ನೀಡಿದ ದೊಡ್ಡ ಪ್ರಯತ್ನಗಳನ್ನು ನಂಬಿ ದೂರ ನಡೆಯಲಾಗದು. ಸರಕಾರಿ ರಂಗದ ಪ್ರಯೋಜನಗಳನ್ನು ನಿರ್ಲಕ್ಷಿಸದೇ, ಖಾಸಗಿ ರಂಗದ ಯಶಸ್ಸನ್ನು ವೈಭವೀಕರಿಸದೇ, ನಮ್ಮ ಸಂಪನ್ಮೂಲ ಸಮಾಜದ ಸದ್ಬಳಕೆಯಾಗುವ ಬಗ್ಗೆ ಗಮನಹರಿಸುವುದು ಅವಶ್ಯಕ ಎನ್ನುವ ಮಾತುಗಳು, ಅವರ ಆಡಳಿತದ ಅವಧಿಯ ಹಣಕಾಸು ನೀತಿಗಳು ಮತ್ತು ಸಂಶೋಧನಾ ಲೇಖನಗಳೊಂದಿಗೆ ತಾಳೆಯಾಗುವಂತಿದ್ದುವು. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ರಂಗದಲ್ಲಿರುವ ಸವಾಲುಗಳು ಮತ್ತು ಅದನ್ನು ಎದುರಿಸುವ ಅಗತ್ಯ ಮತ್ತು ತಂತ್ರದ ಕುರಿತು ರೋಹಿತ್ ಲಂಬಾ ಅವರು ಕೆಲವು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದರು.

ರಾಜೀವ್ ಭಾರ್ಗವ

ಭಾರತದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆ, ರಾಜಕೀಯ ಶಾಸ್ತ್ರಜ್ಞ ರಾಜೀವ್ ಭಾರ್ಗವ ದೇಶದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಕಳೆಗುಂದುತ್ತಿರುವ ವಿದ್ಯಮಾನಗಳ ಬಗ್ಗೆ ಪ್ರಸ್ತಾಪ ಮಾಡಿದರು. ರಾಜಕೀಯ ಅಧಿಕಾರ ಸಭ್ಯತೆಯ ಎಲ್ಲೆಗಳನ್ನು ಮೀರಿ ದಮನಕಾರಿಯಾಗುತ್ತಿರುವುದು, ನೈತಿಕ ಸೂಕ್ಷ್ಮತೆಯನ್ನು ಕಳೆದುಕೊಂಡು, ವಿರೋಧಿಗಳ ಹುಟ್ಟಡಗಿಸ ಹೊರಡುವ ಆಡಳಿತಾತ್ಮಕ ಮತ್ತು ರಾಜಕೀಯಾತ್ಮಕ ಕ್ರಮಗಳು ಹೇಗೆ ನಮ್ಮ ಸಂವಿಧಾನದ ಆಶಯಗಳಿಗೆ ಬದ್ಧವಾಗಿಲ್ಲ ಎನ್ನುವ ವಿಷಯವನ್ನು ಸವಿಸ್ತಾರವಾಗಿ ತಿಳಿಸಿದರು.

