ಅಂದ್ಹಾಂಗ ಈ ಸಲ ನಿಮ್ಮೂರ ಜಾತ್ರೆಯಲ್ಲಿ ಚಂದ್ರಭಾಗಿ, ಸುಜಿ, ವಿಜಿ, ಮಾನಂಗಿ, ಮಾಳಿ ನನ್ನ ಹಳೆಯ ಗೆಳತಿಯರೆಲ್ಲ “ಸಿಕ್ಕಿದ್ರಾ” ಅಂತ ಕೇಳಿ ಅವಳು ಕಳಿಸಿದ ಮೆಸೆಜ್ ಓದಿ ನನಗೆ ಉತ್ತರಿಸುವ ವ್ಯವಧಾನ ಇರಲಿಲ್ಲ. ಅದೇಕೋ ನನಗೆ ಅವಳ ಬಗ್ಗೆ ಮೊದಲಿನ ಆಸ್ಥೆ, ಆಸಕ್ತಿ ಉಳಿಯದಿರಲು ನನ್ನಲ್ಲಿ ಅವಳ ಕುರಿತಾದ ಮತ್ಸರ, ಹೊಟ್ಟೆಕಿಚ್ಚು ಹೊರತಾಗಿ ಇನ್ನೇನು ಇದ್ದೀತು.? ಹಾಗಂತ ಅಂತರ್ಮುಖಿಯಾಗಿ ನನ್ನೊಳಗಿನ ಸೂಕ್ಷ್ಮತೆಯ ಒಳಗನ್ನು ತಲಾಷ್ ಮಾಡತೊಡಗಿದೆ.
ಪ್ರಾಯಶಃ ಹೊಟ್ಟೆಕಿಚ್ಚಿನ ಹೊರತಾಗಿ ಅಲ್ಲಿ ಬೇರೆ ಇನ್ನೇನು ಸಿಗಲಿಲ್ಲ. ಇತ್ತೀಚೆಗೆ ಅವಳು ತನ್ನ ಗಂಧರ್ವ ಸ್ವರದ ಗಝಲ್ ಗಾಯನದ ಜತೆಗೆ ಜವಾರಿ ಬರಹದಲ್ಲಿ ಪೊಗದಸ್ತಾದ ಹೆಸರು ಮಾಡುತ್ತಿರುವುದನ್ನು ಕಂಡರೆ ವಾರಗೆಯ ಕೆಲವರಿಗಾದರೂ ವೊಮಿಟಿಂಗ್ ಜಲಸ್ಸು. ಅದೇಕೋ ಎಲ್ಲರಿಗಿಂತ ನನ್ನಲ್ಲಿ ತುಸು ಹೆಚ್ಚಿನ ಸೆನ್ಷೇಷನ್. “ನಿನಗೆ ಬರೆಯುವುದನ್ನು ಕಲಿಸುತ್ತೇನೆ. ನನಗೆ ಹಾಡುವುದನ್ನು ಕಲಿಸುತ್ತಿಯಾ” ಅಂತ ಒಮ್ಮೆ ಕೇಳಿದ್ದೆ. ಎಡ್ರಾಮಿಯ ರಾಮತೀರ್ಥ ಮಂಟಪದ ಚಂದ್ರಲಾಂಬಾ ಸನ್ನಿಧಿಯಲಿ ಈಚೆಗೆ ಜರುಗಿದ ಕವಿಗೋಷ್ಠಿ ವೇದಿಕೆಯ ನನ್ನ ಪಕ್ಕದಲ್ಲೇ ಕುಂತ ಅವಳನ್ನು ಪುಸಲಾವಣೆಯ ಸ್ವರದಲ್ಲಿ ಮತ್ತೊಮ್ಮೆ ಕೇಳಿದ್ದೆ.
