Thursday, July 25, 2024

“ಒಳ್ಳೆ ಮದುಮಗ ಕಂಡಂಗ್ ಕಾಣ್ತಿದ್ಯಲ್ಲೋ ಅಪ್ಪಜಣ್ಣ”

Most read

(ಈ ವರೆಗೆ…) ತನ್ನದೇ ಗುಡಿಸಲು ಕಟ್ಟಿಕೊಂಡ ಗಂಗೆ ಬದುಕು ಸಾಗಿಸಲು ಒದ್ದಾಡಿದಳು. ದಿನವಿಡೀ ನೀರಲ್ಲಿ ಕೆಲಸಮಾಡಿ ಆರೋಗ್ಯ ಹದಗೆಟ್ಟಿತು. ಮಗಳನ್ನು ನೋಡಿಕೊಳ್ಳುತ್ತಿದ್ದ ಅಪ್ಪ ತೀರಿಕೊಂಡಾಗ ಗಂಗೆ ಸೋತು ಸುಣ್ಣವಾದಳು. ಅಪ್ಪಜ್ಜಣ್ಣನ ಸಹಾಯದಿಂದ ಮತ್ತೆ ಚೇತರಿಸಿಕೊಂಡು ಮಕ್ಕಳ ಭವಿಷ್ಯ ನೆನೆದು ಹಠದಿಂದ ಬದುಕಿನತ್ತ ಮುಖ ಮಾಡಿದಳು. ಗಂಗೆ ಏನು ಮಾಡಿದಳು? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಿನ ನಡಿಗೆಯ 66 ನೇ ಕಂತು.

ಅಪ್ಪನ ಸಾವಿನೊಂದಿಗೆ ತನ್ನ ಇದ್ದಬದ್ದ ಕಣ್ಣೀರನ್ನೆಲ್ಲಾ ಸುಟ್ಟುಕೊಂಡು ಮತ್ತಷ್ಟು ಗಟ್ಟಿಯಾಗಿದ್ದ ಗಂಗೆಗೆ, ತನ್ನ ಮುಂದೆ ಬೆಟ್ಟದಂತೆ ಕೂತಿದ್ದ ಮಕ್ಕಳ ಭವಿಷ್ಯಕ್ಕೆ ಸರಿಯಾದ ಕಾಲು ದಾರಿ ರೂಪಿಸುವುದಷ್ಟೇ ಗುರಿಯಾಗಿತ್ತು. ತನ್ನ ಸಂಕೋಚ, ಭಯ ಅಂಜುಬುರುಕುತನವನ್ನೆಲ್ಲಾ ಬದಿಗೊತ್ತಿ ಬದುಕು ಒಡ್ಡುವ ಎಲ್ಲಾ ಸವಾಲುಗಳಿಗೂ ಮುಖಾಮುಖಿಯಾಗಲು ಅಣಿಯಾದಳು. 