ಶಶಿತರೂರ್

ಮರುದಿನ “ಪ್ರಜಾಪ್ರಭುತ್ವವನ್ನು ಉಳಿಸುವುದು ಹೇಗೆ – ದಿಟ್ಟಗುರಿ” ಎನ್ನುವ ಗೋಷ್ಠಿಯಲ್ಲಿ ಇಂದ್ರಜಿತ್ ರಾಯ್ ಮತ್ತು ಪಾರ್ಲಿಮೆಂಟ್ ಸದಸ್ಯ ಶಶಿ ತರೂರ್ ಅವರಿದ್ದ ಗೋಷ್ಠಿ ರಾಜೀವ್ ಅವರು ಪ್ರಸ್ತಾಸಿದ ವಿಷಯಗಳ ಮುಂದುವರಿಕೆಯಾಗಿ ಕಂಡಿತು. ಈ ಗೋಷ್ಠಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಹಾಜರಿದ್ದದ್ದು ಮಾತ್ರವಲ್ಲದೇ ಉತ್ತಮ ಚರ್ಚೆಯನ್ನು ನಡೆಸಿದರು. ಭಾರತೀಯ ಪ್ರಜಾತಂತ್ರದಲ್ಲಿ ಅಧಿಕಾರ ಕೇಂದ್ರೀಕರಣ ಅಪೇಕ್ಷಣೀಯವಲ್ಲ ಮತ್ತು ಇದು ಅಪಾಯಕಾರಿ ಕೂಡಾ ಆಗಿದೆ ಎನ್ನುವುದನ್ನು ಬಹುಪಾಲು ಜನ ಬೆಂಬಲಿಸಿದರು. ನಾಯಕತ್ವ ಎನ್ನುವುದು ವಾದ, ಸಂವಾದದ ಮೂಲಕ ರೂಪುಗೊಳ್ಳಬೇಕೇ ಹೊರತು ಯಾವುದೋ ಸಿದ್ಧಾಂತದ ಕುಲುಮೆಯಲ್ಲಿ ಮೂಡಿ ಸಿದ್ಧ ಮಾದರಿಯಾಗಿ ಬರುವುದಲ್ಲ ಎನ್ನುವ ದಿಕ್ಕಿನಲ್ಲಿ ನಡೆದ ಮಾತುಕತೆ ಹೊಸ ದಾರಿಗಳನ್ನು ಹಿಡಿಯಲು ಪ್ರೇರೇಪಿಸಿದಂತೆ ಇತ್ತು. ಅಪರೋಕ್ಷವಾಗಿ ದೇಶದಲ್ಲಿ ವಿರೋಧ ಪಕ್ಷಗಳಲ್ಲಿರುವ ಸ್ಪಷ್ಟತೆಯ ಕೊರತೆ ಮತ್ತೆ ಮೋದಿಯತ್ತ ನೋಡುವಂತೆ ಮಾಡಿದೆಯೆನ್ನುವ ಮಾತೂ ಕೇಳಿ ಬಂತು.

ನೆರೆಯ ರಾಜ್ಯದ ತಮಿಳು ಲೇಖಕ ಪೆರುಮಾಳ್ ಮುರುಗನ್, ಗ್ರಾಮೀಣ ಕೃಷಿ ಹಿನ್ನಲೆಯ ಕಥಾ ವಸ್ತುಗಳು ಕೃತಿಯಾಗಿ ಅರಳುವ ಬಗೆಯನ್ನು ಮುಗ್ಧವಾಗಿ ತಮಿಳಿನಲ್ಲೇ ವಿವರಿಸಿದ ರೀತಿ ತಮಿಳು ಭಾಷೆ ಅರಿಯದವರ ಮನಸ್ಸನ್ನೂ ಭಾವವಾಗಿ ಮುಟ್ಟಿದ ರೀತಿ ಅನನ್ಯ. ಮಣಿಶಂಕರ ಅಯ್ಯರ್ ಮತ್ತು ಗುರುಚರಣದಾಸ್ ಅವರು ತಮ್ಮ ಆತ್ಮಕಥೆಯ ಕುರಿತು ಹಂಚಿಕೊಂಡ ಮಾಹಿತಿಗಳು ಕಾಲ, ದೇಶ, ಸಾಂಸ್ಕೃತಿಕ ಲೋಕದ ಎಲ್ಲೆಗಳನ್ನು ಮೀರಿದ ನಿರ್ವಚನಗಳಾಗಿ ತೋರಿದುವು. ಇದಕ್ಕೆ ಪ್ರಮುಖ ಕಾರಣ ಈ ಇಬ್ಬರೂ ೧೯೪೭ ಕ್ಕೆ ಮೊದಲು ಇಂದು ನಮ್ಮದಾಗಿರದ ಮತ್ತು ನಾವು ಇವತ್ತು ಶತ್ರು ಎಂದು ಪರಿಗಣಿಸುವ ಪಾಕಿಸ್ತಾನದಲ್ಲಿ ಹುಟ್ಟಿರುವುದು. ತಮ್ಮ ಬಾಲ್ಯದ ನೆನಪುಗಳನ್ನು, ಭಯಗಳನ್ನು ಆರಿಸಿಕೊಳ್ಳಲು ಗಡಿದಾಟಿದ ಹಿರಿಯರ ನೆನಪಲ್ಲಿ ನಲಿವಿನೊಂದಿಗೆ ನೋವಿನ ಗೀಚುಗಳೂ ಇದ್ದುವು. ಗಡಿರೇಖೆಗಳು ಭೂಮಿಗಷ್ಟೇ ಸೀಮಿತವಾಗಿರಲಿ ಎನ್ನುವ ಮಣಿಶಂಕರ್ ಅಯ್ಯರ್ ಅವರ ಮಾತು ಇಂದಿನ ರಾಜಕೀಯದಲ್ಲಿ ಕೇವಲ ರಮ್ಯ ಕಲ್ಪನೆಯಾಗಿಯಷ್ಟೇ ಆದೀತು ಅನ್ಸುತ್ತೆ. ಹಾಗೆಯೇ ಬಹುರಾಷ್ಟ್ರೀಯ ಕಂಪನಿಯಲ್ಲಿ ಹಿರಿಯ ಅಧಿಕಾರಿಯಾಗಿ ವೃತ್ತಿ ಜೀವನ ನಡೆಸಿದ ಲೇಖಕ ಗುರುಚರಣದಾಸ ಅವರನ್ನು “ಸರಕಾರಿ ನಿಯಂತ್ರಣ”ದ  ಕಹಿ ಇನ್ನೂ ಕಾಡುತ್ತಿರುವುದು ಮತ್ತು ಕೆಲವೊಂದು ಅವರ ಅನುಭವದ ಕಹಿ ಕೇಳುಗರ ಗಮನಕ್ಕೆ ಬಾರದಿರಲಿಲ್ಲ.

