Tuesday, December 10, 2024

ಪ್ರಕೃತಿ ವೈಚಿತ್ರ್ಯಕ್ಕೆ ಧಾರ್ಮಿಕ ಗಂಟು ಮತ್ತು ಸಿಂಹಳಿಯರ ಬೌದ್ಧ  ರಾಮಾಯಣ 

Most read

ಭಾರತದಲ್ಲಿ ಪ್ರಾಕೃತಿಕ ವೈಚಿತ್ರ್ಯ ಇರುವ ಎಲ್ಲೆಡೆ ವೈಚಿತ್ರ್ಯಕ್ಕೆ ಅನುಗುಣವಾಗಿ ಒಂದು ಕಾಲ್ಪನಿಕ ದೇವರು-ಋಷಿಮುನಿ-ರಕ್ಕಸರ ಪುರಾಣ ಕಥೆ ಹುಟ್ಟುಹಾಕಿ ದೇವಸ್ಥಾನ ಕಟ್ಟಿಸಿ ಶತಮಾನಗಳುದ್ದಕ್ಕೂ ಮೌಢ್ಯ ಹರಡುತ್ತಾ ಸಾಗುತ್ತಾರೆ. ರಾಮಸೇತು ಎಂಬ ಪ್ರಾಕೃತಿಕ ವೈಚಿತ್ರ್ಯಕ್ಕೆ ಸಿಗುತ್ತಿರುವ ಮೌಢ್ಯಭರಿತ ಪ್ರಾಮುಖ್ಯತೆ ಇದಕ್ಕೆ ಆತ್ಯುತ್ತಮ ಉದಾಹರಣೆ ಪ್ರವೀಣ್‌ ಎಸ್‌ ಶೆಟ್ಟಿ, ಚಿಂತಕರು.

ಆಗಸ್ಟ್ ಮಧ್ಯ ಭಾಗದಲ್ಲಿ ಆಷಾಢ ತಿಂಗಳು ಮುಗಿದ ನಂತರ ಹಿಂದೂ ಹಬ್ಬಗಳು ಸಾಲು ಸಾಲಾಗಿ ಬಂದು ಕೊನೆಗೆ ತುಲಸಿ ಪೂಜೆಯೊಂದಿಗೆ ಮುಕ್ತಾಯವಾಗುತ್ತದೆ. ವೈದಿಕ ಪುರಾಣದ ಪ್ರಕಾರ ತುಲಸಿ-ವೃಂದಾ ಎಂಬ ಅಸುರ ಕುಲದ ರಾಣಿಯನ್ನು ಮೋಸ ಮಾಡಿ ದೇವರೆಂಬವನು ಶೀಲ ಕೆಡಿಸುವುದು ಹಾಗೂ ಅವಳ ಗಂಡನನ್ನು ವಂಚನೆಯಿಂದ ಕೊಲ್ಲುವ ಕಥೆಯು ಸೂಚಿಸುವುದೇನೆಂದರೆ- ವೈದಿಕರು ನಮ್ಮ ದೇಶದ ಮೂಲನಿವಾಸಿಗಳನ್ನು- ಅಸುರರು ರಾಕ್ಷಸರು ದಾನವರು ಮಾಯಾವಿಗಳು ಎಂದು ಕರೆದು, ಅವರನ್ನು ಮೋಸದಿಂದ ಕೊಂದು ಅವರ ರಾಜ್ಯವನ್ನು, ಸಂಪತ್ತನ್ನು, ಮತ್ತು ಮಹಿಳೆಯರನ್ನು  ಲಪಟಾಯಿಸಿ ನಮ್ಮ ಮೂಲನಿವಾಸಿ ಪೂರ್ವಜರಿಗೆ ಘೋರ ಅನ್ಯಾಯ ಮಾಡಿದ್ದಾರೆ ಎಂಬುದು. ಆದರೆ ನಮ್ಮ ನೆರೆಯ ದೇಶದ ಪ್ರಜೆಗಳನ್ನು ಅಸುರರು-ರಾಕ್ಷಸರು ಎಂದು ಕರೆದು ಅವರನ್ನು ಅವಮಾನಿಸುವ ನೈತಿಕ ಅಧಿಕಾರ ಭಾರತಿಯ ವೈದಿಕ ಪುರಾಣಕರ್ತರಿಗೆ ಇದೆಯೇ?

