ಶಿಕ್ಷಕರ ದಿನಾಚರಣೆ | ಡಾ ಎಸ್ ರಾಧಾಕೃಷ್ಣನ್‍ರವರ ಸ್ಮರಣೆ

Most read

ಇಂದು (ಸೆ. 5) ಶಿಕ್ಷಕರ ದಿನಾಚರಣೆ. ಈ ದಿನಾಚರಣೆಗೆ  ಕಾರಣರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರನ್ನು ನೆನಪಿಸಿಕೊಂಡು ಅವರ ಹಿರಿಮೆ ಗರಿಮೆಗಳ ಬಗ್ಗೆ ಬರೆದಿದ್ದಾರೆ ದಾವಣಗೆರೆಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಗಂಗಾಧರಯ್ಯ ಹಿರೇಮಠ.  

ಭಾರತ ಕಂಡ ಅಪರೂಪದ ಮಹಾನ್ ವ್ಯಕ್ತತ್ವದ ವ್ಯಕ್ತಿ ಸರ್ವಪಲ್ಲಿ ಡಾ. ರಾಧಾಕೃಷ್ಣನ್. ಅವರೊಬ್ಬ ಆದರ್ಶ ಪ್ರಾಧ್ಯಾಪಕ, ವಿದ್ವಾಂಸ, ಬರಹಗಾರ ಹಾಗೂ ಶ್ರೇಷ್ಠ ತತ್ವಜ್ಞಾನಿ.  ದೈವ ವಿಶ್ವಾಸದಲ್ಲಿ ನಂಬಿಕೆಯಿಟ್ಟ ವಿಶ್ವಭ್ರಾತೃತ್ವ, ಸಮಾನತೆ, ಸಹಕಾರ, ಸಹಬಾಳ್ವೆ ಹಾಗೂ ಶಾಂತಿಯನ್ನು ಬೋಧಿಸುವ ಮತಧರ್ಮಗಳಲ್ಲಿ ನಂಬಿಕೆಯುಳ್ಳ ಧರ್ಮಶ್ರದ್ಧೆ ವ್ಯಕ್ತಿ. ಡಾ. ರಾಧಾಕೃಷ್ಣನ್ ಸಕ್ರಿಯ ರಾಜಕಾರಣಕ್ಕೆ ಬರಲಿಲ್ಲ. ಆದರೆ, ದೇಶದ ರಾಜಕಾರಣವನ್ನು ಸರಿಯಾದ ದಾರಿಯಲ್ಲಿ ನಡೆಸುವ ಗುರುವಿನ ಪಾತ್ರವನ್ನು ಅವರು ನಿಸ್ಪೃಹರಾಗಿ, ನಿರ್ಮಲ ಚಿತ್ತದಿಂದ ನಿರ್ವಹಿಸಿದರು. ದೇಶವನ್ನು ಪರಕೀಯರ ಆಳ್ವಿಕೆಯಿಂದ ವಿಮುಕ್ತಿಗೊಳಿಸಲು ಬೇಕಾದ ರಂಗ ಸಜ್ಜಿಕೆಗಳನ್ನು ತಯಾರು ಮಾಡಿದರು. ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿಯೇ ಸ್ವತಂತ್ರ ಭಾರತ ಅವರಿಗೆ ಉಪರಾಷ್ಟ್ರಪತಿ, ರಾಷ್ಟ್ರಪತಿ ಹುದ್ದೆಯನ್ನು ನೀಡಿ ಗೌರವಿಸಿತು. ಡಾ. ರಾಧಾಕೃಷ್ಣನ್ ಭಾರತದ ರಾಷ್ಟ್ರಪತಿಯಾದಾಗ (1962-1967) ಅವರ ವಿದ್ಯಾರ್ಥಿ ವೃಂದ ಮತ್ತು ಸ್ನೇಹಿತರು ಸೆಪ್ಟೆಂಬರ್ 5 ರಂದು ಅವರ ಜನ್ಮದಿನವನ್ನು ಆಚರಿಸಲು ಅವಕಾಶ ನೀಡುವಂತೆ ವಿನಂತಿಸಿದರು.  ಅವರಿಂದ ಬಂದ ಉತ್ತರ “ನನ್ನ ಜನ್ಮದಿನವನ್ನು ಆಚರಿಸುವ ಬದಲು ಶಿಕ್ಷಕರ ದಿನವನ್ನಾಗಿ ಆಚರಿಸಿದರೆ ಅದು ನನ್ನ ಹೆಮ್ಮೆಯ ಸೌಭಾಗ್ಯ” ಎಂದರು. ಅಂದಿನಿಂದ ಅವರ ಜನ್ಮದಿನವನ್ನು ಭಾರತದಲ್ಲಿ ಶಿಕ್ಷಕರ ದಿನವನ್ನಾಗಿ “ಸೆಪ್ಟೆಂಬರ್ 5” ರಂದು ಆಚರಿಸಲಾಗುತ್ತಿದೆ.

