Friday, December 6, 2024

ರವೀಂದ್ರ ಕಲಾಕ್ಷೇತ್ರದ ಆಧುನೀಕರಣದ ಹಿಂದಿರುವ ಹಕೀಕತ್ತು…

Most read

‘ರವೀಂದ್ರ ಕಲಾಕ್ಷೇತ್ರವನ್ನು ನವೀಕರಣ ಮಾಡಲಾಗುತ್ತದಂತೆ’ ಎನ್ನುವ ಸುದ್ದಿ ಕೇಳಿದರೆ ಬೆಂಗಳೂರಿನ ರಂಗಭೂಮಿ ವಲಯ ಬೆಚ್ಚಿ ಬೀಳುತ್ತದೆ. ರಿಪೇರಿ ನೆಪದಲ್ಲಿ ವರ್ಷಾನುಗಟ್ಟಲೆ ಕಲಾಕ್ಷೇತ್ರವನ್ನು ಮುಚ್ಚಿದ ಹಿಂದಿನ ಕಹಿ ನೆನಪುಗಳು ಮರುಕಳಿಸುತ್ತವೆ. ಈಗ ಮತ್ತೆ ರವೀಂದ್ರ ಕಲಾಕ್ಷೇತ್ರದ ವಜ್ರ ಮಹೋತ್ಸವದ ನೆಪದಲ್ಲಿ ಕಲಾಕ್ಷೇತ್ರದ ನವೀಕರಣ ಕಾರ್ಯವನ್ನು ಮಾಡಲು ಸಂಸ್ಕೃತಿ ಇಲಾಖೆಯು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆಯಂತೆ ಹಾಗೂ ಅದಕ್ಕೆ ಆಗುವ ಅಂದಾಜು ವೆಚ್ಚ 24 ಕೋಟಿಯಂತೆ. ಖುದ್ದಾಗಿ ಸಂಸ್ಕೃತಿ ಇಲಾಖೆಯ ಸಚಿವರೇ ನವೀಕರಣದ ಬಗ್ಗೆ ಅತೀವ ಆಸಕ್ತಿ ವಹಿಸಿದ್ದಾರಂತೆ. ಅವರ ಸಹೋದರನಿಗೆ ಗುತ್ತಿಗೆ ಕೊಡಲು ಈ ಯೋಜನೆಯಂತೆ ಎನ್ನುವ ಗುಸು ಗುಸು ಸುದ್ದಿ ಹರಿದಾಡುತ್ತಿದ್ದು ರಂಗಕರ್ಗಮಿಗಳಲ್ಲಿ ಇದು ಆತಂಕ ಸೃಷ್ಟಿಸುತ್ತಿದೆ. 

ಕಲಾಕ್ಷೇತ್ರದ ಕಾಮಗಾರಿ ನಿರ್ವಹಣೆ ಮಾಡುತ್ತಿರುವುದು ಸಂಸ್ಕೃತಿ ಇಲಾಖೆಯಲ್ಲ , ಲೋಕೋಪಯೋಗಿ ಇಲಾಖೆ. ಐದು ವರ್ಷಗಳ ಹಿಂದೆ ಕಲಾಕ್ಷೇತ್ರದ ನವೀಕರಣ ಕಾರ್ಯವನ್ನು ಕೈಗೆತ್ತಿಕೊಂಡಾಗ ಈ ಎರಡೂ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ವರ್ಷಾನುಗಟ್ಟಲೆ ಕಾಮಗಾರಿ ಕುಂಟುತ್ತಾ ಸಾಗಿತ್ತು. ರಂಗಮಂದಿರದ ವಿನ್ಯಾಸ ಹಾಗೂ ತಂತ್ರಜ್ಞತೆ ಇತರೇ ಕಟ್ಟಡಗಳಂತಲ್ಲಾ. ಪಿಡ್ಬ್ಲುಡಿ ಇಂಜಿನೀಯರುಗಳಿಗೆ ಎಲ್ಲಾ ಕಟ್ಟಡಗಳೂ ಒಂದೇ. ಅವರಿಗೆ  ತಾಂತ್ರಿಕ ಸಲಹೆ ಕೊಡಲೆಂದೇ ರಂಗತಜ್ಞರ ಸಲಹಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿತ್ತು. ಆದರೆ ಲೋಕೋಪಯೋಗಿ ಅಧಿಕಾರಿಗಳ ಅಸಹಕಾರ ಹಾಗೂ ಅಜ್ಞಾನಕ್ಕೆ ಬೇಸತ್ತು ಸಮಿತಿಯಲ್ಲಿದ್ದ ಶಶಿಧರ್ ಅಡಪ, ಅಪ್ಪಯ್ಯ ಮುಂತಾದವರು ರಾಜೀನಾಮೆ ಕೊಡಬೇಕಾಯ್ತು. ಹಲವಾರು ತಿಂಗಳುಗಳ ಕಾಲ ಕಾಮಗಾರಿಯೇ ಸ್ಥಗಿತಗೊಂಡಿತ್ತು.

