Wednesday, May 22, 2024

ಪತ್ರಿಕೋದ್ಯಮವನ್ನು ಸಾಮಾಜಿಕ ಜವಾಬ್ದಾರಿಯಾಗಿ ಸ್ವೀಕರಿಸಬೇಕು

Most read

ಪತ್ರಕರ್ತರು ತಮ್ಮ ಪತ್ರಿಕಾ ಧರ್ಮವನ್ನು ಮರೆತು ಧರ್ಮಗಳ ನಡುವೆ ಕೋಮು ವಿಷ ಬೀಜ ಬಿತ್ತುವ ಗುತ್ತಿಗೆ ಪಡೆದಿದ್ದಾರೆ. ಇದು ಇಂದಿನ ಯುವಕರು ಹಾಗೂ ಪತ್ರಕರ್ತರಾಗಬೇಕೆಂದು ಬಯಸುವವರ ಮೇಲೆ ಕೆಟ್ಟ  ಪ್ರಭಾವ ಬೀರುವುದಂತೂ ಖಂಡಿತ. ಇದರಿಂದಾಗಿ ಮತ್ತೆ ಈ ಸಮಾಜವು ಯುವ ಪತ್ರಕರ್ತರ ರೂಪದಲ್ಲಿ ಭಯೋತ್ಪಾದನೆಗೆ ಕೊಡುಗೆ ನೀಡಬಹುದು- ಆಕಾಶ್‌ ಆರ್‌ ಎಸ್‌, ಯುವ ಪತ್ರಕರ್ತ

“ಒಂದು ಸ್ವತಂತ್ರ ಪತ್ರಿಕಾ ಮಾಧ್ಯಮ ಉತ್ತಮ ಅಥವಾ ಕೆಟ್ಟದಾಗಿರಬಹುದು, ಆದರೆ ಸ್ವಾತಂತ್ರ್ಯವಿಲ್ಲದ ಮಾಧ್ಯಮ ಕೇವಲ ಕೆಟ್ಟದ್ದು. ಪತ್ರಿಕಾ ಮಾಧ್ಯಮದ ಸ್ವಾತಂತ್ರ್ಯ ಅದರ ಉನ್ನತಿಗೆ ಒಂದು ಅವಕಾಶವಾಗಿದೆ. ಗುಲಾಮತನದಿಂದ ವಿನಾಶ ಖಂಡಿತ” ಎಂದು ಖ್ಯಾತ ಫ್ರೆಂಚ್‌ ತತ್ವಜ್ಞಾನಿ ಹಾಗೂ ಪತ್ರಕರ್ತ ಅಲ್ಬರ್ಟ್‌ ಕ್ಯಾಮುಸ್‌ ಹೇಳಿದ್ದರು.  ಈಗಿನ ಮಾಧ್ಯಮಗಳ ನಡವಳಿಕೆಯೂ ಹಾಗೇ ಇದೆ.

ಪತ್ರಿಕೋದ್ಯಮವೂ ತನ್ನ ಕರ್ತವ್ಯ ಮರೆತು ಬಹಳ ದೂರ ಸಾಗಿದೆ. ಅದರ ದಿಕ್ಕು ಉದ್ಯಮದ ಕಡೆ ತಿರುಗಿದೆ. ಕೆಲವು ಖಾಸಗಿ ಮಾಧ್ಯಮಗಳು ಪತ್ರಿಕಾ ಸ್ವಾತಂತ್ರ್ಯವೆಂಬ ಆಯುಧವನ್ನು ತಮ್ಮ ಗುಲಾಮಿತನಕ್ಕೆ ಬಳಸಿಕೊಳ್ಳುತ್ತಿವೆ ಎಂದರೆ ತಪ್ಪೇನು ಆಗಲಾರದು. ಯಾಕೆಂದರೆ ಕಳೆದ ಒಂದು ದಶಕದಿಂದ ವಿದ್ಯುನ್ಮಾನ ಮಾಧ್ಯಮಗಳು ಪ್ರಜಾಪ್ರಭುತ್ವದ ಕಾವಲು ನಾಯಿ ಸ್ಥಾನವನ್ನು ಬದಲಿಸಿದ್ದು, ತಮ್ಮ ಮಾಲೀಕನ ಪರವಾಗಿ ವಕಾಲತ್ತು ವಹಿಸುತ್ತಿವೆ. ಇದು ಮೊನ್ನೆ ನಡೆದ ರಾಜ್ಯಸಭೆಯ  ಚುನಾವಣೆಯ ಫಲಿತಾಂಶದಲ್ಲೂ ಕೂಡ ಅರಿವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಕೂಗಿದ ನಾಸಿರ್ ಸಾಬ್ ಜಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ತಿರುಚುವ ಮೂಲಕ ಮತ್ತಷ್ಟು ಸ್ವಷ್ಟಪಡಿಸಿದೆ.