ಡಾ. ರಾಧಾಕೃಷ್ಣನ್ ಆರಂಭಿಕ ಜೀವನ, ಶಿಕ್ಷಣ

ಡಾ. ರಾಧಾಕೃಷ್ಣನ್ ಸರ್ವಪಲ್ಲಿ ವೀರಸ್ವಾಮಿ ಮತ್ತು ಸೀತಮ್ಮ ದಂಪತಿಗಳಿಗೆ ಎರಡನೆಯ ಸುಪುತ್ರನಾಗಿ ಸೆಪ್ಟೆಂಬರ್ 5, 1888 ರಲ್ಲಿ ಮದ್ರಾಸ್‍ನಿಂದ 200 ಕಿ.ಮೀ ದೂರವಿರುವ ‘ತಿರುತ್ತಣೆ’ ಎಂಬ ಚಿಕ್ಕ ಪಟ್ಟಣದಲ್ಲಿ ಜನಿಸಿದರು.  ಅವರ ಕುಟುಂಬವು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಸರ್ವಪಲ್ಲಿ ಗ್ರಾಮದಿಂದ ಉದ್ಯೋಗವನ್ನು ಅರಸಿ ತಮಿಳುನಾಡು ತಿರುವಳ್ಳೂರು ಜಿಲ್ಲೆಯ ‘ತಿರುತ್ತಣೆ’ ಯಲ್ಲಿ ಬಂದು ನೆಲೆಸಿತ್ತು.  ಅವರ ತಂದೆ ಸ್ಥಳೀಯ ಜಮೀನ್ದಾರರ ಸೇವೆಯಲ್ಲಿ ಕಂದಾಯ ಅಧಿಕಾರಿಯಾಗಿದ್ದರು. ಅವರಿಗೆ ಕುಟುಂಬದ ಪಾಲನೆ, ಪೋಷಣೆ ಸುಲಭವಾಗಿರಲಿಲ್ಲ. ಸಂಪಾದನೆ ಅಲ್ಪ ಮೊತ್ತದ್ದಾಗಿತ್ತು.  ರಾಧಾಕೃಷ್ಣನ್‍ರಿಗೆ ನಾಲ್ಕು ಜನ ಸಹೋದರರು, ಒಬ್ಬ ಸಹೋದರಿ ಇದ್ದರು.  ಅವರ ಬುದ್ಧಿ ಬಾಲ್ಯದಲ್ಲಿ ಬಲು ಚುರುಕಾಗಿತ್ತು.  ನೆನಪಿನ ಶಕ್ತಿ ಅದ್ಭುತವಾಗಿತ್ತು.  5ನೇ ವರ್ಷದಲ್ಲಿ ಪ್ರಾಥಮಿಕ ಶಾಲೆ ಸೇರಿದರು.  ಆರಂಭದ 4 ವರ್ಷ ತಿರುಪತಿಯ ಹರ್ಮನ್‍ಬರ್ಗ್ ಲೂಥರನ್ ಮಿಷನ್ ಸ್ಕೂಲಿನಲ್ಲಿ ಕಲಿತರು