ಅಯ್ಯೋ ದಡ್ಡ, ಅವು ನಿನ್ನಂಥವರಿಗೆ ಕಲಿಸುವ ವಿದ್ಯೆಗಳಲ್ಲ ಕಣೋ. ದೈವಕೃಪೆ ಅನುಗ್ರಹಿಸುವ ಪ್ರತಿಭಾನಗಳೆಂದು ಏಕವಚನದಲ್ಲೇ ಉಪದೇಶಾಮೃತ ಉಸುರಿದ್ದಳು. ಒಮ್ಮೊಮ್ಮೆ ಸಾರ್ವಜನಿಕವಾಗಿ ಹಾಗೆ ನನ್ನನ್ನು ಆಕೆ ಏಕವಚನದಲ್ಲಿ ಸಂಭಾಷಿಸುವುದು ಸಲುಗೆಯೇ ಆದರೂ ಅದು ನನಗೆ ಹೆಚ್ಚು ಇಷ್ಟವಾಗುತ್ತಿರಲಿಲ್ಲ. ಅದೇನೋ ಅವತ್ತಿನ ಕವಿಗೋಷ್ಠಿಯ ನನ್ನ ಸಾಲುಬದ್ಧ ಸಾನೆಟ್ಟಿಗೆ ಆಕೆಯೇ ಪ್ರೀತಿಪಟ್ಟು ರಾಗ ಸಂಯೋಜಿಸಿ ಹಾಡಿದ್ದಳು. ಅವತ್ತು ಅವಳು ಸೆರಗು ತುಂಬಾ ಮುತ್ತುಗಳನ್ನೇ ತುಂಬಿ ತಂದಂತಿತ್ತು. ಅಂತೆಯೇ ನನ್ನ ಸಾನೆಟ್ಟಿಗಿಂತ ಶಿವಕಾಂತಿಯ ಗಾಯನಕ್ಕೆ ಮಿತಿಮೀರಿದ ಮೆಚ್ಚುಗೆಯ ಮಾತು ಮತ್ತು ಚಪ್ಪಳಿಗೆ ದೊರಕಿದ್ದವು. ಅಂದು ನನಗೂ ಹಾಲುಹುಗ್ಗಿ ಉಂಡ ಖಂಡುಗ ಖುಷಿಯೇ ಆಗಿತ್ತು. ಆದರೆ ಆನುಷಂಗಿಕವಾಗಿ ಎಂಬಂತೆ ನನ್ನಲ್ಲಿ ಅರ್ಧಪ್ರೀತಿ ಇನ್ನರ್ಧ ಅಸೂಯೆಯ ಅಸಿಡಿಟಿ ಸೃಜಿಸಿತ್ತು. ಅರ್ಧಪ್ರೀತಿಯೇನೋ ವಿನಾಕಾರಣದ್ದು. ಆದರೆ ಮಾತ್ಸರ್ಯವೂ ಹಾಗೇ ಇತ್ತು. ಅದು ತಪ್ಪೆಂಬುದು ತಿಳಿದಿತ್ತು. ತಪ್ಪೆಂದು ತಿಳಿದ ಮೇಲೂ ಅದನ್ನು ಸರಿಪಡಿಸುವ ಬದಲು ಹಾಗೇ ಮುಂದುವರೆಸುವುದು ತಪ್ಪಲ್ಲವೇ.? ಗೊತ್ತಿಲ್ಲ, ಅಂತಹ ವಿಘ್ನಸಂತಸದ ತಪ್ಪೆಸಗುವುದರಲ್ಲೇ ಒಂದು ತೆರದ ಖುಷಿ.
ಶಿವಕಾಂತಿ ನನಗಿಂತ ಚಿಕ್ಕವಳು, ವಯೋಮಾನದಲ್ಲಿ. ಸಜ್ಜೆಕಾಳಿನ ಬಣ್ಣದ ಸುಮಧುರ ಚಹರೆಯ ಚೆಲುವೆ. ಅವಳು ತನ್ನ ಸಿರಿಕಂಠದ ತುಂಬೆಲ್ಲ ಸಂಮೋಹತನವೇ ತುಂಬಿಕೊಂಡ ಸುಂದರಿ. ಬಾಲ್ಯದಲ್ಲೇ ಕೊಂಚವೇ ಕೊಂಚ ಉಬ್ಬು ಹಲ್ಲು ಮತ್ತು ಉಗ್ಗಿನ ಅಂತಃಕರಣ ಅವಳನ್ನು ತಬ್ಬಿಕೊಂಡಿದ್ದವು. ಅವಳ ಸೋದರಮಾವ ಶ್ರೀಕಾಂತ ” ನೀನು ಉಬ್ಬಿ ಮೇಲಾಗಿ ಉಗ್ಗಿ, ನಿನ್ನನ್ನು ಯಾರೂ ಲಗ್ನವಾಗಲ್ಲ. ನನ್ನ ಮುಪ್ಪಿನ ಮುನ್ನದ ಏರು ಪ್ರಾಯದಲ್ಲಿ ನಾನೇ ನಿನಗ ತಾಳಿ ಕಟ್ತೀನಂತ” ಅವಳ ಗುಳಿಗಲ್ಲ ಹಿಂಡಿ ನೆಕರಿ ಮಾಡ್ತಿದ್ದ. ಎರಡರಿಯದ ಹುಚಪ್ಯಾಲಿಯಂತೆ ತನ್ನ ನೀಲಿ ಗಗ್ಗರಿ ಮತ್ತು ಹಳದಿ ಪೋಲಕಕ್ಕೆ ಗೊಣ್ಣೆ ಒರೆಸಿಕೊಳ್ಳುತ್ತ ಮಾವನನ್ನು ಗೋಳು ಹೊಯ್ದು ಕೊಳ್ಳುತ್ತಿದ್ದಳು ಪೋರಿ ಶಿವಕಾಂತಿ.
