Thursday, July 25, 2024

ರೋಚಕ ಕದನದಲ್ಲಿ ಭಾರತಕ್ಕೆ ಸೋಲಿನ ರುಚಿ ಉಣಿಸಿದ ಇಂಗ್ಲೆಂಡ್

Most read

ಹೈದರಾಬಾದ್: ಇನ್ನೇನು ಭಾರತ ಸೋತೇ ಹೋಯಿತು ಎಂಬ ಸಂದರ್ಭದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕೆ.ಎಸ್.ಭರತ್, ಭಾರತ ಸ್ಪಿನ್ ದಂತಕಥೆ ಆರ್ ಅಶ್ವಿನ್ ಗೆಲುವಿನ ಆಸೆ ಚಿಗುರಿಸಿದರು. ಆದರೆ ಭರತ್ ಮತ್ತು ಅಶ್ವಿನ್ ಒಬ್ಬರಾದ ಮೇಲೊಬ್ಬರು ಔಟಾಗುವುದರೊಂದಿಗೆ ಭಾರತದ ಗೆಲುವಿನ ಆಸೆ ಕಮರಿತು. ಕೊನೆಯಲ್ಲಿ ಬುಮ್ರಾ ಮತ್ತು ಸಿರಾಜ್ 25 ರನ್ ಗಳ ಜೊತೆಯಾಟದೊಂದಿಗೆ ಪ್ರತಿರೋಧ ತೋರಿದರಾದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ತವರಿನಲ್ಲಿ ಇದು ಭಾರತಕ್ಕೆ ಆಘಾತಕಾರಿ ಸೋಲು.

190 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದರೂ ಇಂದು ಪಂದ್ಯ ಭಾರತದ ಹಿಡಿತ ತಪ್ಪಿತು ಪಂದ್ಯದ ಕೊನೆಯ ಎರಡು ದಿನಗಳಲ್ಲಿ ಪ್ರತಿರೋಧ ತೋರಿದ ಇಂಗ್ಲೆಂಡ್ ಗೆಲುವಿನ ನಗೆ ಬೀರಿತು. ಗೆಲ್ಲಲು 231 ರನ್ ಗಳಿಸಬೇಕಿದ್ದ ಭಾರತ 202 ರನ್ ಗಳಿಗೆ ಆಲ್ ಔಟ್ ಆಗುವುದರೊಂದಿಗೆ ಸೋಲಿಗೆ ಶರಣಾಯಿತು.

ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಣ ಐದು ಟೆಸ್ಟ್ ಗಳ ಸುದೀರ್ಘ ಸರಣಿಯ ಮೊದಲ ಟೆಸ್ಟ್ನ ನಾಲ್ಕನೇ ದಿನವಾದ ಇಂದು ಇಂಗ್ಲೆಂಡ್ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿ 28 ರನ್ ಗಳಿಂದ ಪಂದ್ಯವನ್ನು ಜಯಿಸಿತು.

ಓಲಿ ಪೋಪ್ ಭಾರತದ ಪಾಲಿಗೆ ಕಂಟಕವಾದರು. ಎರಡನೇ ಇನ್ನಿಂಗ್ಸ್ ನಲ್ಲಿ ಅವರು ಗಳಿಸಿದ 196 ರನ್ ಭಾರತದ ಪಾಲಿಗೆ ಮುಳುವಾಯಿತು. ಮೊದಲ ಟೆಸ್ಟ್ ಪಂದ್ಯ ಆಡುತ್ತಿರುವ ಹಾರ್ಟ್ಲೀ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಬ್ಯಾಟಿಂಗ್ ಶಕ್ತಿಯನ್ನು ಮುರಿದು ಹಾಕಿದರು. ಮೊದಲ ನಾಲ್ಕು ವಿಕೆಟ್ ಅವರ ಬುಟ್ಟಿಗೆ ಬಂದು ಬಿದ್ದವು. ಮತ್ತೆ ಮೂರು ವಿಕೆಟ್ ಗಳನ್ನು ಪಡೆದ ಹಾರ್ಟ್ಲೀ ಒಟ್ಟು ಏಳು ವಿಕೆಟ್ ಗಳಿಸಿದರು.