ಮಾಧ್ಯಮಗಳು ನಿಷ್ಪಕ್ಷಪಾತವಾಗಿ, ಸರ್ಕಾರದ ಶಾಸಕಾಂಗ, ಕಾರ್ಯಾಂಗ ನಿಯಂತ್ರಣದಿಂದ ಸ್ವತಂತ್ರವಾಗಿ ಪಾರದರ್ಶಕತೆಯಿಂದ ಇರಬೇಕು. ಆ ಮೂಲಕವೇ  ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡಬೇಕು. ಇದು ಪತ್ರಿಕಾ ಸ್ವಾತಂತ್ರ್ಯದ ಘನತೆ. ಆದರೆ ಈಗಿನ ಪತ್ರಿಕೋದ್ಯಮದ ಆಯಾಮವೇ ಬೇರೆ. ಯಾವುದೋ ಒಂದು ಪಕ್ಷ, ವ್ಯಕ್ತಿಗೆ ವಿಧೇಯನಾಗಿ ತನ್ನ ಸಂಸ್ಥೆ ಕೆಲಸಗಾರರ ಜೇಬು ತುಂಬಿಸುವ ಸಲುವಾಗಿ ಅಕ್ಷರದ ಹಾದರಕ್ಕೆ ಇಳಿದಿದೆ. ಕಳೆದ 10 ವರ್ಷಗಳಿಂದ ಈ ಖಾಸಗಿ ಮಾಧ್ಯಮಗಳು ಒಂದು ಪಕ್ಷಕ್ಕೆ ತಮ್ಮ ಕಾಯಕ ನಿಷ್ಠೆಯನ್ನು ಸೀಮಿತಗೊಳಿಸಿ ಯಥಾಸ್ಥಿತಿ ಕಾಯ್ದುಕೊಂಡು ಈ ಸಮಾಜದ ನೆಮ್ಮದಿಯ ನಿದ್ರೆಯನ್ನು ಕಸಿಯುತ್ತಿವೆ. ವ್ಯಕ್ತಿ ಆರಾಧಕರಾಗಿ, ಪಕ್ಷ, ಸಂಘಟನೆ ಸಿದ್ಧಾಂತವನ್ನು ಮೈಗಿಳಿಸಿಕೊಂಡು ನಾಡಿನ ಜನರ  ಸ್ವಸ್ಥ ಸಮಾಜದ ದೃಷ್ಟಿಯನ್ನು ಬದಲಿಸುವ ಕಾರ್ಯದಲ್ಲಿ ತೊಡಗುತ್ತಲೆ ಇವೆ. ಬಿಜೆಪಿಯ ಅಜೆಂಡವಾದ ಧರ್ಮ, ಹಿಂದೂತ್ವ, ಪಾಕಿಸ್ತಾನವನ್ನು ಎದೆಯ ಒಳಗಿಳಿಸಿಕೊಂಡು ಕ್ಯಾಮರಾ ಮುಂದೆ ಕೂತು ಬೊಬ್ಬೆ ಹೊಡೆಯುತ್ತಲೆ ಒಂದು ಪಕ್ಷದ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿವೆ. ಇದು ಇದೇ ಮೊದಲೇನಲ್ಲ. ಬಿಜೆಪಿಯು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಆರ್ ಎಸ್ಎಸ್ ಜೊತೆಗೂಡಿ ಎಷ್ಟೆಲ್ಲಾ ಕೆಲಸ ಮಾಡಿದೆಯೋ ಇದರಲ್ಲಿ ಕನ್ನಡ ಖಾಸಗಿ ಮಾಧ್ಯಮಗಳ ಪಾಲುದಾರಿಕೆ ಅಷ್ಟೇ ಇದೆ. ಅದರಲ್ಲೂ ದೃಶ್ಯಮಾಧ್ಯಮಗಳ ಪಾತ್ರ ಹಿರಿದು. ಪುಲ್ವಾಮ ದಾಳಿ, ನೋಟು ಅಮಾನ್ಯೀಕರಣ, ಬ್ಯಾಂಕ್ ಖಾತೆಗೆ 15 ಲಕ್ಷ, 2 ಕೋಟಿ ಉದ್ಯೋಗ ಸೃಷ್ಟಿ ಇಂತಹ ಹಸಿ ಸುಳ್ಳುಗಳನ್ನೇ ಸತ್ಯ ಎಂಬಂತೆ ಬಿತ್ತರಿಸಿ ಈ ನಾಡಿನ ಜನರ ಮುಗ್ಧತೆಯನ್ನು ಮತಗಳಾಗಿ ಬದಲಿಸಲು ಇವುಗಳು ಬಹುಮುಖ್ಯ ಪಾತ್ರ ವಹಿಸಿವೆ. ಪತ್ರಿಕಾ ಸ್ವಾತಂತ್ರ್ಯವನ್ನು ರಾಜಕೀಯದ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಸಂವಿಧಾನದ ಆಶಯವನ್ನು ಮಣ್ಣುಪಾಲು ಮಾಡಿವೆ. ಈ ಬಾರಿ ಅಂತಹದ್ದೆ ಒಂದು ಉತ್ಸಾಹ ಕಂಡು ಬರುತ್ತಿದೆ. ಅದರ ಒಂದು ಸಣ್ಣ ತುಣುಕೇ ನಿನ್ನೆಯಿಂದ ಪಾಕಿಸ್ತಾನದ ಹಿಂದೆ ಬಿದ್ದ  ಮಾಧ್ಯಮಗಳ ಸಂಪಾದಕರು, ಆಂಕರ್ ಗಳ ಕೊಳಕು ಮನಸ್ಥಿತಿ. 