ಡಾ. ರಾಧಾಕೃಷ್ಣನ್

ಕ್ರಿ.ಶ. 1900 ರಾಧಾಕೃಷ್ಣನ್ 12ನೇ ವಯಸ್ಸಿನಲ್ಲಿ ವೆಲ್ಲೂರಿಗೆ ಹೋಗಿ ಚಿಕ್ಕಪ್ಪನ ಆಶ್ರಯ ಪಡೆದು ಮಿಶನರಿ ಶಾಲೆ ಸೇರಿ ಮೆಟ್ರಿಕ್ಯುಲೇಶನ್‍ನಲ್ಲಿ ರ್ಯಾಂಕ್ ಪಡೆದ ಈತನಿಗೆ ವಿದ್ಯಾರ್ಥಿ ವೇತನ ಸಿಕ್ಕಿತು.  ವೆಲ್ಲೂರಿನ ವೂರ್ಸ್ ಕಾಲೇಜಿನಲ್ಲಿ ಸ್ನಾತಕ ಪೂರ್ವ ಎಫ್.ಎ. ವ್ಯಾಸಂಗ ಮಾಡಿ, ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿಗೆ ಬಿ.ಎ. ಪದವಿ ವ್ಯಾಸಂಗಕ್ಕೆ ತತ್ವಶಾಸ್ತ್ರವನ್ನು ಆರಿಸಿಕೊಂಡರು. 1906 ರಲ್ಲಿ ಪದವಿ ಮುಗಿಸಿ ರ್ಯಾಂಕ್ ಪಡೆದರು. 25 ರೂಪಾಯಿ ಮಾಸಿಕ ವಿದ್ಯಾರ್ಥಿ ವೇತನ ಮಂಜೂರಾಯ್ತು. ಅತ್ಯುತ್ತಮ ವಿದ್ಯಾರ್ಥಿ ಎಂಬ ಪ್ರಶಸ್ತಿಗೆ ಭಾಜನರಾದರು. 1903 ರಲ್ಲಿ ತನ್ನ 15ನೇ ವಯಸ್ಸಿನಲ್ಲಿ 10 ವರ್ಷದ ‘ಶಿವಕಾಮು’ ಅವರೊಂದಿಗೆ ಮದುವೆ ಆದರು.

ಪ್ರಾಧ್ಯಾಪಕ, ಉಪಕುಲಪತಿಗಳಾಗಿ ಸೇವೆ.

 ಎಂಎ ಪದವೀಧರರಾದ ಇವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ 1909 ರಲ್ಲಿ 60-80 ರೂಪಾಯಿ ವೇತನಕ್ಕೆ ಉಪನ್ಯಾಸಕರಾಗಿ ನೇಮಕಗೊಂಡರು.  1910 ರಲ್ಲಿ ಸೈದಪೇಟ್‍ನ ಟೀಚರ್ಸ್ ಕಾಲೇಜಿನಲ್ಲಿ ಎಲ್.ಟಿ. ಪದವಿ ಪಡೆದ ಮೇಲೆ 100 ರೂಪಾಯಿ ವೇತನಕ್ಕೆ ಸಹಾಯಕ ಪ್ರಾಧ್ಯಾಪಕ ಸ್ಥಾನಕ್ಕೆ 1914 ರಲ್ಲಿ ಬಡ್ತಿ ದೊರೆಯಿತು.  1917 ರಲ್ಲಿ ಆಂಧ್ರದ ರಾಜಮಂಡ್ರಿ ಸರ್ಕಾರಿ ಕಾಲೇಜಿಗೆ ಇವರನ್ನು ವರ್ಗಾವಣೆ ಮಾಡಲಾಯಿತು.  ಸರ್.ಎಂ. ವಿಶ್ವೇಶ್ವರಯ್ಯ ಅವರ ಸಹಕಾರದಿಂದ 1918 ರಲ್ಲಿ ರಾಧಾಕೃಷ್ಣನ್ ಮೈಸೂರು ಮಹಾರಾಜ ಕಾಲೇಜಿಗೆ ಸಹಾಯಕ ಪ್ರಾಧ್ಯಾಪಕರಾಗಿ ನಿಯುಕ್ತರಾದರು.  ಮಾಸಿಕ ವೇತನ 500 ರೂಪಾಯಿ ಇತ್ತು.  ಇದೇ ಸಂದರ್ಭದಲ್ಲಿ ಮದ್ರಾಸ್ ವಿ.ವಿ. ಡಾಕ್ಟರೇಟ್ ಪದವಿ ನೀಡಿತು.  1921 ರಲ್ಲಿ ಕಲ್ಕತ್ತಾ ವಿ.ವಿ. ತತ್ವಶಾಸ್ತ್ರ ವಿಭಾಗಕ್ಕೆ ನೇಮಕಗೊಂಡರು. ಆಗ ಮಹಾರಾಜ ಕಾಲೇಜಿನ ಹುದ್ದೆಗೆ ರಾಜೀನಾಮೆ ನೀಡಿದರು. ಮೈಸೂರಿನಿಂದ ವಿದ್ಯಾರ್ಥಿ ವೃಂದವು ಅವರನ್ನು ಸಾರೋಟ್‍ನಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ 5 ಕಿ.ಮೀ ದೂರದವರೆಗೆ ವಿದ್ಯಾರ್ಥಿಗಳೇ ಎಳೆದು ಗುರುವಿಗೆ ಪ್ರೀತಿ ತೋರಿದ್ದು ದಾಖಲೆಯ ಸಂಗತಿಯಾಗಿದೆ. ವಿದ್ಯಾರ್ಥಿ ವೃಂದದ ನಾಯಕ ಎಸ್. ನಿಜಲಿಂಗಪ್ಪನವರು ಎಂಬುದು ಖುಷಿಯ ಸಂಗತಿ.