ಸಂಸ್ಕೃತಿ ಇಲಾಖೆಯ ಸಚಿವರು

ಕಾಯ್ದು ಕಾಯ್ದು ಬೇಸತ್ತ ರಂಗಕರ್ಮಿ, ಕಲಾವಿದರುಗಳು ಕಲಾಕ್ಷೇತ್ರ ರೀಓಪನ್ ಮಾಡಿ ಎಂದು ಪ್ರತಿಭಟನೆ ಮಾಡಬೇಕಾಯ್ತು. ಒತ್ತಾಯಕ್ಕೊಳಗಾಗಿ ತರಾತುರಿಯಲ್ಲಿ ಬಾಕಿ ಕೆಲಸ ಮುಗಿಸಿದಂತೆ ಮಾಡಿ ಹಾಗೂ ಹೀಗೂ ಹೇಗೋ ಕಲಾಕ್ಷೇತ್ರ ತೆರೆಯಲಾಯ್ತು. ಆದರೆ ಧ್ವನಿ ಮತ್ತು ಬೆಳಕಿನ ಕಳಪೆ ಪರಿಕರಗಳಿಂದಾಗಿ ಅತೀ ಶೀಘ್ರದಲ್ಲಿ ನವೀಕರಣದ ಉದ್ದೇಶ ವಿಫಲವಾಯಿತು. ಕಾರ್ಯಕ್ರಮ ಮಾಡುವವರು ಹೆಚ್ಚುವರಿ ಲೈಟಿಂಗ್ಸ್ ಗಳನ್ನು ಹೊರಗಡೆಯಿಂದ ಬಾಡಿಗೆಗೆ ತರಬೇಕಾದ ಅನಿವಾರ್ಯತೆ ಉಂಟಾಯಿತು. ಅದೇ ರೀತಿ ಕಲಾಗ್ರಾಮದಲ್ಲಿರುವ ರಂಗಮಂದಿರದ ಲೈಟಿಂಗ್ ರೂಂ ಬೆಂಕಿಗೆ ಆಹುತಿಯಾಯಿತು. ಒಂದು ತಿಂಗಳಲ್ಲಿ ರಿಪೇರಿ ಮಾಡಬಹುದಾಗಿತ್ತು ಮಾಡಲಿಲ್ಲ. ಒಂದೂವರೆ ವರ್ಷವಾದರೂ ಸರಿಪಡಿಸಲಿಲ್ಲ. ಕೊನೆಗೆ ರಂಗಕರ್ಮಿಗಳು ಧರಣಿ ಸತ್ಯಾಗ್ರಹ ಪ್ರತಿಭಟನೆ ಮಾಡಿಯೇ ರಂಗಮಂದಿರ ಪಡೆಯಬೇಕಾಯ್ತು.

ಹಿಂದಿನ ಇಂತಹ ಆತಂಕಕಾರಿ ಅನುಭವಗಳಿಂದಾಗಿ ಕಲಾಕ್ಷೇತ್ರದ ನವೀಕರಣ ಎಂದರೆ ಸಾಂಸ್ಕೃತಿಕ ಕ್ಷೇತ್ರದವರು ಬೆಚ್ಚಿ ಬೀಳುತ್ತಾರೆ. ಆದರೆ ಈಗ ಮತ್ತೆ ಅದೇ ಕಲಾಕ್ಷೇತ್ರ ನವೀಕರಣಗೊಂಡು ಅತ್ಯಾಧುನೀಕರಣಗೊಳ್ಳುತ್ತಿದೆ. 