ಅಪ್ಪಜ್ಜಣ್ಣನ ಆರೈಕೆಯಲ್ಲಿ ಕಾಲಿನ ಇಸುಬಿನಿಂದ ಸುಧಾರಿಸಿಕೊಂಡು ಮೇಲೆದ್ದವಳು ಹೊಲದ ಕೆಲಸವನ್ನು ಬಿಟ್ಟು, ಹೊಸ ನಾರಿಪುರದ ತುಂಬಾ ನಾಯಿಕೊಡೆಯಂತೆ ಎದ್ದಿದ್ದ ಊರಿನ ನೂರಾರು ಜನರಿಗೆ ಅನ್ನದ ದಾರಿಯಾಗಿದ್ದ ಕಾಫಿ ಕಂಪನಿಯತ್ತ ಮುಖ ಮಾಡಿದಳು. ಹಾಗೂ ಹೀಗೂ ವರ್ಷಗಳ ಕಾಲ ಕೆಲಸ ನಿರ್ವಹಿಸಿ  ಕಾಸಿಗೆ ಕಾಸು ಜೋಡಿಸಿ ಒಂದು ಹಸು ಮತ್ತು ಕರುವನ್ನು ಕೊಂಡು ಅವರಿವರ ಮನೆ ಜೀತದಲ್ಲಿಯೇ ಸವೆದು ಹೋಗುತ್ತಿದ್ದ ಅಪ್ಪಜ್ಜಣ್ಣನ ಸುಪರ್ದಿ ಗೊಪ್ಪಿಸಿದಳು. ಮೂರು ಹೊತ್ತು ಹಸುವಿನ ಆರೈಕೆಯಲ್ಲಿ ಮುಳುಗಿದ ಅಪ್ಪಜ್ಜಣ್ಣ ಅವನ್ನು ಗುಡ್ಡ ಕಣಿವೆಗಳಲ್ಲೆಲ್ಲ ಓಡಾಡಿಸಿ ಸೊಂಪಾಗಿ ಮೇಯಿಸಿದ. ಕೆಲವು ತಿಂಗಳಲ್ಲೆ  ದಷ್ಟಪುಷ್ಟವಾಗಿ ಬೆಳೆದು ನಿಂತರು ಆ ತಾಯಿ ಮಗಳು.  ಒಂದು ಲೀಟರ್ ಹಾಲು ಕೊಡುವುದರಲ್ಲೆ ಸುಸ್ತಾಗಿ ಹೋಗುತ್ತಿದ್ದ ಅಪ್ಪಜ್ಜಣ್ಣನ ಕಾವೇರಿ ಹಸುವೀಗ  ಎರಡು ಲೀಟರ್ ವರೆಗೂ ಏರಿ ನಿಂತಿತ್ತು.

ಹಾಲು ಮಾರಿದ ದುಡ್ಡಿನಲ್ಲಿ ಆ ವರ್ಷ ಗಂಗೆ ಮನೆಯ ಯುಗಾದಿ ಜೋರಾಗಿಯೇ ನಡೆದಿತ್ತು. ಮಕ್ಕಳಿಗೆ ಅಪ್ಪಜ್ಜಣ್ಣನಿಗೆ ಹೊಸ ಬಟ್ಟೆಗಳನ್ನು ಕೊಡಿಸಿ ಒಬ್ಬಟ್ಟು ಬೇವು ಬೆಲ್ಲದೊಂದಿಗೆ ಹಬ್ಬವನ್ನು ಸಂಭ್ರಮಿಸಿದ್ದಳು. ಇತ್ತ ಅಪ್ಪಜ್ಜಣ್ಣನೂ ತಾನು ಕೂಡಿಟ್ಟು ಕೊಂಡಿದ್ದ ದುಡ್ಡನ್ನು  ಪಕ್ಕದ ಮನೆಯ ಜಲಜಕ್ಕನಿಗೆ  ಕೊಟ್ಟು ಗುಟ್ಟಾಗಿ ಒಂದು ಹಸಿರು ಸೀರೆ, ಬಳೆ ತರಿಸಿ ಗಂಗೆಯ ಕೈ ಗಿಟ್ಟು “ನಿಮ್ಮಪ್ಪುನ್ ಮನೆಯೋರು ಒಳ್ಳೆರಲ್ಲ ಯಾಕಂಗ್ ಅಣ್ತಮ್ದಿರು ಅಂತ ಜೀವ ಬುಡ್ತಿ.  ಅವ್ರಿಂದ  ಯಾವ  ಪ್ರೀತಿನೂ ಇಲ್ಲ ಮಣ್ಣಂಗಟ್ಟಿನು ಸಿಗಕಿಲ್ಲ. ನೋಡು  ನನ್ ಕೈಲಿ ಆಗಗಂಟ ನಿನ್ ಬೆನ್ನಿಗ್  ನಿಲ್ತಿನಿ ಗಂಗವ್ವ. ಇಬ್ರು ಇನ್ನೊಂದಿಷ್ಟು ದುಡ್ಡುನ್ನ ಕೂಡಾಕಿ ಮತ್ತೊಂದು ಹಸ ತಕ್ಕೊಳನ, ಗುತ್ಗೆಕೊಟ್ಟಿರೋ ನಮ್ ಹೊಲ ಬುಡುಸ್ಕೊಂಡು ನಾವೇ ಗೇಯ್ಮೆ ಮಾಡನ. ಆಮೇಲೆ ನೀನು ಯಾವ್ ಕಾಪಿ ಕಂಪ್ನಿಗೂ ಹೋಗಿ ಬ್ಯಾಳೆ ಆಯ್ಕೊಂಡು, ಮೂಟೆ ಹೊತ್ತಾಡ್ಕೊಂಡು ಇರ್ಬೇಕಾಗಿಲ್ಲ” ಎಂದು ಗಂಗೆಯ ಎದೆಯಲ್ಲಿ ಭರವಸೆಯ ಕಿಡಿ ಹೊತ್ತಿಸಿ ಅವಳ ಕಣ್ಣು ತುಂಬುವಂತೆ ಮಾಡಿದ್ದ.  