ಪ್ರಶ್ನಿಸದೆ ಎಲ್ಲವನ್ನೂ ಒಪ್ಪಿಕೊಳ್ಳುವವರು..!

ಲೋಕಸಭೆ ಚುನಾವಣೆಗೆ ಕಾವು ಏರುತ್ತಲೇ ಇದೆ. ಕನ್ನಡ ಖಾಸಗಿ ಮಾಧ್ಯಮಗಳಲ್ಲೂ ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಪ್ರತ್ಯಕ್ಷವಾಗಿ ಮೋದಿ ಪರವಾಗಿ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾದಾಗಿನಿಂದ ಆರಂಭವಾದ ಈ ಪತ್ರಕರ್ತರ ಪ್ರಚಾರ ಲಕ್ಷದ್ವೀಪದ ಸ್ಕೂಬಾ ಡೈವಿಂಗ್, ನವಿಲು ಗರಿ ಹಿಡಿದು ಸಮುದ್ರದೊಳಗೆ ದ್ವಾರಕೇಶ್ವರ ದರ್ಶನ, 75 ವರ್ಷ ಆದರೂ ಸೋಲದ ಮೋದಿ ಎಂಬ ಕಾರ್ಯಕ್ರಮದ ವರೆಗೂ ನಡೆಯುತ್ತಿದೆ, ನಡೆಯುತ್ತಲೂ ಇರುತ್ತದೆ. ಆದರೆ ಮಾಧ್ಯಮಗಳಿಂದ ಈ ಸಮಾಜಕ್ಕೆ ಒಳಿತಾಗುತ್ತದೆ ಎಂದು ನಂಬಿರುವ ಜನರ ಸ್ಥಿತಿ ಏನು?. 

