ಬೆಂಗಳೂರು: ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ನಲ್ಲಿ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಕಾರ್ಮಿಕ ಸಚಿವಾಲಯ ಕರ್ನಾಟಕ ಕಾರ್ಮಿಕ ಇಲಾಖೆಗೆ ಸೂಚನೆ ನೀಡಿದೆ. ಇನ್ಫೋಸಿಸ್ ವಿರುದ್ಧ ವಜಾಗೊಂಡ ನೌಕರರು ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಇನ್ಫೋಸಿಸ್ ನ ಮೈಸೂರು ಕ್ಯಾಂಪಸ್‌ನಲ್ಲಿ ತರಬೇತಿ ಹಂತದಲ್ಲಿದ್ದ ಸುಮಾರು 300 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.
ಉದ್ಯೋಗದ ಪತ್ರ ನೀಡಿದ ಎರಡು ವರ್ಷಗಳ ನಂತರ ಇನ್ಫೊಸಿಸ್ ಉದ್ಯೋಗ ನೀಡಿತ್ತು. ಎರಡು ವರ್ಷ ಕಾದು ಉದ್ಯೋಗಕ್ಕೆ ಸೇರಿಕೊಂಡ ನಂತರ ಇದೀಗ ಉದ್ಯೋಗದಿಂದ ವಜಾಗೊಳಿಸಿರುವುದಕ್ಕೆ ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಎರಡು ವರ್ಷ ಕಾದಿರುವ ಅವರು ಉದ್ಯೋಗ ಕಳೆದುಕೊಂಡು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಇಂಡಸ್ಟ್ರಿಯಲ್ ಡಿಸ್ಪ್ಯೂಟ್ಸ್ ಆಕ್ಟ್ 1947’ ರ ಅಡಿಯಲ್ಲಿ ಇನ್ಫೋಸಿಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ನೀಡಿದ ದೂರಿನಲ್ಲಿ ಆಗ್ರಹಪಡಿಸಲಾಗಿದೆ. ಹೊಸದಾಗಿ ಸೇರ್ಪಡೆಯಾದ ಉದ್ಯೋಗಿಗಳಿಂದ ಮ್ಯೂಚುವಲ್ ಸಫರೇಷನ್ ಒಪ್ಪಂದಕ್ಕೆ ಇನ್ಫೋಸಿಸ್ ಸಹಿ ಹಾಕಿಸುತ್ತಿದೆ ಎಂಬ ಆಪಾದನೆಯೂ ಇನ್ಫೊಸಿಸ್ ವಿರುದ್ಧ ಕೇಳಿ ಬಂದಿತ್ತು.
ಕೇಂದ್ರ ಕಾರ್ಮಿಕ ಸಚಿವಾಲಯ ನೀಡಿರುವ ನಿರ್ದೇಶನದಂತೆ ಕರ್ನಾಟಕ ಕಾರ್ಮಿಕ ಇಲಾಖೆ ಅಧಿಕಾರಿಗಳು ಗುರುವಾರ ಇನ್ಫೋಸಿಸ್ ನ ಬೆಂಗಳೂರು ಮತ್ತು ಮೈಸೂರು ಕ್ಯಾಂಪಸ್ ಗಳಿಗೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇನ್ಫೋಸಿಸ್ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಕಂಪನಿಯು ಕಠಿಣ ನೇಮಕಾತಿ ಪ್ರಕ್ರಿಯೆಯನ್ನು ಅನುಸರಿಸುತ್ತಿರುವುದಾಗಿ ಈ ಹಿಂದೆ ಹೇಳಿತ್ತು. ತರಬೇತಿಯ ನಂತರದ ಹೊಸ ಉದ್ಯೋಗಿಗಳು ಮೂರು ಪ್ರಯತ್ನಗಳಲ್ಲಿ ಆಂತರಿಕ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಬೇಕು. ಒಂದುವೇಳೆ ವಿಫಲವಾದರೆ ಅವರು ಉದ್ಯೋಗದಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಈ ಪ್ರಕ್ರಿಯೆಯು ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಅಸ್ತಿತ್ವದಲ್ಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.