ಅವರಿವರು ತೊಟ್ಟು ಬಿಟ್ಟ ಹಳೇ ಬಟ್ಟೆಗಳಲ್ಲೇ ಕಥೆ ಹಾಕುತ್ತಿದ್ದ ಅಪ್ಪಜ್ಜಣ್ಣ, ಬಹಳ ವರ್ಷಗಳ ನಂತರ ತಾನು ಧರಿಸಿದ ಹೊಸ ಶರ್ಟು ಪಂಚೆಯನ್ನು ಮುಟ್ಟಿ ಮುಟ್ಟಿ ನೋಡಿಕೊಂಡು ಹಿಗ್ಗಿದ. ಕೂತ ಕಡೆ ಕೂರಲಾರದೆ ನಿಂತ ಕಡೆ ನಿಲ್ಲಲಾರದೆ ನಾರಿ ಪುರದ ಓಣಿ ಓಣಿಗಳಲ್ಲೆಲ್ಲಾ ಅಲೆದಾಡಿ. “ನೋಡ್ರ ನಮ್ಮ ಗಂಗವ್ವ ಹಬ್ಬುಕ್ಕೆ ಹೊಸ ಬಟ್ಟೆ ಹೊಲ್ಸವೌಳೆ” ಎಂದು ಎಲ್ಲರಿಗೂ ತೋರಿಸಿ ಕೊಂಡು ತಿರುಗಿದ. ನೋಡಿದವರೆಲ್ಲ “ಒಳ್ಳೆ ಮದುಮಗ ಕಂಡಂಗ್ ಕಾಣ್ತಿದ್ಯಲ್ಲೋ ಅಪ್ಪಜಣ್ಣ ನೀ ಒಪ್ಪಿದ್ರೆ ಒಂದು ವಾಲ್ಗ ಊದುಸ್ಬುಡನ ನೋಡು ಅತ್ತಗಿ” ಎಂದು ರೇಗಿಸಿ, ಹೊಗಳಿ ತಲೆಗೊಂದಿಷ್ಟು ನಶೆ ಏರಿಸಿ ಕಳುಹಿಸಿದರು.