1921-1931 ರವರೆಗೆ ಕಲ್ಕತ್ತಾ ವಿ.ವಿ. ಪ್ರಾಧ್ಯಾಪಕರಾಗಿ ದೇಶದ ಬುದ್ಧಿಜೀವಿಗಳ ಗಮನ ಸೆಳೆದರು.  1926 ರಲ್ಲಿ ಬ್ರಿಟೀಷ್ ಸಾಮ್ರಾಜ್ಯದ ವಿ.ವಿ.ಗಳ ಸಮ್ಮೇಳನಕ್ಕೆ ಲಂಡನ್‍ ನಲ್ಲಿ, 1930 ರಲ್ಲಿ ಹಾರ್ವರ್ಡ್ ವಿ.ವಿ. ಯಲ್ಲಿ ನಡೆದ ಅಂತಾರಾಷ್ಟ್ರೀಯ ತತ್ವಶಾಸ್ತ್ರ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದರು. 1926 ರಲ್ಲಿ ಅಮೇರಿಕಾದ ಷಿಕಾಗೋ ವಿ.ವಿ. 1929-30 ರಲ್ಲಿ ಆಕ್ಸ್‌ಫರ್ಡ್ ವಿ.ವಿ.ಯ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. 1931-1936 ವರೆಗೆ ಆಂಧ್ರ ವಿ.ವಿ. 1939-1948 ರವರೆಗೆ ಬನಾರಸ್ ಹಿಂದೂ ವಿ.ವಿ. ಗಳಲ್ಲಿ,  1953-1962 ರವರೆಗೆ ದೆಹಲಿಯ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಾಗಿ ಇವರು ಮಾಡಿದ ಸೇವೆ ಸ್ಮರಣೀಯವಾದದ್ದು.

ಡಾ. ಎಸ್. ರಾಧಾಕೃಷ್ಣನ್‍ಗೆ ಲಭಿಸಿದ ಪ್ರಶಸ್ತಿ, ಗೌರವಗಳು

ರಾಷ್ಟ್ರಪತಿ ಎಸ್ ರಾಧಾಕೃಷ್ಣನ್ ಅವರೊಂದಿಗೆ ಪ್ರಧಾನಿ ಇಂದಿರಾ ಗಾಂಧಿ

ಶಿಕ್ಷಣಕ್ಕಾಗಿ ಅವರು ಮಾಡಿದ ಸೇವೆಗಾಗಿ 1931ರಲ್ಲಿ ಬ್ರಿಟೀಷ್ ಇಂಡಿಯಾದ ಕಿಂಗ್‍ಜಾರ್ಜ್ ಅವರಿಂದ ನೈಟ್‍ಹುಡ್ ಪದವಿ.  1954 ರಲ್ಲಿ ಮೆಕ್ಸಿಕೋದಿಂದ ಆರ್ಡರ್ ಆಫ್ ದಿ ಅಜ್ಟೆಕ್ ಈಗಲ್ ಪ್ರಶಸ್ತಿ, 1954 ರಲ್ಲಿ ಜರ್ಮನ್‌ ನಿಂದ  ವಿಜ್ಞಾನ ಮತ್ತು ಕಲೆಗಾಗಿ ಪೌರ್‍ಲೆ ಮೆರೈಟ್ ಗೌರವ. 1954 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ಭಾರತ ರತ್ನ” ಪ್ರಶಸ್ತಿ.  1963 ರಲ್ಲಿ ಬ್ರಿಟೀಷ್ ರಾಯಲ್ ಮತ್ತು ಯುನೈಟೆಡ್ ಕಿಂಗ್ಡಮ್‍ನಿಂದ ಆರ್ಡರ್ ಆಫ್ ಮೆರಿಟ್ ಗೌರವ ಸದಸ್ಯತ್ವ, 1975 ರಲ್ಲಿ ಪ್ರಗತಿಶೀಲ ಧರ್ಮಕ್ಕಾಗಿ ಇರುವ ಟೆಂಪ್ಟನ್ ಪ್ರಶಸ್ತಿ, ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಗೆ 16 ಬಾರಿ, ನೊಬೆಲ್ ಶಾಂತಿ ಪ್ರಶಸ್ತಿಗೆ 11 ಬಾರಿ ನಾಮ ನಿರ್ದೇಶನಗೊಂಡರು.