ಹಮಾಸ್ ಗೆ ಹೋಗಿ ಯುದ್ಧ ವರದಿ ಮಾಡಿ ಜಿಹಾದಿಗಳು ಅಮಾಯಕರನ್ನು ಕೊಲ್ಲುತ್ತಿದ್ದಾರೆ ಎಂದು ತನ್ನ ಚಾನೆಲ್ ನಲ್ಲೇ ತನಗಾಗಿ ವಿಶೇಷ ಕಾರ್ಯಕ್ರಮ ರೂಪಿಸಿದ ಪತ್ರಕರ್ತ ಮಣಿಪುರ, ಕುಸ್ತಿಪಟುಗಳ ಕಣ್ಣೀರು, ಈ ದೇಶದ ಹಸಿವು ಸೂಚ್ಯಂಕ, ಕರ್ನಾಟಕಕ್ಕೆ ಬರಬೇಕಾದ ತೆರಿಗೆ, ಖಾಸಗೀಕರಣ, ದೇಶದ ಸಾಲ ಇತ್ಯಾದಿಗಳ  ಬಗ್ಗೆ ಚಕಾರು ಎತ್ತದಷ್ಟು ಧೈರ್ಯ ಕಳೆದುಕೊಂಡಿದ್ದಾರೆಯೇ?. ಪ್ರತಿಭಟನಾ ನಿರತ ರೈತರ ಹಾದಿಯಲ್ಲಿ ಮುಳ್ಳು ರಸ್ತೆ ನಿರ್ಮಾಣ, ಕೃತಕ ಗೋಡೆ, ಗೋಲಿಬಾರ್, ರೈತರಿಗೆ ನೀಡಿದ ಮಾತು ನಿರಾಕರಣೆ ಇವೆಲ್ಲದರ ಬಗ್ಗೆ ಉಸಿರು ಕೂಡ ಬಿಡದ ಗುಲಾಮಿತನ ಯಾಕೆ?. ಬರೀ ಪಾಕಿಸ್ತಾನ, ಹಿಂದೂತ್ವ ಎಂದು ಜನರನ್ನು ದಾರಿ ತಪ್ಪಿಸುವವರು ಈ ದೇಶದ ಪ್ರಧಾನಿ ಜನರ ದಾರಿ ತಪ್ಪಿಸಿದ್ದರ ವಿರುದ್ಧ ಯಾಕೆ ಇವರ  ಧ್ವನಿ ಅಡಗಿದೆ? ಸುಳ್ಳನ್ನು ಬಯಲಿಗೆಳೆದು ಜನರಿಗೆ ಸತ್ಯದ ಅರಿವು ಮೂಡಿಸಲು ಹೊರಟ ಪತ್ರಕರ್ತರನ್ನು ಸಹ ಸರ್ಕಾರವೂ ಹತ್ತಿಕ್ಕಿರುವುದು ದುರಂತವೇ.

ಮೋದಿ ಅವಧಿ ಪತ್ರಿಕಾ ಸ್ವಾತಂತ್ರ್ಯ ಹರಣದ ಅವಧಿ!