* * *
ಹೌದು, ಅಲ್ಲೊಂದು ಅವಿನಾಭಾವ ಸಂಗಮವಿತ್ತು. ಅದು ಕೇವಲ ಮೂರು ನದಿ, ಹಳ್ಳಗಳ ಸಂಗಮ ಆಗಿರಲಿಲ್ಲ. ಹಲವು ಸ್ನೇಹ, ಪ್ರೀತಿ, ಪ್ರೇಮಾಂಕುರಗಳ ಅನುರಾಗ ಸಂಗಮ ಅದಾಗಿತ್ತು. ವಾತ್ಸಲ್ಯದ ಕಡಲಿನಂತಹ ಶಿವಕಾಂತಿಯ ಸಮಕ್ಷಮವೆಂದರೆ ಅಂತಃಕರಣವೇ ಮೈವೆತ್ತ ಒಂದು ಮಹೋನ್ನತ ಅನುಸಂಧಾನ. ಸಮೃದ್ಧ ಸಾಕ್ಷಾತ್ಕಾರವಲ್ಲದೆ ಬೇರೇನು ಆಗಿರಲಿಲ್ಲ. ಅಷ್ಟಕ್ಕೂ ಈ ಬಾರಿ ಅವಳು ಸಿಕ್ಕೆ ಸಿಗುವಳೆಂಬ ಖಾತರಿ ಅಲ್ಲ, ಸಣ್ಣದೊಂದು ದ್ಯಾಸವೂ ಸಹಿತ ಇರಲಿಲ್ಲ. ಭಾವದ್ರವ್ಯದಂತಹ ಶಿವಕಾಂತಿ ಸಿಗುವುದೆಂದರೆ ಸುಮ್ಮನಲ್ಲ. ಅವಳ ಹದಿ ಹರೆಯದ ದನಿಯಲಿ ” ಹುಟ್ಟಿ ಬೆಳೆದ ಹಳ್ಳಿ ಮಣ್ಣಿನ ಹಾಡು ಹುಟ್ಟಿದ ” ಸಂಭ್ರಮ. ಜತೆ ಜತೆಯಲಿ “ಚುಕ್ಕಿಯೊಳಗಣ ಕನಸುಗಳು ಕುಣಿದಾಡಿದಾಂಗ ಅವಳ ನನ್ನಸಂಗ” ಎಂದು ಅದನ್ನು ಸಗರನಾಡಿನ ಕವಿಯೋರ್ವ ಕವಿತೆ ಕಟ್ಟಿ ಹಾಡಿದ್ದರು. ಹೌದು ಅವಳ ಮಧುರ ಕಂಠಕ್ಕೆ ಮಾರು ಹೋಗದವರೇ ಇರಲಿಲ್ಲ.
