Sunday, July 14, 2024

ರಾಜ್ಯದ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ದೇವೇಗೌಡರ ಪಾತ್ರ ದೊಡ್ಡದು: ಬಸವರಾಜ ಬೊಮ್ಮಾಯಿ

Most read

ಬೆಂಗಳೂರು: ರಾಜ್ಯದ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪಾತ್ರ ದೊಡ್ಡದು. ಕನ್ನಡದ ಬಾವುಟವನ್ನು ದೆಹಲಿಯ ಕೆಂಪು ಕೋಟೆಯ ಮೇಲೆ ಹಾರಿಸಿದ ಏಕೈಕ ಕನ್ನಡಿಗ ದೇವೇಗೌಡರು, ಅವರ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಮಾಜಿ ಪ್ರಧಾನಿ ದೇವೇಗೌಡರ ಕುರಿತು ನೇ ಭ ರಾಮಲಿಂಗ ಶೆಟ್ಟಿ ಅವರು ಬರೆದ ಮಣ್ಣಿನ ಮಗ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರಾಮಲಿಂಗ ಶೆಟ್ಟಿ ಬರೆದಿರುವ ಮಣ್ಣಿನ ಮಗ, ನಾನು ಕಂಡಂತೆ ಮತ್ತು ನಾಡು ಕಂಡಂತೆ ಇದು ಒಂದು ರೀತಿಯಲ್ಲಿ ಕರ್ನಾಟಕದ ಇತಿಹಾಸ ಕೃಷಿ ‌ನೀರಾವರಿ, ಸಾಮಾಜಿಕ ಬದುಕನ್ನು ಬಿಂಬಿಸುವ ಪುಸ್ತಕ ಇದಾಗಿದೆ ಎಂದು ಹೇಳಿದರು.

ದೇವೇಗೌಡರ ಬಗ್ಗೆ ಎಷ್ಟೇ ಪುಸ್ತಕ ಬಂದರೂ ಅವರ ಬದುಕಿನ ಬಗ್ಗೆ ಇನ್ನೊಂದು ಪುಸ್ತಕ ಬರೆಯಬೇಕು ಎನ್ನುವಷ್ಟು ವಿಸ್ತಾರವಾದ ಬದುಕು ಅವರದಾಗಿದೆ. ಎಲ್ಲರನ್ನು ಸ್ಪರ್ಷಿಸಿದಂತ ಬದುಕು ಅವರದು. ಅತ್ಯಂತ ವಿಶಿಷ್ಟ ಮತ್ತು ವಿಚಿತ್ರ ಬದುಕು ಅವರದು. ಅವರು ಸ್ಥಾನ ಮಾನ ಯಾವುದಕ್ಕೂ ತಲೆ‌ಕೆಡಿಸಿಕೊಳ್ಳದೇ ಹೋರಾಟ ಮಾಡಿದವರು. ವಿಚಿತ್ರ ಏನೆಂದರೆ ಅವರ ಕೀರ್ತಿಗಿಂತ ಸ್ಪೂರ್ತಿ ದೊಡ್ಡದಿದೆ.

ನಾನು ಅವರ ಜೊತೆಗೆ ಬಹಳ ಹತ್ತಿರದಿಂದ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅವರ ಹೋರಾಟ, ಅಧಿಕಾರದ ದಿನಗಳು, ಅಧಿಕಾರ ಇಲ್ಲದಿರುವ ದಿನಗಳು ಎಲ್ಲವನ್ನು ಹತ್ತಿರದಿಂದ ನೋಡಿದ್ದೇನೆ. ನಾನು ಅದೃಷ್ಟವಂತ. ನಾನು ಅವರಿಗೆ ಕುಮಾರಸ್ವಾಮಿಗಿಂತಲೂ ಹತ್ತಿರ ಇದ್ದೆ ಎಂದು ಹೇಳಿದರು.