ನಮ್ಮ ವೈದಿಕ ಪುರಾಣ ಹೇಳುವುದೇನೆಂದರೆ, ರಾವಣನು ಲಂಕಾ ದೇಶದ ರಾಜನಾಗಿದ್ದ ಮತ್ತು ಅವನು ದುಷ್ಟ ರಾಕ್ಷಸನಾಗಿದ್ದ. ಅವನ ತಮ್ಮ ಕುಂಭಕರ್ಣ ನೂರಾರು ಅಡಿ ಎತ್ತರದ ದೈತ್ಯನಾಗಿದ್ದ. ಅಂತೆಯೇ ಲಂಕಾ ದೇಶದ ಪ್ರಜೆಗಳೆಲ್ಲಾ ತಲೆಯಲ್ಲಿ ಕೋಡು ಮತ್ತು ಬಾಯಲ್ಲಿ ಕೋರೆ ಹಲ್ಲು ಇದ್ದವರಾಗಿದ್ದರು ಮತ್ತು ಯಾವಾಗಲೂ ವಿಕಾರವಾಗಿ ನಗುವ ಕ್ರೂರ ಕುರೂಪಿ ದೈತ್ಯ ಜೀವಿಗಳಾಗಿದ್ದರು ಎಂಬುದಾಗಿ!  ನಮ್ಮ ಪುರಾಣ ರಾಮಾಯಣದ ಮೂಲ ಕೃತಿ ಇರುವುದು ಸಂಸ್ಕೃತ ಭಾಷೆಯಲ್ಲಿ ಹಾಗೂ ದೇವನಾಗರಿ ಲಿಪಿಯಲ್ಲಿ.  ಆದರೆ ಬೌದ್ಧ ದೇಶ ಲಂಕಾ-ಸಿಂಹಳದಲ್ಲಿ ಈ ವೈದಿಕ ಭಾಷೆ ಸಂಸ್ಕೃತ ಮತ್ತು ನಾಗರಿ ಲಿಪಿ ಪ್ರಚಲಿತವೇ ಇರಲಿಲ್ಲ. ಹಾಗಾಗಿ ಲಂಕಾದಲ್ಲಿ ಸಂಸ್ಕೃತ ಭಾಷೆಯ ವಾಲ್ಮೀಕಿ ರಾಮಾಯಣವೂ ಪ್ರಚಲಿತವಾಗಿರಲಿಲ್ಲ. ಅಲ್ಲಿದ್ದದ್ದು ಪಾಲಿ ಭಾಷೆಯಲ್ಲಿಯ ದಶರಥ ಜಾತಕ ಕಥೆ, ಇದಕ್ಕೆ ಬೌದ್ಧ ರಾಮಾಯಣ ಎಂದೂ ಹೇಳುತ್ತಾರೆ.

ಲಂಕಾ ರಾಮಾಯಣ

ಬೌದ್ಧ ರಾಮಾಯಣದ ಪ್ರಕಾರ- ದಶರಥನ ರಾಜಧಾನಿ ಅಯೋಧ್ಯೆ ಆಗಿರಲಿಲ್ಲ, ಅದು ವಾರಣಾಸಿ ಆಗಿತ್ತು, ಹಾಗೂ ರಾಮ, ಲಕ್ಷ್ಮಣ ಮತ್ತು ಸೀತೆ ಒಂದೇ ತಾಯಿಯ ಮಕ್ಕಳು, ಅಂದರೆ ಸೀತೆಯು ರಾಮ- ಲಕ್ಷ್ಮಣರ ತಂಗಿ, ಹಾಗೂ ಶ್ರೀರಾಮ ಬೋಧಿಸತ್ವನ ಮರುಜನ್ಮ, ಮತ್ತು ರಾವಣ ಒಬ್ಬ ಬೌದ್ಧ ರಾಜನಾಗಿದ್ದ. (ಅದೇ ಕಾಲಕ್ಕೆ ಭಾರತದಲ್ಲಿ ಜೈನ ರಾಮಾಯಣವೂ ಪ್ರಚಲಿತವಿತ್ತು. ಜೈನರ ರಾಮಾಯಣದ ಪ್ರಕಾರ ಶುದ್ಧ ಅಹಿಂಸಾವಾದಿ ರಾಮನು ರಾವಣನನ್ನು ಕೊಲ್ಲುವುದಿಲ್ಲ, ಆದರೆ ರಾಮನು ಅವನನ್ನು ಅಹಿಂಸಾವಾದಿಯಾಗಿ ಪರಿವರ್ತಿಸಿ ಸಮಣ (ಶ್ರಮಣ)ನನ್ನಾಗಿ ಮಾಡುತ್ತಾನೆ). ಏ ಕೆ ರಾಮಾನುಜಂ ಎಂಬ ಈಗಿನ ಸಂಶೋಧಕರ ಪ್ರಕಾರ ಭಾರತ ಮತ್ತು ದಕ್ಷಿಣ ಏಷಿಯಾದ ದೇಶಗಳಲ್ಲಿ ಒಟ್ಟು 300 ಕ್ಕೂ ಹೆಚ್ಚು ಬೇರೆ ಬೇರೆ ರಾಮಾಯಣಗಳು ಪ್ರಚಲಿತವಿವೆ!