24 ಕೋಟಿ ಯೋಜನೆ ಅಂದ್ರೆ ಸುಮ್ಮನೇನಾ? ಕನಿಷ್ಟ ಎರಡು ವರ್ಷಗಳ ಕಾಲ ಕಲಾಕ್ಷೇತ್ರ ಮುಚ್ಚುಗಡೆಯಾಗುವುದು ಖಂಡಿತ. ಯಾರೂ ಕೇಳದಿದ್ದರೂ ಸ್ವಯಂ ಆಸಕ್ತಿಯಿಂದ ಸಂಸ್ಕೃತಿ ಇಲಾಖೆಯ ಸಚಿವರ ಒತ್ತಾಸೆಯ ಮೇರೆಗೆ ಮಾಡಬಯಸುವ ಈ ನವೀಕರಣದಿಂದಾಗುವ ಸಮಸ್ಯೆಗಳು ಹೀಗಿವೆ.

ಸಮಸ್ಯೆಗಳು

1. ಸುದೀರ್ಘ ಕಾಲ ನವೀಕರಣಕ್ಕಾಗಿ ಕಲಾಕ್ಷೇತ್ರ ಮುಚ್ಚುವುದರಿಂದ ಸಾಂಸ್ಕೃತಿಕ ಚಟುವಟಿಕೆಗಳು ಕುಂಠಿತಗೊಳ್ಳುತ್ತವೆ.

2. 24 ಕೋಟಿ ವೆಚ್ಚದಲ್ಲಿ ಉನ್ನತೀಕರಣ ಮಾಡಿ ಹೈಟೆಕ್ ರಂಗಮಂದಿರವಾಗಿ ರೂಪಾಂತರಿಸುವುದರಿಂದ ಕಲಾಕ್ಷೇತ್ರದ ಬಾಡಿಗೆ ಗಗನಕ್ಕೇರಿ ರಂಗಭೂಮಿಯವರ ಕೈಗೆಟುಕದಂತಾಗುತ್ತದೆ. 

3. ಕಲೆಗಾಗಿಯೇ ಮೀಸಲಿರಬೇಕಾದ ಕಲಾಕ್ಷೇತ್ರವು ಕಾರ್ಪೋರೇಟ್ ಕಾರ್ಯಕ್ರಮಗಳಿಗೆ, ರಿಯಾಲಿಟಿ ಶೋಗಳಿಗೆ ಮಾತ್ರ ಬಳಕೆಯಾಗುತ್ತದೆ. ಅತೀ ಹೆಚ್ಚು ಬಾಡಿಗೆ ಕಟ್ಟಲಾಗದ ರಂಗಭೂಮಿಯವರಿಗೆ ರಂಗಮಂದಿರ ಗಗನಕುಸುಮವಾಗುತ್ತದೆ.

4. ನವೀಕರಣದ ನಂತರ ದುಬಾರಿ ಬಾಡಿಗೆ ವಸೂಲಾತಿಯಿಂದಾಗಿ ಟೌನ್ ಹಾಲ್ ನಲ್ಲಿ ರಂಗಚಟುವಟಿಕೆಗಳು ಸಂಪೂರ್ಣ ನಿಂತಿದ್ದು ಅದೇ ಪರಿಸ್ಥಿತಿ ರವೀಂದ್ರ ಕಲಾಕ್ಷೇತ್ರಕ್ಕೂ ಬರುತ್ತದೆ.

5. ಈ ನವೀಕರಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮಾಡುವುದರಿಂದ ಹಾಗೂ ಆ ಇಲಾಖೆಯ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಯಾವುದೇ ನಿಯಂತ್ರಣ ಇಲ್ಲದೇ ಇರುವುದರಿಂದ ಕಳಪೆ ಕಾಮಗಾರಿ ಮಾಡಲಾಗುತ್ತದೆ ಹಾಗೂ ಕಡಿಮೆ ಆಯಸ್ಸು ಹೊಂದಿರುವ, ಕಡಿಮೆ ಬೆಲೆಯ ಚೀನೀ ಮೇಡ್ ಧ್ವನಿ ಹಾಗೂ ಬೆಳಕಿನ ಪರಿಕರಗಳನ್ನು ಬಳಸುವ ಸಾಧ್ಯತೆಯೇ ಹೆಚ್ಚಾಗಿ ಕೆಲವೇ ಸಮಯದಲ್ಲಿ ಅವು ನಿರುಪಯುಕ್ತವಾಗುತ್ತವೆ. ಮಾಡಿದ ಅಪಾರ ಪ್ರಮಾಣದ ಖರ್ಚು ವ್ಯರ್ಥವಾಗುತ್ತದೆ.