ದೇವೇಗೌಡರದು ಕರ್ಣನ ವ್ಯಕ್ತಿತ್ವ. ಅವರು ಆರವತ್ತು ವರ್ಷದ ರಾಜಕಾರಣದಲ್ಲಿ ಐದಾರು ವರ್ಷ ಮಾತ್ರ ಅಧಿಕಾರ ಮಾಡಿದ್ದಾರೆ. ಉಳಿದ ಅವಧಿಯಲ್ಲಿ ದೇಶ, ರಾಜ್ಯದ ಹಿತಕ್ಕಾಗಿ ಹೋರಾಟ ಮಾಡುತ್ತ ಬಂದಿದ್ದಾರೆ. ಹಠ, ಛಲ, ಸವಾಲು ಸ್ವೀಕರಿಸುವ ಛಾತಿ ಒಂದು ಕಡೆ ಇದ್ದರೆ, ಅಧಿಕಾರ ಇದ್ದಾಗ, ಹೊಲದಲ್ಲಿ ಕೆಲಸ ಮಾಡುವ ರೈತ, ದುಡಿಯುವವರ ಬದುಕಿಗೆ ಧ್ವನಿಯಾಗಿ ನಿಂತಿದ್ದರು ಎಂದು ಹೇಳಿದರು.

ದೇವೇಗೌಡರು ಸಣ್ಣ ವಯಸ್ಸಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದರು.24 ಜನ ಶಾಸಕರನ್ನು ಇಟ್ಟುಕೊಂಡು ಸರ್ಕಾರವನ್ನು ನಡುಗಿಸಿದ್ದರು.  ಅವರು ಅಧಿಕಾರಕ್ಕೆ ಬಂದ ಮೇಲೆ ನೀರಾವರಿ ಸಚಿವರಾದರು, ಪಕ್ಕದ ರಾಜ್ಯಗಳು ನೀರಾವರಿಗೆ ಆದ್ಯತೆ ಕೊಟ್ಟಷ್ಟು ನಾವು ಕೊಡಲಿಲ್ಲ‌. ಇದು ಅವರ ಮನಸಿಗೆ ವ್ಯಥ್ಯೆ ಉಂಟು ಮಾಡಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಬೆಳಿಗ್ಗೆಯಿಂದ ರಾತ್ರಿ ಹತ್ತರವರೆಗೆ ಸುಧೀರ್ಘ ಸಭೆ ನಡೆಸಿದರು. ಭೂಸ್ವಾಧೀನ ಪ್ರಕ್ರಿಯೆ ಸಮಸ್ಯೆ ಈಗಲೂ ಇದೆ. ಅವರು  ನಾರಾಯಣಪುರ ಕಾಲುವೆ ನಿರ್ಮಾಣವನ್ನು ಅತಿ ವೇಗದಲ್ಲಿ ಮಾಡಿದರು.

ರಾಜಕಾರಣದಲ್ಲಿ ಯಾವುದಾದರು ಕೆಲಸ ಆಗಬೇಕು ಅಂತ‌ ಇದ್ದರೆ ಅದು ಆಗಬಾರದು ಅಂತ ಬಹಳ ಜನರಿಗೆ ಇರುತ್ತದೆ. ಅವರ ಮೇಲೆ ತನಿಖೆಗೆ ಆಗ್ರಹಿಸಿದ್ದರು. ದೇವೇಗೌಡರು ಅದನ್ನು ಸಿಬಿಐ ತನಿಖೆಗೆ ವಹಿಸಿಸಿದ್ದರು. ತನಿಖೆಗೆ ಆಗ್ರಹಿಸಿದ್ದ ಪಕ್ಷ ಅವರ ವಿರುದ್ದ ತನಿಖೆ ಆಗತ್ಯವಿಲ್ಲ ಎಂದು ವಾಪಸ್ ಪಡೆದರು. ದೇವೇಗೌಡರು ಪ್ರಧಾನಿಯಾರ ಮೇಲೆ ಕೇಂದ್ರದಿಂದ ಎಐಬಿಪಿ ಯೋಜನೆ ಮೂಲಕ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನ ಕೊಡಿಸಿದ್ದರು. ಅವರನ್ನು ಉತ್ತರ ದಕ್ಷಿಣ ಎಂದು ವಿಭಾಗಿಸಿದ್ದಾರೆ. ಕಾವೇರಿಯಿಂದ ಬೆಂಗಳೂರಿಗೆ 9 ಟಿಎಂಸಿ ನೀರು ತರುವಲ್ಲಿ ಕಾರಣೀಕರ್ತರಾಗಿದ್ದಾರೆ ಎಂದು ಹೇಳಿದರು.