ಆದರೆ ಈಗಿನ ಶ್ರೀ ಲಂಕಾದ ವಿದ್ಯಾವಂತ ಜನರು ಹೇಳುವುದೇನೆಂದರೆ ಬೌದ್ಧರ ದಶರಥ ಜಾತಕ, ಜೈನರ ರಾಮಾಯಣ ಮತ್ತು ವಾಲ್ಮೀಕಿ ರಾಮಾಯಣ ಇವು ಮೂರನ್ನೂ ಬರೆದದ್ದು ಭಾರತದಲ್ಲಿ. ಹಾಗಾಗಿ ತಮ್ಮ ಸಿಂಹಳ ದೇಶದಲ್ಲಿ ರಾವಣ ಎಂಬ ಅಸುರ ರಾಜ ಎಂದೂ ಇರಲಿಲ್ಲ. ತಮ್ಮ ದೇಶದ ಸಾಮಾನ್ಯ ಪ್ರಜೆಗಳು ಕ್ರೂರ ರಾಕ್ಷಸರಾಗಿ ಇರಲೇ ಇಲ್ಲ. ಸೀತೆಯ ಸುತ್ತ ವಿಕಾರ ರೂಪದ ಧಡೂತಿ ದೇಹದ ರಕ್ಕಸಿಯರು ಕಾವಲು ಕಾಯುತ್ತಿದ್ದರು ಎಂಬುದು ಶುದ್ಧ ಕಾಲ್ಪನಿಕ. ಅಂತಹ ವಿಕಾರ ರೂಪದ ರಕ್ಕಸಿ ಮಹಿಳೆಯರು ತಮ್ಮ ದೇಶದಲ್ಲಿ ಎಂದೂ ಇರಲೇ ಇಲ್ಲ.  ಹಾಗಿರುವಾಗ ಇಂತಹಾ ಕಾಲ್ಪನಿಕ ರಾಕ್ಷಸರನ್ನು ಕೊಲ್ಲಲು ನೆರೆಯ ಜಂಬೂದ್ವೀಪದಿಂದ ಬಿದಿರಿನ ಬಿಲ್ಲು ಬಾಣ ಹಿಡಿದುಕೊಂಡು ಬಾಲವಿದ್ದ ಆದಿವಾಸಿ ಸೈನಿಕರ ಜತೆ ವೈದಿಕ ರಾಜನೊಬ್ಬ ಬರುವ ಸ್ಥಿತಿಯೇ ಆಗ ಇರಲಿಲ್ಲ ಎನ್ನುತ್ತಾರೆ ಶ್ರೀಲಂಕಾದ ಈಗಿನ ಪ್ರಜ್ಞಾವಂತರು.