ಮುಸ್ಸಂಜೆ ಮನೆ ಸೇರಿದ ಅಪ್ಪಜ್ಜಣ್ಣನ ತಲೆಯೊಳಗೆ ಜನರಾಡಿದ ಮದುಮಗ ಅನ್ನುವ ಶಬ್ದ ಗುಂಗಿಯ ಹುಳದಂತೆ ಗುಂಯಿ್ ಗುಡ ತೊಡಗಿತ್ತು. ಅಂದು ಹೊಸ ಜೀವ ಸಂಚಾರವಾದಂತೆ ಪುಟಿಯುತ್ತಿದ್ದ ಅಪ್ಪಜ್ಜಣ್ಣ, ಸೀದಾ ಮನೆಗೆ ಬಂದವನೇ ಸುತ್ತಾಮುತ್ತಾ ಗಂಗೆ ಇಲ್ಲದಿರುವುದನ್ನು ಗಮನಿಸಿ ಕನ್ನಡಿ ಮುಂದೆ ನಿಂತ. ಎಗರಿ ನಿಂತಿದ್ದ ತನ್ನ ಕೂದಲಿಗೆ ಮತ್ತಷ್ಟು ಎಣ್ಣೆ ನೀವಿ ತಲೆ ಬಾಚಿದ. ಮೆಲ್ಲಗೆ ಗಂಗೆಯ ಸ್ನೋ ಪೌಡರ್  ತೆಗೆದು ಮುಖಕ್ಕೆ ಹಚ್ಚಿಕೊಂಡು ಎರಡು ಹಸ್ತಗಳನ್ನು ಉಜ್ಜಿ ಮೂಗಿನ ಬಳಿ ಕೊಂಡೊಯ್ದು ಸರ್ರನೆ ಉಸಿರೆಳೆದು ಕೊಂಡ. ಪೌಡರಿನ ಮಲ್ಲಿಗೆ ಘಮಲು ಒಮ್ಮೆಗೆ ಮತ್ತೇರಿಸಿದಂತಾಗಿ ತಲೆ ಕೊಡವಿ ಕೊಂಡ. ಇಷ್ಟೆಲ್ಲಾ ತಯಾರಾದ ಮೇಲೆ ಅವನಿಗೆ ಒಳಗಿರಲಾಗಲಿಲ್ಲ ಅಷ್ಟರಲ್ಲಿ ಗಂಗೆಯೂ ಒಳ ಬಂದದ್ದನ್ನು ಗಮನಿಸಿ, ಏನೂ ನಡೆದೇ ಇಲ್ಲ ಎನ್ನುವವನಂತೆ  “ಇಲ್ಲೇ ಶಂಕ್ರಪ್ಪುನ್ ಮನೆ ಜಗ್ಲಿ ಕಟ್ಟೆ ತಕ್ಕೋಗ್ಬತ್ತಿನಿ ಗಂಗವ್ವ” ಎಂದು ಹೇಳಿ ಹೆಗಲ ಮೇಲಿನ ಟವಲ್ ತೆಗೆದು ಕೊರಳಿನ ಸುತ್ತ ಸುತ್ತಿ ಮೈ ಕುಣಿಸುತ್ತ ಸಿನಿಮಾ ಹಾಡೊಂದನ್ನು ಗುನುಗುತ್ತಾ ಹೊರಟ.

ಯುಗಾದಿಯ ಆಸು ಪಾಸುಗಳಲ್ಲಿ ಇಸ್ಪೀಟಿನ ಅಡ್ಡೆಯಾಗಿ ಬಿಡುತ್ತಿದ್ದ ನಾರಿಪುರದ ನಡು ಮಧ್ಯದಲ್ಲಿದ್ದ  ಶಂಕರಪ್ಪನ ಜಗಲಿ ಕಟ್ಟೆ ಅಂದೇಕೋ ಎಂದಿನ ಉತ್ಸಾಹವಿಲ್ಲದೆ ಬಣಗುಟ್ಟುತ್ತಿತ್ತು. ಇದ್ದ ಕೆಲವು ಹೈಲುಪೈಲುಗಳು ಬೀಡಿ ಎಳೆಯುತ್ತಾ ಹರಡಿದ್ದ ಇಸ್ಪೀಟೆಲೆಗಳ ಮುಂದೆ ಕಾಡುಹರಟೆ ಹೊಡೆಯುತ್ತಾ ಕೂತಿದ್ದರು. ಇದ್ದಕ್ಕಿದ್ದಂತೆ ಟಾಕುಟೀಕಾಗಿ ಬಂದು ನಿಂತ ಅಪ್ಪಜ್ಜಣ್ಣನನ್ನು ಕಂಡು ಹುರುಪುಗೊಂಡ ಆ ಗುಂಪು “ಏನಪ್ಪಜ್ಜಣ್ಣ ಈ ಪರಿ ಮಿಂಚ್ತಿದ್ದಿ  ಹಬ್ಬ ಬಾಳ ಜೋರು ಕಾಣ್ತದೆ” ಎಂದು  ರೇಗಿಸಿ ಅವನನ್ನು  ಕೆಂಪಾಗಿಸಿದರು.