6. ಪಿಡ್ಬ್ಲುಡಿ ಅಧಿಕಾರಿಗಳು ಹಾಗೂ ಇಂಜಿನೀಯರುಗಳಿಗೆ ರಂಗಮಂದಿರ ಕುರಿತ ತಾಂತ್ರಿಕ ಅಗತ್ಯ ಮತ್ತು ವಿನ್ಯಾಸದ ಕುರಿತು ಯಾವುದೇ ಜ್ಞಾನ ಹಾಗೂ ಅನುಭವ ಇಲ್ಲದೇ ಇರುವುದರಿಂದ ರಂಗಮಂದಿರಗಳಿಗೆ ಬೇಕಾದ ತಾಂತ್ರಿಕ ಅಗತ್ಯಗಳನ್ನು ಅಳವಡಿಸಲು ಸಾಧ್ಯವಾಗದೇ ಹೋಗುತ್ತದೆ.

ಇಷ್ಟೆಲ್ಲಾ ತಾಪತ್ರಯ ಇರುವಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಬೇಕಾದದ್ದಾದರೂ ಏನು?

1. ರವೀಂದ್ರ ಕಲಾಕ್ಷೇತ್ರಕ್ಕೆ 75 ವರ್ಷ ತುಂಬಿರುವ ಸ್ಮರಣೆಯಲ್ಲಿ ಬೆಂಗಳೂರಿನ ಬೇರೆ ಸ್ಥಳದಲ್ಲಿ ಅದೇ 24 ಕೋಟಿ ಹಣವನ್ನು ಬಳಸಿ ಕಲಾಕ್ಷೇತ್ರದಂತಹ ಇನ್ನೊಂದು ರಂಗಮಂದಿರ ಕಟ್ಟಬಹುದಾಗಿದೆ.

2. ತಲಾ ಎರಡು ಕೋಟಿಯ ವೆಚ್ಚದಲ್ಲಿ ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ ಕಿರುರಂಗಮಂದಿರಗಳನ್ನು ಅಂದರೆ ಮಿನಿ ಕಲಾಕ್ಷೇತ್ರಗಳನ್ನು ನಿರ್ಮಿಸಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಶಾಶ್ವತ ಕೊಡುಗೆಯಾಗಿ ಕೊಡಬಹುದಾಗಿದೆ.

3. ಕಲಾಕ್ಷೇತ್ರದ ಆವರಣದಲ್ಲಿ ತಾಲಿಂ ಕೊಠಡಿಗಳಿರುವ ಜಾಗದಲ್ಲಿ ಬಹು ಅಂತಸ್ತಿನ ಥೇಯಟರ್ ಕಾಂಪ್ಲೆಕ್ಸ್ ಕಟ್ಟಿಸಿ ಅದರಲ್ಲಿ ಹಲವಾರು ತಾಲಿಂ ಕೊಠಡಿ, ಕಿರುರಂಗಮಂದಿರ ಹಾಗೂ ರಂಗಶಿಕ್ಷಣ ಕೇಂದ್ರದ ಕಟ್ಟಡ ಕಟ್ಟಿ ರಂಗಭೂಮಿಯ ಚಟುವಟಿಕೆಗಳಿಗೆ ಪೂರಕವಾಗಿ ಸ್ಪಂದಿಸಬಹುದಾಗಿದೆ.

ಈಗ ಸಾಂಸ್ಕೃತಿಕ ಲೋಕದವರು ಏನು ಮಾಡಬೇಕು?

1.  ರವೀಂದ್ರ ಕಲಾಕ್ಷೇತ್ರದ ಅತ್ಯಾಧುನೀಕರಣವನ್ನು ಸಂಘಟಿತರಾಗಿ ಪ್ರತಿಭಟನೆಗಳ ಮೂಲಕ ವಿರೋಧಿಸಬೇಕಿದೆ.

2. ಬಹುಕೋಟಿ ವೆಚ್ಚದಲ್ಲಿ ಅನಗತ್ಯವಾಗಿ ಕಲಾಕ್ಷೇತ್ರದ ಆಧುನೀಕರಣದ ಯೋಜನೆಯನ್ನು ಕೈಬಿಟ್ಟು ಅದೇ ಹಣದಲ್ಲಿ ಬೇರೆ ರಂಗಮಂದಿರಗಳನ್ನು ಕಟ್ಟಿಸಿ ಕೊಡಲು ಆಗ್ರಹಿಸಬೇಕಿದೆ. 