ಸಾಮ್ರಾಟ ಅಶೋಕನ ಮಗ ಮಹೇಂದ್ರ ಮತ್ತು ಅಶೋಕನ ಮಗಳು ಸಂಘಮಿತ್ರೆ ಬೌದ್ಧ ಧರ್ಮವನ್ನು ಸಿಂಹಳಕ್ಕೆ ತಂದಿದ್ದು. ಆ ಕಾಲದಿಂದಲೂ ತಮ್ಮದು ಪೂರ್ಣ ಬೌದ್ಧ ಧರ್ಮಿಯರ ದೇಶವಾಗಿತ್ತು ಅನ್ನುತ್ತಾರೆ ಸಿಂಹಳಿಯರು. ನೀವು ಭಾರತೀಯರು ನಿಮಗೆ ಬೇಕಾದಂತೆ ರಾಮನ ಜನ್ಮದ ಕಥೆ ಹೆಣೆದು, ಹೊಸ ಮಂದಿರ ಕಟ್ಟಿಸಿ, ಕೋಟ್ಯಂತರ ಖರ್ಚು ಮಾಡಿ ಪೂಜೆ ಮಾಡುವುದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ,  ಆದರೆ ನಮ್ಮ ದೇಶ (ಲಂಕಾ-ಸಿಂಹಳ) ಘೋರ ರಾಕ್ಷಸರ ದೇಶವಾಗಿತ್ತು ಅನ್ನುವುದು ಮಾತ್ರ ಕೋಟ್ಯಂತರ ಸಿಂಹಳಿಯರಿಗೆ ನೇರ ಅವಮಾನ ಅನ್ನುತ್ತಾರೆ ಶ್ರೀಲಂಕಾದವರು.

ಹೌದು, ಸಿಂಹಳಿಯರ ಹೇಳಿಕೆಯಲ್ಲಿ ತಥ್ಯವಿದೆ. ರಾಕ್ಷಸರು/ದಾನವರು ಎಂದು ಕರೆಯುವ ನೂರಾರು ಅಡಿ ಎತ್ತರದ ಎರಡು ಕಾಲ ಮೇಲೆ ನಡೆಯುವ ಮತ್ತು ಆಕಾಶದಲ್ಲಿ ಹಾರುವ ದೈತ್ಯ ಜೀವಿಗಳು ಈ ಜಗತ್ತಿನಲ್ಲಿ ಎಂದೂ ಇರಲಿಲ್ಲ! ಡೈನೋಸಾರ್ ಗಳಿದ್ದವು ನಿಜ, ಆದರೆ ರಾಕ್ಷಸರು ಎಂಬ ಜೀವಿಗಳು ಜಗತ್ತಿನ ಯಾವುದೇ ಭಾಗದಲ್ಲೂ ಇರಲಿಲ್ಲ. ಅಷ್ಟೇ ಅಲ್ಲ ಮೂಲ ರಾಮಾಯಣ ಇರುವುದು ಸಂಸ್ಕೃತ ಭಾಷೆಯಲ್ಲಿ ಹಾಗೂ ದೇವನಾಗರಿ ಲಿಪಿಯಲ್ಲಿ. ಮೂಲತಃ ಸಂಸ್ಕೃತ ಭಾಷೆಗೆ ಸರಿಯಾದ ವ್ಯಾಕರಣ ಮತ್ತು ನಾಗರಿ ಲಿಪಿ ಅಳವಡಿಸಿದವರು ಪಾಣಿನಿ ಮತ್ತು ಪತಂಜಲಿ ಎಂಬ ವಿದ್ವಾಂಸರು. ಅವರು ಸಾಮ್ರಾಟ ಅಶೋಕನ ಕಾಲದ ನಂತರ ಜೀವಿಸಿದ್ದವರು. ಅಂದರೆ ಶುದ್ಧ ಸಂಸ್ಕೃತ ಭಾಷೆ ಮತ್ತು ನಾಗರಿ ಲಿಪಿ ಬಳಕೆಗೆ ಬಂದಿದ್ದು ಅಶೋಕನ ನಂತರ ಮತ್ತು ವೈದಿಕ ರಾಜ ಪುಷ್ಯಮಿತ್ರ ಶುಂಗನ ಕಾಲದಲ್ಲಿ, ಅಂದರೆ ಈಗಿನಿಂದ ಸುಮಾರು 2,200 ವರ್ಷಗಳ ಹಿಂದೆ ಅಷ್ಟೇ. ಅದಾಗಲೇ ಬೌದ್ಧ ಧರ್ಮ ಲಂಕಾದಲ್ಲಿ ವ್ಯಾಪಕವಾಗಿ ಹರಡಿತ್ತು. ಬೌದ್ಧರು ಬಳಸುತ್ತಿದ್ದದ್ದು ಪಾಲಿ-ಪ್ರಾಕೃತ ಭಾಷೆ ಹಾಗೂ ಬ್ರಾಹ್ಮಿ ಲಿಪಿ. ಹಾಗಾಗಿ ಲಂಕಾದಲ್ಲಿ ರಾವಣನ ಆಳ್ವಿಕೆಯ ಕುರಿತು ಇರುವ ಸಂಸ್ಕೃತ ಕಥೆಯು ಭಾರತದ ವೈದಿಕ ಪುರಾಣಕರ್ತರ ಶುದ್ಧ ಕಾಲ್ಪನಿಕ ರಚನೆ ಎಂದು ಸಿಂಹಳಿಯರು ಇಂದಿಗೂ ಅನ್ನುತ್ತಾರೆ.

