Tuesday, December 10, 2024

ಉಪಚುನಾವಣೆ ಕಣ : ಮತದಾನ ಆರಂಭ, ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿರುವ ಮತದಾರ

Most read

ಬೆಂಗಳೂರು : ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಉಪಚುನಾವಣೆ ಮತದಾನ ಆರಂಭವಾಗಿದೆ. ಮತದಾರ ಅಭ್ಯರ್ಥಿಗಳ ಭವಿಷ್ಯವನ್ನು ಮತಪೆಟ್ಟಿಗೆಯಲ್ಲಿ ನಿರ್ಧರಿಸಲಿದ್ದಾರೆ. ಯಾವ ಕ್ಷೇತ್ರದಲ್ಲಿ ಹೇಗಿದೆ ಸ್ಥಿತಿ ಎಂಬ ಚಿತ್ರಣದ ಕಂಪ್ಲಿಟ್‌ ಡಿಟೈಲ್ಸ್‌.

ಚನ್ನಪಟ್ಟಣ

ನೇರಾ-ನೇರಾ ಹಣಾಹಣಿಗೆ ನಿಂತಿರುವ ಕಾಂಗ್ರೆಸ್‌ ಮತ್ತು ಮೈತ್ರಿಪಕ್ಷದ ಅಭ್ಯರ್ಥಿಗಳ ಭವಿಷ್ಯ ಮತದಾರರು ನಿರ್ಧರಿಸಲಿದ್ದಾರೆ. ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣ ಹೆಚ್ಚು ಸದ್ದು ಮಾಡುತ್ತಿದ್ದು, ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಾದ ಬಿಜೆಪಿ-ಜೆಡಿಎಸ್​ಗೆ ಚನ್ನಪಟ್ಟಣ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಚನ್ನಪಟ್ಟಣದಲ್ಲಿ ಎನ್​ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ಸಿಪಿ ಯೋಗೇಶ್ವರ್‌ ಹಾಗೂ 32 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಚನ್ನಪಟ್ಟಣದಲ್ಲಿ ಒಟ್ಟು 2,32,949 ಮತದಾರರಿದ್ದು, ಈ ಪೈಕಿ 1,12,324 ಪುರುಷ ಮತದಾರರು, 1,20,617 ಮಹಿಳಾ ಮತದಾರರಿದ್ದಾರೆ. 8,338 ಯುವ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 276 ಮತಗಟ್ಟೆಗಳನ್ನ ಸ್ಥಾಪನೆ ಮಾಡಲಾಗಿದೆ. ನಗರ ಪ್ರದೇಶದಲ್ಲಿ 62, ಗ್ರಾಮೀಣ ಪ್ರದೇಶದಲ್ಲಿ 214 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. 119 ಮತಗಟ್ಟೆಗಳನ್ನ ಸೂಕ್ಷ್ಮ ಮತಗಟ್ಟೆಗಳು ಎಂದು ನಿರ್ಧರಿಸಲಾಗಿದೆ. 8 ವಿಶೇಷ ಮತಗಟ್ಟೆ, 5 ಸಖಿ ಮತಗಟ್ಟೆ, ವಿಶೇಷ ಚೇತನರಿಗಾಗಿ 1 ಮತಗಟ್ಟೆ, 1 ಯುವ ಮತಗಟ್ಟೆ, 1 ಸಾಂಪ್ರದಾಯಿಕ ಮತಗಟ್ಟೆ ತೆರೆಯಲಾಗಿದೆ. 54 ಕ್ಲಸ್ಟರ್ ಮತಗಟ್ಟೆಗಳಿಗೆ ಎಎಸ್ಐ ದರ್ಜೆಯ ಅಧಿಕಾರಿಗಳ ನೇಮಕ ಮಾಡಲಾಗಿದೆ. 8 ಪ್ಯಾರಾಮಿಲಿಟರಿ ಪಡೆ, ಪಿಆರ್​ಒ, ಎಪಿಆರ್​ಒ ಸೇರಿದಂತೆ 1252 ಭದ್ರತಾ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.

ಶಿಗ್ಗಾಂವಿ

ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿ ಕಣದಲ್ಲಿದರೆ, ಕಾಂಗ್ರೆಸ್‌ನಿಂದ ಯಾಸೀರ್‌ ಖಾನ್‌ ಪಠಾಣ್ ಸೇರಿ ಅಂತಿಮ ಕಣದಲ್ಲಿರುವ 8 ಅಭ್ಯರ್ಥಿಗಳಿದ್ದಾರೆ. ಇಲ್ಲೂ ಎರಡು ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ.

ಶಿಗ್ಗಾಂವಿಯಲ್ಲಿ ಒಟ್ಟು 2,37,525 ಮತದಾರರಿದ್ದಾರೆ. ಈ ಪೈಕಿ ಪುರುಷರು 1,21,443 ಹಾಗೂ ಮಹಿಳೆಯರು 1,16,76 ಮತಗಳಿವೆ. ಒಟ್ಟು 241 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಪೈಕಿ 92 ಮತಗಟ್ಟೆಗಳು ಸೂಕ್ಷ್ಮವೆಂದು ಗುರ್ತಿಸಲಾಗಿದೆ. ಓರ್ವ ಎಎಸ್​ಪಿ, ನಾಲ್ವರು ಡಿವೈಎಸ್​ಪಿ, 12 ಸಿಪಿಐ, 24 ಪಿಎಸ್ಐ, 68 ಎಎಸ್ಐ ಸೇರಿ 716 ಸಿಬ್ಬಂದಿಯನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಸಂಡೂರು

ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಹಾಗೂ ಬಿಜೆಪಿಯ ಬಂಗಾರು ಹನುಮಂತು ನಡುವೆ ನೇರಾ ಹಣಾಹಣಿ ನಡೆದಿದೆ. ಒಟ್ಟಾರೆ 7 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

ಸಂಡೂರಿನಲ್ಲಿ ಒಟ್ಟು 2,36,100 ಮತದಾರರಿದ್ದು, ಈ ಪೈಕಿ 1,18,282 ಮಹಿಳಾ ಮತದಾರರು, 1,17,789 ಪುರುಷ ಮತದಾರರಿದ್ದಾರೆ. ಒಟ್ಟು 253 ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, 55 ಸೂಕ್ಷ್ಮ ಮತಗಟ್ಟೆಗಳಿವೆ. ಚುನಾವಣಾ ಕರ್ತವ್ಯಕ್ಕಾಗಿ ಒಟ್ಟು 1,215 ಸಿಬ್ಬಂದಿ, ಮೂವರು ಡಿವೈಎಸ್​​ಪಿ, 6 ಸಿಪಿಐ, 14 ಪಿಎಸ್ಐ, 22 ಎಎಸ್ಐ, 193 ಹೆಡ್​ಕಾನ್ಸ್​ಟೇಬಲ್, 14 ಕೆಎಸ್​ಆರ್​ಪಿ ತುಕಡಿ ಸೇರಿ 1500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.

More articles

Latest article