ಶಿವಕಾಂತಿಯ ಕುಸುಮ ಬಾಲ್ಯದಲ್ಲಿ ಘಟಿಸಿದ ಹತ್ತಾರು ಪುಳಕ ಸದೃಶದ ಸಂಗತಿಗಳನ್ನು ಅವರವ್ವ ಸುಗಲಾಬಾಯಿ ರುಚಿಕಟ್ಟಾಗಿ ಹೇಳುತ್ತಿದ್ದಳು. ಅದನ್ನೇ ಕೇಳಿ ಬರೆದರೆ ಅದೇ ಸೊಗಸಾದ ಕತೆ, ವಾಂಛಲ್ಯಭರಿತ ಕಾದಂಬರಿಯೇ ಆಗಬಲ್ಲದು. ಶಿವಕಾಂತಿಯೋ ಗೀತ ಕಥನದ ಮಹಾ ಮಂಡಲೇಶ್ವರಿ. ತನ್ನ ಗಂಡನೊಂದಿಗಿನ ಪುಂಡಪ್ರೀತಿ ಹಂಚಿಕೊಂಡು ಬರೆದರೆ ಸಾಕಿತ್ತು. ಅದುವೇ ಸ್ತ್ರೀವಾದಿ ಚಿಂತನೆಯ ವೈಚಾರಿಕ ಹೊತ್ತಗೆಯೇ ಆಗುತ್ತಿತ್ತು. ಆದರೆ ಅದನ್ನು ಬೇರೊಂದು ಹೆಣ್ಣಿನ ಮೇಲೆ ಆರೋಪಿಸಿ ಬರೆದು ಹೆಸರು ಮಾಡುವಲ್ಲಿ ಅವಳು ಪರಿಣತಿ ಹೊಂದಿದ್ದಳು. ಒಮ್ಮೊಮ್ಮೆ ಸರೀಕರ ಮೇಲಿನ ಸವಾಲಿನಂತೆ ತನ್ನ ಅಂಕಣ ಬರಹದಲ್ಲಿ ಬರೆಯದೇ ಬಿಡುತ್ತಿರಲಿಲ್ಲ. ಒಮ್ಮೆಯಂತೂ ತನ್ನದು ನಿಮಿರುದೋಷದ ಬರಹವಲ್ಲ ಎಂದು ತನ್ನ ಗೆಳತಿ ಯಶೋಮತಿಗೆ ಅಣಕಿಸಿ ಬರೆದದ್ದು ಸಾಮಾಜಿಕ ತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು .
ಎಷ್ಟು ತೊಳೆದರೂ ಜಳ ಜಳವಾಗದ ಮನದ ಮೈಲಿಗೆಯದು. ಮೈ ತೊಳೆಯಬಲ್ಲ ಜುಳು ಜುಳು ತಿಳಿನೀರು ಮನದೊಳಗಣ ಕೊಳಕನು ತೊಳೆಯಲಾರದು. ಭೋರ್ಗರೆವ ಬಹಿರಂಗವು ಅಂತರಂಗದ ಹೊಲಸರಿತು ತೊಳಕೊಳ್ಳುವ ಪರಿಯನರಿಯದೇ ಹೋಯಿತು ಸಬಕಾರ. ನಿರ್ಗುಣಿಯ ಸಹಕಾರದೆದುರು ಬಹುತೇಕ ತ್ಯಾಗ ಅಂತಃಕರಣವೇ ಕರಗಿ ಹೋದವು.
* * *
ಚಿತ್ರ : ಗೂಗಲ್
ಮದಹೋಷಭರಿತ ಮಹಂತರ ಒಡಪಿನ ಪಂಡಿತೆ. ಶರಣಾರತಿ ಪದ ವಚನಗಳನ್ನು ಹಾಡುವಲ್ಲಿ ಅವಳಿಗೆ ಅವಳೇ ಸಮ. ಸಲಿಲಧಾರೆಯ ಉನ್ಮಾದ ಹುಟ್ಟಿಸುವ ಸ್ವರ ಸಮರ್ಥಳು. ಭಾವಕೋಶ ಬತ್ತದ ಹಾಗೆ ಕಾಪಿಡುವ ಮನುಷ್ಯ ಪ್ರೀತಿ ಅವಳದು. ಎದೆಯ ದಾಸವಾಳಗಳ ತುಂಬಾ ಭಾವ ತುಂಬಿದ ಬಯಕೆಗಳನ್ನು ಆಗಾಗ ಬರಕಿ ಖಾಲಿ ಮಾಡಿಕೊಂಡ ಹಳಾರ ನನಗೆ. ಹಾಗೆ ಖಾಲಿಯಾದಾಗಲೇ ಮತ್ತೆ ಭರತಿಯಾಗುವ ಉಮೇದು. ಮತ್ತೆ ಮತ್ತೇರಿ ನೋಡಿದರೆ ವಿಮಲ ಸರೋವರದಲ್ಲೆಲ್ಲ ಹಸಿವಿನೆಸಳುಗಳು. ಬಾ ಇಲ್ಲಿ ಸಂಭವಿಸೆಂಬ ಚೀತ್ಕಾರಗಳು. ಜೀವದೊಡಲು ತುಳುಕುವ ಭಾವವಿಸ್ತಾರದ ಬಯಲು. ಬಯಲನು ಅಳೆಯುವ ಮಾಪನದ ತುಂಬ ಬಯಲು ತುಂಬಿತ್ತು. ಮಾಪನದ ಬಯಲು ಖಾಲಿ ಮಾಡುವುದು ಹೇಗೆ? ಬಯಲು ಅಳೆಯುವುದಾದರೂ ಹೇಗೇ? ಅದೋ ರಹಸ್ಯದೊಳೈಕ್ಯದ ಚಿತ್ತಸುಪ್ತಿಯ ಚಿದ್ವಿಲಾಸ. ಸುಕೋಮಲ ಪ್ರವೇಶಕ್ಕೆ ಕಣ್ದಾವರೆಯ ಬಾಗಿಲು ತೆರೆದು ಕೈಲಾಸವೇ ತೋರಿದಳು. ಶರಣು ಸಮರ್ಪಣೆಯ ಸೋಹಂಭಾವ.