ಗೆಲುವಿಗೆ ಇಂಗ್ಲೆಂಡ್ ನೀಡಿದ್ದ 231 ರನ್ ಗಳ ಗುರಿಯನ್ನು ಬೆನ್ನತ್ತಿದ ಭಾರತ ತಂಡ ಒಂದಾದ ಮೇಲೊಂದರಂತೆ ವಿಕೆಟ್ ಕಳೆದುಕೊಳ್ಳುತ್ತ ಹೋಯಿತು. ಚೆನ್ನಾಗಿ ಸೆಟ್ ಆಗಿದ್ದ ನಾಯಕ ರೋಹಿತ್ ಶರ್ಮ 38 ರನ್ ಗಳಿಸಿ ಹಾರ್ಟ್ಲೀ ಅವರ ಬೌಲಿಂಗ್ ನಲ್ಲಿ ಎಲ್ ಬಿ ಡಬ್ಲ್ಯು ಬಲೆಗೆ ಬಿದ್ದರು. ಇನ್ನೊಂದು ತುದಿಯಲ್ಲಿ ಆಡುತ್ತಿದ್ದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 15 ರನ್ ಗಳಿಸಿ, ಹಾರ್ಟ್ಲೀ ಅವರ ಬೌಲಿಂಗ್ ನಲ್ಲೇ ಓಲಿ ಪೋಪ್ ಗೆ ಕ್ಯಾಚಿತ್ತು ಔಟಾದರು.

ನಂತರ ಭಾರತ ತಂಡದ ಪೆವಿಲಿಯನ್ ಪೆರೇಡ್ ಆರಂಭವಾಯಿತು. ಯಾವೊಬ್ಬ ಬ್ಯಾಟ್ಸ್ ಮನ್ ಕೂಡ ಕ್ರೀಸ್ ಗೆ ಕಚ್ಚಿ ನಿಲ್ಲುವ ಸಾಮರ್ಥ್ಯ ಪ್ರದರ್ಶಿಸಲಿಲ್ಲ. ಫಾರಂ ಕಳೆದುಕೊಂಡಂತೆ ಕಾಣುತ್ತಿರುವ ಶುಭಮನ್ ಗಿಲ್ ಇಂದು ಸೊನ್ನೆ ಸುತ್ತಿದರು. ಅವರ ವಿಕೆಟ್ ಕೂಡ ಹಾರ್ಟ್ಲೀ ಪಾಲಾಯಿತು. ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದು ಆಡಲು ಬಂದ ಅಕ್ಷರ್ ಪಟೇಲ್ ಟೀ ವಿರಾಮದ ನಂತರ 17 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಹಾರ್ಟ್ಲೀ ಬೌಲಿಂಗ್ನಲ್ಲಿ ಅವರಿಗೇ ಕ್ಯಾಚ್ ನೀಡಿ ಅಕ್ಷರ್ ಔಟಾದರು.

ಭಾರತದ ಗೆಲುವಿಗೆ ಆಶಾಕಿರಣವಾಗಿದ್ದ ಕೆ.ಎಲ್.ರಾಹುಲ್ 22 ರನ್ ಗಳಿಸಿದ್ದಾಗ ಜೋ ರೂಟ್ ಬೌಲಿಂಗ್ ನಲ್ಲಿ ಲೆಗ್ ಬಿಫೋರ್ ಔಟಾದರು. ಇಲ್ಲದ ರನ್ ಕದಿಯಲು ಹೋದ ರವೀಂದ್ರ ಜಡೇಜಾ ಬೆನ್ ಸ್ಟೋಕ್ಸ್ ಎಸೆದ ಡೈರೆಕ್ಟ್ ಹಿಟ್ ಗೆ ಬಲಿಯಾಗಿ ರನ್ ಔಟ್ ಆದರು. ಶ್ರೇಯಸ್ ಐಯರ್ ಉಳಿದ ಬಾಲಂಗೋಚಿ ಬ್ಯಾಟ್ಸ್ ಮನ್ ಗಳ ಜೊತೆ ಭಾರತವನ್ನು ಗೆಲುವಿನ ದಡಕ್ಕೆ ಸೇರಿಸುತ್ತಾರೆ ಎಂಬ ನಂಬಿಕೆಯೂ ಉಳಿಯಲಿಲ್ಲ. ಶ್ರೇಯಸ್ ಜಾಕ್ ಲೀಚ್ ಬೌಲಿಂಗ್ ನಲ್ಲಿ ಜೋ ರೂಟ್ ಅವರಿಗೆ ಕ್ಯಾಚ್ ನೀಡಿ ಔಟಾದರು.