 ಹೀಗೆ ಅವನನ್ನು ತಮಾಷೆ ಮಾಡುತ್ತಾ ಮಾಡುತ್ತಾ ನಿಧಾನವಾಗಿ ಅವರ ಮಾತು ಗಂಗೆಯ ಕಡೆಗೆ ಹೊರಳಿ ಕೊಂಡಿತು. ” ಹಂಗಿದ್ರೆ ಗಂಗೆನ ಗಂಡ ಬುಟ್ಟಂಗೆಯ ಅನ್ನಪ್ಪ ” ಎನ್ನುವ ಪ್ರಶ್ನೆಯೊಂದಿಗೆ ಗಂಗೆಯ ವಿಷಯ ತಿಳಿದು ಕೊಳ್ಳಲು ಮುಂದಾದರು. ಯಾರಾದರು ಗಂಗೆಯ  ಸುದ್ದಿಗೆ ಬಂದರೆ ಮುಂಗುಸಿಯಂತಾಡುತ್ತಿದ್ದ ಅಪ್ಪಜ್ಜಣ್ಣ ” ಹಂಗಂತ ನಿಮ್ಗೆ ಯಾರೇಳಿದ್ರು.  ನೀವೇನು ಹಾರ್ಸೋರೋ ತೀರ್ಸೋರೋ. ಅವಳ್  ಸುದ್ದಿ ನಿಮಗ್ಯಾಕೀಗ”  ಮಾತಾಡಂಗಿದ್ರೆ ನೆಟ್ಟಗ್ ಮಾತಾಡಿ ಇಲ್ಲ ಬಾಯಿ ಮುಚ್ಕೊಂಡು ತೆಪ್ಪುಗೆ ಕೂತ್ಕೊಳಿ” ಎಂದು ತನ್ನ ಕುತ್ತಿಗೆಯಲ್ಲಿ ಸುತ್ತಿಕೊಂಡಿದ್ದ ಟವಲ್ ಅನ್ನು ತೆಗೆದು, ಜೋರಾಗಿ ಜಾಡಿಸಿ ಹೆಗಲ ಮೇಲೆ ಎಸೆದುಕೊಂಡು ಬುಸುಗುಡುತ್ತಾ ಮನೆಯತ್ತ ಹೊರಟ.