ರಾತ್ರಿಯ ಎರಡು ಗಂಟೆ ಹೊಡೆದರೂ ಅವಳ ಗೀತಕಥನದ ಮಧುರಾಲಾಪಗಳು ಭೈರವಿ ತಲುಪಲೇ ಇಲ್ಲ. ಕಣ್ಣೊಳಗಿನ ಗೊಂಬಿ ಎದೆಯಾಗ ನಟ್ಟಂತೆ ಅವನು ಅವಳನ್ನು ಆಕ್ರಮಿಸಿಕೊಂಡಿದ್ದ. ಅವಳು ಸಹಿತ ತಾನು ಹೆಂಡತಿ ಮತ್ತು ಹೆಣ್ತನ ಪ್ರವೇಶಿಸುವುದಾದರೆ ಇಂಥವನೊಂದಿಗೆ ಮಾತ್ರ. ಅಂದುಕೊಂಡಿದ್ದಳು. ಇಬ್ಬರ ಸಂಕಲ್ಪ ದೃಢಿಸಲಿಲ್ಲ. ಅವನಿಗೆ ದಕ್ಕಿದವಳು ಅವಳಲ್ಲ, ಅವಳಿಗೆ ಸಿಕ್ಕವನು ಅವನಲ್ಲ. ಬದಲಿಗೆ ಸಿಕ್ಕವನಲ್ಲಿ ಅವನನ್ನು ಹುಡುಕುವುದು ಸಾಧುವಲ್ಲ ಅದು ಸಾಧ್ಯವೂ ಅಲ್ಲ. ಸ್ವಗತಗೊಂಡಳು. ಹೇಳಲು ಮರೆತಿದ್ದೆ. ಅವರಿಬ್ಬರಿಗೆ ಅಡ್ಡಿ ಬಂದದ್ದು ಜಾತಿ ಮತ್ತು ಅಂತಸ್ತು.
* * *
ವರ್ತಮಾನದ ಇವನದು ತಿಂಡಿ ತೀರಿಸಿಕೊಂಡು ಕುಂಡಿ ತಿರುಗಿಸಿ ಕುಂಭಕರ್ಣ ನಿದ್ರೆ. ಹೀಗೆ ಮೈಗೊಬ್ಬ ಮನಸಿಗೊಬ್ಬ. ಇದು ದಶಕಗಳೇ ಕಳೆದ ಸಿಡಿಮಿಡಿ ಕಥನ. ಇದೆಂಥ ಜಗದ ಜೀವನ. ಅವಳು ಅವನ ಧ್ಯಾನದಲ್ಲೇ ಜೀವ ನೂಕಿದಳು. ಹೆಣ್ಣು ಗಂಡಿನ ವಿಹಂಗಮ ವಾಂಛೆ ಮತ್ತು ಅತೃಪ್ತ ಚಿಂತನೆಗಳನ್ನು ನಾವು ಪ್ರತಿಭಾಶಾಲಿಗಳು ಹಾಡಿ, ನಟಿಸಿ, ಅಕ್ಷರ, ಮಾತುಗಳ ಮೂಲಕ ತೃಪ್ತರಾಗುತ್ತೇವೆ. ಪ್ರಾಯಶಃ ಇದೆಲ್ಲವೂ ಕೈಲಾಗದವರು ಮೈ ಪರಚಿಕೊಂಡ ಪ್ರಕ್ರಿಯೆ. ಇನ್ನೊಬ್ಬನಲ್ಲಿ ಮತ್ತು ಇನ್ನೊಬ್ಬಳಲ್ಲಿ ತನ್ನೊಳಗನ್ನು, ಹುಡುಕಿ ಹಂಚಿಕೊಳ್ಳುವಲ್ಲಿ ಇರುವ ಅಂತಃಶ್ರೋತದ ಸಂವೇದನೆಗಳು ಬದುಕಿನ ವಿಭಿನ್ನ ಭಾವಗಳೇ ಆಗಿವೆ.