3. ಬೆಂಗಳೂರಲ್ಲಿ ಹಲವಾರು ಬಡಾವಣೆಗಳಲ್ಲಿ ವಿಶಾಲವಾದ ಪಾರ್ಕ್ ಗಳಿವೆ. ಅದರಲ್ಲಿ ಸುಸಜ್ಜಿತ ಕಿರುರಂಗ ಮಂದಿರಗಳನ್ನು ನಿರ್ಮಿಸಿ  ರಂಗಕರ್ಮಿಗಳಿಗೆ ನಿರ್ವಹಣೆ ಹೊಣೆಗಾರಿಕೆ ವಹಿಸಿಕೊಟ್ಟರೆ ಬಡಾವಣಾ ರಂಗಭೂಮಿ ಬೆಳೆದು ಸಾಂಸ್ಕೃತಿಕ ಚಟುವಟಿಕೆಗಳು ವಿಕೇಂದ್ರಿಕರಣಗೊಳ್ಳಲು ಸಹಕಾರಿಯಾಗುತ್ತದೆ ಎಂದು ಸಚಿವರನ್ನು ಒತ್ತಾಯಿಸಬೇಕಿದೆ.

4 . ಪಿವಿಆರ್ ಸಿನೆಮಾ ಮಂದಿರದ ಮಾದರಿಯಲ್ಲಿ ಉದ್ದೇಶಿತ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯ ಬದಲಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಈಗಾಗಲೇ ಅಳವಡಿಸಿರುವ ಎಸಿ ಗಳನ್ನು  ರಿಪೇರಿ, ಸರ್ವಿಸ್ ಮಾಡಿಸಿ ಬಳಸಬಹುದಾಗಿದೆ. 

5. ಈಗಿರುವ ದ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಸರಿಪಡಿಸಿ, ಅಗತ್ಯವಿರುವ ಹೆಚ್ಚುವರಿ ಲೈಟಿಂಗ್ ಮತ್ತು ಧ್ವನಿ ಪರಿಕರಗಳನ್ನು ಖರೀದಿಸಿ ಅಳವಡಿಸಿದರೆ ಸಾಕು. ಅದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಅಗತ್ಯವೇ ಬೇಕಿಲ್ಲ ಎಂದು ಅಧಿಕಾರಿಗಳಿಗೆ ಮನದಟ್ಟು ಮಾಡಬೇಕಿದೆ.

6. ಸಂಸ ಬಯಲು ರಂಗಮಂದಿರದಲ್ಲಾಗುವ ಕಾರ್ಯಕ್ರಮಗಳ ಸೌಂಡ್ ಕಲಾಕ್ಷೇತ್ರದ ಒಳಗೆ ಕೇಳಿಬರುತ್ತಿದ್ದು ಎರಡರ ನಡುವೆ ಇರುವ ಶೆಟರ್ ತೆಗೆದು ಶಾಶ್ವತ ಗೋಡೆ ಕಟ್ಟಿಸಿದರೆ ಈ ಸಮಸ್ಯೆಯೂ ಪರಿಹಾರವಾಗುತ್ತದೆ. 

ಇಷ್ಟೆಲ್ಲಾ ಸಕಾರಾತ್ಮಕ ಸಲಹೆಗಳನ್ನು ಕೊಟ್ಟರೂ ಸಂಸ್ಕೃತಿ ಇಲಾಖೆ ಹಠಕ್ಕೆ ಬಿದ್ದು ಕಲಾಕ್ಷೇತ್ರದ ಅತ್ಯಾಧುನೀಕರಣಕ್ಕೆ ಉತ್ಸಾಹ ತೋರಿದರೆ ರಂಗಕರ್ಮಿ ಕಲಾವಿದರು, ಸಾಂಸ್ಕೃತಿಕ ಸಂಘ ಸಂಸ್ಥೆಗಳು ಏನು ಮಾಡಬೇಕು?