ಮನೆಯ ಹಟ್ಟಿ ಬಾಗಿಲ ಮುಂದೆ ಹಬ್ಬದ ಅಡುಗೆ ಉಂಡು ಎಲೆ ಅಡಿಕೆ ಹಾಕಿಕೊಂಡು ಕುಳಿತಿದ್ದ ಗಂಗೆಯ ಸೋದರತ್ತೆ ತುಂಗವ್ವ, ಅಪ್ಪಜ್ಜಣ್ಣನನ್ನು ಕಂಡು  “ಈಟೊತ್ನಲ್ಲಿ ಎಲ್ಲೋಗಿದ್ದೋ ಅಪ್ಪಜ್ಜಣ್ಣ ಬಾ ವಳಿಕೆ” ಎಂದು ಕರೆದಳು. ಇನ್ನೂ  ಕೋಪದಿಂದ ಉರಿಯುತ್ತಲೇ ಇದ್ದ ಅಪ್ಪಜ್ಜಣ್ಣ ಸಿಡಿಮಿಡಿಯಿಂದಲೇ “ಇಲ್ಲ ನಾನು ಮನೆಗೋಗ್ ಬರದಿಲ್ಲ” ಎಂದು ಹೇಳಿ ಹೆಜ್ಜೆ ಮುಂದಿಟ್ಟ. ಆದರೆ ತುಂಗವ್ವ ಅವನನ್ನು ಬಿಡಲಿಲ್ಲ ಎದ್ದವಳೆ ಅವನ ರಟ್ಟೆ ಹಿಡಿದು ನಿಲ್ಲಿಸಿ “ಏನಾಯ್ತೋ ಸಿಡ್ಕಾಡ್ತಿದ್ಯಲ್ಲ ಯಾಕೆ” ಎಂದು ವಿಚಾರಿಸಿದಳು. ಇವನು ತುಟಿಕ್ ಪಿಟಿಕ್ ಎಂದು ಬಾಯಿ ತೆರೆಯಲಿಲ್ಲ. “ಅದುನ್ ಬುಟ್ಟು ಬ್ಯಾರೆ ಏನಾರಾ ಮಾತಾಡತ್ತೆ. ಇಲ್ಲ ನಾನು ಹೊಯ್ತೀನಿ ಬುಡು” ಎಂದು ಹಟ ಹಿಡಿದು ನಿಂತ. ತುಂಗತ್ತೆಗೆ ಅವನು ಒಳಗೆ ಬರುವುದಷ್ಟೇ ಬೇಕಾಗಿತ್ತು “ಆಗ್ಲಿ ಬಾರೋ ಮಾರಾಯ ಒಂದಿಷ್ಟು ಒಬ್ಬಿಟ್ಟು, ತಾಳ್ದ ತಿಂದೋಗಿವಂತೆ ಎಂದು ಹಿಂಸೆ ಮಾಡಿ ಒಳಗೆ ಕರೆದುಕೊಂಡು ಹೋದಳು.

ಹೆಡ್ಡನನ್ನು ಕಟ್ಟಿಕೊಳ್ಳುವಂತೆ ಮಾಡಿದ್ದ ತನ್ನ ಅಣ್ಣ ಬೋಪಯ್ಯನ ಮೇಲಿನ ಸಿಟ್ಟು ತುಂಗವ್ವನಿಗೆ ಇನ್ನೂ ಆರಿರಲಿಲ್ಲ. ಸಂಸಾರ ಬೆಳೆದಂತೆಲ್ಲಾ ಅವಳ ಮಕ್ಕಳು ಕೂಡ ತಾಯಿಯ ಇದೇ ದ್ವೇಷ ಅಸೂಯೆಯನ್ನು ಅನುಕರಿಸುತ್ತಾ ಅನುಸರಿಸುತ್ತಾ ಬೆಳೆದು ನಿಂತಿದ್ದರು. ಈಗ ಅವರೂ ಕೂಡ  ಬೋಪಯ್ಯ ಮಾವನ ಮನೆಯವರೆಂದರೆ ಎಣ್ಣೆ ಸೀಗೆಯಂತೆ ನಡೆದು ಕೊಳ್ಳುತ್ತಿದ್ದರು. ಒಡೆದು ಹೋದ ಒಂದೇ ಮನೆಯ ಎರಡು ಬಾಗಿಲುಗಳು ಹಾವು ಮುಂಗೂಸಿಗಳಂತೆ ಆಗಾಗ ಕಾಳಗಕ್ಕಿಳಿದು ಬೀದಿಯಲ್ಲಿ ನಿಲ್ಲುತಿದ್ದುದು ಸರ್ವೆ ಸಾಮಾನ್ಯವಾಗಿ ಹೋಗಿತ್ತು.