ಹಾಗಾಗಿ ನಾವು ಭಾರತೀಯರು ರಾಮಚಂದ್ರ ಅನ್ನುವ ದೇವರ ಅವತಾರ ಇದ್ದಿದ್ದು ನಿಜವೋ ಅಥವಾ ಕಾಲ್ಪನಿಕವೋ ಎಂಬ ವಿಷಯದ ಕುರಿತು ನಿಷ್ಕರ್ಷೆಗೆ ಇಳಿಯುವ ಬದಲು ಕೇವಲ ರಾವಣನು ಲಂಕಾದಲ್ಲಿ ರಾಜನಾಗಿ ಆಳಿದ್ದು ನಿಜವೋ ಸುಳ್ಳೋ ಎಂಬ ನಿಷ್ಕರ್ಷೆ ಮಾಡುವುದಕ್ಕಷ್ಟೇ ನಮ್ಮ ತರ್ಕವನ್ನು ಸೀಮಿತಗೊಳಿಸಿದರೆ ಸಿಂಹಳಿಯ ಬೌದ್ಧರ ಭಾವನೆಗಳನ್ನೂ ನಾವು ಗೌರವಿಸಿದಂತೆ ಆಗುತ್ತದೆ. ನಮ್ಮ ಅಯೋಧ್ಯೆಯಲ್ಲಿ ರಾಮಮಂದಿರದ ಕುರಿತು ಈಗ ನಡೆದಿರುವ ರಾಜಕೀಯದ ಅಡಿಯಲ್ಲಿ ಶ್ರೀಲಂಕಾ ದೇಶದವರ ಭಾವನೆಗಳನ್ನು ನೋಯಿಸುವ ಹಕ್ಕು ಭಾರತ ದೇಶದವರಿಗೆ ಇಲ್ಲ. ಲಭ್ಯವಿರುವ ಐತಿಹಾಸಿಕ ದಾಖಲೆ, ಹಾಗೂ ಸಾಂದರ್ಭಿಕ ಮತ್ತು ಸಾಂಸ್ಕೃತಿಕ ಪುರಾವೆಗಳನ್ನು ಪರಿಗಣಿಸಿ ನಾವು ಭಾರತೀಯರು ಶ್ರೀಲಂಕಾ ದೇಶದಲ್ಲಿ ರಾವಣ ಎಂಬ ರಾಕ್ಷಸ ರಾಜ ಇರಲೇ ಇಲ್ಲ ಎಂದು ಒಪ್ಪಲೇ ಬೇಕು. ಕುಂಭಕರ್ಣ ನೂರಾರು ಅಡಿ ಎತ್ತರವಿದ್ದ ಅನ್ನುವುದೇ ಹಾಸ್ಯಾಸ್ಪದ ಅನ್ನುತ್ತಾರೆ ಜೀವಶಾಸ್ತ್ರಜ್ಞರು. ಲಂಕಾ ಎಂಬ ಹೆಸರಿನ ಪ್ರದೇಶ ಹಾಗೂ ರಾವಣನ ಹೆಸರಲ್ಲಿ ದೇವಸ್ಥಾನ ಕಟ್ಟಿಸಿ ರಾವಣನನ್ನೇ ಪೂಜಿಸುವ ‘ಅಸುರ’ ಎಂಬ ಹೆಸರಿನ ಆದಿವಾಸಿ ಜನಾಂಗವು ಈಗಲೂ ಜಾರ್ಖಂಡ್ ಮತ್ತು ಛತ್ತೀಸ್ ಗಡದಲ್ಲಿ ಇವೆ ಎಂಬುದನ್ನೂ ನಾವು ಗಮನಿಸಬೇಕು.  