1938ರಲ್ಲಿ ಬ್ರಿಟೀಷ್ ಅಕಾಡೆಮಿಯ ಫೆಲೋ ಆಗಿ, 1947 ರಲ್ಲಿ ಇನ್‍ಸ್ಟಿಟ್ಯೂಟ್ ಆಫ್ ಇಂಟರ್‌ ನ್ಯಾಶನಲ್ ಫಿಲಾಸಫಿಯ ಖಾಯಂ ಸದಸ್ಯರಾಗಿ, 1959 ರಲ್ಲಿ ಫ್ರಾಂಚ್‍ಫರ್ಟ್‍ಗೋಥೆ ಫ್ಲೇಕ್, 1961 ರಲ್ಲಿ ಜರ್ಮನ್ ಪುಸ್ತಕ ವ್ಯಾಪಾರದ ಶಾಂತಿ ಪ್ರಶಸ್ತಿ, 1968 ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಪೆನ್ಸಿಲ್‍ವೇನಿಯಾ ವಿ.ವಿ. ಯಿಂದ ‘ಡಾಕ್ಟರ್ ಆಫ್ ಲಾ’ ಗೌರವ ಪದವಿ.  ಬ್ರಿಟನ್ ರಾಣಿಯಿಂದ 1931 ರಲ್ಲಿ ಸರ್ ಪದವಿ, ಹೀಗೆ ಅನೇಕ ಗೌರವ, ಪ್ರಶಸ್ತಿಗಳು ಡಾ. ರಾಧಾಕೃಷ್ಣನ್‍ರವರನ್ನು ಹುಡುಕಿಕೊಂಡು ಬಂದವು. 

ಡಾ. ಎಸ್. ರಾಧಾಕೃಷ್ಣನ್ ಬರೆದ ಪ್ರಮುಖ ಕೃತಿಗಳು

ಡಾ. ರಾಧಾಕೃಷ್ಣನ್‍ ನೆಹರೂ ಅವರೊಂದಿಗೆ

ಇಂಡಿಯನ್ ಫಿಲಾಸಫಿ 2 ಸಂಪುಟಗಳು, 1923-27, ದಿ ಫಿಲಾಸಫಿ ಆಫ್ ದಿ ಉಪನಿಷದ್ 1924, ಆನ್ ಐಡಿಯಲಿಸ್ಟ್ ವ್ಯೂ ಆಫ್ ಲೈಫ್ 1932, ಈಸ್ಟ್ ಅಂಡ್ ವೆಸ್ಟ್ – ಸಮ್‍ರಿಫ್ಲೆಕ್ಷನ್ 1955, ದಿ ರಿಲಿಜನ್ ವಿ ನೀಡ್ ಮತ್ತು ದಿ ಫ್ಯೂಚರ್ ಆಫ್ ಸಿವಿಲೈಜೇಷನ್ 1928-29, ಸ್ವಾತಂತ್ರ್ಯ ಮತ್ತು ಸಂಸ್ಕೃತ, ಹಿಂದೂಸ್ಥಾನದ ಹೃದಯ ಹಾಗೂ ಸಮಕಾಲೀನ ಭಾರತೀಯ ತರ್ಕಶಾಸ್ತ್ರ ಹೀಗೆ ಅನೇಕ ಮಹತ್ವದ ಕೃತಿಗಳನ್ನು ರಚಿಸಿದ ಕೀರ್ತಿ ಇವರದು.