ಮೋದಿ ಅವಧಿ ಸೋ ಕಾಲ್ಡ್ ಪತ್ರಕರ್ತರಿಗೆ ಎಷ್ಟು ಲಾಭದಾಯಕವಾಗಿದೆಯೋ, ನೈಜ ಪತ್ರಕರ್ತರಿಗೆ ಅಷ್ಟೇ ನಷ್ಟವೂ ಆಗಿದೆ. ಸೋ ಕಾಲ್ಡ್ ಪತ್ರಕರ್ತರು ಪತ್ರಿಕಾ ಸ್ವಾತಂತ್ರ್ಯವನ್ನು ಪ್ರಚಾರಕ್ಕೆ ಬಳಸಿ ತಮ್ಮ ಬುಡವನ್ನು ಗಟ್ಟಿಗೊಳಿಸಿಕೊಂಡರೆ ಪತ್ರಿಕಾ ಧರ್ಮ ಹಾಗೂ ಪತ್ರಿಕಾ ಸ್ವಾತಂತ್ರ್ಯ ಪಾಲನೆ ಮಾಡುವ ಪತ್ರಕರ್ತರನ್ನ ಈ ಸರ್ಕಾರ ಸಂವಿಧಾನದ ವಿರುದ್ಧವಾಗಿ  ನಡೆಸಿಕೊಂಡದ್ದು ಈ ಅವಧಿಯಲ್ಲಿ ಕಾಣಸಿಗುತ್ತದೆ. ಹಾಗಾಗಿ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಅವನತಿಯ ದಾರಿ ತುಳಿದಿದೆ ಎಂದೇ ಹೇಳಬಹುದು.

ಮೀಡಿಯಾ ವಾಚ್‌ ಡಾಗ್ ಗ್ರೂಪ್ ಹಾಗೂ ರಿಪೋಟರ್ಸ್ ವಿದೌಟ್ ಬಾರ್ಡರ್ಸ್‌ ಸಂಸ್ಥೆಯ ವರದಿ ಪ್ರಕಾರ ವಿಶ್ವ ಪತ್ರಿಕಾ ಸೂಚ್ಯಂಕ- 180 ದೇಶಗಳ ಪೈಕಿ  ಭಾರತವು 2015 (131), 2019 (140), 2022 (150), 2023 (161) ಸ್ಥಾನ ಪಡೆದಿದೆ. ಈ ವರದಿಯಲ್ಲಿ ಭಾರತದ ಪತ್ರಿಕಾ ಸ್ವಾತಂತ್ರ್ಯ ಅವನತಿಗೆ ಮೋದಿಯ ಹಿಂದೂ ರಾಷ್ಟ್ರದ ಬೆಂಬಲಿಗರಿಂದ ಹೆಚ್ಚು ಅಸಹಿಷ್ಣುತೆ-ಗೌರಿ ಲಂಕೇಶ್ ಹತ್ಯೆ, ಕಲ್ಬುರ್ಗಿ ಹತ್ಯೆ, ಹಾಗೂ ಶುದ್ಧ ಹಸ್ತ ಪತ್ರಕರ್ತರಿಗೆ ಭಾರತವು ಅಪಾಯಕಾರಿ ರಾಷ್ಟ್ರವಾಗಿ ಕಂಡುಬಂದಿರುವುದೇ ಕಾರಣವಾಗಿದೆ ಎಂದು ಅದು ತಿಳಿಸಿದೆ. ಸರ್ಕಾರದ ವಿರುದ್ಧ ಇದ್ದ ಪತ್ರಕರ್ತರುಗಳಾದ ಸಿದ್ದಿಕಿ ಕಪ್ಪನ್, ಮೊಹಮ್ಮದ್ ಜುಬೇರ್, ತೀಸ್ತಾ ಸೆಟಲ್ವಾಡ್, ಅಜಿತ್ಓಝಾ, ಜಸ್ಪಾಲ್ ಸಿಂಘ್, ಸಜದ್ಗುಲ್ ಮುಂತಾದವರನ್ನು ಬಂಧಿಸಲಾಗಿತ್ತು. ಬಿಬಿಸಿ ಸಿದ್ಧಪಡಿಸಿದ ಮೋದಿ ಸಾಕ್ಷ್ಯ ಚಿತ್ರವನ್ನೂ ನಿರ್ಬಂಧಿಸಲಾಗಿತ್ತು.