ಹೋರಾಟ ಪ್ರದರ್ಶಿಸಿದ ಕೆ.ಎಸ್.ಭರತ್ 28 ರನ್ ಗಳಿಸಿ ಹಾರ್ಟ್ಲೀ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಆರ್ ಅಶ್ವಿನ್ 28 ರನ್ ಗಳಿಗೆ ಔಟಾಗುವುದರೊಂದಿಗೆ ಭಾರತದ ಸವಾಲು ಅಂತ್ಯವಾಯಿತು.

ಇದಕ್ಕೂ ಮುನ್ನ ಓಲಿ ಪೋಪ್ ಅವರ ಹೋರಾಟದ 196 ರನ್ ಗಳ ನೆರವಿನೊಂದಿಗೆ ಎರಡನೇ ಇನ್ನಿಂಗ್ಸ್ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಪ್ರವಾಸಿ ಇಂಗ್ಲೆಂಡ್ ತಂಡ ಭಾರತಕ್ಕೆ 231 ರನ್ ಗಳ ಗೆಲುವಿನ ಗುರಿಯನ್ನು ನೀಡಿತ್ತು

ಮಧ್ಯಮ ಕ್ರಮಾಂಕದ ಆಟಗಾರ ಓಲಿ ಪೋಪ್ ಇಂದು ಬೆಳಿಗ್ಗೆ ಸಹ ಭಾರತೀಯ ಬೌಲರ್ಗಳನ್ನು ಕಾಡಿದರು. ನಿನ್ನೆ 148 ರನ್ ಗಳಿಸಿ ಆಡುತ್ತಿದ್ದ ಪೋಪ್ ಇಂದು ಬೆಳಿಗ್ಗೆ ಆಕ್ರಮಣಕಾರಿಯಾಗಿ ಆಡಿದರು. ಒಟ್ಟಾರೆಯಾಗಿ 278 ಎಸೆತಗಳನ್ನು ಎದುರಿಸಿದ ಪೋಪ್ 21 ಬೌಂಡರಿಗಳ ನೆರವಿನೊಂದಿಗೆ 196 ರನ್ ಗಳಿಸಿದರು.

ಓಲಿ ಪೋಪ್ ಅವರೊಂದಿಗೆ ಆಟ ಆರಂಭಿಸಿದ ರೆಹಾನ್ ಅಹ್ಮದ್ ಅಮೂಲ್ಯ 28 ರನ್ ಗಳ ಕಾಣಿಕೆ ನೀಡಿ ಜಸ್ಪೀತ್ ಬುಮ್ರಾ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಕೆ.ಎಸ್.ಭರತ್ ಗೆ ಕ್ಯಾಚ್ ನೀಡಿ ಔಟಾದರು. ನಂತರ ಟಾಮ್ ಹಾರ್ಟ್ಲೀ ಸಹ ಭಾರತವನ್ನು ಕಾಡಿದರು. ಕೊನೆಗೆ ಆರ್ ಅಶ್ವಿನ್ ಅವರ ಚೆಂಡನ್ನು ಗುರುತಿಸಲಾಗದೆ ಬೌಲ್ಡ್ ಆದರು. ಮಾರ್ಕ್ ವುಡ್ ಅವರನ್ನು ರವೀಂದ್ರ ಜಡೇಜಾ ಔಟ್ ಮಾಡಿದರೆ, ಓಲಿ ಪೋಪ್ ಅವರನ್ನು ಜಸ್ಪೀತ್ ಬುಮ್ರಾ ಬೌಲ್ಡ್ ಮಾಡಿದರು.

ಇಂಗ್ಲೆಂಡ್: 246 ಮತ್ತು 420
ಭಾರತ: 436 ಮತ್ತು 202

More articles

Latest article