ಡಾ. ಎಸ್. ರಾಧಾಕೃಷ್ಣನ್ ಅಲಂಕರಿಸಿದ ಪ್ರಮುಖ ಹುದ್ದೆಗಳು

ಡಾ. ರಾಧಾಕೃಷ್ಣನ್ ತಮ್ಮ ಯಶಸ್ವಿ ಶೈಕ್ಷಣಿಕ ವೃತ್ತಿ ಜೀವನದ ನಂತರ ತಡವಾಗಿ ರಾಜಕೀಯ ಸೇವೆ ಆರಂಭಿಸಿದರು. ಅವರ ಅಂತಾರಾಷ್ಟ್ರೀಯ ಅಧಿಕಾರವು ಅವರ ರಾಜಕೀಯ ಜೀವನಕ್ಕೆ ಮುಂಚೆಯೇ ಇತ್ತು. 1928 ರಲ್ಲಿ ಆಂಧ್ರ ಮಹಾಸಭಾದಲ್ಲಿ ಭಾಗವಹಿಸಿದ ಪ್ರಮುಖರಲ್ಲಿ ಒಬ್ಬರು. ಅವರು ಮದ್ರಾಸ್ ಪ್ರೆಸಿಡೆನ್ಸಿಯ ಸೆಡೆಡ್ ಡಿಸ್ಟ್ರಿಕ್ಟ್ ವಿಭಾಗವನ್ನು ‘ರಾಯಲ್ ಸೀಮಾ’ ಎಂದು ಮರು ನಾಮಕರಣ ಮಾಡುವ ಕಲ್ಪನೆಯನ್ನು ಬೆಂಬಲಿಸಿದರು.  1931 ರಲ್ಲಿ ಬೌದ್ಧಿಕ ಸಹಕಾರಕ್ಕಾಗಿ ಲೀಗ್ ಆಫ್ ನೇಷನ್ಸ್ ಸಮಿತಿಗೆ ನಾಮ ನಿರ್ದೆಶನಗೊಂಡರು.  1949-52 ರವರಗೆ ಸೋವಿಯತ್ ಒಕ್ಕೂಟಕ್ಕೆ ರಾಯಭಾರಿಯಾಗಿ ಭಾರತ ಮತ್ತು ರಷ್ಯಾ ಸಂಬಂಧವು ಉತ್ತಮವಾಗಿ ಬೆಳೆಯಲು ಕಾರಣರಾದರು.  ಭಾರತದ ಸಂವಿಧಾನ ಸಭೆಗೂ ಆಯ್ಕೆಯಾದರು.  ಯುನೆಸ್ಕೋ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದರು. 1952-1962 ರವರೆಗೆ ಭಾರತದ ಉಪ ರಾಷ್ಟ್ರಪತಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು.  1962 ಮೇ 13 ರಂದು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.  ಅದೇ ದಿನ ಭಾರತದ ಅತಿ ಶ್ರೇಷ್ಠ ತತ್ವಶಾಸ್ತ್ರಜ್ಞರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಭಾರತದ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿ 1962-1967 ರವರೆಗೆ ದೇಶವನ್ನು ಸಮರ್ಥವಾಗಿ ಮುನ್ನಡೆಸಿದರು.

ಭಾರತದ ಇಂತಹ ಅಪ್ರತಿಮ ಮಹಾನ್ ವ್ಯಕ್ತಿ  1975ರ ಏಪ್ರಿಲ್ 17 ರಂದು ಇಹಲೋಕಕ್ಕೆ ವಿದಾಯ ಹೇಳಿದರು.  ಪ್ರತಿವರ್ಷ ಸೆಪ್ಟೆಂಬರ್ 5 ರಂದು ರಾಷ್ಟ್ರವು ತನ್ನ ಪಂಡಿತ ಪುತ್ರನನ್ನು ನೆನಪಿಸಿಕೊಳ್ಳುತ್ತದೆ.

ಡಾ. ಗಂಗಾಧರಯ್ಯ ಹಿರೇಮಠ, ದಾವಣಗೆರೆ

ವಿಶ್ರಾಂತ ಪ್ರಾಧ್ಯಾಪಕರು, ಮೊ: 9880093613 


ಇದನ್ನೂ ಓದಿ- http://ಓ …ನೀವು ಟೀಚರಾ… https://kannadaplanet.com/oh-are-you-a-teacher/

More articles

Latest article