ಹಿಂದಿನ ಕಂತು ಓದಿದ್ದೀರಾ? http://“ಆಚೆಗೋಗನ ಎದ್ದೇಳು ತಾತಾ” https://kannadaplanet.com/tanthi-melina-nadige-65/

ಬೀದಿಯಲ್ಲಿ ಬಿದ್ದ ಗಂಗೆಯ ಬದುಕನ್ನು ನೋಡಿ ಮೊದಲು ಸಂಭ್ರಮಿಸಿದವರೆಂದರೆ ತುಂಗತ್ತೆ ಮತ್ತು ಅವಳ ತೊಲೆತುಂಡಿನಂತಹ  ಆರು ಹೆಣ್ಣು ಮಕ್ಕಳು. ಅಪ್ಪಜ್ಜಣ್ಣನನ್ನು ಒಳ ಕರೆದುಕೊಂಡು ಹೋಗಿ ಒಬ್ಬಟ್ಟು ಚಿತ್ರನ್ನ ನೀಡಿದ ತುಂಗವ್ವ “ಅಲ್ಲ ಆ ಗಂಗೆ ಮನೆ ಜೀತ ಮಾಡ್ಕೊಂಡಿರೊವಂತ ದರ್ದು ನಿಂಗೇನೋ  ಬಂದೈತೆ ಅಪ್ಪಜ್ಜಣ್ಣ. ನೀನು ಗಂಡ್ಸು ಒಂದು ಸಂಸಾರ ಕೈ ಬುಡ್ತು ಅಂದ್ರೆ ಇನ್ನೊಂದು ಸಂಸಾರ ಕಟ್ಕೊಂಡು ಬಾಳ್ಸೊ ತಾಕತ್ತಿರೋನು ನೀನ್ಯಾಕೆ ಆ ಗಂಗೆ ಕೈ ಕೆಳಗಿರ್ಬೇಕು. ಒಂದು ಹೆಣ್ಣು ನೋಡಿ ಮದುವೆ ಮಾಡು ಅಂತ ಕೇಳು” ಎಂದು ಅಪ್ಪಜ್ಜಣ್ಣನ ತಲೆ ತಿರುಗಿಸಿದಳು ತುಂಗತ್ತೆ. ” ನೀನ್ ಹೇಳ್ದಂಗೆ ನಮ್ ಗಂಗವ್ವ ನಿಜ್ವಾಗ್ಲೂ ಹೆಣ್ ನೋಡಿ ಮದ್ವೆ ಮಾಡ್ತಾಳೆನತ್ತೆ” ಎಂದು ಆಸೆ ಗಣ್ಣಿನಿಂದ ಮತ್ತೆ ಮತ್ತೆ ಪ್ರಶ್ನಿಸಿದ ಅಪ್ಪಜ್ಜಣ್ಣ. ” ಅವ್ಳು ಕೇಳ್ಳಿಲ್ಲ  ಅಂದ್ರೆ ನಾ ಮನೆ ಬುಟ್ಟು ಹೋಯ್ತಿನಿ ಅಂತ ಚಂಡಿ ಹಿಡ್ಕೊಂಡ್ ಕೂತ್ಕೊ ಯಾಕ್ ಮದ್ವೆ ಮಾಡಕಿಲ ನೋಡು ಬೇಕಾರೆ” ಎಂದು ಪೆದ್ದ ಅಪ್ಪಜ್ಜಣ್ಣನ ಒಳಗೆ ಆಸೆಯ ಬೆಂಕಿ ಧಗಧಗಿಸುವಂತೆ ಮಾಡಿ ಬೀಳ್ಕೊಟ್ಟು ಮುಂದಿನ ಆಟ ನೋಡಲು ತಯಾರಾಗಿ ಕುಳಿತಳು ತುಂಗವ್ವ

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More articles

Latest article