ಕವನ | ಹೀಗೊಂದು ಬೀದಿ..

Most read

ಹೀಗೊಂದು
ಬೀದಿ
ಕಲ್ಪಿಸಿಕೊಳ್ಳುವುದಕ್ಕೆ ಹೋಗಬೇಡಿ
ಕಾಣುವದನ್ನ ಕಾಣುವ ಹಾಗೆ ನೋಡಿ

ಚಪ್ಪಲಿ
ಹೊಲಿಯುವವನದ್ದೋ, ಮಾರುವವನದ್ದೋ
ಮುರುಕಲು ಗುಡಿಸಲಿನಂತ ಅಂಗಡಿ

ಅನತಿ ದೂರದಲ್ಲಿ
ಜನರೇ ಪೂಜಿಸಲ್ಪಟ್ಟು
ಬೇಡವೆಂದು ತಂದಿಟ್ಟಿರುವ ಪೋಟೋಗಳಿರುವ
ಒಂದು ಮರದ ಕಟ್ಟೆ

ಅದಕ್ಕಾತುಕೊಂಡಿರುವ
ದರವೇಶಿ
ತಿರುಕನೊಬ್ಬನ ದರ್ಗಾ

ಪಕ್ಕದಲ್ಲೇ
ಮೇರಿ ಮಾತೆಯದ್ದೋ,
ಗತಿಸಿಹೋದ
ಮೆಚ್ಚಿನ ನಟರದ್ದೋ ಪ್ರತಿಮೆ.

ಬೀದಿಯಲ್ಲಿ
ಓಡಾಡುವ ಜನರಿಗೆ
ಒತ್ತರಿಸಿಕೊಂಡು
ಬಂದ ಮೂತ್ರ

ಹೆಚ್ಚೆಂದರೆ ಎಲ್ಲಿ ಮಾಡಿಯಾರು?

ಮುರುಕಲು
ಗುಡಿಸಲಿನ ಮುಂದಲ್ಲದಿದ್ದರೂ
ಅಕ್ಕ………………….
ಹಿಂದೆಯಂತೂ ಪಕ್ಕ

ನಡೆದಾಡುವ
ನೆಲ
ಮನುಷ್ಯರಿಗೆ

ಪಶು-ಪಕ್ಷಿ,
ಖಗ-ಮೃಗ
ಕ್ರಿಮಿ-ಕೀಟ

ಹೆಚ್ಚೆಂದರೆ
ಕೆಲ ಸಾಂಕ್ರಾಮಿಕ
ರೋಗ-ರುಜಿನಗಳಿಗೆ

ಹುಟ್ಟಿದಷ್ಟೇ
ಸಲೀಸಾಗಿ
ಸೂರ್ಯ ಮುಳುಗುವಾಗ

ಜನರೆಂದು
ಮನುಷ್ಯರಲ್ಲೇ
ಬೇರ್ಪಟ್ಟ ಗುಂಪು

ದೀಗಿ, ಬುಡ್ಡಿದೀಪ
ಕಂದೀಲು
ದೊಂದಿ

ಹಚ್ಚಲು
ತಯಾರಿಗೊಳಿಸುತ್ತಾ
ಅಣಿಯಾಗಲು ಹೆಣಗುವಾಗ

ಚಂದ್ರ ಮೂಡಿ
ನಕ್ಷತ್ರಗಳು
ಗೊಳ್ಳೆಂದು ನಗುತ್ತವೆ

ಜಹಾಂಗೀರ್ MS

More articles

Latest article