ಇದನ್ನೂ ಓದಿ- ಎಚ್ಚರಿಕೆ, ಗಲಭೆ ಎಬ್ಬಿಸಲು ಸಂಚು ನಡೆಸುತ್ತಿದ್ದಾರೆ ಮೀಡಿಯಾ ಭಯೋತ್ಪಾದಕರು!

ದೇಶದ ಸಂವಿಧಾನವು ವಿವರಿಸಿದಂತೆ, ಮಾಧ್ಯಮ ಪಕ್ಷಪಾತ ಅಥವಾ ತಪ್ಪುದಾರಿಗೆಳೆಯುವ ಮಾಹಿತಿಯನ್ನು ಕೆಲವು ಸಾಂವಿಧಾನಿಕ ತಿದ್ದುಪಡಿಗಳ ಅಡಿಯಲ್ಲಿ ನಿರ್ಬಂಧಿಸಲಾಗಿದೆ. ಆದರೂ ಈ ಎಲ್ಲಾ ಕಾನೂನುಗಳನ್ನು ಮೂಟೆಕಟ್ಟಿ ಸರ್ವಾಧಿಕಾರ ಧೋರಣೆ ನಿರ್ಮಾಣ ಮಾಡಲಾಗಿದೆ. ಪತ್ರಕರ್ತರು ತಮ್ಮ ಪತ್ರಿಕಾ ಧರ್ಮವನ್ನು ಮರೆತು ಧರ್ಮಗಳ ನಡುವೆ ಕೋಮು ವಿಷ ಬೀಜ ಬಿತ್ತುವ ಗುತ್ತಿಗೆ ಪಡೆದಿದ್ದಾರೆ. ಇದು ಇಂದಿನ ಯುವಕರು ಹಾಗೂ ಪತ್ರಕರ್ತರಾಗಬೇಕೆಂದು ಬಯಸುವವರ  ಮೇಲೆ ಕೆಟ್ಟ  ಪ್ರಭಾವ ಬೀರುವುದಂತೂ ಖಂಡಿತ. ಇದರಿಂದ ಮತ್ತೆ ಈ ಸಮಾಜವು ಯುವ ಪತ್ರಕರ್ತರ ರೂಪದಲ್ಲಿ ಭಯೋತ್ಪಾದನೆಗೆ ಕೊಡುಗೆ ನೀಡಬಹುದು! ಪಿ.ಲಂಕೇಶ್, ಅಂಬೇಡ್ಕರ್, ಗೌರಿ ಲಂಕೇಶ್, ವಡ್ಡರ್ಸೆ ರಘುರಾಮ್ ಶೆಟ್ಟಿ ಮುಂತಾದವರಂತೆ ಪತ್ರಿಕೋದ್ಯಮವನ್ನು ಒಂದು ಸಾಮಾಜಿಕ ಜವಾಬ್ದಾರಿ ಎಂಬಂತೆ ಗ್ರಹಿಸಿ ಮುಂದೆ ಸಾಗಬೇಕಾದುದು ಇಂದಿನ ತುರ್ತು. ಆಗ ಮಾತ್ರ ಇಂತಹ ಪಾಕಿಸ್ತಾನ, ಧರ್ಮ, ವ್ಯಕ್ತಿಪೂಜೆ, ಹಿಂದೂತ್ವದಂತಹ ಅಜೆಂಡಾಗಳಿಂದ ಹೊರಬಂದು ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿ ಉಳಿಯಲು ಸಾಧ್ಯ. 

ಆಕಾಶ್.ಆರ್.ಎಸ್.

ಪತ್ರಕರ್ತ

More articles

Latest article