ಧರಣಿದೇವಿ ಮಾಲಗತ್ತಿ, ಸಂಸ್ಕೃತಿ ಇಲಾಖೆಯ ನಿರ್ದೇಶಕರು

1. ಹಿರಿಯ ರಂಗಕರ್ಮಿಗಳ ನೇತೃತ್ವದಲ್ಲಿ ‘ಅನಗತ್ಯ ಆಧುನೀಕರಣದ ಅಗತ್ಯವಿಲ್ಲ’ಎಂಬ ಮನವಿ ಪತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ಹಾಗೂ ಸಚಿವರಿಗೆ ತಲುಪಿಸಬೇಕು.

2. ಸಾಹಿತಿ ಕಲಾವಿದರ ಒಂದು ನಿಯೋಗ ಹೋಗಿ ಮುಖ್ಯಮಂತ್ರಿಗಳ ಸಮಯ ಪಡೆದು ಭೇಟಿಯಾಗಿ ಅನಗತ್ಯ ಆಧುನೀಕರಣದ ನಿರರ್ಥಕತೆಯನ್ನು ಮನದಟ್ಟುಮಾಡಿ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಬೇಕು.

3. ಅದೂ ವರ್ಕೌಟ್ ಆಗದೇ ಇದ್ದರೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಎಲ್ಲಾ ಸರಕಾರಿ ಕಾರ್ಯಕ್ರಮಗಳನ್ನು ಬೈಕಾಟ್ ಮಾಡುತ್ತೇವೆಂದು ಸರಕಾರಕ್ಕೆ ತಿಳಿಸಬೇಕು. ಸರಕಾರಿ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಬೇಕು.

4. ನವೀಕರಣ ಮಾಡಲೇಬೇಕೆಂದರೆ ಕಾಮಗಾರಿ ಆರಂಭ ಹಾಗೂ ಅಂತ್ಯದ ಕಾಲಮಿತಿಯ ಬಗ್ಗೆ ಸಂಸ್ಕೃತಿ ಇಲಾಖೆ ಲಿಖಿತವಾಗಿ ಬರೆದುಕೊಡಬೇಕು ಹಾಗೂ ನವೀಕರಣದ ನಂತರ ಯಾವುದೇ ಕಾರಣಕ್ಕೂ ಬಾಡಿಗೆ ಹೆಚ್ಚಿಸುವುದಿಲ್ಲ ಹಾಗೂ ರಂಗಭೂಮಿಯ ಚಟುವಟಿಕೆಗಳಿಗೆ ತಿಂಗಳಲ್ಲಿ 15 ದಿನ ಮೀಸಲಿರಿಸಲಾಗುತ್ತದೆ ಎಂದು ಸರಕಾರ ಅಧಿಕೃತವಾಗಿ ಮುಚ್ಚಳಿಕೆ ಬರೆದು ಕೊಡಬೇಕೆಂದು ಆಗ್ರಹಿಸಬೇಕು. 

ಇದನ್ನೂ ಓದಿ-ಬಾಕಿ ಪ್ರಶಸ್ತಿಗಳ ಘೋಷಣೆ; ಸರಕಾರಕ್ಕೆ ಅಭಿನಂದನೆ

ಇಷ್ಟನ್ನಾದರೂ ಮಾಡದೇ ಹೋದರೆ ಉಳ್ಳವರ ಪಾಲಾಗುವ ರವೀಂದ್ರ ಕಲಾಕ್ಷೇತ್ರ ಸಾಂಸ್ಕೃತಿಕ ಚಟುವಟಿಕೆಗಳಿಗೆ ದಕ್ಕುವುದಿಲ್ಲ. ವಿಶ್ವದರ್ಜೆಯ ರಂಗಮಂದಿರದ ದುಬಾರಿ ಬಾಡಿಗೆ ಕಟ್ಟಿ ನಾಟಕ ಪ್ರದರ್ಶಿಸಲೂ ಸಾಧ್ಯವಿಲ್ಲ. ರವೀಂದ್ರ ಕಲಾಕ್ಷೇತ್ರ ಎನ್ನುವುದು ನಾಟಕದವರ ಕೈಗೆಟುಕದ ಮತ್ತೊಂದು ಟೌನ್ ಹಾಲ್ ಇಲ್ಲವೇ ಚೌಡಯ್ಯ ಮೆಮೋರಿಯಲ್ ಹಾಲ್ ಅಥವಾ ಅಂಬೇಡ್ಕರ್ ಭವನ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. 

ಶಶಿಕಾಂತ ಯಡಹಳ್ಳಿ

ರಂಗಕರ್ಮಿ ಮತ್ತು ಪತ್ರಕರ್ತರು

More articles

Latest article