ಅವರು ಸಿಎಂ ಆಗಿದ್ದಾಗ ಪ್ರಮುಖ ಪತ್ರಿಕೆಯಲ್ಲಿ ವಿದ್ಯುತ್ ಅಭಾವದ ಕುರಿತು ವರದಿ ಬಂದಿತ್ತು. ಆಗ ದೇವೇಗೌಡರು ದೆಹಲಿಯಲ್ಲಿದ್ದರು, ಅಲ್ಲಿಂದ ನೇರವಾಗಿ ಮುಂಬೈಗೆ ಹೋಗಿ ಬಾಳಾಸಾಹೇಬ್ ಠಾಕ್ರೆಯವರನ್ನು ಭೇಟಿ ಮಾಡಿ, ವಸ್ತುಸ್ಥಿತಿ ಹೇಳಿದರು. ಬಾಳಾಸಾಗೇಬ್ ಠಾಕ್ರೆ ಅವರು ಮಹಾರಾಷ್ಟ್ರ ಸರ್ಕಾರದ ಆದೇಶ ರದ್ದು ಮಾಡಿಸಿ ಕರ್ನಾಟಕಕ್ಕೆ ವಿದ್ಯುತ್ ಸರಬರಾಜು ಮಾಡಲು ಸೂಚಿಸಿದರು. ದೇವೇಗೌಡರು ಸಂಬಂಧಗಳನ್ನು ರಾಜ್ಯದ ಹಿತಕ್ಕೆ ಬಳಸಿಕೊಳ್ಳುತ್ತಿದ್ದರು.

ಹುಬ್ಬಳ್ಳಿ ಈದ್ಗಾ ಮೈದಾನದ ಸಮಸ್ಯೆ ಬಗೆ ಹರಿಸಲು ಅಧಿಕಾರ ಮತ್ತು ಅಧಿಕಾರಿಗಳನ್ನು ಹೊರಗಿಟ್ಟು ಸಮಸ್ಯೆ ಬಗೆಹರಿಸಬೇಕು ಅಂತ ಹೇಳಿ, ದೇವೇಗೌಡರು  ನನ್ನನ್ನು ಅಲ್ಲಿಗೆ ಕಳಿಸಿ, ಅಂಜುಮನ್ ಇಸ್ಲಾಂನವರು ರಾಷ್ಟದರ ಧ್ವಜ ಹಾರಿಸುವಂತೆ ಒಪ್ಪಿಸಿದಂತ ಧೀಮಂತ ನಾಯಕ ದೇವೇಗೌಡರು. ಅಂತ ದೊಡ್ಡ ಸಮಸ್ಯೆಯನ್ನು ದೇವೇಗೌಡರು ಚಾಣಾಕ್ಷತನದಿಂದ ಬಗೆ ಹರಿಸಿದ್ದರು. ಅನೇಕ ಜ್ವಲಂತ  ಸಮಸ್ಯೆಗಳನ್ನು ಬಗೆ ಹರಿಸುವುದರಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಮಂಜುನಾಥ್  ಅವರ ಕುರಿತು ಮಾತನಾಡಿದ, ಡಾ. ಮಂಜುನಾಥ ಅವರು ನಿರಂತರ ದಣಿವರಿಯದೇ ಸುರಿಯುವ ಮಳೆಯಂತೆ ಇದ್ದಾರೆ. ನಗುನಗುತ್ತಲೇ ಹಲವಾರು ಜೀವಗಳನ್ನು ಉಳಿಸಿದ ವ್ಯಕ್ತಿ. ಈಗಿನ ಕಾರ್ಪೊರೇಟ್ ಜಗತ್ತಿನಲ್ಲಿ ಮಂಜುನಾಥ ಅವರು ಮನಸು ಮಾಡಿದ್ದರೆ ದೊಡ್ಡ ಶ್ರೀಮಂತರಾಗಿತ್ತಿದ್ದರು. ಅವರು ಜನರನ್ನು ಗಳಿಸಿ ಶ್ರೀಮಂತರಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ,  ಕಸಾಪ ಅಧ್ಯಕ್ಷ ಮಹೇಶ ಜೋಷಿ, ಸಾಹಿತಿ ಹಂಪಾ ನಾಗರಾಜಯ್ಯ, ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ್, ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಕೃತಿಕಾರ ರಾಮಲಿಂಗ ಶೆಟ್ಟಿ ಹಾಜರಿದ್ದರು.

More articles

Latest article