ರಾಧಿಕಾ ಅಯ್ಯಂಗಾರ್

ರಾಧಿಕಾ ಅಯ್ಯಂಗಾರ್ ಅವರು ಸಂಜಯ್ ರಾಯ್ ಅವರೊಂದಿಗೆ ನಡೆಸಿದ “ಫಯರ್ ಆನ್ ಗೇಂಜಸ್” ಎನ್ನುವ ಸಂವಾದ ಗೋಷ್ಠಿ, ಕಾಶಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಹೆಣಗಳನ್ನು ಸುಡುವ ಸಮುದಾಯದ ಬದುಕು, ಬವಣೆ, ತಳಮಳ, ಕನಸು, ತಲ್ಲಣಗಳನ್ನು ನೆರೆದವರ ಮುಂದೆ ತೆರೆದಿಟ್ಟಿತು. ತೀರ್ಥ ಕ್ಷೇತ್ರದ ಹಿಂದಿರುವ, ಹೆಚ್ಚಿನವರ ಗಮನಕ್ಕೆ ಬಾರದಿರುವ ಈ ಸಂಗತಿಗಳು ಮನಸ್ಸಲ್ಲಿ ವಿಷಾದದ ಛಾಯೆ ಮೂಡಿಸಿದುವು. ಉತ್ತರ ಪೂರ್ವ ರಾಜ್ಯಗಳ ಸಮಸ್ಯೆ ಸವಾಲುಗಳು, ಆಭಿವೃದ್ಧಿ ಅಭಿಯಾನ ಕುರಿತ ಕೆಲವು ಗೋಷ್ಠಿ ಗಳಲ್ಲಿ ವಾದ ಸಂವಾದದ ರೀತಿಯಲ್ಲಿ ಅಭಿಪ್ರಾಯಗಳ ಮಂಡನೆಯ ಬದಲಿಗೆ ಭಿತ್ತಿ ಪತ್ರ ಅಂಟಿಸಿ ಹೊರ ನಡೆದು ಬಿಡುವಂತೆ ವಿಷಯ ಮಂಡನೆ ಮಾಡಿದಂತೆ ಅನಿಸಿತು.