ಬೆಳಗಿನ ಜಾವ ನಾಲ್ಕುಗಂಟೆಗೆ ಅವನು ಎದ್ದು ಜಳಕಮಾಡಿ ಮಡಿಪಂಚೆ ಕಳಚುವ ಮೊದಲೇ ಅವಳು ಅವನಿಗೆ ಬಿಸಿ ಬಿಸಿಯಾದ ಫಿಲ್ಟರ್ ಕಾಫಿ ತಂದುಕೊಟ್ಟಳು. ನಿನ್ನ ಕೈ ರುಚಿಯ ಕಾಫಿ ಕುಡಿದು ಹನ್ನೊಂದು ವರುಷಗಳಾಗಿದ್ದವು. ಅಷ್ಟು ಸುದೀರ್ಘ ಅವಧಿ ಕಳೆದರೂ ಅವಳ ಕೈ ರುಚಿಯಲ್ಲೇನೂ ಫರಕು ಇರಲಿಲ್ಲ. ಕಾಫಿ ಕುಡಿಯುತ್ತಲೇ ಕಣ್ನಸುಕು ಕತ್ತಲಲಿ ಅದೇನೋ ಪಿಸುಗುಟ್ಟಿದ. ಸೋಜಿಗವೆಂದರೆ ಅಷ್ಟು ಸುದೀರ್ಘ ವರುಷಗಳಲ್ಲಿ ಅವರಿಬ್ಬರೂ ಪರಸ್ಪರ ಮಾತಾಡಿರಲಿಲ್ಲ. ಅಬ್ಬಾ ಅದೆಂತಹ ಮಹಾಮೌನ. ಆ ಮಹಾಮೌನ ಮುರಿದದ್ದು ಅವನ ಮಗಳ ಮದುವೆ. ಅವಳು ಅದು ತನ್ನ ಮಗಳ ಮದುವೆಯಂತೆ ಸಿದ್ಧತೆಗಾಗಿ ವಾರವೊಪ್ಪತ್ತು ಮೊದಲೇ ಬಂದು ಅವನ ಮನೆಯಲ್ಲಿ ನೆಲೆಸಿದ್ದಳು. ಅಂತಃಕರಣ ಕಲಕುವ ನನ್ನ ಮಗಳ ತಾಯಿ ನೀನಾಗ ಬೇಕಿತ್ತು. ನನ್ನ ಪೊರೆವ ತಾಯ್ತನದ ಪ್ರತಿರೂಪ ಚೈತನ್ಯ ನೀನು. ಅವನು ಬಿಕ್ಕುವ ಸ್ವರದಲ್ಲಿ ನುಡಿದ ಈ ಮಾತುಗಳು ದೂರದ ಮರೆತು ಹೋದ ಹೆಜ್ಜೆ ಹಾದಿಯ ಗುಲ್ದಾಸ್ಥ. ಹೌದು ಅವಳಿಗೆ ಹಾಗೆ ಕಂಡು ಮತ್ತು ಕೇಳಿಸಿದಂತಾಯಿತು.
ಮಲ್ಲಿಕಾರ್ಜುನ ಕಡಕೋಳ
ಹಿರಿಯ ಲೇಖಕರು
ಇದನ್ನೂ ಓದಿ-ಎಲೆ ಮರೆಯ ಕಾಯಿಯಾಗಿದ್ದ ಮಹಾನ್ ಸಾಧಕ ಅಮೃತ ಸೋಮೇಶ್ವರ