ಇದರ ಅರ್ಥ ರಾಮಚಂದ್ರ ಅನ್ನುವ ರಾಜ ಇದ್ದಿದ್ದು ನಿಜವೇ ಆಗಿದ್ದರೆ, ಅವನು ವಿಂಧ್ಯಾ ಪರ್ವತ ದಾಟಿ ದಕ್ಷಿಣದತ್ತ ಹೋಗಿರುವ ಸಾಧ್ಯತೆ ತುಂಬಾ ಕಡಿಮೆ ಎನ್ನುವವರ ಮಾತನ್ನು ಯಾವುದೇ ಪೂರ್ವಗ್ರಹ ಇಲ್ಲದೆ ನಾವು ಪರಿಶೀಲಿಸಬೇಕು. ತಮಿಳುನಾಡಿನ ರಾಮೇಶ್ವರ-ಧನುಷ್ಕೋಡಿಯ ರಾಮ ಸೇತುವೆ ಐದು ಕೋಟಿ ವರ್ಷದ ಹಿಂದಿನ ಒಂದು ಪ್ರಾಕೃತಿಕ ರಚನೆ ಎಂದು ವಿಜ್ಞಾನಿಗಳು ಈಗಾಗಲೇ ಒಪ್ಪಿದ್ದಾರೆ!  ಆಫ್ರಿಕಾ ಖಂಡ ಏಳು ಕೋಟಿ ವರ್ಷಗಳ ಹಿಂದೆ ವಿಘಟಿತಗೊಂಡು ಖಂಡಾಂತರ ಚಲನೆ ನಡೆದಾಗ ದಕ್ಷಿಣ ಭಾರತ ಮತ್ತು ಸಿಂಹಳ ದೇಶಗಳು ಆಫ್ರಿಕಾದಿಂದ  ಇಂಚಿಂಚಾಗಿ ದೂರ ಸರಿಯುತ್ತಾ ಬಂದು ಐದು ಕೋಟಿ ವರ್ಷಗಳ ಹಿಂದೆ ಜಂಬೂ ದ್ವೀಪಕ್ಕೆ ತಾಗಿ ನಿಂತಿದ್ದರಿಂದ ಉಂಟಾದ ಭೌಗೊಳಿಕ ಸಂರಚನೆಯೇ ದಕ್ಷಿಣ ಭಾರತದ ಪ್ರಸ್ಥ ಭೂಮಿ ಮತ್ತು ಶ್ರೀಲಂಕಾ ಎಂಬ ದ್ವೀಪ ದೇಶ ಹಾಗೂ ಭಾರತ ಸಿಂಹಳದ ನಡುವೆ ಸಮುದ್ರದಲ್ಲಿ ಉಂಟಾದ ಪ್ರಾಕೃತಿಕ ಸೇತುವೆ. ಅದೇ ಕಾಲದಲ್ಲಿ ಆಫ್ರಿಕಾದಿಂದ ತುಂಡಾಗಿ ಸರಿದು ಬಂದ ಕೆಲವು ದ್ವೀಪಗಳು ಬ್ರಹ್ಮದೇಶ (ಮಯನ್ಮಾರ್)ದಲ್ಲಿ ನೆಲೆ ನಿಂತವು. ಅವೇ ಅಂಡಮಾನ್-ನಿಕೊಬಾರ್ ದ್ವೀಪ ಸಮೂಹ. ಈ ಖಂಡಾಂತರ ವಿಘಟನೆ ಮತ್ತು ಚಲನೆ ಎರಡು ಕೋಟಿ ವರ್ಷಗಳ ಕಾಲ ನಡೆದು ಇಂಚಿಂಚಾಗಿ ಸರಿದು ಬಂದ ಭೂಭಾಗ ಜಂಬೂದ್ವೀಪಕ್ಕೆ ತಾಗಿ ನಿಂತಿತು. ನಿಜವಾಗಿ ಆ ಕಾಲದಲ್ಲಿ ವಾನರರು ಅಥವಾ ಮನುಷ್ಯ ಜಾತಿ ಈ ಭೂಮಿಯ ಮೇಲೆ ಇನ್ನೂ ವಿಕಾಸಗೊಂಡಿರಲೇ ಇಲ್ಲ. ಹಾಗಿರುವಾಗ ಸಾವಿರಾರು ಅಡಿ ಆಳ ಸಮುದ್ರದ ನೀರಿನಲ್ಲಿ ರಾಮ ಸೇತುವೆ ಎನ್ನಲಾದ ಭೌಗೋಳಿಕ ರಚನೆಯನ್ನು ಮಾನವ ಅಥವಾ ಅರೆಮಾನವ (ವಾನರ) ಜೀವಿಗಳು ರಚಿಸಿರಲು ಹೇಗೆ ಸಾಧ್ಯ?