ಪರಿಸರಕ್ಕೆ ಸಂಬಂಧಿಸಿದ ಗೋಷ್ಠಿಯೊಂದರಲ್ಲಿ ಆಧುನಿಕ ಜೀವನ ಪದ್ಧತಿ ಹವಾಮಾನ ವೈಪರೀತ್ಯಕ್ಕೆ ಕಾರಣವಾದ ರೀತಿ ಮತ್ತು ಅದರ ತಡೆಯುವಿಕೆಯ ಬಗ್ಗೆಯೂ ಚರ್ಚೆಯಾಯಿತು. ಸಿದ್ಧಾರ್ಥ ಶ್ರೀಕಾಂತ್ ಅವರು ಪ್ರಪಂಚದ ಬೇರೆ ಬೇರೆ ಕಡೆ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಕುರಿತು ಮಾಡಲಾದ ಪ್ರಯೋಗಗಳ ಬಗ್ಗೆ ಪ್ರಸ್ತಾಪಿಸಿದರು. ಸಾಂಪ್ರದಾಯಿಕ ಇಂಧನಗಳ ಬದಲಿಗೆ ಮರುಬಳಕೆಯ ಸೌರಶಕ್ತಿಯ ಬಳಕೆಯ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕಿದೆ ಮತ್ತು ಶಿಕ್ಷಣದಲ್ಲಿಯೇ ಈ ಕುರಿತು ಮಕ್ಕಳಿಗೆ ಮಾಹಿತಿ, ಮಾರ್ಗದರ್ಶನ ಮಾಡಿದರೆ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಇಂಧನ ಬಳಕೆಯಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಪರಿಸರ ಅಸಮತೋಲನಕ್ಕೆ ಕಾರಣವಾದ ಯುದ್ಧಗಳ ಬಗೆಗೂ ಮಕ್ಕಳಲ್ಲಿ ಅರಿವು ಮೂಡಿಸುವುದೂ ಒಳ್ಳೆಯಲ್ಲವೇ? ಎನ್ನುವ ರಾಜಲಕ್ಷ್ಮೀಯವರ ಪ್ರಶ್ನೆಗೆ ಸಮಂಜಸ ಉತ್ತರ ದೊರಕಲಿಲ್ಲ. ಗೋಷ್ಠಿಗಳ ವಿವರಗಳು https://jaipurliteraturefestival.org/ ಜಾಲತಾಣದಲ್ಲಿ ಲಭ್ಯವಿರುತ್ತವೆ ಎಂದು ತಿಳಿಸಲಾಗಿತ್ತು.

ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ವಿಭಿನ್ನ ವಲಯದ ಮಹತ್ವದ ಲೇಖಕರ ಬದುಕು, ಬರಹಗಳನ್ನು ತಿಳಿಯುವುದು ಅವರ ಮಾತು ಕೇಳುವುದು, ನಮ್ಮನ್ನು ವರ್ತಮಾನಕ್ಕೆ ಇನ್ನಷ್ಟು ಹತ್ತಿರ ತೆಗೆದುಕೊಂಡು ಹೋಗುತ್ತದೆ. ಅದರ ನಡುವೆಯೇ ಜಗತ್ತನ್ನು ರೂಪಿಸುವ ಚಿಂತನೆಗಳು ಯಾವುದು, ಅವು ಯಾವೆಲ್ಲ ಸೈದ್ಧಾಂತಿಕ ಹಿನ್ನಲೆಯಲ್ಲಿ ರೂಪುಗೊಂಡು, ಹೇಗೆಲ್ಲ ನಮ್ಮ ಮೈ-ಮನಗಳನ್ನು ಮುಟ್ಟುತ್ತದೆ ಎನ್ನುವ ಕುರಿತಂತೆಯೂ ಸುಳಿವುಗಳು ಇಲ್ಲಿ ಸುಳಿದಾಡುವುದೂ ಸುಳ್ಳಲ್ಲ. ಒಟ್ಟಿನಲ್ಲಿ ಜೈಪುರ ಸಾಹಿತ್ಯೋತ್ಸವದ ಅನುಭವ ಹೊಸ ಹುಮ್ಮಸ್ಸು ಮತ್ತು ಹುರುಪು ಮೂಡಿಸುವ ಮೂಲಕ ಬದುಕನ್ನು ಇನ್ನಷ್ಟು ಗಾಢವಾಗಿ ಆಳವಾಗಿ ಪ್ರೀತಿಸುವಂತೆ ಮಾಡಿದ್ದು ಮಾತ್ರ ಸತ್ಯ.

ಡಾ. ಉದಯಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

More articles

Latest article