ಪ್ರಾಕೃತಿಕ ಸೇತುವೆ-ರಾಮ ಸೇತು

ಜಗತ್ತಿನ ಎಲ್ಲೆಡೆ ಪ್ರಾಕೃತಿಕ ವೈಚಿತ್ರ್ಯ ಉಳ್ಳ ಅದ್ಭುತ ಸ್ಥಳಗಳು ಅನೇಕ ಇವೆ. ಆದರೆ ಅಲ್ಲಿಯವರು ಈ ಪ್ರಕೃತಿ ವೈಚಿತ್ರ್ಯಕ್ಕೆ ದೇವರ ಹೆಸರನ್ನು ಗಂಟು ಹಾಕಿ ಸ್ಥಳ ಪುರಾಣ ಜೋಡಿಸಿ ದೇವಸ್ಥಾನ ಕಟ್ಟಿಸಿ ಮೌಢ್ಯ ಹರಡುವುದಿಲ್ಲ. ಆದರೆ ನಮ್ಮ ದೇಶದ ಧಾರ್ಮಿಕ ಇತಿಹಾಸ ನೋಡಿದಾಗ ನಮಗೆ ಒಂದು ವಿಶೇಷ ಕಾಣುತ್ತದೆ. ಭಾರತದಲ್ಲಿ ಇಂತಹಾ ಪ್ರಾಕೃತಿಕ ವೈಚಿತ್ರ್ಯ ಇರುವ ಎಲ್ಲೆಡೆ ವೈಚಿತ್ರ್ಯಕ್ಕೆ ಅನುಗುಣವಾಗಿ ಒಂದು ಕಾಲ್ಪನಿಕ ದೇವರು-ಋಷಿಮುನಿ-ರಕ್ಕಸರ ಪುರಾಣ ಕಥೆ ಹುಟ್ಟುಹಾಕಿ ದೇವಸ್ಥಾನ ಕಟ್ಟಿಸಿ ಶತಮಾನಗಳುದ್ದಕ್ಕೂ ಮೌಢ್ಯ ಹರಡುತ್ತಾ ಸಾಗುತ್ತಾರೆ. ರಾಮಸೇತು ಎಂಬ ಪ್ರಾಕೃತಿಕ ವೈಚಿತ್ರ್ಯಕ್ಕೆ ಸಿಗುತ್ತಿರುವ ಮೌಢ್ಯಭರಿತ ಪ್ರಾಮುಖ್ಯತೆ ಇದಕ್ಕೆ ಆತ್ಯುತ್ತಮ ಉದಾಹರಣೆ. ತುಳಸಿಯಷ್ಟೆ ಅದ್ಭುತ ಔಷಧಿ ಗುಣಗಳುಳ್ಳ ಅನೇಕ ಸಸ್ಯಗಳು ಜಗತ್ತಿನಲ್ಲಿ ಇವೆ. ಆದರೆ ತುಳಸಿಯಂತೆ ಆ ಔಷಧ ಸಸ್ಯಗಳಿಗೆ ಕಾಲ್ಪನಿಕ ರಾಕ್ಷಸರ ಅಜ್ಜಿ ಕತೆಗಳನ್ನು ಜೋಡಿಸಿ ಮೌಢ್ಯ ಹರಡುವ ಕೆಲಸ ಬೇರೆ ಯಾವುದೇ ದೇಶದಲ್ಲಿ ನಡೆದಿಲ್ಲ. ನಮ್ಮಲ್ಲಿ ಮಾತ್ರ ಈ ಮೌಢ್ಯದ ಭಾಗವಾಗಿ ತುಲಸಿ ವಿವಾಹ ಈಗ ನಡೆಯುತ್ತಿದೆ!

ಪ್ರವೀಣ್ ಎಸ್  ಶೆಟ್ಟಿ

ಸಂಸ್ಕೃತಿ ಚಿಂತಕರು

ಇದನ್ನೂ ಓದಿ- ಕೇರಳದ ಕಣ್ಣನ್ ಮೇಸ್ತ್ರಿ ಮತ್ತು ಕನ್ನಡದ ಪುಸ್ತಕ ಸಂತೆ!

More articles

Latest article